Asianet Suvarna News Asianet Suvarna News

'ದೇಶ ವಿರೋಧಿ ಘೋಷಣೆಗಳ ಹಿಂದೆ ಷಡ್ಯಂತ್ರ'

ದೇಶವಿರೋಧಿ ಘೋಷಣೆಗಳ ಹಿಂದೆ ಷಡ್ಯಂತ್ರ: ಗೃಹ ಸಚಿವ ಬೊಮ್ಮಾಯಿ| ಪೌರತ್ವ ಕಾಯ್ದೆಗೆ ವಿರೋಧ ನೆಪದಲ್ಲಿ ಗಲಭೆ ಸೃಷ್ಟಿಸಿ ಅಶಾಂತಿ ಉಂಟು ಮಾಡಲು ಸಂಚು| ಇದನ್ನು ನಿಗ್ರಹಿಸಲು ಇಂದು ಉನ್ನತ ಪೊಲೀಸ್‌ ಅಧಿಕಾರಿಗಳ ಸಭೆ

Conspiracy Behind The Anti National Slogans Says Karnataka Home Minister Basavaraj Bommai
Author
Bangalore, First Published Feb 23, 2020, 7:32 AM IST

ದಾವಣಗೆರೆ[ಫೆ.23]:  ಹುಬ್ಬಳ್ಳಿಯಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು, ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಗುರುವಾರ ಸಂಜೆ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿ ಅಮೂಲ್ಯ ಪಾಕ್‌ ಪರ ಘೋಷಣೆ ಕೂಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಫೆ.23ರ ಭಾನುವಾರದಂದು ಈ ಬಗ್ಗೆ ಚರ್ಚಿಸಲು ಬೆಂಗಳೂರಿನಲ್ಲಿ ಉನ್ನತ ಅಧಿಕಾರಿಗಳ ಸಭೆ ಕರೆದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ದೇಶವಿರೋಧಿ ಹೇಳಿಕೆಗಳ ಹಿಂದೆ ದೊಡ್ಡ ಷಡ್ಯಂತ್ರವೇ ನಡೆದಿದ್ದು, ಅಂತಹ ದುಷ್ಟಶಕ್ತಿಗಳು, ವ್ಯಕ್ತಿಗಳನ್ನು ಮಟ್ಟಹಾಕಲು ದಿಟ್ಟಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ದಾವಣಗೆರೆ ಮತ್ತು ಹಾವೇರಿ ನಗರಗಳಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಎ ನೆಪದಲ್ಲಿ ಈ ರೀತಿ ಗಲಭೆ ಸೃಷ್ಟಿಸುತ್ತಿದ್ದು ಸಮಾಜದಲ್ಲಿ ಕ್ಷೋಭೆ ಉಂಟು ಮಾಡುವ ಇಂತಹ ಬೆಳವಣಿಗೆಯನ್ನು ಬೇರು ಸಮೇತ ಕಿತ್ತೊಗೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ರಾಜ್ಯದಲ್ಲಿ ನಡೆದ ಕೆಲ ಘಟನೆಗಳು, ಹೊಸ ಬೆಳವಣಿಗೆಗಳನ್ನು ಎಲ್ಲರೂ ಗಮನಿಸುತ್ತಿದ್ದೀರಿ. ಇದು ದೇಶವ್ಯಾಪಿ ನಡೆದಿದ್ದು, ಆ ದೊಡ್ಡ ಷಡ್ಯಂತ್ರದ ಭಾಗವಿದು. ವಿಶೇಷವಾಗಿ ವಿದ್ಯಾರ್ಥಿಗಳು, ಯುವಕರು, ಹೆಣ್ಣುಮಕ್ಕಳನ್ನು ಬಳಸಿಕೊಂಡು, ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕುವ, ಸಮಾಜದಲ್ಲಿ ಧರ್ಮ ಧರ್ಮಗಳ ಮಧ್ಯೆ ವೈಷಮ್ಯ ತರುವಂತಹ ಕೆಲಸ ನಡೆದಿದೆ. ಇದೆಲ್ಲದರ ಹಿಂದಿರುವ ಎಲ್ಲಾ ಶಕ್ತಿಗಳನ್ನು ನಿಗ್ರಹಿಸಲು ಭಾನುವಾರ ನಡೆಯಲಿರುವ ಉನ್ನತ ಮಟ್ಟದ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.

ಎಲ್ಲರ ವಿಚಾರಣೆ:

ದೇಶ ವಿರೋಧಿ ಹೇಳಿಕೆ ನೀಡುವವರಿಗೆ ಎಲ್ಲಾ ರೀತಿಯ ನೆರವು, ಸಹಕಾರ ನೀಡುವ ಶಕ್ತಿಗಳು ದೇಶದೆಲ್ಲೆಡೆ ಇವೆ. ಇಂತಹವರಿಗೆ ಕಾನೂನು ನೆರವು ನೀಡುವ ವ್ಯವಸ್ಥೆಯೂ ಇದೆ ಎಂದು ಆರೋಪಿದರು. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದವರು, ಅಮೂಲ್ಯಗೆ ವೇದಿಕೆ ಕಲ್ಪಿಸಿದವರು, ಅದರ ಜೊತೆಗೆ ಬೆಂಬಲವಾಗಿ ನಿಲ್ಲುವವರು, ಘಟನೆ ಪೂರ್ವ, ನಂತರ ಬೆಂಬಲವಾಗಿ ನಿಂತವರನ್ನೂ ಗಮನಿಸಿದ್ದು, ಆ ಎಲ್ಲರನ್ನೂ ವಿಚಾರಣೆಗೊಳಿಸಪಡಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದೇವೇಳೆ ದೇಶದ್ರೋಹಿ ಹೇಳಿಕೆ, ಘೋಷಣೆಯಂತಹ ಚಟುವಟಿಕೆ ವಿದ್ಯಾಸಂಸ್ಥೆಗಳು, ಹಾಸ್ಟೆಲ್‌ಗಳಲ್ಲಿ ನಡೆದರೆ ಕೂಡಲೇ ಮಾಹಿತಿ ನೀಡಬೇಕು. ಮಾಹಿತಿಯಿದ್ದೂ ಸುಮ್ಮನಿದ್ದರೆ ಅವರ ಮೇಲೆಯೂ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.

ಜಾಲತಾಣಗಳ ಪರಿಶೀಲನೆ:

ಹುಬ್ಬಳ್ಳಿ, ಬೆಂಗಳೂರಿನಲ್ಲಿ ನಡೆದ ದೇಶದ್ರೋಹಿ ಘೋಷಣೆ ಕುರಿತು ಅವಲೋಕನ ಮಾಡಿದ್ದು, ಸದ್ಯ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳ ಕುರಿತು ಅವರ ಆಯಾ ಸಂಘಟನೆಯ ಶಕ್ತಿ, ಫೇಸ್‌ಬುಕ್‌, ವಾಟ್ಸಪ್‌ ಸಂದೇಶಗಳನ್ನು ಪರಿಶೀಲಿಸಲಾಗುತ್ತಿದೆ. ಭಾರತದ ವಿರುದ್ಧ ನಿರಂತರವಾಗಿ ಅಮೆರಿಕ ಮೂಲದ ಫೇಸ್‌ಬುಕ್‌, ವಾಟ್ಸಪ್‌ನಲ್ಲಿ ಪೋಸ್ಟ್‌ ಮಾಡುತ್ತಿದ್ದರೂ ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು, ಕೇಂದ್ರ ಸರ್ಕಾರದ ಜೊತೆ ಮಾತನಾಡುತ್ತೇವೆ. ದೇಶದ್ರೋಹದ ಪೋಸ್ಟ್‌ಗೆ ಅವಕಾಶ ಮಾಡದೇ ನಿರ್ಬಂಧ ಹೇರಬೇಕು. ಇದನ್ನು ಸೈಬರ್‌ ಕ್ರೈಂನಡಿ ತಂದು ಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತಿದ್ದೇವೆ ಎಂದರು.

ಜೆಎನ್‌ಯು ಬಳಿಕ ಕುಮ್ಮಕ್ಕು:

ದೇಶದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಗೆ ಜೆಎನ್‌ಯು ಪ್ರತಿಭಟನೆಯೇ ಕಾರಣ ಎಂದು ಗೃಹ ಸಚಿವರು ಆರೋಪಿದರು. ಅಫ್ಜಲ್‌ ಗುರುವನ್ನು ನೇಣಿಗೇರಿಸಿದ ನಂತರ ಅದರ ವಿರುದ್ಧ ದೇಶದ್ರೋಹಿಗಳು ಧ್ವನಿ ಎತ್ತಿದಾಗ, ದೆಹಲಿ ಜೆಎನ್‌ಯುದಲ್ಲಿ ಕಾರ್ಯಕ್ರಮ ಮಾಡಲು ಮುಂದಾದ ಕನ್ಹಯ್ಯಕುಮಾರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದಾಗ ಅವರ ಪರವಾಗಿ ಹಲವು ಸಂಘಟನೆಗಳು ಬೆಂಬಲ ನೀಡಿದ್ದು ಈಗಿನವರಿಗೆ ಕುಮ್ಮಕ್ಕು ಸಿಕ್ಕಿದೆ. ಸಿಎಎ ನೆಪದಲ್ಲಿ ಈ ರೀತಿ ಗಲಭೆ ಸೃಷ್ಟಿಸುತ್ತಿದ್ದಾರೆ. ಸಮಾಜದಲ್ಲಿ ಕ್ಷೋಭೆ ಉಂಟು ಮಾಡುವ ವಿರೋಧ ಪಕ್ಷಗಳ ಜೊತೆಯಲ್ಲಿ ಇವರು ಸೇರಿಕೊಂಡಿದ್ದಾರೆ. ಇದನ್ನು ಬೇರು ಸಮೇತ ಕಿತ್ತೊಗೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಮಹತ್ವದ ನಿರ್ಧಾರ

ರಾಜ್ಯದಲ್ಲಿ ನಡೆದಂತಹ ಕೆಲ ಘಟನೆಗಳು ದೇಶವ್ಯಾಪಿ ಆಗಿವೆ. ದೊಡ್ಡ ಷಡ್ಯಂತ್ರದ ಭಾಗವಿದು. ವಿದ್ಯಾರ್ಥಿಗಳು, ಯುವಕರು, ಹೆಣ್ಮಕ್ಕಳನ್ನು ಬಳಸಿ ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕುವ, ಧರ್ಮ-ಧರ್ಮಗಳ ನಡುವೆ ವೈಷಮ್ಯ ತರುವ ಕೆಲಸ ನಡೆದಿದೆ. ಇದೆಲ್ಲದರ ಹಿಂದಿರುವ ಶಕ್ತಿಗಳನ್ನು ನಿಗ್ರಹಿಸಲು ಭಾನುವಾರ ಉನ್ನತ ಮಟ್ಟದ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದೇವೆ.

- ಬಸವರಾಜ ಬೊಮ್ಮಾಯಿ, ಗೃಹ ಸಚಿವ

Follow Us:
Download App:
  • android
  • ios