ಮೆಣಸಿನಕಾಯಿ ರೀತಿಯಲ್ಲೇ ಬ್ಯಾಡಗಿಯ ರಾಜಕೀಯವೂ ಅಷ್ಟೇ ಘಾಟು. ಪಕ್ಷಗಳ ನಡುವೆ ಜಿದ್ದಾಜಿದ್ದಿಗಿಂತ ಇಲ್ಲಿ ಒಳಗಿದ್ದುಕೊಂಡೇ ಖಾರ ಅರೆದು ಮುಯ್ಯಿ ತೀರಿಸಿಕೊಳ್ಳುವುದು ಪ್ರತಿ ಚುನಾವಣೆಯಲ್ಲಿ ನಡೆದುಕೊಂಡು ಬಂದಿದೆ. ಇದು ಈ ಸಲವೂ ಮುಂದುವರಿಯುವ ಸಾಧ್ಯತೆ ಕಂಡುಬರುತ್ತಿದೆ.

ನಾರಾಯಣ ಹೆಗಡೆ

ಹಾವೇರಿ (ಏ.7) : ಮೆಣಸಿನಕಾಯಿ ರೀತಿಯಲ್ಲೇ ಬ್ಯಾಡಗಿಯ ರಾಜಕೀಯವೂ ಅಷ್ಟೇ ಘಾಟು. ಪಕ್ಷಗಳ ನಡುವೆ ಜಿದ್ದಾಜಿದ್ದಿಗಿಂತ ಇಲ್ಲಿ ಒಳಗಿದ್ದುಕೊಂಡೇ ಖಾರ ಅರೆದು ಮುಯ್ಯಿ ತೀರಿಸಿಕೊಳ್ಳುವುದು ಪ್ರತಿ ಚುನಾವಣೆಯಲ್ಲಿ ನಡೆದುಕೊಂಡು ಬಂದಿದೆ. ಇದು ಈ ಸಲವೂ ಮುಂದುವರಿಯುವ ಸಾಧ್ಯತೆ ಕಂಡುಬರುತ್ತಿದೆ.

ಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆಹೊಂದಿರುವ ಬ್ಯಾಡಗಿ(Byadgi)ಯು ರಾಜಕೀಯದಲ್ಲಿ ತನ್ನದೇ ವಿಶೇಷತೆ ಹೊಂದಿದೆ. ಹೇಳಿಕೇಳಿ ಬ್ಯಾಡಗಿ ಹೋರಾಟದ ನೆಲ. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೈಲಾರ ಮಹದೇವಪ್ಪ ಅವರಿಗೆ ಜನ್ಮ ನೀಡಿದ ಪುಣ್ಯಭೂಮಿ. ಹುತಾತ್ಮ ಮೈಲಾರ ಮಹದೇವಪ್ಪ ಅವರ ಪತ್ನಿ ಸಿದ್ದಮ್ಮ ಮೈಲಾರ, ಕೆ.ಎಫ್‌. ಪಾಟೀಲರು, ಮಹದೇವ ಬಣಕಾರ ಅವರಂತಹ ಸಾಧಕರನ್ನು ವಿಧಾನಸೌಧಕ್ಕೆ ಕಳುಹಿಸಿದೆ. 1978ರಿಂದ 2004ರ ವರೆಗೂ ಎಸ್ಸಿ ಮೀಸಲು ಕ್ಷೇತ್ರವಾಗಿದ್ದ ಬ್ಯಾಡಗಿ 2008ರಿಂದ ಸಾಮಾನ್ಯ ಕ್ಷೇತ್ರವಾಗಿದೆ. ರಾಣಿಬೆನ್ನೂರು ಹಾಗೂ ಹಾವೇರಿ ತಾಲೂಕಿನ ಕೆಲ ಗ್ರಾಮಗಳೂ ಬ್ಯಾಡಗಿ ಕ್ಷೇತ್ರದ ವ್ಯಾಪ್ತಿಗೆ ಸೇರಿದೆ.

ದೇವಸ್ಥಾನದಲ್ಲಿ ಇಷ್ಟದ ಹಾಡು ಹಾಕದ್ದಕ್ಕೆ ಇಬ್ಬರು ಭಕ್ತರಿಂದ ಯುವಕನಿಗೆ ಹಲ್ಲೆ!

ಕೃಷಿ ಪ್ರಧಾನ ಕ್ಷೇತ್ರವಾಗಿದ್ದು ನದಿಗಳು ಯಾವುದೂ ಇಲ್ಲದ್ದರಿಂದ ಕೆರೆ-ಕಟ್ಟೆಗಳು, ಏತ ನೀರಾವರಿ ಯೋಜನೆಗಳೇ ರೈತರ ಜೀವಾಳವಾಗಿವೆ. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯು ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದೆ. ಸದ್ಯಕ್ಕೆ ಇದೇ ಮಾರುಕಟ್ಟೆಗೆ ಹೋಗುವ ಮುಖ್ಯರಸ್ತೆಯೇ ರಾಜಕಾರಣದ ಮುಖ್ಯ ಸರಕಾಗಿದೆ.

ಪ್ರತ್ಯೇಕ ಕ್ಷೇತ್ರವಾಗಿರಲಿಲ್ಲ:

1952 ಹಾಗೂ 1957ರ ಚುನಾವಣೆಯಲ್ಲಿ ಬ್ಯಾಡಗಿ ಪ್ರತ್ಯೇಕ ವಿಧಾನಸಭೆ ಕ್ಷೇತ್ರವಾಗಿರಲಿಲ್ಲ. ಈ ಕ್ಷೇತ್ರವು ರಾಣಿಬೆನ್ನೂರಿನ ದ್ವಿಸದಸ್ಯ ಕ್ಷೇತ್ರಕ್ಕೆ ಸೇರಿಕೊಂಡಿತ್ತು. ಈ ಕ್ಷೇತ್ರದ ಜನರು ರಾಣಿಬೆನ್ನೂರು ಕ್ಷೇತ್ರಕ್ಕೆ ಸ್ಪರ್ಧಿಸಿದ ಇಬ್ಬರು ಅಭ್ಯರ್ಥಿಗಳಿಗೆ ಮತ ನೀಡುವ ಅಧಿಕಾರ ಪಡೆದ್ದಿದರು. ಬ್ಯಾಡಗಿ ಕ್ಷೇತ್ರವು 1962ರಲ್ಲಿ ಪ್ರತ್ಯೇಕ ವಿಧಾನಸಭೆಯಾಗಿ ಹೊರಹೊಮ್ಮಿತು. 1962ರಿಂದ 1972ರ ವರೆಗೆ ಸಾಮಾನ್ಯ ಕ್ಷೇತ್ರವಾದ ಬ್ಯಾಡಗಿ, 1978ರಿಂದ 200ರ 4ವರೆಗೆ ಪರಿಶಿಷ್ಟಜಾತಿ ಮೀಸಲು ಕ್ಷೇತ್ರವಾಯಿತು. 2008ರಲ್ಲಿ ಕ್ಷೇತ್ರಗಳ ಪುನರ್‌ವಿಂಗಡಣೆಯಲ್ಲಿ ಮತ್ತೆ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಗೊಂಡಿತು. ಒಟ್ಟು ಇಲ್ಲಿವರೆಗೆ ನಡೆದ 13 ಚುನಾವಣೆಗಳಲ್ಲಿ ಏಳು ಬಾರಿ ಕಾಂಗ್ರೆಸ್‌ ಬೆಂಬಲಿಸಿದ್ದರೆ, ಉಳಿದ ಐದು ಚುನಾವಣೆಯಲ್ಲಿ ಜನತಾ ಪಕ್ಷ, ಪ್ರಜಾ ಸೋಶಿಯಲಿಸ್ಟ್‌ ಪಕ್ಷ, ಜನತಾದಳಕ್ಕೆ ತಲಾ ಒಂದು ಬಾರಿ ಹಾಗೂ ಬಿಜೆಪಿಯನ್ನು ಮೂರು ಬಾರಿ ಬೆಂಬಲಿಸಿದ್ದಾರೆ.

ಈ ವರೆಗೆ ಗೆದ್ದವರು:

1962ರಲ್ಲಿ ಸಿದ್ದಮ್ಮ ಮೈಲಾರ ಕಾಂಗ್ರೆಸ್ಸಿನಿಂದ, 1967ರಲ್ಲಿ ಎಂ.ಜಿ. ಬಣಕಾರ ಪಿಎಸ್‌ಪಿಯಿಂದ, 1972ರಲ್ಲಿ ಕಾಂಗ್ರೆಸ್ಸಿನಿಂದ ಕೆ.ಎಫ್‌. ಪಾಟೀಲ, 1978 ಎಂ.ಎಂ. ಮಾಳಗಿ ಕಾಂಗ್ರೆಸ್‌,Ü 1983 ಎಚ್‌.ಡಿ. ಲಮಾಣಿ ಕಾಂಗ್ರೆಸ್‌, 1985 ಕೆ.ಎಸ್‌. ಬೀಳಗಿ ಜನತಾಪಕ್ಷ, 1989 ಎಚ್‌.ಡಿ. ಲಮಾಣಿ ಕಾಂಗ್ರೆಸ್‌, 1994 ಕೆ.ಎಸ್‌. ಬೀಳಗಿ ಜನತಾದಳ, 1999 ರುದ್ರಪ್ಪ ಲಮಾಣಿ ಕಾಂಗ್ರೆಸ್‌, 2004 ಬಿಜೆಪಿಯಿಂದ ನೆಹರು ಓಲೇಕಾರ, 2008 ಬಿಜೆಪಿಯಿಂದ ಸುರೇಶಗೌಡ ಪಾಟೀಲ, 2013 ಕಾಂಗ್ರೆಸ್ಸಿನಿಂದ ಬಸವರಾಜ ಶಿವಣ್ಣನವರ, 2018 ಬಿಜೆಪಿಯಿಂದ ವಿರೂಪಾಕ್ಷಪ್ಪ ಬಳ್ಳಾರಿ ಆಯ್ಕೆಯಾಗಿದ್ದಾರೆ.

ಸದ್ಯದ ಚಿತ್ರಣ:

ಬಸವರಾಜ ಶಿವಣ್ಣನವರ 2013ರ ಚುನಾವಣೆಯಲ್ಲಿ ಬ್ಯಾಡಗಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಹಾಲಿ ಶಾಸಕರಿಗೆ ಟಿಕೆಟ್‌ ಪಕ್ಕಾ ಎಂಬ ಮಾತು ಸುಳ್ಳಾಗಿ ಕೊನೇ ಕ್ಷಣದಲ್ಲಿ ಅವರಿಗೆ ಟಿಕೆಟ್‌ ಕೈತಪ್ಪಿತ್ತು. ಸ್ಥಳೀಯ ಮುಖಂಡ ಎಸ್‌.ಆರ್‌. ಪಾಟೀಲ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿತ್ತು. 2013ರಲ್ಲಿ ಕೆಜೆಪಿ ಪ್ರಬಲವಾಗಿದ್ದರೂ ಬಿಜೆಪಿಯಿಂದ ಸ್ಪರ್ಧಿಸಿ ಗಣನೀಯ ಮತಗಳನ್ನು ಪಡೆದಿದ್ದ ವಿರೂಪಾಕ್ಷಪ್ಪ ಬಳ್ಳಾರಿಗೆ 2018ರಲ್ಲಿ ಪಕ್ಷವು ಟಿಕೆಟ್‌ ನೀಡಿತ್ತು. ಭರ್ಜರಿ ಪೂರ್ವ ತಯಾರಿ ಮಾಡಿಕೊಂಡಿದ್ದ ಬಳ್ಳಾರಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಆಗ ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಹೋಗಿದ್ದ ಸುರೇಶಗೌಡ ಪಾಟೀಲ ಈಗ ಮರಳಿ ಬಿಜೆಪಿಗೆ ಬಂದು ಟಿಕೆಟ್‌ ಕೇಳುತ್ತಿದ್ದಾರೆ. ಶಾಸಕ ಬಳ್ಳಾರಿ ಕೂಟ ಟಿಕೆಟ್‌ಗೆ ಕಸರತ್ತು ನಡೆಸಿದೆ. ಎಂ.ಎಸ್‌. ಪಾಟೀಲ ಸೇರಿದಂತೆ ಅನೇಕರು ಆಕಾಂಕ್ಷಿಗಳಿದ್ದಾರೆ. ಅತ್ತ ಕಾಂಗ್ರೆಸ್ಸಿನಿಂದ ಬಸವರಾಜ ಶಿವಣ್ಣನವರಗೆ ಟಿಕೆಟ್‌ ಘೋಷಣೆಯಾಗಿದ್ದು, ಎಸ್‌.ಆರ್‌. ಪಾಟೀಲ ಬಂಡಾಯದ ಬಾವುಟ ಹಾರಿಸಿದ್ದಾರೆ. ಇಲ್ಲಿ ಗೆಲ್ಲುವುದಕ್ಕಿಂತ ಪಕ್ಷದವರನ್ನು ಸೋಲಿಸಲು ಮಾಡುವ ಪ್ರಯತ್ನವೇ ಹೆಚ್ಚು ಎಂಬ ಮಾತಿದೆ. ಯಾರು ಯಾರ ಕಾಲೆಳೆಯುತ್ತಾರೆ ಎಂಬುದನ್ನು ಅರಿತಿರುವ ಕ್ಷೇತ್ರದ ಜನತೆ, ಚುನಾವಣೆಯಲ್ಲಿ ಯಾವ ಪಕ್ಷವನ್ನು ಬೆಂಬಲಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಮರಣ ಪ್ರಮಾಣಪತ್ರ ತಿದ್ದುಪಡಿಗೆ ವಿರೋಧ

2018ರ ಫಲಿತಾಂಶ

  • ವಿರೂಪಾಕ್ಷಪ್ಪ ಬಳ್ಳಾರಿ 91721 (ಬಿಜೆಪಿ)
  • ಎಸ್‌.ಆರ್‌. ಪಾಟೀಲ 70450 (ಕಾಂಗ್ರೆಸ್‌)
  • ಮತದಾರರ ಸಂಖ್ಯೆ
  • ಪುರುಷರು 1,05,453
  • ಮಹಿಳೆಯರು 1,10,730
  • ಇತರೆ 05
  • ಒಟ್ಟು ಮತದಾರರು 2,07,188