Council Election Karnataka : ಸೋಮಶೇಖರ್‌ಗೆ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲೇಬೇಕಾದ ‘ಸವಾಲು’

  • ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿರುವ ಎಸ್‌.ಟಿ. ಸೋಮಶೇಖರ್‌
  • ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕಾದ ಸವಾಲು ಎದುರಾಗಿದೆ
Council Election Challenges for Minister ST Somashekar snr

ವರದಿ :  ಅಂಶಿ ಪ್ರಸನ್ನಕುಮಾರ್‌

 ಮೈಸೂರು(ಡಿ.06) :  ಮೈಸೂರು ಹಾಗೂ ಚಾಮರಾಜನಗರ (Mysuru  - chamarajanagar ) ಜಿಲ್ಲೆಗಳ ಉಸ್ತುವಾರಿ ಸಚಿವರಾಗಿರುವ ಎಸ್‌.ಟಿ. ಸೋಮಶೇಖರ್‌ ( ST Somashekar ) ಅವರಿಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ (MLC Election ) ನಡೆಯುವ ಚುನಾವಣೆಯಲ್ಲಿ ಬಿಜೆಪಿ (BJP) ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕಾದ ಸವಾಲು ಎದುರಾಗಿದೆ.ರಾಜ್ಯ ಬಿಜೆಪಿ ಸರ್ಕಾರದಲ್ಲಿ ಎರಡು ಜಿಲ್ಲೆಗಳ ಉಸ್ತುವಾರಿ ಹೊಂದಿರುವ ಸಚಿವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅವರಲ್ಲಿ ಎಸ್‌.ಟಿ. ಸೋಮಶೇಖರ್‌ ಒಬ್ಬರು. ಅದೇ ರೀತಿ ದ್ವಿಸದಸ್ಯ ಕ್ಷೇತ್ರಗಳು ಇರುವುದು ಐದು ಜಿಲ್ಲೆಗಳಲ್ಲಿ ಮಾತ್ರ. ಅವುಗಳಲ್ಲಿ ಮೈಸೂರು- ಚಾಮರಾಜನಗರ ಕೂಡ ಒಂದು.

ಎಸ್‌.ಟಿ. ಸೋಮಶೇಖರ್‌ ಅವರು ಯಡಿಯೂರಪ್ಪ(BS Yedoyurappa)  ಅವರ ಸಂಪುಟ ಸೇರಿದ ನಂತರ ಮೊದಲಿಗೆ ಮೈಸೂರು ಉಸ್ತುವಾರಿ ಸಚಿವರಾಗಿದ್ದರು. ಎಸ್‌.ಆರ್‌. ಬೊಮ್ಮಾಯಿ (SR bommai) ಅವರ ಸಂಪುಟದಲ್ಲೂ ಮುಂದುವರೆದ ನಂತರ ಮೈಸೂರು ಜೊತೆಗೆ ಚಾಮರಾಜನಗರ ಉಸ್ತುವಾರಿಯನ್ನು ಹೊತ್ತಿದ್ದಾರೆ. ಕೋವಿಡ್‌-19 (Covid 19) ಹಿನ್ನೆಲೆಯಲ್ಲಿ ಎರಡು ದಸರೆಗಳನ್ನು (Dasara) ಸರಳವಾಗಿ ಅರಮನೆ ಆವರಣಕ್ಕೆ ಸೀಮಿತವಾಗಿ ನಡೆಸಿದ್ದಾರೆ. ಕೋವಿಡ್‌(covid ), ಪ್ರವಾಹ ಪರಿಸ್ಥಿತಿ ನಿಯಂತ್ರಣ ವಿಷಯದಲ್ಲಿ ಉಭಯ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದಾರೆ.

ಮೈಸೂರು- ಚಾಮರಾಜನಗರ (mysuru - chamarajanagar) ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಈವರೆಗೆ ಒಂದು ಉಪ ಚುನಾವಣೆ (By Election) ಸೇರಿದಂತೆ ಆರು ಬಾರಿ ಚುನಾವಣೆ ನಡೆದಿದೆ. ಬಿಜೆಪಿ ಗೆದ್ದಿರುವುದು 2009 ರಲ್ಲಿ ಮಾತ್ರ. ಅದಕ್ಕಿಂತ ಮುಂಚೆ ಬಿಜೆಪಿ ಈ ಕ್ಷೇತ್ರದಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬ ಪರಿಸ್ಥಿತಿ. 2013 ರ ಉಪ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿರಲಿಲ್ಲ. ಕಾಂಗ್ರೆಸ್‌ನ ಆರ್‌. ಧರ್ಮಸೇನ ಹ ಹಾಗೂ ಕೆಜೆಪಿಯ ಯು.ಎಸ್‌. ಶೇಖರ್‌ ನಡುವೆ ನೇರ ಹೋರಾಟ ನಡೆದಿತ್ತು. ಧರ್ಮಸೇನ ಗೆದ್ದಿದ್ದರು. ಶೇಖರ್‌ ಗಣನೀಯ ಮತ ಪಡೆದಿದ್ದರು. 2015ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗಣನೀಯ ಮತ ಪಡೆದು, ಸೋತಿದೆ.

ಕಳೆದ ಬಾರಿ ಬಿಜೆಪಿ (bjp) ಗೆದ್ದಾಗ ರಾಜ್ಯದಲ್ಲಿ ಆ ಪಕ್ಷದ ಸರ್ಕಾರ ಇತ್ತು. ವೀರಶೈವ ಲಿಂಗಾಯತ ಜನಾಂಗದ ಪ್ರೊ.ಕೆ.ಆರ್‌. ಮಲ್ಲಿಕಾರ್ಜುನಪ್ಪ ಅಭ್ಯರ್ಥಿಯಾಗಿದ್ದರು. ಅವರು ಕಾಂಗ್ರೆಸ್‌ನ ಎನ್‌. ಮಂಜುನಾಥ್‌ ಅವರನು ಹಿಂದಿಕ್ಕಿ ಜಯಭೇರಿ ಬಾರಿಸಿದ್ದರು. 2015 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಆರ್‌. ರಘು ಈಗಲೂ ಅಭ್ಯರ್ಥಿ. ಇವರು ಹಿಂದುಳಿದ ಜಾತಿಯಲ್ಲಿ ಸೂಕ್ಷ್ಮಾತಿ ಸೂಕ್ಷ್ಮ ವರ್ಗದ ಮಡಿವಾಳ ಜನಾಂಗಕ್ಕೆ ಸೇರಿದವರು.

ಮೈಸೂರು, ಚಾಮರಾಜನಗರ- ಎರಡೂ ಲೋಕಸಭಾ (Loksabha) ಕ್ಷೇತ್ರಗಳಲ್ಲಿ ಬಿಜೆಪಿಯ ಸಂಸದರಿದ್ದಾರೆ. ಉಭಯ ಜಿಲ್ಲೆಗಳ 15 ಶಾಸಕರ ಪೈಕಿ ಐವರು ಬಿಜೆಪಿಯವರೇ ಇದ್ದಾರೆ. 16 ಮಂದಿ ನಿಗಮ, ಮಂಡಳಿ ಅಧ್ಯಕ್ಷರಿದ್ದಾರೆ. ಮೈಸೂರು (Mysuru) ಮೇಯರ್‌ ಸ್ಥಾನವೂ ಬಿಜೆಪಿಯ ಪಾಲಾಗಿದೆ. ನಂಜನಗೂಡು, ವರುಣ, ಗುಂಡ್ಲು ಪೇಟೆ, ಚಾಮರಾಜನಗರ, ಕೊಳ್ಳೇಗಾಲ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿಯವರು ಹೆಚ್ಚಿನ ಪ್ರಮಾಣದಲ್ಲಿ ಗೆದ್ದಿದ್ದಾರೆ.

ಅವಿಭಜಿತ ಮೈಸೂರು ಜಿಲ್ಲೆ (Mysuru) ಮೊದಲಿನಿಂದಲೂ ಕಾಂಗ್ರೆಸ್‌ ಹಾಗೂ ಜನತಾ ಪರಿವಾರದ ಅಖಾಡ. 2008ರ ನಂತರ ಕಾವೇರಿ- ಕಪಿಲಾ ನದಿಯಲ್ಲಿ ಸಾಕಷ್ಟು ನೀರು ಹರಿದಿದೆ. ಅದೇ ರೀತಿ ಅವಳಿ ಜಿಲ್ಲೆಗಳ ರಾಜಕಾರಣದಲ್ಲೂ ಸಾಕಷ್ಟು ಏರುಪೇರುಗಳಾಗಿವೆ. ಬಿಜೆಪಿ ಕೂಡ ಪ್ರಬಲ ಹೋರಾಟ ನೀಡುವ ಹಂತಕ್ಕೆ ಬೆಳೆದಿದೆ.

ಇದು ದ್ವಿ ಸದಸ್ಯ ಕ್ಷೇತ್ರವಾಗಿರುವುದರಿಂದ ಕಾಂಗ್ರೆಸ್‌ (Congress), ಜೆಡಿಎಸ್‌ ಹಾಗೂ ಬಿಜೆಪಿ- ಈ ಮೂವರಲ್ಲಿ ಇಬ್ಬರು ಗೆಲ್ಲುತ್ತಾರೆ. ಒಬ್ಬರು ಮನೆಗೆ ಹೋಗುತ್ತಾರೆ. ಸಂಸದರು, ಶಾಸಕರು, ನಿಗಮ, ಮಂಡಳಿಗಳ ಅಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಬೆಂಬಲ ಪಡೆದು, ಈ ಬಾರಿ ಕಮಲ ಅರಳಿಸಲೇಬೇಕು ಎಂದು ಬಿಜೆಪಿ ಹೋರಾಡುತ್ತಿದೆ.

ಬಿರುಸಿನ ಪ್ರಚಾರ:  ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ಅದರ ಶ್ರೇಯ ತಮಗೆ ಸಂದಾಯವಾಗುತ್ತದೆ ಎಂಬುದನ್ವು ಅರಿತಿರುವ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಉಭಯ ಜಿಲ್ಲೆಗಳಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ನಾಯಕರೊಂದಿಗೆ ಮೈಸೂರು ಹಾಗೂ ಚಾಮರಾಜನಗರದಲ್ಲಿ ಜನಸ್ವರಾಜ್‌ ಯಾತ್ರೆ ನಡೆಸಿದರು. ಇದಾದ ನಂತರ ಮೊದಲ ಹಂತದಲ್ಲಿ ಪಿರಿಯಾಪಟ್ಟಣ, ಹುಣಸೂರು, ಎಚ್‌.ಡಿ. ಕೋಟೆ, ಸರಗೂರು, ಎರಡನೇ ಹಂತದಲ್ಲಿ ಚಾಮರಾಜನಗರ, ಗುಂಡ್ಲುಪೇಟೆ, ನಂಜನಗೂಡು, ಹನೂರು, ಕೊಳ್ಳೇಗಾಲ, ವರುಣ, ಟಿ. ನರಸೀಪುರ, ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದಾರೆ.

Latest Videos
Follow Us:
Download App:
  • android
  • ios