ಕರ್ನಾಟಕದ ಪಂಚ ಗ್ಯಾರಂಟಿಗೆ ಸುಪ್ರೀಂಕೋರ್ಟಲ್ಲೂ ಜಯ..!
ಚುನಾವಣಾ ಕಾನೂನುಗಳ ಪ್ರಕಾರ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ನೀಡುವ ಭರವಸೆಗಳನ್ನು ಭ್ರಷ್ಟ ಆಚರಣೆಗೆ ಸಮ ಎನ್ನಲಾಗದು. ಹಾಗಾಗಿ ಜಮೀರ್ ಅಹ್ಮದ್ ಅವರು ಲಂಚದ ಆಮಿಷವೊಡ್ಡಿ ಗೆದ್ದಿದ್ದಾರೆ ಎಂದು ಹೇಳಲಾಗದು: ಸುಪ್ರೀಂಕೋರ್ಟ್
ನವದೆಹಲಿ(ಮೇ.28): ‘ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ, ‘ಸಾರ್ವಜನಿಕರಿಗೆ ಆರ್ಥಿಕ ಸಹಾಯ ಮಾಡುತ್ತೇವೆ’ ಎಂದು ನೀಡಿದ ಭರವಸೆಗಳು ಚುನಾವಣಾ ಕಾನೂನಿನಡಿಯಲ್ಲಿ ‘ಭ್ರಷ್ಟ ಆಚರಣೆ’ ಎಂದು ಎನ್ನಿಸಿಕೊಳ್ಳುವುದಿಲ್ಲ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅರ್ಥಾತ್ ‘ಇಂಥ ಭರವಸೆಗಳು ಮತದಾರರಿಗೆ ಹಣದ ಆಮಿಷ ಒಡ್ಡಿದಂತಲ್ಲ’ ಎಂದಿದೆ. ಈ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ 5 ಗ್ಯಾರಂಟಿಗಳಿಗೆ ‘ಪರೋಕ್ಷ ಅನುಮೋದನೆ’ ನೀಡಿದೆ.
ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಮತದಾರ ಶಶಾಂಕ ಜೆ. ಶ್ರೀಧರ್ ಎಂಬುವರು, ಕ್ಷೇತ್ರದ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಬಿ.ಝಡ್. ಜಮೀರ್ ಅಹಮದ್ ಖಾನ್ ವಿರುದ್ಧ ಅರ್ಜಿ ಸಲ್ಲಿಸಿ, ‘ಖಾನ್ ಅವರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ‘ಗ್ಯಾರಂಟಿ’ ಭರವಸೆಗಳು ಲಂಚದ ಆಮಿಷಕ್ಕೆ (ಕರಪ್ಟ್ ಪ್ರಾಕ್ಟೀಸಸ್) ಸಮಾನವಾಗಿದೆ. ಹೀಗಾಗಿ 1951ರ ಜನಪ್ರತಿನಿಧಿ ಕಾನೂನಿನ ಪ್ರಕಾರ ಭ್ರಷ್ಟ ಆಚರಣೆಯಲ್ಲಿ ತೊಡಗಿ ಭರವಸೆ ನೀಡಿ ಗೆದ್ದ ಅವರ ಆಯ್ಕೆ ರದ್ದು ಮಾಡಬೇಕು’ ಎಂದು ಕೋರಿದ್ದರು. ಈ ಮುನ್ನ ತಮ್ಮ ಇದೇ ಅರ್ಜಿಯನ್ನು ಕರ್ನಾಟಕ ಹೈಕೋರ್ಟು ಕಳೆದ ಏಪ್ರಿಲ್‌ನಲ್ಲಿ ವಜಾ ಮಾಡಿದ್ದನ್ನು ಪ್ರಶ್ನಿಸಿ ಅವರು ಈ ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನ್ಯಾ। ಸೂರ್ಯಕಾಂತ್ ಮತ್ತು ನ್ಯಾ। ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು, ಈ ಅರ್ಜಿ ವಜಾ ಮಾಡಿತು.
Breaking : PMLA ದೂರು ಪರಿಗಣನೆ ಮಾಡಿದ ಮಾತ್ರಕ್ಕೆ ಆರೋಪಿಯನ್ನು ED ಬಂಧಿಸುವಂತಿಲ್ಲ: ಸುಪ್ರೀಂ ಕೋರ್ಟ್!
ತನ್ನ ಆದೇಶಕ್ಕೆ ಕಾರಣ ನೀಡಿದ ಪೀಠ, ‘ಅರ್ಜಿದಾರರು ತಮ್ಮ ಅರ್ಜಿಯಲ್ಲಿ ‘ರಾಜಕೀಯ ಪಕ್ಷವು ತನ್ನ ಪ್ರಣಾಳಿಕೆಯಲ್ಲಿನ ಬದ್ಧತೆಗಳು, ಅಂತಿಮವಾಗಿ ಸಾರ್ವಜನಿಕರಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಆರ್ಥಿಕ ಸಹಾಯಕ್ಕೆ ಕಾರಣವಾಗುತ್ತವೆ. ಇವು ಆ ಪಕ್ಷದ ಅಭ್ಯರ್ಥಿಯ ಭ್ರಷ್ಟ ಆಚರಣೆಗೆ ಕಾರಣವಾಗುತ್ತವೆ’ ಎಂದು ವಾದಿಸಿದ್ದಾರೆ. ಆದರೆ ಅವರ ವಾದದಲ್ಲಿ ಹುರುಳಿಲ್ಲ. ಚುನಾವಣಾ ಕಾನೂನುಗಳಲ್ಲಿ ಪ್ರಣಾಳಿಕೆಗಳಲ್ಲಿ ಪಕ್ಷಗಳು ನೀಡಿರುವ ಭರವಸೆಗಳನ್ನು ಭ್ರಷ್ಟ ಆಚರಣೆಗೆ (ಲಂಚದ ಆಮಿಷಕ್ಕೆ) ಸಮ ಎನ್ನಲಾಗದು. ಹಾಗಾಗಿ ಅರ್ಜಿದಾರರ ವಾದವನ್ನ ಒಪ್ಪಲಾಗದು’ ಎಂದು ಹೇಳಿ ವಜಾ ಮಾಡಿತು.
ಅರ್ಜಿಯಲ್ಲಿ ಏನಿತ್ತು?:
ಶಶಾಂಕ್ ಸಲ್ಲಿಸಿದ್ದ ಅರ್ಜಿಯಲ್ಲಿ ‘ಎಲ್ಲಾ ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 2,000 ರು. (ಗೃಹಲಕ್ಷ್ಮಿ), ಎಲ್ಲಾ ಮನೆಗಳಿಗೆ 200 ಯೂನಿಟ್ ವಿದ್ಯುತ್ (ಗೃಹಜ್ಯೋತಿ), ಪದವೀಧರ ಯುವಕರಿಗೆ ಪ್ರತಿ ತಿಂಗಳು 3,000 ರು. ಮತ್ತು ಡಿಪ್ಲೊಮಾ ಹೊಂದಿದವರಿಗೆ (ಯುವನಿಧಿ) 1,500 ರು., ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ (ಅನ್ನಭಾಗ್ಯ) ಹಾಗೂ ರಾಜ್ಯ ಸಾರ್ವಜನಿಕ ಸಾರಿಗೆ ಬಸ್ಸುಗಳಲ್ಲಿ ಮಹಿಯೆಯರಿಗೆ ಉಚಿತ ಪ್ರಯಾಣ ಒದಗಿಸುವ (ಶಕ್ತಿ) ಈ ಗ್ಯಾರಂಟಿಗಳು- ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭ್ರಷ್ಟ ಆಚರಣೆಗೆ (ಆಮಿಷಕ್ಕೆ) ಸಮ. ಏಕೆಂದರೆ ಸಾರ್ವಜನಿಕರಿಗೆ ಆರ್ಥಿಕವಾಗಿ ದೊಡ್ಡ ಪ್ರಮಾಣದಲ್ಲಿ ಪ್ರಯೋಜನದ ಭರವಸೆಯನ್ನು ಚುನಾವಣೆಯನ್ನೇ ಭ್ರಷ್ಟಗೊಳಿಸಿವೆ. ಹೀಗಾಗಿ ಇಂಥ ಭರವಸೆ ನೀಡಿದ್ದ ಗೆದ್ದ ಜಮೀರ್ ಆಯ್ಕೆ ರದ್ದುಗೊಳಿಸಬೇಕು’ ಎಂದು ವಾದಿಸಿದ್ದರು.
ಸುಪ್ರೀಂ ಹೇಳಿದ್ದೇನು?
ಚುನಾವಣಾ ಕಾನೂನುಗಳ ಪ್ರಕಾರ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ನೀಡುವ ಭರವಸೆಗಳನ್ನು ಭ್ರಷ್ಟ ಆಚರಣೆಗೆ ಸಮ ಎನ್ನಲಾಗದು. ಹಾಗಾಗಿ ಜಮೀರ್ ಅಹ್ಮದ್ ಅವರು ಲಂಚದ ಆಮಿಷವೊಡ್ಡಿ ಗೆದ್ದಿದ್ದಾರೆ ಎಂದು ಹೇಳಲಾಗದು.