ಬೆಂಗಳೂರು, [ಡಿ.10]: ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಇದ್ದಾರೆ ಎಂದು ಡೈಲಾಗ್ ಹೊಡೆದು ಸುದ್ದಿಯಾಗಿದ್ದ ಅನರ್ಹ ಶಾಸಕ  ಎಂಟಿಬಿ  ಹೊಸಕೋಟೆಯಲ್ಲಿ ಸೋಲುಕಂಡಿದ್ದಾರೆ. ಇದರಿಂದ ರೊಚ್ಚಿಗೆದ್ದಿರುವ ಎಂಟಿಬಿ, ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ, ಚುನಾವಣೆಯಲ್ಲಿ ನನಗೆ 1 ಕಣ್ಣು ಹೋಗಿರಬಹುದು.  ಆದ್ರೆ, ಸಿದ್ದರಾಮಯ್ಯಗೆ 2 ಕಣ್ಣು ಹೋಗಿವೆ ಎಂದು ವಾಗ್ದಾಳಿ ನಡೆಸಿದರು.

 ಸೋತ ಕುಬೇರ ಎಂಟಿಬಿ ನಾಗರಾಜ್ ಮನೆ ಈಗ ಹೇಗಿದೆ?

ಕುರುಬ ಸಮುದಾಯದ ಇಬ್ಬರು ನಾಯಕರನ್ನು [MTB ನಾಗರಾಜ್ ಮತ್ತು ವಿಶ್ವನಾಥ್]  ಸಿದ್ದರಾಮಯ್ಯ ಸೋಲಿಸಿದ್ದಾರೆ ಮುಂದಿನ ಚುನಾವಣೆಯಲ್ಲಿ ನಮ್ಮ ಸಮುದಾಯ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸಲಿದೆ ಎಂದು ಗುಡುಗಿದರು.

ಉಪಚುನಾವಣೆಯಲ್ಲಿ ಹೊಸಕೋಟೆಯಲ್ಲಿ ಎಂಟಿಬಿ ಹಾಗೂ ಹುಣಸೂರಿನಲ್ಲಿ ಎಚ್.ವಿಶ್ವನಾಥ್ ಅವರನ್ನು ಸೋಲಿಸಲೆಂದು ಸಿದ್ದರಾಮಯ್ಯ ಪಣತೊಟ್ಟಿದ್ದರು.

ಅದರಂತೆ ಹೊಸಕೋಟೆಯಲ್ಲಿ ಕುರುಬ ಮತಗಳನ್ನ ಇಬ್ಭಾಗ ಮಾಡಲು ತಮ್ಮ ಶಿಷ್ಯ ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಅವರನ್ನು ಕಣಕ್ಕಿಳಿಸಿದ್ದರು. ಅದರಲ್ಲಿ ಸಿದ್ದರಾಮಯ್ಯ ಯಶಸ್ವಿಯಾದರು ಕೂಡ.

ಮತ್ತೊಂದೆಡೆ ಮೈಸೂರಿನ ಹುಣಸೂರಿನಲ್ಲಿ ವಿಶ್ವನಾಥ್ ಅವರನ್ನು ಟಾರ್ಗೆಟ್ ಮಾಡಿ ಸೋಲಿಸಿದರು.  ಈ ಇಬ್ಬರು ಕುರುಬ ಜನಾಂಗದವರಾಗಿದ್ದಾರೆ. ಇದೀಗ ಇಬ್ಬರು ಸೋಲುಕಂಡಿರುವುದರಿಂದ ಎಂಟಿಬಿ ನಾಗರಾಜ್ ಸಿದ್ದರಾಮಯ್ಯ ವಿರುದ್ಧ ಹಿಗ್ಗಾಮುಗ್ಗಾ ಗುಡುಗಿದ್ದಾರೆ.

ಹೊಸಕೋಟೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂಟಿಬಿ ವಿರುದ್ಧ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದರೆ, ಹುಣಸೂರಿನಲ್ಲಿ ಸಿದ್ದರಾಮಯ್ಯನವರ ಶಿಷ್ಯ ಮಂಜುನಾಥ್ ಗೆದ್ದು ಬೀಗಿದ್ದಾರೆ.