ಬೆಳಗಾವಿ (ಡಿ.06):  ಯಾವುದೊಂದು ಸಮಾಜ ಗಮನದಲ್ಲಿಟ್ಟುಕೊಂಡು ಗೋ ಹತ್ಯೆ ನಿಷೇಧ ಮಾಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು, ವಯಸ್ಸಾದ ಗೋವುಗಳನ್ನು ಯಾರು ಖರೀದಿ ಮಾಡುತ್ತಾರೆ. 

ಗೋ ಹತ್ಯೆ ನಿಷೇಧ ಕಾಯ್ದೆ ತರಲಿ ನೋಡೋಣ ಎಂದು ಸವಾಲೆಸೆದಿದ್ದಾರೆ. ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಮಾಡಿರುವ ವೈಯಕ್ತಿಕ ಆರೋಪಕ್ಕೆ ನಾನು ಉತ್ತರ ಕೊಡುವುದಿಲ್ಲ ಎಂದೂ ಇದೇ ವೇಳೆ ಹೇಳಿದರು.

 ಜನರ ಬಗ್ಗೆ ಕಳಕಳಿ ಇಲ್ಲ: ಡಿಕೆಶಿ
‘ಉತ್ತರ ಕರ್ನಾಟಕದ ಜನರ ಸಮಸ್ಯೆಗೆ ಸ್ಪಂದಿಸಲು ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿದ್ದಾರೆ. ಆದರೆ, ಆ ಉದ್ದೇಶಕ್ಕಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಿಲ್ಲ. ಬಿಜೆಪಿ ಸರ್ಕಾರಕ್ಕೆ ಜನರ ಬಗ್ಗೆ ಕಳಕಳಿಯೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ವಾಗ್ದಾಳಿ ನಡೆಸಿದರು.

ಪ್ರತಾಪ್ ರಾಜೀನಾಮೆ : ಮನವೊಲಿಸಿದ ಸಿದ್ದರಾಮಯ್ಯ? ...

ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಬೆಂಗಳೂರು, ಕೃಷ್ಣಾ, ವಿಧಾನಸೌಧ, ಕಚೇರಿ ಬಿಟ್ಟರೆ ಎಲ್ಲಿಯೂ ಬರಲಿಲ್ಲ. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಯಾವ ಉದ್ದೇಶಕ್ಕೆ ನಿರ್ಮಾಣ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ‘ಉತ್ತರ ಕರ್ನಾಟಕದ ಜನರ ಬಗ್ಗೆ ಸರ್ಕಾರಕ್ಕೆ ಯಾವ ಕಳಕಳಿಯೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾಕೆ ಧ್ವನಿ ಎತ್ತುತ್ತಿಲ್ಲ?:

ಭೀಕರ ಪ್ರವಾಹದಲ್ಲಿ ಸಾಕಷ್ಟುಜನರ ಮನೆ ಮುಳುಗಿವೆ. ಜನರಿಗೆ ಸೂರು ಕೊಡಲೂ ಸರ್ಕಾರಕ್ಕೆ ಆಗಲಿಲ್ಲ. ಸಂತ್ರಸ್ತರಿಗೆ ಪರಿಹಾರ, ಮನೆ ಕೊಡಲು ಸಾಧ್ಯವಾಗಲಿಲ್ಲ. ಅಧಿವೇಶನದಲ್ಲಿ ಕರೆದು ನ್ಯಾಯ ಒದಗಿಸಿಕೊಡುವುದಾಗಿ ಹೇಳಿದ್ದರು. ಆದರೆ ಅವರಿಗೆ ಪರಿಹಾರ ಸಿಗಲಿಲ್ಲ. ಆಗ ಬೆಳಗಾವಿ ಅಧಿವೇಶನದಲ್ಲಿ ನಿರ್ಣಯ ಮಾಡಲಾಗುವುದು ಎಂದಿದ್ದರು. ಆದರೆ ಬೆಳಗಾವಿಯಲ್ಲಿ ಅಧಿವೇಶನ ಕರೆಯುವ ಬದಲು ಬಿಜೆಪಿಯ ರಾಜ್ಯ ರಾಜಕಾರಿಣಿ ಸಭೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿದ್ದು ನಾವು ಎಂದು ಹೇಳಿಕೊಂಡು ತಿರುಗಾಡುವ ಬೆಳಗಾವಿ ನಾಯಕರು ಈಗ ಎಲ್ಲಿದ್ದಾರೆ? ಈಗೇಕೆ ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.