ಬಿಜೆಪಿ ಕೋಟೆಯಲ್ಲಿ ಸಚಿವೆ ಶೋಭಾ ಕರಂದ್ಲಾಜೆಗೆ ಕಾಂಗ್ರೆಸ್‌ನ ರಾಜೀವ್ ಗೌಡ ಸವಾಲು!
ಇದು ಗೆದ್ದೇ ಗೆಲ್ಲುವ ಪಟ್ಟಿಯಲ್ಲಿರುವ ಕ್ಷೇತ್ರ ಎಂದು ಬೀಗುತ್ತಿರುವ ಬಿಜೆಪಿಯ ವೇಗಕ್ಕೆ ಬ್ರೇಕ್ ಹಾಕಲು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಶಕ್ತಿಮೀರಿ ಪ್ರಯತ್ನ ಮಾಡುತ್ತಿರುವುದರಿಂದ ಹೋರಾಟ ಭರ್ಜರಿಯಾಗಿಯೇ ನಡೆದಿದೆ.
ವಿಜಯ್ ಮಲಗಿಹಾಳ
ಬೆಂಗಳೂರು (ಏ.22): ಇದು ಗೆದ್ದೇ ಗೆಲ್ಲುವ ಪಟ್ಟಿಯಲ್ಲಿರುವ ಕ್ಷೇತ್ರ ಎಂದು ಬೀಗುತ್ತಿರುವ ಬಿಜೆಪಿಯ ವೇಗಕ್ಕೆ ಬ್ರೇಕ್ ಹಾಕಲು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಶಕ್ತಿಮೀರಿ ಪ್ರಯತ್ನ ಮಾಡುತ್ತಿರುವುದರಿಂದ ಹೋರಾಟ ಭರ್ಜರಿಯಾಗಿಯೇ ನಡೆದಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿನ ‘ಗೋ ಬ್ಯಾಕ್’ ಅಭಿಯಾನಕ್ಕೆ ಹೆದರಿದ ಬಿಜೆಪಿ ನಾಯಕರು ಅಲ್ಲಿನ ಹಾಲಿ ಸಂಸದೆಯಾಗಿದ್ದ ಕೇಂದ್ರ ಕೃಷಿ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣೆಯ ಕಣ ಕುತೂಹಲಕರ ಕಣವಾಗಿ ಪರಿವರ್ತನೆಗೊಂಡಿದೆ.
ಹಿಂದಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರ 2004ರಿಂದ ಬಿಜೆಪಿ ಭದ್ರಕೋಟೆಯಾಗಿ ಪರಿವರ್ತನಗೊಂಡಿತು. 2004ರಲ್ಲಿ ಬಿಜೆಪಿಯಿಂದ ಎಚ್.ಟಿ.ಸಾಂಗ್ಲಿಯಾನ ಗೆಲುವು ಸಾಧಿಸಿದರು. ಬಳಿಕ 2009ರಲ್ಲಿ ಡಿ.ಬಿ.ಚಂದ್ರೇಗೌಡ, 2014 ಮತ್ತು 2019ರಲ್ಲಿ ಡಿ.ವಿ.ಸದಾನಂದಗೌಡ ಅವರು ಕಣಕ್ಕಿಳಿದು ಗೆದ್ದರು. ಈಗ ಶೋಭಾ ಕರಂದ್ಲಾಜೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹಾಲಿ ಸಂಸದರಾಗಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ಟಿಕೆಟ್ ನಿರಾಕರಿಸಿ ಶೋಭಾ ಕರಂದ್ಲಾಜೆ ಅವರನ್ನು ಅಭ್ಯರ್ಥಿಯನ್ನಾಗಿಸುವ ಸುದ್ದಿ ಹಬ್ಬುತ್ತಿದ್ದಂತೆಯೇ ಬಿಜೆಪಿ ಪಾಳೆಯದಲ್ಲಿ ಅಸಮಾಧಾನ ಹೊಗೆಯಾಡಿತು.
ಗ್ಯಾರಂಟಿ ನಿಲ್ಲಿಸಿದ್ರೆ ಜನರೇ ಕಾಂಗ್ರೆಸ್ ಸರ್ಕಾರವನ್ನು ಬಡೀತಾರೆ: ಬಿ.ವೈ.ವಿಜಯೇಂದ್ರ
ಸದಾನಂದಗೌಡರಿಗೆ ಟಿಕೆಟ್ ತಪ್ಪಿದ್ದಕ್ಕಿಂತ ಶೋಭಾ ಅವರನ್ನು ಇಲ್ಲಿಗೆ ಕರೆತರುವುದಕ್ಕೆ ಹಾಲಿ ಶಾಸಕರೂ ಸೇರಿದಂತೆ ವಿರೋಧ ವ್ಯಕ್ತವಾಗಿತ್ತು. ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಸಮಾಧಾನಿತ ಮುಖಂಡರೊಂದಿಗೆ ಚರ್ಚಿಸಿ ಹಾದಿ ಸುಗಮಗೊಳಿಸಿದರು. ಆದರೂ ಒಳಹೊಡೆತದ ಆತಂಕ ಬಿಜೆಪಿ ನಾಯಕರಿಗಿದೆ. ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕೆ.ಆರ್.ಪುರ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ಹೆಬ್ಬಾಳ ಮತ್ತು ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಐದರಲ್ಲಿ ಬಿಜೆಪಿ ಮತ್ತು ಮೂರರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.
ಆದರೆ, ಯಶವಂತಪುರದ ಬಿಜೆಪಿಯ ಶಾಸಕ ಎಸ್.ಟಿ.ಸೋಮಶೇಖರ್ ಪಕ್ಷದಿಂದ ದೂರವಾಗಿದ್ದು, ಕಾಂಗ್ರೆಸ್ ಪರ ಪ್ರಚಾರದಲ್ಲಿ ನಿರತರಾಗಿದ್ದಾರೆ. ಹೀಗಾಗಿ, ಶಾಸಕರ ಸಂಖ್ಯೆ ಗಮನಿಸಿದರೆ ಎರಡೂ ಪಕ್ಷಗಳಿಗೂ ಸಮಬಲವಿದ್ದಂತಿದೆ. ಕಾಂಗ್ರೆಸ್ಸಿಗೆ ಈ ಕ್ಷೇತ್ರದಲ್ಲಿ ಇಬ್ಬರು ಸಚಿವರ ಬಲ ಸೇರ್ಪಡೆಯಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಬ್ಬರೂ ಇದೇ ಲೋಕಸಭಾ ಕ್ಷೇತ್ರದ ಶಾಸಕರೂ ಆಗಿದ್ದರಿಂದ ಅವರಿಬ್ಬರಿಗೂ ಈ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಭರದ ಪ್ರಚಾರ ನಡೆಸಿದ್ದಾರೆ. ಪುಲಿಕೇಶಿನಗರದ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ ಆ ಕ್ಷೇತ್ರದಲ್ಲಿ ಬಿಜೆಪಿಗೆ ಬಲ ಬಂದಂತಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶದ ಬಳಿಕ ಬಿಜೆಪಿ ಪಾಳೆಯದಲ್ಲಿ ವಿಶ್ವಾಸ ಹೆಚ್ಚಾಗಿದೆ. ಪ್ರಧಾನಿ ಮೋದಿ ಅವರ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಪ್ರಚಾರ ನಡೆಸಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮುಖಂಡರು ಮತಯಾಚಿಸುತ್ತಿದ್ದಾರೆ. ಅಂತಿಮವಾಗಿ ಮತದಾರರು ಯಾವ ಗ್ಯಾರಂಟಿಗಳಿಗೆ ಮಣೆ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕು.
ಅಭ್ಯರ್ಥಿಗಳ ಪರಿಚಯ
1.ಶೋಭಾ ಕರಂದ್ಲಾಜೆ: ಶೋಭಾ ಕರಂದ್ಲಾಜೆ ಬಿಜೆಪಿಯ ಪ್ರಭಾವಿ ನಾಯಕಿ. ಪಕ್ಷದ ಸಂಘಟನೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ ಶೋಭಾ 2004ರಲ್ಲಿ ವಿಧಾನಪರಿಷತ್ ಸದಸ್ಯೆಯಾಗಿ ನೇಮಕಗೊಂಡರು. ಬಳಿಕ 2008ರಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿಯೂ ವಿವಿಧ ಖಾತೆಗಳನ್ನು ನಿಭಾಯಿಸಿದ್ದರು. 2013ರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಕೆಜೆಪಿಗೆ ವಲಸೆ ಹೋದರು. 2014ರಲ್ಲಿ ಬಿಜೆಪಿಗೆ ವಾಪಸಾದ ಬಳಿಕ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. 2019ರಲ್ಲಿ ಮತ್ತೊಮ್ಮೆ ಜಯಭೇರಿ ಬಾರಿಸಿದರು. ನಂತರ ಅವರಿಗೆ ಕೇಂದ್ರ ಸಚಿವ ಸ್ಥಾನವೂ ಲಭಿಸಿತು.
2.ಪ್ರೊ.ಎಂ.ವಿ.ರಾಜೀವ್‌ಗೌಡ: ಕಾಂಗ್ರೆಸ್ಸಿನ ಬುದ್ಧಿಜೀವಿಗಳ ವಲಯದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಪ್ರೊ.ರಾಜೀವ್‌ಗೌಡ ಅವರು ಸದ್ಯ ಪಕ್ಷದ ರಾಷ್ಟ್ರೀಯ ವಕ್ತಾರರೂ ಹೌದು. ಕೋಲಾರ ಭಾಗದ ಪ್ರತಿಷ್ಠಿತ ರಾಜಕೀಯ ಕುಟುಂಬದಿಂದ ಬಂದಿರುವ ರಾಜೀವ್ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟಿನಲ್ಲಿ ಸುದೀರ್ಘ ಕಾಲ ಅರ್ಥಶಾಸ್ತ್ರ ಮತ್ತು ಸಮಾಜವಿಜ್ಞಾನಗಳ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ರಿಸರ್ವ್ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2014ರಿಂದ 2020ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು. ಇದೀಗ ಲೋಕಸಭೆಗೆ ಪ್ರವೇಶಿಸಲು ಕಣಕ್ಕಿಳಿದಿದ್ದಾರೆ.
2019ರ ಚುನಾವಣಾ ಫಲಿತಾಂಶ
ಡಿ.ವಿ.ಸದಾನಂದಗೌಡ-ಬಿಜೆಪಿ- 8,24,500
ಕೃಷ್ಣ ಬೈರೇಗೌಡ- ಕಾಂಗ್ರೆಸ್- 6,76,982
ಕ್ಷೇತ್ರದ ಮತದಾರರ ವಿವರ:
ಪುರುಷರು- 16,29,089
ಮಹಿಳೆಯರು- 15,44,415
ಇತರರು- 594
ಒಟ್ಟು- 31,74,098
ದಕ್ಷಿಣ ಭಾರತದ ಬಗ್ಗೆ ಬಿಜೆಪಿ ಮಲತಾಯಿ ಧೋರಣೆ: ತೆಲಂಗಾಣ ಸಿಎಂ ರೇವಂತ ರೆಡ್ಡಿ
ಜಾತಿ-ಮತ ಲೆಕ್ಕಾಚಾರ: ಈ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ನಿರ್ಣಾಯಕ. ಹೀಗಾಗಿಯೇ ಪ್ರಬಲ ಪಕ್ಷಗಳ ಅಭ್ಯರ್ಥಿಗಳು ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಇನ್ನುಳಿದಂತೆ ಮುಸ್ಲಿಂರು, ಇತರ ಹಿಂದುಳಿದ ವರ್ಗಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.