ಕೋಲಾರ[ಡಿ.13]: ಹೊಸಕೋಟೆ ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ಅವರು ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಅವರನ್ನು ಗುರುವಾರ ರಾತ್ರಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಶ್ರೀನಿವಾಸಪುರ ತಾಲೂಕು ಅಡ್ಡಗಲ್‌ನಲ್ಲಿರುವ ರಮೇಶ್‌ ಕುಮಾರ್‌ ನಿವಾಸಕ್ಕೆ ಮುಖಂಡರೊಂದಿಗೆ ಭೇಟಿ ನೀಡಿದ ಶರತ್‌ ಬಚ್ಚೇಗೌಡ ಅವರು ರಮೇಶ್‌ ಕುಮಾರ್‌ ಅವರೊಂದಿಗೆ ಸುಮಾರು ಅರ್ಧಗಂಟೆಗೆ ಹೆಚ್ಚು ಕಾಲ ಗುಪ್ತವಾಗಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಶರತ್‌ ಕಾಂಗ್ರೆಸ್‌ ಕದ ತಟ್ಟುತ್ತಿದ್ದಾರೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಹುಟ್ಟಿಕೊಂಡಿದೆ.

ಇತ್ತೀಚೆಗೆ ನಡೆದ ಹೊಸಕೋಟೆ ಉಪಚುನಾವಣೆಯಲ್ಲಿ ಶರತ್‌ ಬಚ್ಚೇಗೌಡ ಬಿಜೆಪಿ ಮುಖಂಡರಿಗೆ ಸಡ್ಡು ಹೊಡೆದು ಪಕ್ಷೇತರರಾಗಿ ಗೆಲುವು ಸಾಧಿಸಿದ್ದರು. ಚುನಾವಣೆಯಲ್ಲಿ ಸೋಲುಂಡಿದ್ದ ಬಿಜೆಪಿಯ ಅಧಿಕೃತ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್‌ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೆ ಶರತ್‌ ಬಚ್ಚೇಗೌಡ ಅವರನ್ನು ಮತ್ತೆ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಬಾರದು, ಅಲ್ಲದೆ ಅವರ ತಂದೆ ಸಂಸದ ಬಚ್ಚೇಗೌಡ ಅವರು ಮಗನ ಪರವಾಗಿ ಕೆಲಸ ಮಾಡಿದ್ದು ಅವರ ವಿರುದ್ದ ಶಿಸ್ತಿನ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದರು. ಇದಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶರತ್‌ಬಚ್ಚೇಗೌಡರನ್ನ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದರು.

ಇದೀಗ ಶರತ್‌ ಬಚ್ಚೇಗೌಡರಿಗೆ ಬಿಜೆಪಿಯ ಬಾಗಿಲು ಬಂದ್‌ ಆಗಿರೋದ್ರಿಂದ ಅವರ ಮುಂದಿನ ರಾಜಕೀಯ ದಾರಿಯನ್ನು ಕಂಡುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ಆಪ್ತರಾಗಿರುವ ರಮೇಶ್‌ ಕುಮಾರ್‌ ಮೂಲಕ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಚರ್ಚೆಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.