ಹಿಜಾಬ್, ಮುಸ್ಲಿಂ ವ್ಯಾಪರಿಗಳಿಗೆ ಬಹಿಷ್ಕಾರ, ಈ ಬಗ್ಗೆ ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ಎಚ್‌ಡಿಕೆ
* ಕರ್ನಾಟಕದ ಕೆಲವೆಡೆ ಮುಸ್ಲಿಂ ವ್ಯಾಪರಿಗಳಿಗೆ ನಿರ್ಬಂಧ
* ಈ ಬಗ್ಗೆ ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ಕುಮಾರಸ್ವಾಮಿ
* ವಿಧಾನಸಭೆಯಲ್ಲಿ ನಿಯಮ 69 ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದ ಎಚ್‌ಡಿಕೆ
ಬೆಂಗಳೂರು, (ಮಾ.24): ಕರ್ನಾಟಕದಲ್ಲಿ ಶುರುವಾಗಿರುವ ಹಿಂದೂ-ಮುಸ್ಲಿಂ ಮುಸುಕಿನ ಗುದ್ದಾಟಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.
ವಿಧಾನಸಭೆಯಲ್ಲಿ ಬುಧವಾರ ನಿಯಮ 69 ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದ ಕುಮಾರಸ್ವಾಮಿ, ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೆ ಸಮವಸ್ತ್ರದ ಭಾಗವಾಗಿರುವ ವೇಲ್ ಅನ್ನೇ ಶಿರವಸ್ತ್ರವಾಗಿ ಬಳಸಲು ಅವಕಾಶ ನೀಡುವ ಮೂಲಕ ಶಿಕ್ಷಣ ಮುಂದುವರಿಸಲು ಅವಕಾಶ ನೀಡಬೇಕು. ಕೆಲವು ಹೆಣ್ಣು ಮಕ್ಕಳನ್ನು ರಿಮೋಟ್ ಕಂಟ್ರೋಲ್‌ನಂತೆ ಬಳಸುತ್ತಿರುವ ಸಂಘಟನೆಗಳನ್ನು ಮಟ್ಟ ಹಾಕಬೇಕು ಮತ್ತು ಪ್ರಕ್ಷುಬ್ಧ ವಾತಾವರಣವನ್ನು ಸೌಹಾರ್ದವಾಗಿ ತಿಳಿಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.
ದೇಶ 75 ವರ್ಷ ಸವೆಸಿದೆ. ಅಮೃತಮಹೋತ್ಸವದ ಸಂದರ್ಭದಲ್ಲಿದ್ದಾಗ ಇಂತಹ ಬೆಳವಣಿಗೆಯನ್ನು ನೋಡುತ್ತೇವೆ ಎಂದುಕೊಂಡಿರಲಿಲ್ಲ. ಸರ್ಕಾರ ತಾಯಿ ಹೃದಯದಿಂದ ಈ ಸಮಸ್ಯೆಯನ್ನು ಬಗೆಹರಿಸಬೇಕು. ಕಾಣದ ಕೈಗಳ ಕೈವಾಡ ಇದೆ ಎಂದು ಹೈಕೋರ್ಟ್ ಹೇಳಿದೆ. ಅವುಗಳನ್ನು ಆರಂಭದಲ್ಲೇ ಚಿವುಟಿ ಹಾಕಬೇಕಿತ್ತು. ಹಿಜಾಬ್ ಪ್ರಸ್ತಾಪಿಸುವುದು ಬೇಡ, ಅತ್ಯಂತ ಸೂಕ್ಷ್ಮವಾದುದು. ಸುಮ್ಮನೆ ಯಾಕೆ ಆಕ್ರೋಶಕ್ಕೆ ಒಳಗಾಗಬೇಕು ಎಂದು ಹಲವು ಶಾಸಕರು ನನಗೆ ಹೇಳಿದರು. ಆದರೆ, ರಾಜ್ಯದಲ್ಲಿ ಹದಗೆಟ್ಟಿರುವ ಸ್ಥಿತಿಯನ್ನು ತಿಳಿಗೊಳಿಸುವುದು ನಮ್ಮ ಜವಾಬ್ದಾರಿಯಲ್ಲವೇ? ಕೇವಲ ಮತ ಗಳಿಸುವುದು ಮಾತ್ರ ಮುಖ್ಯವೇ ಎಂದು ಪ್ರಶ್ನಿಸಿದರು.
ನಮ್ಮ ಸಮಾಜದಲ್ಲಿ ಹಿಂದೆ ಗಂಡ ಸತ್ತ ನಂತರ ಪತ್ನಿಯ ತಲೆ ಬೋಳಿಸುವ ಪದ್ಧತಿ ಇತ್ತು. ಶಿಕ್ಷಣದಿಂದಾಗಿ ಮಹಿಳೆಯರು ಸಶಕ್ತರಾದರು. ಆ ಮೌಢ್ಯವೂ ಹೋಯಿತು. ಸತಿ ಸಹಗಮನ ಪದ್ಧತಿಯೂ ಈಗ ಇಲ್ಲ. ಸಾಕಷ್ಟು ಪರಿವರ್ತನೆಗಳಾಗಿವೆ. ಅದೇ ರೀತಿಯಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಹಿಂದೆ ಮನೆಗಳಿಂದ ಹೊರಗೆ ಬರುತ್ತಿರಲಿಲ್ಲ. ಈಗ ಆಸಕ್ತಿಯಿಂದ ಶಾಲೆಗೆ ಬರುತ್ತಿದ್ದಾರೆ. ಉತ್ತಮ ಶಿಕ್ಷಣದಿಂದ ಜ್ಞಾನ ಬಂದಾಗ ಅವರಲ್ಲಿ ಪರಿವರ್ತನೆ ಆಗಬಹುದು ಎಂದರು.
ರಾಜ್ಯ ಹಲವು ಕಡೆಗಳಲ್ಲಿ ಮುಸ್ಲಿಮರು ಜಾತ್ರೆಗಳಲ್ಲಿ ಅಂಗಡಿ- ಮಳಿಗೆ ಹಾಕಬಾರದು ಎಂಬ ಬೋರ್ಡ್‌ಗಳನ್ನು ಹಾಕಿದ್ದಾರೆ. ಹಿಂದು ಮತ್ತು ಮುಸ್ಲಿಮರು ಅಣ್ಣತಮ್ಮಂದಿರ ಹಾಗೆಯೇ ಬದುಕಬೇಕು. ಉತ್ತರಭಾರತದ ರೀತಿಯ ರಾಜಕಾರಣ ಇಲ್ಲಿ ನಡೆಯುವುದಿಲ್ಲ. ಅಲ್ಲಿನ ರಾಜಕಾರಣವೇ ಬೇರೆ. ಅದು ಇಲ್ಲಿಗೆ ಸರಿ ಹೊಂದುವುದಿಲ್ಲ. ಸರ್ವೇಜನ ಸುಖಿನೋಭವಂತು ಎಂಬ ಮಾತಿನಲ್ಲಿ ನಂಬಿಕೆ ಇಟ್ಟವರು. ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು.
ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಬಹಿಷ್ಕಾರ
ಹಿಜಾಬ್ ಕಿಚ್ಚು ಕೊಂಚ ತಣ್ಣಗಾಗಿದೆ ಎನ್ನುವಷ್ಟರಲ್ಲಿ ಮತ್ತೊಂದು ವಿವಾದ ಭುಗಿಲೆದ್ದಿದೆ. ಧರ್ಮ ಧರ್ಮಗಳ ನಡುವೆ ಬಿರುಕು ಮೂಡಿಸುತ್ತಿದೆ. ಕರಾವಳಿಗೆ ಮಾತ್ರ ಸೀಮಿತವಾಗಿದ್ದ ಈ ಕಿಚ್ಚು ಸದ್ಯ ವ್ಯಾಪಾರಕ್ಕೂ ಅಂಟಿಕೊಂಡಿದೆ.
ಕರಾವಳಿಯ ದೇವಸ್ಥಾನಗಳ ಜಾತ್ರೋತ್ಸವದ ವೇಳೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಬಹಿಷ್ಕಾರ ಹಾಕಿರುವ ವಿಚಾರ ರಾಜ್ಯದಾದ್ಯಂತ ದೊಡ್ಡ ಚರ್ಚೆಯನ್ನು ಉಂಟು ಮಾಡಿದೆ. ಇದು ಸದ್ಯ ಸಿಲಿಕಾನ್ ಸಿಟಿಯತ್ತ ಕೂಡ ವಾಲಿದೆ. ಬೆಂಗಳೂರಿನಲ್ಲಿಯೂ ಹಿಂದೂ ಸಂಘಟನೆಗಳು ಬಹಿಷ್ಕಾರ ಚಳವಳಿ ಶುರು ಮಾಡಿದ್ದಾರೆ. ಕೆಲ ಹಿಂದೂ ದೇಗುಲಗಳಿಗೆ ಸೇರಿದ ಅಂಗಡಿಗಳಿಂದ ಮುಸ್ಲಿಮರನ್ನು ಹೊರಹಾಕುವಂತ ಕೆಲಸಗಳು ಆಗಿರುವುದು ಕಂಡುಬಂದಿದೆ. ಉಪ್ಪಾರಪೇಟೆಯಲ್ಲಿ 8 ಮುಸ್ಲಿಮರ ಅಂಗಡಿಗಳನ್ನು ಹಿಂದೂ ಕಾರ್ಯಕರ್ತರು ಬಂದ್ ಮಾಡಿಸಿದ್ದಾರೆ. ಉಪ್ಪಾರಪೇಟೆಯ ಆಂಜನೇಯಸ್ವಾಮಿ ದೇಗುಲದ ಮುಂದಿರುವ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಮುಸ್ಲಿಮರ ಅಂಗಡಿಗಳನ್ನು ಕ್ಲೋಸ್ ಮಾಡಿಸಲಾಗಿದೆ.
ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಅಧ್ಯಕ್ಷರ ಮಾತು
ರಾಜ್ಯದ ಕೆಲವೆಡೆ ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿರುವ ವಿಚಾರಕ್ಕೆ ಸಂಬಂಧಿಸಿ ಬೀದಿಬದಿ ಮುಸ್ಲಿಂ (Muslim) ವ್ಯಾಪಾರಿಗಳಿಗೆ ತೊಂದರೆ ಆಗಬಾರದು ಅಂತ ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ರಂಗಸ್ವಾಮಿ ಸರ್ಕಾರಕ್ಕೆ (Karnataka Government) ಮನವಿ ಮಾಡಿದ್ದಾರೆ. ಒಟ್ಟು 2.60 ಲಕ್ಷ ನೋಂದಾಯಿತ ಬೀದಿಬದಿ ವ್ಯಾಪಾರಿಗಳಿದ್ದಾರೆ. ಈ ಪೈಕಿ ಶೇಕಡಾ 20ಕ್ಕಿಂತ ಹೆಚ್ಚು ಮುಸ್ಲಿಂ ವ್ಯಾಪಾರಿಗಳಿದ್ದಾರೆ. ಬೀದಿಬದಿಯ ಮುಸ್ಲಿಂ ವ್ಯಾಪಾರಿಗಳಿಗೆ ತೊಂದರೆ ನೀಡಬೇಡಿ ಅಂತ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.