Asianet Suvarna News Asianet Suvarna News

ಸುದೀರ್ಘ ರಜೆಯಲ್ಲಿ ರಾಜ್ಯ ಕಾಂಗ್ರೆಸ್‌, ಚಟುವಟಿಕೆಗಳೂ ಬಂದ್!

ಸುದೀರ್ಘ ರಜೆಯಲ್ಲಿ ರಾಜ್ಯ ಕಾಂಗ್ರೆಸ್‌!| ಶಾಸಕಾಂಗ ಪಕ್ಷವಷ್ಟೇ ಸಕ್ರಿಯ| ಜಿಲ್ಲಾ ಸಮಿತಿ ಮೇಲ್ವಿಚಾರಕರಿಲ್ಲ, ಚಟುವಟಿಕೆಗಳೂ ಇಲ್ಲ| ಅಧ್ಯಕ್ಷ, ಕಾರಾರ‍ಯಧ್ಯಕ್ಷ, ಮಾಧ್ಯಮ ಮುಖ್ಯಸ್ಥ ಹೊರತುಪಡಿಸಿ ಉಳಿದೆಲ್ಲ ಹುದ್ದೆ 1 ವರ್ಷದಿಂದ ಖಾಲಿ|  270 ಪದಾಧಿಕಾರಿಗಳಿದ್ದ ಕೆಪಿಸಿಸಿ, ಜೊತೆಗೆ ಚುನಾವಣೆ, ಕಾರ್ಯಕಾರಿ ಸಮಿತಿಗಳು| ರಾಮಲಿಂಗಾರೆಡ್ಡಿ ನೇತೃತ್ವದ ಸಮನ್ವಯ ಸಮಿತಿ, ಡಿಕೆಶಿಯ ಪ್ರಚಾರ ಸಮಿತಿ ಇತ್ತು| ಕಳೆದ ಲೋಕಸಭಾ ಚುನಾವಣೆ ಬಳಿಕ ಹೈಕಮಾಂಡ್‌ ಸೂಚನೆ ಮೇರೆಗೆ ಹುದ್ದೆ ತೆರವು| ಸದ್ಯಕ್ಕೆ ಕೆಪಿಸಿಸಿಯಲ್ಲಿ ದಿನೇಶ್‌ ಗುಂಡೂರಾವ್‌, ಈಶ್ವರ್‌ ಖಂಡ್ರೆ, ಉಗ್ರಪ್ಪ ಮಾತ್ರ| ಹೊಸ ನೇಮಕಾತಿಗಳಿನ್ನೂ ಆಗದೆ ಕೋಮಾ ಸ್ಥಿತಿಯಲ್ಲಿರುವ ಕರ್ನಾಟಕ ಕಾಂಗ್ರೆಸ್‌

Karnataka State Congress Is On Long Vacation No Major Activities In The Party
Author
Bangalore, First Published Feb 27, 2020, 7:47 AM IST

ಎಸ್‌.ಗಿರೀಶ್‌ ಬಾಬು

ಬೆಂಗಳೂರು[ಫೆ.27]: ರಾಜ್ಯದ ಪ್ರಧಾನ ಪ್ರತಿಪಕ್ಷವೆನಿಸಿದ ಕಾಂಗ್ರೆಸ್‌ನ ಶಾಸಕಾಂಗ ಪಕ್ಷವೇನೋ ಸಕ್ರಿಯವಾಗಿದೆ. ಆದರೆ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಸುದೀರ್ಘ ರಜೆಯಲ್ಲಿದೆ!

ಆಡಳಿತಾರೂಢ ಬಿಜೆಪಿಯ ವಿರುದ್ಧ ಹೋರಾಟ, ಪ್ರತಿಭಟನೆ, ವಾಗ್ದಾಳಿ... ಹೀಗೆ ಏನೇ ಇದ್ದರೂ ಅದನ್ನು ಶಾಸಕಾಂಗ ಪಕ್ಷ ಮಾಡುತ್ತಿದೆ. ಆದರೆ, ಈ ವಿಷಯದಲ್ಲಿ ಮುಂಚೂಣಿಯಲ್ಲಿರಬೇಕಿದ್ದ ಪ್ರದೇಶ ಕಾಂಗ್ರೆಸ್‌ ಸಮಿತಿ ಬಹುತೇಕ ಕೋಮಾದಲ್ಲಿದೆ. ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಉಗ್ರಪ್ಪ ಅವರೊಬ್ಬರು ಪತ್ರಿಕಾಗೋಷ್ಠಿ ನಡೆಸುವುದು ಮತ್ತು ಆಗೀಗ ಈಶ್ವರ್‌ ಖಂಡ್ರೆ ಕಚೇರಿಯಲ್ಲಿ ಕಾಣಿಸಿಕೊಳ್ಳುವುದು ಬಿಟ್ಟರೆ ಕೆಪಿಸಿಸಿಯಲ್ಲಿ ಚಟುವಟಿಕೆಗಳು ನಡೆಯುವುದೇ ಕಾಣಿಸುತ್ತಿಲ್ಲ.

ಇದಕ್ಕೆ ಮುಖ್ಯ ಕಾರಣ- ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಪದಾಧಿಕಾರಿಗಳು ಇಲ್ಲದಿರುವುದು. 2019ರ ಲೋಕಸಭಾ ಚುನಾವಣೆ ನಂತರ ಕೆಪಿಸಿಸಿ ಪದಾಧಿಕಾರಿಗಳನ್ನು ಹುದ್ದೆಯಿಂದ ತೆರವುಗೊಳಿಸಿದ ಮೇಲೆ ಹೊಸ ನೇಮಕ ನಡೆದಿಲ್ಲ. ಹೀಗಾಗಿ ಕೆಪಿಸಿಸಿಗೆ ಈಗ ಮೂವರೇ ದಿಕ್ಕು!

ಅದು - ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಹಾಗೂ ಮಾಧ್ಯಮ ವಿಭಾಗದ ಮುಖ್ಯಸ್ಥ ಉಗ್ರಪ್ಪ. ಈ ಮೂರು ಸ್ಥಾನ ಹೊರತುಪಡಿಸಿದರೆ ಉಳಿದ ಎಲ್ಲಾ ಹುದ್ದೆಗಳು ಖಾಲಿಯಿವೆ. ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ರಜೆಯಲ್ಲಿದ್ದಾರೆ! ಹೀಗಾಗಿ ಬೆಂಗಳೂರಿನ ಕ್ವೀನ್ಸ್‌ ರಸ್ತೆಯ ಕಾಂಗ್ರೆಸ್‌ ಕಚೇರಿ ಚಟುವಟಿಕೆಗಳಿಲ್ಲದ ತಾಣವಾಗಿ ಮಾರ್ಪಟ್ಟಿದೆ. ಇದರ ಜತೆಗೆ ಕೆಪಿಸಿಸಿ ಅಧ್ಯಕ್ಷರ ಸ್ಥಾನಕ್ಕೆ ನೂತನ ಅಧ್ಯಕ್ಷರ ನೇಮಕ ವಿಳಂಬಗೊಳ್ಳುತ್ತಿರುವುದು ಇಡೀ ಕೆಪಿಸಿಸಿ ವ್ಯವಸ್ಥೆ ನಿಸ್ತೇಜಗೊಳ್ಳುವಂತೆ ಮಾಡಿದೆ.

ವಾಸ್ತವವಾಗಿ ಲೋಕಸಭಾ ಚುನಾವಣೆಗೂ ಪೂರ್ವದಲ್ಲಿ ಕೆಪಿಸಿಸಿಯು 270 ಪದಾಧಿಕಾರಿಗಳ ದೊಡ್ಡ ಪಡೆಯನ್ನೇ ಹೊಂದಿತ್ತು. ಇದರ ಜತೆಗೆ, ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಕಾಂಗ್ರೆಸ್‌ ಚುನಾವಣಾ ಸಮಿತಿ, ಕಾರ್ಯಕಾರಿ ಸಮಿತಿಗಳು ಅಸ್ತಿತ್ವದಲ್ಲಿದ್ದವು. ಅಲ್ಲದೆ, ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಸಮನ್ವಯ ಸಮಿತಿ ಹಾಗೂ ಡಿ.ಕೆ. ಶಿವಕುಮಾರ್‌ ನೇತೃತ್ವದ ಪ್ರಚಾರ ಸಮಿತಿಯೂ ಅಸ್ತಿತ್ವದಲ್ಲಿತ್ತು. ಕಾಂಗ್ರೆಸ್‌ ಪದಾಧಿಕಾರಿಗಳ ಪೈಕಿ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಹಲವರಿಗೆ ಜಿಲ್ಲಾ ಘಟಕಗಳ ಉಸ್ತುವಾರಿಯನ್ನು ವಹಿಸಲಾಗಿತ್ತು. ಉಸ್ತುವಾರಿಗಳಿಗೆ ತಮ್ಮ ಮೇಲ್ವಿಚಾರಣೆಯ ಜಿಲ್ಲೆಯ ಡಿಸಿಸಿ (ಜಿಲ್ಲಾ ಕಾಂಗ್ರೆಸ್‌ ಸಮಿತಿ)ಗಳು ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುವ ಹೊಣೆಯನ್ನು ನೀಡಲಾಗಿತ್ತು.

ಆದರೆ, ಲೋಕಸಭಾ ಚುನಾವಣೆಯ ನಂತರ ಎಐಸಿಸಿಯು ಎಲ್ಲಾ ಪದಾಧಿಕಾರಿಗಳನ್ನು ತೆಗೆದುಹಾಕುವಂತೆ ಕೆಪಿಸಿಸಿಗೆ ನಿರ್ದೇಶನ ನೀಡಿತ್ತು. ಅದನ್ನು ಕೆಪಿಸಿಸಿ ಪಾಲಿಸಿದೆ. ಹೀಗಾಗಿ ಮೂರು ಪ್ರಮುಖ ಹುದ್ದೆ ಮಾತ್ರ ಭರ್ತಿಯಿದೆ. ಉಳಿದಿದ್ದೆಲ್ಲ ಖಾಲಿ. ಹೀಗಾಗಿ ಜಿಲ್ಲಾ ಸಮಿತಿಗಳ ಮೇಲ್ವಿಚಾರಣೆ ನಡೆಸುವವವರು ಯಾರೂ ಇಲ್ಲದೆ ಅವು ಕೋಮಾದಲ್ಲಿವೆ.

ದಿಕ್ಕು ದೆಸೆಯಿಲ್ಲದ ದಿವಾಳಿ ಕಂಪನಿ:

ಕೆಪಿಸಿಸಿಯ ಈ ಸ್ಥಿತಿಯ ಬಗ್ಗೆ ನೋವಿರುವ ಹಿರಿಯ ಕಾಂಗ್ರೆಸ್ಸಿಗರೊಬ್ಬರು, ಕೆಪಿಸಿಸಿ ಈಗ ದಿಕ್ಕು ದೆಸೆಯಿಲ್ಲದ ದಿವಾಳಿ ಕಂಪನಿಯಂತಿದೆ. ಒಂದೆಡೆ ಹೊಸ ಕಟ್ಟಡ ನಿರ್ಮಾಣದ ಆರ್ಥಿಕ ಹೊರೆ ಕೆಪಿಸಿಸಿಯನ್ನು ಕಾಡುತ್ತಿದೆ. ಕಾಂಗ್ರೆಸ್‌ನಲ್ಲಿ ಘಟಾನುಘಟಿಗಳು ಹಾಗೂ ಶ್ರೀಮಂತರ ದಂಡೇ ಇದೆ. ಅಷ್ಟೇ ಅಲ್ಲ, ತೀರಾ ಇತ್ತೀಚಿನವರೆಗೂ ಅಧಿಕಾರದಲ್ಲೇ ಇದ್ದ ಪಕ್ಷವಾಗಿದ್ದರೂ ಕೆಪಿಸಿಸಿ ಸಾಲದ ಸುಳಿಯಲ್ಲಿದೆ. ಆದರೆ, ಇದ್ಯಾವುದರ ಬಗ್ಗೆ ಕ್ಯಾರೇ ಎನ್ನದ ಎಐಸಿಸಿಯು ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಬಗ್ಗೆ ವಿಳಂಬ ನೀತಿ ಅನುಸರಿಸುತ್ತಿದೆ ಎನ್ನುತ್ತಾರೆ.

ಅವರ ಪ್ರಕಾರ ಎಐಸಿಸಿಯು ಕೆಪಿಸಿಸಿ ಅಧ್ಯಕ್ಷರ ನೇಮಕಾತಿಗೆ ವಿಳಂಬ ನೀತಿ ಅನುಸರಿಸಲು ರಾಜ್ಯ ಕಾಂಗ್ರೆಸ್‌ನಲ್ಲಿರುವ ಪ್ರಬಲ ಬಣ ರಾಜಕಾರಣವೇ ಕಾರಣ. ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಪೈಪೋಟಿಯಲ್ಲಿರುವ ಯಾರನ್ನೇ ನೇಮಕ ಮಾಡಿದರೂ ಇನ್ನೊಂದು ಬಣ ಪಕ್ಷದ ಚಟುವಟಿಕೆಗಳಿಂದ ವಿಮುಖವಾಗಬಹುದು ಎಂಬ ಕಾರಣಕ್ಕೆ ಎಐಸಿಸಿ ಈ ದಿಸೆಯಲ್ಲಿ ಮುಂದಡಿಯಿಡುತ್ತಿಲ್ಲ.

ಸಮಾಧಾನದ ಅಂಶವೆಂದರೆ, ಶಾಸಕಾಂಗ ಪಕ್ಷ ಸಕ್ರಿಯವಾಗಿದೆ. ಇದರ ಜತೆಗೆ, ಮಹಿಳಾ ಕಾಂಗ್ರೆಸ್‌, ಯುವ ಕಾಂಗ್ರೆಸ್‌, ಎನ್‌ಎಸ್‌ಯುಐನಂತಹ ಅಂಗ ಸಂಘಟನೆಗಳು ತಕ್ಕಮಟ್ಟಿಗೆ ಸಕ್ರಿಯವಾಗಿವೆ. ಆದರೆ, ಈ ಸಂಘಟನೆಗಳ ತಾಯಿ-ಬೇರು ಎನಿಸಿದ ಕೆಪಿಸಿಸಿ ಕೋಮಾಗೆ ಹೋಗಿರುವುದರಿಂದ ಪಕ್ಷದ ಕಾರ್ಯಕರ್ತರ ಜಂಘಾಬಲ ಉಡುಗಿರುವುದು ಸುಳ್ಳಲ್ಲ.

Follow Us:
Download App:
  • android
  • ios