Asianet Suvarna News Asianet Suvarna News

ಸಿದ್ದರಾಮಯ್ಯ ಬಗ್ಗೆ ಪರಂ, ಡಿಕೆಶಿ ಬಹಿರಂಗ ಆಕ್ಷೇಪ

ಸಿದ್ದರಾಮಯ್ಯ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದರೆ, ಆಕಾಂಕ್ಷಿ ಡಿ.ಕೆ.ಶಿವಕುಮಾರ್‌ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

DK Shivakumar Parameshwar Unhappy Over Siddaramaiah
Author
Bengaluru, First Published Jan 21, 2020, 7:22 AM IST

ಬೆಂಗಳೂರು [ಜ.21]:  ಕೆಪಿಸಿಸಿ ಅಧ್ಯಕ್ಷ ಹುದ್ದೆ ಪೈಪೋಟಿ ಇದೀಗ ಕಾಂಗ್ರೆಸ್‌ನ ಬಣ ರಾಜಕಾರಣ ಬಹಿರಂಗಕ್ಕೆ ಬರುವಂತೆ ಮಾಡಿದ್ದು, ಈ ಹುದ್ದೆ ಕುರಿತು ಸಿದ್ದರಾಮಯ್ಯ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದರೆ, ಆಕಾಂಕ್ಷಿ ಡಿ.ಕೆ.ಶಿವಕುಮಾರ್‌ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ. ಅಷ್ಟೇ ಅಲ್ಲದೆ, ಸಿದ್ದರಾಮಯ್ಯ ಅವರ ಧೋರಣೆ ವಿರೋಧಿಸಿ ಕೆಪಿಸಿಸಿ ಕಾರ್ಯದರ್ಶಿಯೊಬ್ಬರ ನೇತೃತ್ವದಲ್ಲಿ ಗುಂಪೊಂದು ಕೆಪಿಸಿಸಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದೆ.

ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕದ ಜತೆಗೆ ನಾಲ್ಕು ಕರ್ಯಾಧ್ಯಕ್ಷರನ್ನು ನೇಮಕ ಮಾಡಬೇಕು ಹಾಗೂ ಪ್ರತಿಪಕ್ಷ ನಾಯಕ ಹಾಗೂ ಶಾಸಕಾಂಗ ಪಕ್ಷ ನಾಯಕ ಎಂಬ ಎರಡು ಪ್ರತ್ಯೇಕ ಹುದ್ದೆ ಸೃಜಿಸಬಾರದು ಎಂಬ ಸಿದ್ದರಾಮಯ್ಯ ಅವರ ವಾದಕ್ಕೆ ಪರಮೇಶ್ವರ್‌ ಹಾಗೂ ಶಿವಕುಮಾರ್‌ ವಿರೋಧ ವ್ಯಕ್ತಪಡಿಸಿದ್ದಾರೆ. ಸೋಮವಾರ ಉಭಯ ನಾಯಕರು ಪ್ರತ್ಯೇಕ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ನಿಲುವಿಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಈ ಪೈಕಿ ಪರಮೇಶ್ವರ್‌ ಅವರು, ಕೆಪಿಸಿಸಿಗೆ ಕಾರ್ಯಾಧ್ಯಕ್ಷರು ನೇಮಕವಾಗಬಾರದು. ಹೀಗಾದಲ್ಲಿ ಗುಂಪುಗಾರಿಕೆ ಹೆಚ್ಚುತ್ತದೆ ಎನ್ನುವ ಮೂಲಕ ಸಿದ್ದರಾಮಯ್ಯ ನಿಲುವಿಗೆ ನೇರಾನೇರ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ತಮ್ಮ ಬೆಂಬಲಿಗರೊಂದಿಗೆ ಇತ್ತೀಚೆಗೆ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ನಡವಳಿಕೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವ ಡಿ.ಕೆ. ಶಿವಕುಮಾರ್‌, ನಾನು ಗುಂಪು ಕಟ್ಟಿಕೊಂಡು ಹೋಗುವುದಿಲ್ಲ ಎಂದು ಟಾಂಗ್‌ ನೀಡಿದ್ದಾರೆ.

ಕೆಪಿಸಿಸಿ ಹುದ್ದೆಗೆ ಲಾಬಿ ಕುರಿತ ಸುದ್ದಿಗಾರರ ಪ್ರಶ್ನೆಗೆ ಶಿವಕುಮಾರ್‌, ಯಾರಾರ‍ಯರು ಏನೇನು ಮತ್ತು ಮಾಧ್ಯಮಗಳು ಏನು ತೋರಿಸುತ್ತಿವೆ ಎಂಬುದು ನನಗೆ ಗೊತ್ತು. ನಾನು ಗುಂಪು ಕಟ್ಟಿಕೊಂಡು ಹೋಗುವವನಲ್ಲ. ಯಾರಾರ‍ಯರು ಎಷ್ಟುಬಣ ಸೃಷ್ಟಿಮಾಡಿಕೊಳ್ಳುತ್ತಾರೋ ಗೊತ್ತಿಲ್ಲ ಎಂದಿದ್ದಾರೆ.

ಸಿದ್ದು ವಿರುದ್ಧ ಕಾಂಗ್ರೆಸ್ಸಲ್ಲೇ ಪ್ರತಿಭಟನೆ:

ಪರಮೇಶ್ವರ್‌ ಹಾಗೂ ಡಿ.ಕೆ.ಶಿವಕುಮಾರ್‌ ಅವರು ನೀಡಿದ ಈ ಹೇಳಿಕೆಗಳ ಬೆನ್ನಲ್ಲೇ ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಗುಂಪೊಂದು ಪ್ರತಿಭಟನೆ ನಡೆಸಿದೆ. ಕೆಪಿಸಿಸಿ ಕಾರ್ಯದರ್ಶಿ ಬಲರಾಂ ಎಂಬುವವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಈ ಗುಂಪು, ಕಾರ್ಯಾಧ್ಯಕ್ಷರ ನೇಮಕಕ್ಕೆ ಹಟ ಹಿಡಿದು ಕೆಪಿಸಿಸಿ ಅಧ್ಯಕ್ಷರ ನೇಮಕಕ್ಕೆ ಸಿದ್ದರಾಮಯ್ಯ ಅಡ್ಡಗಾಲು ಹಾಕಿದ್ದಾರೆ ಎಂದು ಆರೋಪಿಸಿದೆ.

ಅಲ್ಲದೆ, ಸಿದ್ದರಾಮಯ್ಯ ಧೋರಣೆ ಸರಿಯಿಲ್ಲ. ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ ಅವರು ಈಗ ಉಳಿದ ನಾಯಕರಿಗೆ ಅಡ್ಡಿಯಾಗುತ್ತಿದ್ದಾರೆ. ಕಾಂಗ್ರೆಸ್ಸನ್ನು ಕಟುವಾಗಿ ಟೀಕಿಸುವ ಬಿಜೆಪಿ ಸಚಿವ ಈಶ್ವರಪ್ಪ ಹಾಗೂ ವಿಶ್ವನಾಥ್‌ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಾರೆ. ತನ್ಮೂಲಕ ಪಕ್ಷಕ್ಕೆ ತೊಂದರೆಯಾಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯ ಅವರ ಒತ್ತಡಕ್ಕೆ ಮಣಿಯಬಾರದು. ಕೆಪಿಸಿಸಿಗೆ ಅಧ್ಯಕ್ಷರನ್ನು ಶೀಘ್ರ ನೇಮಕ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

Follow Us:
Download App:
  • android
  • ios