ಬೆಂಗಳೂರು, [ಅ.18]: ಸಿದ್ದರಾಮಯ್ಯನವರ ಆಪ್ತ, ಶಾಸಕ ಬೈರತಿ ಸುರೇಶ್​ ಮೇಲೆ ವ್ಯಕ್ತಿಯೋರ್ವ ಚಾಕುವಿನಿಂದ ಹಲ್ಲೆ ನಡೆಸಲು ಮುಂದಾದ ಘಟನೆ ಬೆಂಗಳೂರಿನ ಕೊತ್ತನೂರು ಬಳಿಯ ಬೈರತಿಯಲ್ಲಿ ನಡೆದಿದೆ.

ಶಿವು ಎಂಬಾತ ಶಾಸಕರಿಗೆ ಚಾಕುವಿನಿಂದ ಇರಿಯಲು ಯತ್ನಿಸಿದ ಆರೋಪಿ. ಶಿವು ಸುರೇಶ್ ಭೈರತಿಗೆ ಚಾಕುವಿನಿಂದ ಚುಚ್ಚಲು ಯತ್ನಸಿದ್ದಾನೆ. ಅದೃಷ್ಟವಶಾತ್ ಗನ್ ಮ್ಯಾನ್ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. 

ಸಿದ್ದರಾಮಯ್ಯ ಪರಮಾಪ್ತ ಶಾಸಕ ಭೈರತಿ ಸುರೇಶ್‌ಗೆ ಚಾಕು ಇರಿತ, ಹತ್ಯೆ ಯತ್ನ

ಹತ್ಯೆಗೆ ಯತ್ನಿಸಿದ  ಆರೋಪಿ ಶಿವುನ್ನು ಕೊತ್ತನೂರು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಜನರ ಗುಂಪಿನೊಂದಿಗೆ ಭೈರತಿ ಸುರೇಶ್ ಮಾತನಾಡುವಾಗ ಶಿವು ಎಂಬಾತ ಏಕಾಏಕಿ ಚಾಕು ಹಿಡಿದು ಮುಂದೆ ಬಂದ ಎನ್ನಲಾಗಿದೆ.

 ಆದರೆ, ಈತನ ಈ ಕೃತ್ಯಕ್ಕೆ ಏನು ಕಾರಣ ಎಂಬುದು ಗೊತ್ತಾಗಿಲ್ಲ. ಕೊತ್ತನೂರು ಪೊಲೀಸರು ಆರೋಪಿ ಶಿವುನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಅಷ್ಟಕ್ಕೂ ಸುರೇಶ್ ಹತ್ಯೆಗೆ ಯತ್ನಿಸಿದ್ದೇಗೆ? ಸ್ವತಃ ಸುವರ್ಣ ನ್ಯೂಸ್ ಗೆ ಹೇಳಿದ್ದು ಹೀಗೆ. 

ಹತ್ಯೆ ಯತ್ನ ನಡೆದಿದ್ದೇಗೆ..?
ಬೈಕ್ ನಲ್ಲಿ ಕಾರ್ ಚೇಸ್ ಮಾಡುತ್ತಾ ಹತ್ಯೆಗೆ ಯತ್ನಿಸಿದ್ದ ಶಿವು, ನನ್ನ ಮನೆ ಮುಂದೆ 1 ಗಂಟೆ ಕಾಲ ಕಾಯುತ್ತಿದ್ದನ್ನು ಸೆಕ್ಯೂರಿಟಿ ಗಾರ್ಡ್, ಗನ್ ಮ್ಯಾನ್ ನೋಡಿದ್ದಾರೆ.

ಮೊದಲಿಗೆ ಬೈಕ್ ನಿಂದ ನನ್ನ ಕಾರ್ ಗೆ ಡಿಕ್ಕಿ ಹೊಡೆದಿದ್ದಾನೆ. ಒಂದು ಸಲ ಡಿಕ್ಕಿ ಹೊಡೆದುಕೊಂಡು ಹೋಗಿ ಮತ್ತೆ ಗುದ್ದಿದ. ಬಳಿಕ ಏಕಾಏಕಿ ಚಾಕುವಿನಿಂದ ಚುಚ್ಚಲು ಬಂದಿದ್ದಾನೆ. ಕೂಡಲೇ ಶಿವುನನ್ನು ಗನ್ ಮ್ಯಾನ್ ತಡೆದಿದ್ದರಿಂದ ಅನಾಹುತ ತಪ್ಪಿದೆ ಎಂದು ಸುರೇಶ್ ಘಟನೆ ಬಗ್ಗೆ ವಿವರಿಸಿದರು.