ಬೆಂಗಳೂರು[ಡಿ.10]: ಸಂಪುಟ ವಿಸ್ತರಣೆಯಾದ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳ ಸಂಖ್ಯೆ ಹೆಚ್ಚಲಿದೆಯೇ ಎಂಬುದು ಕುತೂಹಲಕರವಾಗಿದೆ.

ಈಗಾಗಲೇ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಹಾಗೂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಉಪಮುಖ್ಯಮಂತ್ರಿಗಳಾಗಿದ್ದಾರೆ. ಆದರೆ, ಹಿಂದೆ ಅನರ್ಹ ಶಾಸಕರಾಗಿದ್ದ ಮತ್ತು ಇದೀಗ ಗೆಲುವು ಸಾಧಿಸಿ ಅರ್ಹ ಶಾಸಕರಾಗಿರುವ ಗೋಕಾಕ್‌ ಕ್ಷೇತ್ರದ ರಮೇಶ್‌ ಜಾರಕಿಹೊಳಿ ಅವರಿಗೂ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಸ್ವತಃ ರಮೇಶ್‌ ಜಾರಕಿಹೊಳಿ ಅವರೇ ತಾವು ಉಪಮುಖ್ಯಮಂತ್ರಿಯಾಗುವುದಾಗಿ ಹಿಂದೆ ಹಲವು ಬಾರಿ ಪ್ರಸ್ತಾಪಿಸಿದ್ದರು. ಈ ಬಗ್ಗೆ ಭರವಸೆ ನೀಡಲಾಗಿದೆ ಎಂಬ ಮಾತನ್ನೂ ತಮ್ಮ ಆಪ್ತರ ಬಳಿ ಹೇಳಿದ್ದರು. ಅಲ್ಲದೆ, ವಾಲ್ಮೀಕಿ ಸಮುದಾಯಕ್ಕೆ ಸೇರಿದ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಕ್ಕಾಗಿಯೇ ಅದೇ ಸಮುದಾಯದ ಬಿ.ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿಲ್ಲ ಎಂಬ ಮಾತೂ ಕೇಳಿಬಂದಿತ್ತು.

ಇದೀಗ ಫಲಿತಾಂಶ ಹೊರಬಿದ್ದಿದೆ. ರಮೇಶ್‌ ಜಾರಕಿಹೊಳಿ ಅವರು ಗೆಲುವನ್ನೂ ಸಾಧಿಸಿದ್ದಾರೆ. ಯಡಿಯೂರಪ್ಪ ಅವರ ಸರ್ಕಾರವೂ ಸುಭದ್ರವಾಗಿದೆ. ಹೀಗಾಗಿ, ಉಪಮುಖ್ಯಮಂತ್ರಿ ಸ್ಥಾನ ಅವರ ಪಾಲಾಗುವ ಬಗ್ಗೆ ಕೇಳಿಬಂದಿದೆ. ಆದರೆ, ಈ ಬಗ್ಗೆ ಬಿಜೆಪಿ ಪಾಳೆಯದಲ್ಲಿ ಸ್ಪಷ್ಟಮಾಹಿತಿಯಿಲ್ಲ. ಪ್ರಮುಖ ಖಾತೆ ನೀಡುವ ಮೂಲಕ ರಮೇಶ್‌ ಜಾರಕಿಹೊಳಿ ಅವರನ್ನು ಕೇವಲ ಸಚಿವರನ್ನಾಗಿ ಮಾಡಬಹುದು ಎನ್ನಲಾಗುತ್ತಿದೆ.