Asianet Suvarna News Asianet Suvarna News

ದಿಲ್ಲಿ ಎಲೆಕ್ಷನ್‌ನ ನಿರ್ಣಾಯಕ ಅಂಶಗಳೇನು?

ದೆಹಲಿಯ ಅನಧಿಕೃತ ಪ್ರದೇಶದಲ್ಲಿ ವಾಸಿಸುತ್ತಿರುವ ಹೆಚ್ಚಿನ ಸಂಖ್ಯೆಯ ಜನರು ಕೇಜ್ರಿವಾಲ್‌ ಪರ ನಿಲ್ಲುತ್ತಾರೋ ಅಥವಾ ಅವರ ಮನೆಗಳನ್ನು ಸಕ್ರಮಗೊಳಿಸಿದ ಕೇಂದ್ರದ ಬಿಜೆಪಿ ಸರ್ಕಾರದ ಪರ ನಿಲ್ಲುತ್ತಾರೋ ಎನ್ನುವುದು ದೆಹಲಿ ಚುನಾವಣೆಯಲ್ಲಿ ಬಹಳ ಮುಖ್ಯ ಅಂಶ. ರಾಷ್ಟ್ರ ರಾಜಧಾನಿಯಲ್ಲಿ ಈ ಬಾರಿ ಆಪ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ. ಫೆಬ್ರವರಿ 8ಕ್ಕೆ ಮತದಾನ.

Deciding factors of Delhi Elections 2020
Author
Bangalore, First Published Jan 23, 2020, 3:33 PM IST
  • Facebook
  • Twitter
  • Whatsapp

ಡಾ| ಸತೀಶ ಕೆ. ಪಾಟೀಲ್‌, ವಿಜಯಪುರ

ನವದೆಹಲಿ[ಜ.23]: ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಈ ಬಾರಿಯ ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಮರಳಿ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವ ಉತ್ಸಾಹದಲ್ಲಿ ಅರವಿಂದ್‌ ಕೇಜ್ರಿವಾಲ ಅವರ ಆಮ್‌ ಆದ್ಮಿ ಪಕ್ಷವಿದ್ದರೆ, ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಬೇಕು ಎನ್ನುವ ಹಂಬಲದಲ್ಲಿದೆ ಬಿಜೆಪಿ. ಇನ್ನು ಕಾಂಗ್ರೆಸ್‌ ತನ್ನ ಗತ ವೈಭವವನ್ನು ದೆಹಲಿಯಲ್ಲಿ ಮರಳಿ ಪಡೆಯಬೇಕು ಎನ್ನುವ ಪ್ರಯತ್ನದಲ್ಲಿದೆ. ಮೇಲ್ನೋಟಕ್ಕೆ ಈ ಮೂರು ಪಕ್ಷಗಳ ಅಬ್ಬರವಿದ್ದರೂ ಈ ಸಲದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನೇರ ಹಣಾಹಣಿ ಇರುವುದು ಆಮ್‌ ಆದ್ಮಿ ಮತ್ತು ಬಿಜೆಪಿ ಪಕ್ಷಗಳ ಮಧ್ಯೆ. ಕಳೆದ ಬಾರಿ ಒಟ್ಟು ದೆಹಲಿಯ ವಿಧಾನಸಭೆಯ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದು ಬೀಗಿದ್ದ ಆಮ್‌ ಆದ್ಮಿ ಪಕ್ಷವು, ವಿರೋಧ ಪಕ್ಷವಾದ ಬಿಜೆಪಿಗೆ ಕೇವಲ 3 ಸ್ಥಾನಗಳನ್ನು ಬಿಟ್ಟುಕೊಟ್ಟಿತ್ತು. ಆದರೆ ಈಗ ಕಾಲ ಬದಲಾಗಿದೆ. ಅರವಿಂದ್‌ ಕೇಜ್ರಿವಾಲರ ಆಮ್‌ ಆದ್ಮಿ ಪಕ್ಷಕ್ಕೆ ಬಿಜೆಪಿ ಈ ಬಾರಿ ತೀವ್ರ ಪೈಪೋಟಿ ನೀಡುತ್ತಿದೆ.

ಕೇಜ್ರಿವಾಲ್‌ ಎದುರು ಕನ್ನಡಿಗ ಸ್ವಾಮೀಜಿ ಸ್ಪರ್ಧೆ

ಸೋತು ಪಾಠ ಕಲಿತ ಕೇಜ್ರಿವಾಲ್‌

ಭ್ರಷ್ಟಾಚಾರ, ಲೋಕಪಾಲ ಮಸೂದೆ ಜಾರಿಯಂತಹ ವಿಷಯಗಳನ್ನು ಇಟ್ಟುಕೊಂಡು ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಹೋರಾಟದ ಮೂಲಕ ಮುನ್ನೆಲೆಗೆ ಬಂದ ಅರವಿಂದ್‌ ಕೇಜ್ರಿವಾಲ್‌, 2015ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಎಂಬ ಪಕ್ಷವನ್ನು ಕಟ್ಟಿಮೊದಲ ಪ್ರಯತ್ನದಲ್ಲಿಯೇ ಭರ್ಜರಿ ಯಶಸ್ಸು ಪಡೆದು ಅಧಿಕಾರ ಹಿಡಿದಿದ್ದು ಈಗ ಇತಿಹಾಸ. ಅಧಿಕಾರಕ್ಕೆ ಬಂದ ಪ್ರಾರಂಭದ ದಿನಗಳಲ್ಲಿ ರಾಜಕೀಯ ಅನನುಭವಿ ಎಂಬಂತೆ ವರ್ತಿಸಿ ಜನರಿಂದ ಅಪಹಾಸ್ಯಕ್ಕೆ ಈಡಾದರು. ಉದಾಹರಣೆಗೆ ಮುಖ್ಯಮಂತ್ರಿಯಾಗಿ ಸ್ವತಃ ಧರಣಿ ಕುಳಿತಿದ್ದು, ದೆಹಲಿ ಕೇಂದ್ರಾಡಳಿತ ಪ್ರದೇಶ ಎನ್ನುವುದನ್ನೂ ಮರೆತು ದೆಹಲಿಗೆ ಹೆಚ್ಚಿನ ಸ್ವಾಯುತ್ತೆ ಬೇಕು ಎಂದು ಆಗ್ರಹಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಸಂಘರ್ಷಕ್ಕೆ ಇಳಿದಿದ್ದು ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಜೊತೆ ಅಧಿಕಾರಕ್ಕಾಗಿ ಹೋರಾಡಿದ್ದು ಇತ್ಯಾದಿ. ಇದರಿಂದ ದೆಹಲಿಯ ಜನರ ಆಕ್ರೋಶಕ್ಕೆ ಕಾರಣರಾಗಿ ದೆಹಲಿ ನಗರಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲುವ ಮೂಲಕ ಪಾಠ ಕಲಿತು ತಮ್ಮ ವರ್ತನೆಯಲ್ಲಿ ಸುಧಾರಣೆ ಕಂಡುಕೊಂಡ ಕೇಜ್ರಿವಾಲ್‌, ದೆಹಲಿ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ನಂತರದ ದಿನಗಳಲ್ಲಿ ಯತ್ನಿಸಿ ತಕ್ಕಮಟ್ಟಿನ ಯಶ ಸಾಧಿಸಿದರು. ಈಗ ಈ ಅಂಶವೇ ಅವರಿಗೆ ವರವಾಗುವ ಸಾಧ್ಯತೆ ಹೆಚ್ಚಾಗಿದೆ.

ಸರ್ಕಾರದ ಕೆಲಸ ಕೈಹಿಡಿಯುತ್ತಾ?

ಈ ಬಾರಿಯ ಚುನಾವಣೆಯಲ್ಲಿ ಕೇಜ್ರಿವಾಲ್‌ ಅವರ ಆಮ್‌ ಆದ್ಮಿ ಪಕ್ಷದ ಪರ ಇರುವ ಅಂಶಗಳೆಂದರೆ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಸರ್ಕಾರ 5 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಾದ ಬಡಜನತೆಗೆ ಕಡಿಮೆ ದರದಲ್ಲಿ ವಿದ್ಯುತ್‌, ನೀರು ವಿತರಣೆ, ಶಿಕ್ಷಣ ವ್ಯವಸ್ಥೆ ಸುಧಾರಣೆ, ಮಹಿಳೆಯರಿಗೆ ಅನೇಕ ಸೌಕರ್ಯಗಳನ್ನು ಒದಗಿಸಿದ್ದು, ಬಸ್‌ಗಳಲ್ಲಿ ರಿಯಾಯತಿ ದರದ ಪ್ರಯಾಣ, ಮಹಿಳೆಯರ ಸುರಕ್ಷತೆಗೆ ಕೈಗೊಂಡ ಕ್ರಮಗಳು, ದೆಹಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳು, ದೆಹಲಿಯ ಕೂಲಿ ಕಾರ್ಮಿಕರು ಮತ್ತು ಕೊಳಗೇರಿ ನಿವಾಸಿಗಳ ಕಲ್ಯಾಣಕ್ಕಾಗಿ ಕೈಗೊಂಡ ಕ್ರಮಗಳು, ಉಚಿತ ಕ್ಲಿನಿಕ್‌ಗಳನ್ನು ತೆರೆದಿದ್ದು ಇತ್ಯಾದಿ ಅಭಿವೃದ್ಧಿ ಕಾರ್ಯಗಳು. ಈ ಅಂಶಗಳು ಕೇಜ್ರಿವಾಲ್‌ ಸರ್ಕಾರದ ಬಗ್ಗೆ ಅಷ್ಟಾಗಿ ಆಡಳಿತ ವಿರೋಧಿ ಅಲೆ ಹುಟ್ಟಿಕೊಳ್ಳದಂತೆ ಮಾಡಿವೆ.

ಕೇಜ್ರಿಯಿಂದ 10 ಭರವಸೆಯ ಗ್ಯಾರಂಟಿ ಕಾರ್ಡ್‌ ಬಿಡುಗಡೆ

ಇನ್ನೊಂದು ಪ್ರಮುಖ ಅಂಶವೆಂದರೆ, ಸಿಎಂ ಕೇಜ್ರಿವಾಲರ ಜನಪ್ರಿಯತೆ. ಆಡಂಬರವಿಲ್ಲದ ಅವರ ನಡವಳಿಕೆ, ಯಾವುದೇ ಗಂಭೀರವಾದ ಭ್ರಷ್ಟಾಚಾರದ ಆರೋಪ ಇಲ್ಲದೇ ಇರುವುದು. ಜನಸಾಮಾನ್ಯರ ಸಿಎಂ ಎನ್ನುವ ಇಮೇಜ್‌ ಕಾಪಾಡಿಕೊಂಡು ಬಂದಿರುವುದು, ಆಡಳಿತ ಯಂತ್ರವನ್ನು ಸಾಧ್ಯವಾದಷ್ಟುಮಟ್ಟಿಗೆ ಜನರ ಹತ್ತಿರ ಕೊಂಡೊಯ್ದಿದ್ದು ಇವರಿಗೆ ವರವಾಗಬಹುದು. ಹಾಗೆಯೇ ವಿರೋಧ ಪಕ್ಷಗಳಲ್ಲಿ ಅರವಿಂದ್‌ ಕೇಜ್ರಿವಾಲರ ಜನಪ್ರಿಯತೆಯನ್ನು ಮೀರಿಸುವ ನಾಯಕರು ಇಲ್ಲದೇ ಇರುವುದು ಕೂಡ ಪ್ರಮುಖವಾಗಿ ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ಮತ್ತೆ ಅಧಿಕಾರದ ಕನಸು ಕಾಣುವಂತೆ ಮಾಡಿದೆ.

ಹರ್ಷವರ್ಧನ್‌ VS ಕೇಜ್ರಿವಾಲ್‌?

ಇನ್ನು ಪ್ರಮುಖ ವಿರೋಧಿ ಪಕ್ಷವಾದ ಬಿಜೆಪಿ ಕಳೆದ ಬಾರಿಯಂತೆ ಈ ಬಾರಿಯೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಇರುವದು ಕೂಡ ಒಂದು ಸಮಸ್ಯೆಯಾಗಿದೆ. ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್‌ ತಿವಾರಿ ದೆಹಲಿಯ ಹೊರಗಿನವರು ಎನ್ನುವ ಅಭಿಪ್ರಾಯವಿದೆ. ಇನ್ನು ವಿಜಯ ಗೋಯಲ್‌ ಇದ್ದರೂ ಅಷ್ಟೊಂದು ಜನಪ್ರಿಯತೆ ಹೊಂದಿಲ್ಲ. ಹಾಗೆಯೇ, ಕ್ಲೀನ್‌ ಇಮೇಜಿನ ಕೇಂದ್ರ ಸಚಿವ ಡಾ

ಹರ್ಷವರ್ಧನ ತಕ್ಕಮಟ್ಟಿಗೆ ಕೇಜ್ರಿವಾಲರಿಗೆ ಪೈಪೋಟಿ ನೀಡಬಹುದು. ಆದರೆ, ಬಿಜೆಪಿಯ ಕೇಂದ್ರ ನಾಯಕರು ಸ್ಥಳೀಯ ನಾಯಕರನ್ನು ಹೊರತುಪಡಿಸಿ ಈ ಚುನಾವಣೆಯಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರನ್ನೇ ಹೆಚ್ಚಾಗಿ ನೆಚ್ಚಿಕೊಂಡಂತೆ ಕಾಣುತ್ತಿದೆ. ಈ ನಾಯಕತ್ವದ ಸಮಸ್ಯೆ ಕಾಂಗ್ರೆಸ್‌ ಪಕ್ಷಕ್ಕೂ ಕಾಡುತ್ತಿದೆ. ದೆಹಲಿಯ ಕಾಂಗ್ರೆಸ್‌ ಅಧ್ಯಕ್ಷ ಸುಭಾಷ್‌ ಚೋಪ್ರಾ ಅಷ್ಟಾಗಿ ಜನಮನ್ನಣೆ ಗಳಿಸಿಲ್ಲ. ನಾಯಕತ್ವದ ಈ ಅಂಶವು ಈ ಚುನಾವಣೆಯಲ್ಲಿ ಪ್ರಮುಖವಾಗಿ ಆಮ್‌ ಆದ್ಮಿ ಪಕ್ಷಕ್ಕೆ ವರವಾಗುವ ಸಾಧ್ಯತೆ ಇದೆ.

20 ದಿನದಲ್ಲಿ 5000 ರ‍್ಯಾಲಿಗೆ ಬಿಜೆಪಿ ಮೆಗಾ ಪ್ಲಾನ್!

ಸಿಎಎ, ಎನ್‌ಆರ್‌ಸಿ ಭವಿಷ್ಯ ನಿರ್ಧಾರ

ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಹೊಂದಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ಯಾರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಅಂಶಕ್ಕೆ ಮತದಾರರು ಹೆಚ್ಚಿನ ಒಲವು ತೋರುತ್ತಾರೆ. ಹೀಗಾಗಿ ದೆಹಲಿ ಚುನಾವಣೆಯಲ್ಲಿ ಅರವಿಂದ್‌ ಕೇಜ್ರಿವಾಲರಿಗೆ ಸವಾಲು ಎಸೆಯಬಲ್ಲ ನಾಯಕರು ದೆಹಲಿಯಲ್ಲಿ ಇಲ್ಲದೇ ಇರುವುದು ವಿರೋಧ ಪಕ್ಷಗಳಲ್ಲಿ ಎದ್ದು ಕಾಣುತ್ತಿದೆ. ಇನ್ನು ಸತತವಾಗಿ 3 ಸಲ ಅಧಿಕಾರ ಸ್ಥಾಪಿಸಿದ್ದ ಕಾಂಗ್ರೆಸ್‌ ಪಕ್ಷದ ಸ್ಥಿತಿ ದೆಹಲಿಯಲ್ಲಿ ಚಿಂತಾಜನಕವಾಗಿದೆ. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಮತ್ತು ಜಾತ್ಯತೀತ ಮತಗಳು ಈಗ ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷದತ್ತ ಹೊರಳಿವೆ. ಇನ್ನು ಕೇಂದ್ರ ಸರ್ಕಾರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ರಾಷ್ಟ್ರೀಯ ವಿಷಯಗಳಾದ ವಿಧಿ-370 ರದ್ದು, ತ್ರಿವಳಿ ತಲಾಕ್‌, ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನ, ರಾಷ್ಟ್ರೀಯ ನಾಗರಿಕ ನೋಂದಣಿಯಂತಹ ವಿಷಯ ಪಸ್ತಾಪ ಮಾಡುತ್ತಿರುವುದು ಆ ಪಕ್ಷಕ್ಕೆ ಎಷ್ಟರ ಮಟ್ಟಿಗೆ ಲಾಭ ತಂದುಕೊಡಬಲ್ಲಬು ಎನ್ನುವುದನ್ನು ಭವಿಷ್ಯವೇ ನಿರ್ಧರಿಸಬೇಕು.

ಯಾರ ಮತಗಳು ನಿರ್ಣಾಯಕ?

ಕೇಂದ್ರದ ಬಿಜೆಪಿ ಸರ್ಕಾರದ ವೈಫಲ್ಯಗಳಾದ ಅಗತ್ಯ ವಸ್ತುಗಳ ಬೆಲೆ ಏರಿಕೆ, ದೇಶದ ಆರ್ಥ ವ್ಯವಸ್ಥೆಯ ಕುಸಿತ, ಹೆಚ್ಚುತ್ತಿರುವ ನಿರುದ್ಯೋಗದಂತಹ ಸಮಸ್ಯೆಗಳು ಬಿಜೆಪಿಗೆ ಮಾರಕವಾಗಬಹುದು. ಇನ್ನು ದೆಹಲಿಯಲ್ಲಿನ ಸಿಖ್‌ ಮತ್ತು ಅಲ್ಪಸಂಖ್ಯಾತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಆಮ್‌ ಆದ್ಮಿ ಪಕ್ಷವನ್ನು ಬೆಂಬಲಿಸುತ್ತಿದೆ. ಆದರೆ ದೆಹಲಿಯ ಅನಧಿಕೃತ ಪ್ರದೇಶದಲ್ಲಿ ವಾಸಿಸುತ್ತಿರುವ ಹೆಚ್ಚಿನ ಸಂಖ್ಯೆಯ ಜನರು ಈ ಚುನಾವಣೆಯಲ್ಲಿ ಯಾರ ಪರ ಎನ್ನುವ ಗೊಂದಲ ಇದ್ದೇ ಇದೆ. ಈ ಪ್ರದೇಶದ ಜನರ ಸಕ್ರಮಕ್ಕಾಗಿ ಹೋರಾಡಿದ ಕೇಜ್ರಿವಾಲರ ಪರ ನಿಲ್ಲುತ್ತಾರೋ, ಇಲ್ಲವೇ ಇವರನ್ನು ಸಕ್ರಮಗೊಳಿಸಿದ ಕೇಂದ್ರದ ಬಿಜೆಪಿ ಪರ ನಿಲ್ಲುತ್ತಾರೋ ಎನ್ನುವ ಪ್ರಶ್ನೆಯೇ ನಿರ್ಣಾಯಕವಾಗುವ ಸಾಧ್ಯತೆ ಇದೆ.

ದೆಹಲಿ ಬಿಜೆಪಿ ಮೊದಲ ಪಟ್ಟಿಯಲ್ಲಿ ಕೇಜ್ರಿವಾಲ್ ವಿರುದ್ಧ ಅಭ್ಯರ್ಥಿ ಇಲ್ಲ!

ಇನ್ನು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಸರ್ಕಾರದ ಬಗ್ಗೆ ಕೆಲ ವಿಷಯಗಳಲ್ಲಿ ಜನರ ಮನಸ್ಸಿನಲ್ಲಿ ಸಣ್ಣಮಟ್ಟದ ಬೇಸರವಿದೆ. ಉದಾಹರಣೆಗೆ ದೆಹಲಿ ನಗರವು ಮಹಿಳೆಯರಿಗೆ ಸುರಕ್ಷಿತವಲ್ಲ ಎನ್ನುವ ಅಭಿಪ್ರಾಯವಿದೆ. ಏಕೆಂದರೆ, ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ದೆಹಲಿಯ ವಾಯು ಮಾಲಿನ್ಯ, ಸಂಚಾರ ದಟ್ಟಣೆಯ ಸಮಸ್ಯೆ, ಕಾನೂನು ಸುವ್ಯವಸ್ಥೆಯ ಸಮಸ್ಯೆ ಇತ್ಯಾದಿಗಳು ಇದ್ದರೂ ಇವುಗಳನ್ನು ಸಂಪೂರ್ಣವಾಗಿ ಬಗೆಹರಿಸಲು ಕೇಜ್ರಿವಾಲ್‌ ಅವರಿಗೆ ಸಾಧ್ಯವಾಗದಿರುವುದು ಅವರಿಗೆ ತಿರುಗು ಬಾಣವಾಗಬಹುದು.

ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭೆಯಲ್ಲಿ ಜನರ ಒಲವು ಯಾರ ಕಡೆಗಿದೆ ಎನ್ನುವುದು ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ದೆಹಲಿಯ ಅಧಿಕಾರದ ಗದ್ದುಗೆ ಹಿಡಿಯುವವರು ಯಾರು ಎನ್ನುವ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಫೆಬ್ರವರಿ 11ರ ವರೆಗೆ ಕಾಯಲೇಬೇಕು!

Follow Us:
Download App:
  • android
  • ios