Assembly Election 2023 : ಬಿಜೆಪಿ ಭದ್ರಕೋಟೆ ಶಿವಮೊಗ್ಗದಲ್ಲಿ ಮತ್ತೆ ಅರಳುವುದೇ ಕಮಲ?

  • ಬಿಜೆಪಿ ಭದ್ರಕೋಟೆ ಶಿವಮೊಗ್ಗದಲ್ಲಿ ಮತ್ತೆ ಅರಳುವುದೇ ಕಮಲ?
  •  ಹಿಂದುತ್ವ, ಬಿಎಸ್‌ವೈ ವರ್ಚಸ್ಸಿನ ನಡುವೆ ಗೆದ್ದು ಬರುವ ಉಮೇದಿನಲ್ಲಿರುವ ಕಾಂಗ್ರೆಸ್‌
  •  ಈ ಬಾರಿ ಜಿಲ್ಲೆಯಲ್ಲಿ ತಾವು ಸ್ಪರ್ಧಿಸದೆ ಪಕ್ಷ ಗೆಲ್ಲಿಸುವ ಜವಾಬ್ದಾರಿ ಹೊತ್ತಿರುವ ಬಿಎಸ್‌ವೈ
Can BJP come back to power in Shimoga rav

ಗೋಪಾಲ್‌ ಯಡಗೆರೆ

ಶಿವಮೊಗ್ಗ (ನ.23) : ಹಲವು ಘಟಾನುಘಟಿ ರಾಜಕಾರಣಿಗಳನ್ನು ಸೃಷ್ಟಿಸಿದ ಜಿಲ್ಲೆ ಶಿವಮೊಗ್ಗ. ನಾಲ್ಕು ಸಿಎಂಗಳು, ಮೂರು ಡಿಸಿಎಂಗಳನ್ನು ನೀಡಿದ ಜಿಲ್ಲೆ. ಕಡಿದಾಳು ಮಂಜಪ್ಪ, ಜೆ.ಎಚ್‌.ಪಟೇಲ್‌, ಎಸ್‌.ಬಂಗಾರಪ್ಪ, ಶಾಂತವೇರಿ ಗೋಪಾಲಗೌಡ ಹಾಗೂ ಬಿ.ಎಸ್‌.ಯಡಿಯೂರಪ್ಪ, ಕೆ.ಎಸ್‌.ಈಶ್ವರಪ್ಪ ಅವರಂಥ ನಾಯಕರನ್ನು ಸೃಷ್ಟಿಸಿದೆ.

ಒಟ್ಟು 7 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತರು, ಈಡಿಗರು, ಮುಸ್ಲಿಮರು, ಒಕ್ಕಲಿಗರು, ದಲಿತರು ನಿರ್ಣಾಯಕರು. 5 ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತರು, ತಲಾ ಎರಡು ಕ್ಷೇತ್ರಗಳಲ್ಲಿ ಒಕ್ಕಲಿಗರು, ಬ್ರಾಹ್ಮಣರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಭದ್ರವಾಗಿದ್ದು, ಎದುರಾಳಿ ಕಾಂಗ್ರೆಸ್‌ಗೆ ನಾಯಕತ್ವದ ಕೊರತೆ ಎದುರಾಗಿದೆ. ಒಂದು ಹಂತದಲ್ಲಿ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರ ಗಿಟ್ಟಿಸಿಕೊಂಡು ಪ್ರಾಬಲ್ಯ ಸಾಧಿಸುವ ಸುಳಿವು ನೀಡಿದ್ದ ಜೆಡಿಎಸ್‌ ಸದ್ಯಕ್ಕಂತು ದುರ್ಬಲವಾಗಿದೆ. ಹೋರಾಟ ಏನಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆಯೇ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಯಡಿಯೂರಪ್ಪ ತಾವು ಸ್ಪರ್ಧಿಸದೆಯೇ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಹೊರಲಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ತಂದರೆ ಕರ್ನಾಟಕ ಉಳಿಯಲ್ಲ: ಸಿದ್ದರಾಮಯ್ಯ

ಶಿವಮೊಗ್ಗ: ಈಶ್ವರಪ್ಪ ವಿರುದ್ಧ ಸ್ಪರ್ಧೆಗೆ 20 ಕಾಂಗ್ರೆಸಿಗರು ಸಿದ್ಧ

ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ರಾಜಕೀಯ ಹುಟ್ಟು ಮತ್ತು ಬೆಳವಣಿಗೆಗೆ ಕಾರಣವಾದ ಶಿವಮೊಗ್ಗ ಕ್ಷೇತ್ರ ಬಿಜೆಪಿಯ ದಟ್ಟಪ್ರಭಾವ ಹೊಂದಿದೆ. 4 ದಶಕಗಳಲ್ಲಿ 2 ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸಿದರೆ, ಉಳಿದೆಲ್ಲ ಚುನಾವಣೆಯಲ್ಲೂ ಬಿಜೆಪಿಯದ್ದೇ ಗೆಲುವು. ವೀರಶೈವ ಲಿಂಗಾಯತರು, ಬ್ರಾಹ್ಮಣರು ಮತ್ತು ಮುಸ್ಲಿಮರು ಇಲ್ಲಿ ನಿರ್ಣಾಯಕ. ಈಶ್ವರಪ್ಪನವರು ಪುನಃ ಬಿಜೆಪಿಯಿಂದ ಟಿಕೆಟ್‌ ಬಯಸಿದ್ದಾರೆ. ಆದರೆ 75 ವರ್ಷ ತಲುಪಿದ ಇವರಿಗೆ ಟಿಕೆಟ್‌ ಸಿಗುವುದು ಹೈಕಮಾಂಡ್‌ ನಿಲುವಿನ ಮೇಲೆ ನಿಂತಿದೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್‌, ಮಾಜಿ ಶಾಸಕ ಎಚ್‌.ಎಂ.ಚಂದ್ರಶೇಖರ್‌ರ ಪುತ್ರ, ಪಾಲಿಕೆ ಸದಸ್ಯ ಎಚ್‌.ಸಿ.ಯೋಗೀಶ್‌ ಸೇರಿದಂತೆ 20 ಮಂದಿ ಆಕಾಂಕ್ಷಿಗಳಿದ್ದಾರೆ. ಜೆಡಿಎಸ್‌ನಿಂದ ಈವರೆಗೆ ಯಾರೂ ಉತ್ಸಾಹ ತೋರಿಲ್ಲ. ಇದರ ನಡುವೆ 6 ತಿಂಗಳಿಂದ ಸರ್ಜಿ ಗ್ರೂಪ್‌ ಆಫ್‌ ಆಸ್ಪತ್ರೆಯ ಡಾ.ಧನಂಜಯ ಸರ್ಜಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂಬುದು ಅವರ ಆಪ್ತರ ಮಾತು. ಆದರೆ ಯಾವ ಪಕ್ಷದಿಂದ ಎಂದು ಗೊತ್ತಿಲ್ಲ.

ಶಿವಮೊಗ್ಗ ಗ್ರಾಮಾಂತರ: ಬಿಜೆಪಿಗೆ ಜೆಡಿಎಸ್‌ ಸವಾಲು

ಕ್ಷೇತ್ರ ಪುನರ್‌ ವಿಂಗಡನೆ ವೇಳೆ ಹೊಳೆಹೊನ್ನೂರು ಮತ್ತು ಹೊಸನಗರ ಕ್ಷೇತ್ರದ ಬದಲಾಗಿ ಅಸ್ತಿತ್ವಕ್ಕೆ ಬಂದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಈ ಬಾರಿ ಕುತೂಹಲ ಕೆರಳಿಸಿದೆ. ಮೊದಲ ಬಾರಿ ಬಿಜೆಪಿಯಿಂದ ಕೆ.ಜಿ.ಕುಮಾರಸ್ವಾಮಿ ಇಲ್ಲಿ ಗೆಲುವು ಸಾಧಿಸಿದ್ದರೆ, 2013ರಲ್ಲಿ ಜೆಡಿಎಸ್‌ನ ಶಾರದಾಪೂರಾರ‍ಯನಾಯ್‌್ಕ ಗೆದ್ದಿದ್ದರು. 2018 ರಲ್ಲಿ ಪುನಃ ಈ ಕ್ಷೇತ್ರ ಬಿಜೆಪಿ ತೆಕ್ಕೆಗೆ ಬಂತು. ದಲಿತರು ಮತ್ತು ಲಿಂಗಾಯತರು ಅಧಿಕ ಸಂಖ್ಯೆಯಲ್ಲಿದ್ದಾರೆ. ಬಿಜೆಪಿಯಿಂದ ಹಾಲಿ ಶಾಸಕ ಅಶೋಕ್‌ ನಾಯ್‌್ಕ ಆಕಾಂಕ್ಷಿ, ಜೆಡಿಎಸ್‌ನಿಂದ ಮತ್ತೆ ಶಾರದಾ ಪೂರಾರ‍ಯನಾಯ್‌್ಕ ಕಣಕ್ಕಿಳಿಯುವುದು ಖಚಿತ. ಇತ್ತ ಕಾಂಗ್ರೆಸ್‌ನಿಂದ ಎಸ್‌.ರವಿಕುಮಾರ್‌, ಶ್ರೀನಿವಾಸ ಕರಿಯಣ್ಣ, ಪಲ್ಲವಿ ಜಿ., ಬಲದೇವ್‌ ಕೃಷ್ಣ ಟಿಕೆಟ್‌ ಆಕಾಂಕ್ಷಿಗಳು.

ತೀರ್ಥಹಳ್ಳಿ: ಕಾಂಗ್ರೆಸ್‌ ಒಡಕೇ ಬಿಜೆಪಿಗೆ ಲಾಭ

ತೀರ್ಥಹಳ್ಳಿ ಜಿಲ್ಲೆಯಲ್ಲಿ ಅತಿ ದೊಡ್ಡ ಕ್ಷೇತ್ರವೂ ಹೌದು. ಕಡಿದಾಳ್‌ ಮಂಜಪ್ಪ, ಶಾಂತವೇರಿ ಗೋಪಾಲಗೌಡ, ಡಿ.ಬಿ.ಚಂದ್ರೆಗೌಡರನ್ನು ಗೆಲ್ಲಿಸಿದ ಕ್ಷೇತ್ರವಿದು. ಆ ಬಳಿಕ ಕಾಂಗ್ರೆಸ್‌, ಜನತಾಪಕ್ಷ ಮತ್ತು ಬಿಜೆಪಿಯ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾ ಬಂದಿದೆ. ಸದ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿನಿಧಿಸುವ ಈ ಕ್ಷೇತ್ರದಲ್ಲಿ 2013ರಲ್ಲಿ ಕಿಮ್ಮನೆ ರತ್ನಾಕರ್‌ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಬಿಜೆಪಿಯಿಂದ ಆರಗ ಮತ್ತೆ ಆಕಾಂಕ್ಷಿ, ಕಾಂಗ್ರೆಸ್‌ನಿಂದ ಕಿಮ್ಮನೆ ಮತ್ತು ಆರ್‌.ಎಂ.ಮಂಜುನಾಥಗೌಡ ಪೈಪೋಟಿಯಲ್ಲಿದ್ದಾರೆ. ಜೆಡಿಎಸ್‌ನಿಂದ ಯಡೂರಿನ ರಾಜಾರಾಮ್‌ ಹೆಗಡೆ ಹೆಸರು ಅಧಿಕೃತವಾಗಿ ಹೊರಬಿದ್ದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಮಂಜುನಾಥಗೌಡರು ಆಪ್ತರು, ಕಿಮ್ಮನೆ ರತ್ನಾಕರ್‌ ಸಿದ್ದರಾಮಯ್ಯರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಕಿಮ್ಮನೆ ಮತ್ತು ಮಂಜುನಾಥಗೌಡ ನಡುವಿನ ಮುಸುಕಿನ ಗುದ್ದಾಟ ಬಿಜೆಪಿಗೆ ಲಾಭವಾದರೂ ಅಚ್ಚರಿ ಇಲ್ಲ.

ಒಗ್ಗಟ್ಟಾಗಿದ್ದರೆ ಮಾತ್ರ ಬಿಜೆಪಿಗೆ ಅಧಿಕಾರ ಖಚಿತ: ಸುರಾನಾ

ಸಾಗರ: ಮತ್ತೆ ಕಾಗೋಡು ಕಣಕ್ಕಿಳಿದರೆ ಲೆಕ್ಕಾಚಾರ ಉಲ್ಟಾ

ಬ್ರಾಹ್ಮಣರು ಮತ್ತು ಈಡಿಗರ ಪ್ರಾಬಲ್ಯದ ಕ್ಷೇತ್ರವಿದು. 7 ಬಾರಿ ಕಾಂಗ್ರೆಸ್‌, ಮೂರು ಬಾರಿ ಬಿಜೆಪಿ, ತಲಾ ಒಂದು ಬಾರಿ ಜನತಾಪಕ್ಷ ಮತ್ತು ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಇಲ್ಲಿ ಗೆದ್ದಿದ್ದರೆ, ಹಿರಿಯ ಮುತ್ಸದ್ದಿ ಕಾಗೋಡು ತಿಮ್ಮಪ್ಪ 5 ಬಾರಿ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ತಮ್ಮದು ಕೊನೇ ಚುನಾವಣೆ ಎಂದಿದ್ದ ಕಾಗೋಡು ತಿಮ್ಮಪ್ಪರನ್ನು ಬಿಜೆಪಿಯ ಹರತಾಳು ಹಾಲಪ್ಪ ಸೋಲಿಸಿದ್ದರು. ಬಿಜೆಪಿ ಟಿಕೆಟ್‌ ಸಿಗದೆ ಕಾಂಗ್ರೆಸ್‌ ಸೇರಿದ್ದ ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್‌ಗೆ ವಲಸೆ ಹೋಗಿ ಕಾಗೋಡು ಜೊತೆ ನಿಂತಿದ್ದರು. ಈ ಬಾರಿ ತಮಗೆ ಟಿಕೆಟ್‌ ಖಚಿತ ಎಂದುಕೊಂಡಿದ್ದರು. ಆದರೆ ಇದೀಗ ಸ್ವತಃ ಕಾಗೋಡು, ಅವರ ಪುತ್ರಿ ಡಾ.ರಾಜನಂದಿನಿ ಟಿಕೆಟ್‌ಗಾಗಿ ಅರ್ಜಿ ಹಾಕಿದ್ದಾರೆ. ಇದರ ಜೊತೆಗೆ ಇನ್ನೂ ಹಲವು ಆಕಾಂಕ್ಷಿಗಳಿದ್ದಾರೆ. ಬಿಜೆಪಿಯಿಂದ ಹಾಲಪ್ಪ ಮತ್ತೆ ಟಿಕೆಟ್‌ ಕೇಳುತ್ತಿದ್ದಾರೆ. ಯಡಿಯೂರಪ್ಪ ಆಪ್ತ ಗುರುಮೂರ್ತಿಯವರೂ ಆಕಾಂಕ್ಷಿ. ಯಡಿಯೂರಪ್ಪ ಸಿಎಂ ಆಗಿದ್ದಾಗ ಕಾನೂನು ಸಲಹೆಗಾರರಾಗಿದ್ದ ಕೆ.ದಿವಾಕರ್‌ ಆಮ್‌ ಆದ್ಮಿ ಪಕ್ಷ ಸೇರಿದ್ದು, ಸ್ಪರ್ಧಿಸುವ ಉಮೇದಿನಲ್ಲಿದ್ದಾರೆ. ಕಾಂಗ್ರೆಸ್‌ ಒಳಜಗಳ ಬಿಜೆಪಿಗೆ ವರವಾದರೂ ಅಚ್ಚರಿಯಿಲ್ಲ.

ಭದ್ರಾವತಿ: ಸಂಗಮೇಶ್‌-ಅಪ್ಪಾಜಿಗೌಡ ವರ್ಚಸ್ಸಿನ ಸಮರ

ಶಿವಮೊಗ್ಗದ ಪಕ್ಕದಲ್ಲೇ ಇರುವ ಭದ್ರಾವತಿ ಕ್ಷೇತ್ರದಲ್ಲಿ ಈವರೆಗೂ ಬಿಜೆಪಿ ಅಸ್ತಿತ್ವ ದಾಖಲಿಸಲು ಸಾಧ್ಯವಾಗಿಲ್ಲ. ಇಲ್ಲಿ ಪಕ್ಷಕ್ಕಿಂತ 30 ವರ್ಷಗಳಿಂದ ಎಂ.ಜೆ. ಅಪ್ಪಾಜಿಗೌಡ ಮತ್ತು ಬಿ.ಕೆ. ಸಂಗಮೇಶ್ವರ ಅವರದ್ದೇ ಪ್ರಾಬಲ್ಯವೇ ನಡೆದುಕೊಂಡು ಬಂದಿದೆ. ಇಬ್ಬರೂ ತಲಾ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಆದರೆ ಅಪ್ಪಾಜಿಗೌಡ ಕೊರೋನಾಗೆ ಬಲಿಯಾದ ಬಳಿಕ ರಾಜಕೀಯ ಸ್ಥಿತ್ಯಂತರ ಶುರುವಾಗಿದೆ. ಲಿಂಗಾಯತರು ಮತ್ತು ಒಕ್ಕಲಿಗರೇ ಇಲ್ಲಿ ನಿರ್ಣಾಯಕರು. ಜೊತೆಗೆ ಮುಸ್ಲಿಮರೂ ಇದ್ದಾರೆ. ಸಂಗಮೇಶ್‌ ಕಾಂಗ್ರೆಸ್‌ನಿಂದ ಆಯ್ಕೆಯಾಗಿ ಶಾಸಕರಾಗಿದ್ದು, ಮತ್ತೆ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಇನ್ನು ಜೆಡಿಎಸ್‌ನಿಂದ ಅಪ್ಪಾಜಿಗೌಡರ ಪತ್ನಿ ಶಾರದಾರನ್ನು ಕಣಕ್ಕಿಳಿಸುವುದಾಗಿ ಎಚ್‌.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. ಅಪ್ಪಾಜಿಗೌಡರ ಅನುಪಸ್ಥಿತಿಯ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ. ಅವರ ಬಲಗೈಯಂತಿದ್ದ ಜಿ.ಪಂ.ಮಾಜಿ ಸದಸ್ಯ ಎಸ್‌.ಕುಮಾರ್‌ ಇದೀಗ ಬಿಜೆಪಿ ಸೇರಿದ್ದು, ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಇದರ ನಡುವೆ ಪಕ್ಷದ ನಾಯಕ ಗಿರೀಶ್‌ ಪಟೇಲ್‌ರನ್ನು ನಿಲ್ಲಿಸುವ ಚಿಂತನೆಯೂ ಪಕ್ಷಕ್ಕಿದೆ.

Karnataka Politics: ಬಿಜೆಪಿಗೆ ಮತ್ತೆ ಅಧಿಕಾರ ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ

ಶಿಕಾರಿಪುರ: ಇಲ್ಲೇನಿದ್ದರೂ ಬಿಎಸ್‌ವೈರದ್ದೇ ಹವಾ

ಪ್ರತಿ ಚುನಾವಣೆಯಲ್ಲಿ ಇಡೀ ರಾಜ್ಯದ ಗಮನ ಸೆಳೆಯುವ ಕ್ಷೇತ್ರ ಶಿಕಾರಿಪುರ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪರ ರಾಜಕೀಯ ಕರ್ಮಭೂಮಿ ಆಗಿರುವ ಈ ಕ್ಷೇತ್ರದಲ್ಲಿ ಇದೇ ಮೊದಲ ಬಾರಿ ಅವರು ತಾವು ಸ್ಪರ್ಧಿಸದೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಓಡಾಡಲಿದ್ದಾರೆ. 1983ರ ಬಳಿಕ 9 ಬಾರಿ ಯಡಿಯೂರಪ್ಪ ಇಲ್ಲಿಂದ ಗೆದ್ದಿದ್ದಾರೆ. 1999ರಲ್ಲಿ ಬಂಗಾರಪ್ಪರ ತಂತ್ರಗಾರಿಕೆಯಲ್ಲಿ ಒಮ್ಮೆ ಮಾತ್ರ ಸೋತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪುತ್ರ ಬಿ.ವೈ.ವಿಜಯೇಂದ್ರರನ್ನು ಕಣಕ್ಕಿಳಿಸುವ ಇಂಗಿತವನ್ನು ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ. ಜೆಡಿಎಸ್‌ನಿಂದ ಕಳೆದೆರಡು ಬಾರಿ ಚುನಾವಣಾ ಕಣಕ್ಕಿಳಿದು ಒಂದಿಷ್ಟುಸಾಮರ್ಥ್ಯ ಪ್ರದರ್ಶಿಸಿದ್ದ ಎಚ್‌.ಟಿ.ಬಳಿಗಾರ್‌ ವಾರದ ಹಿಂದೆ ಬಿಜೆಪಿ ಸೇರಿದ್ದರಿಂದ ಜೆಡಿಎಸ್‌ಗೆ ಅಭ್ಯರ್ಥಿ ಇಲ್ಲದಂತಾಗಿದೆ. ಕಾಂಗ್ರೆಸ್‌ನಿಂದ ರಾಘವೇಂದ್ರ ನಾಯಕ್‌, ನಗರಸಭೆ ಸದಸ್ಯ ನಾಗರಾಜಗೌಡ, ಗೋಣಿ ಮಾಲತೇಶ್‌, ಮಾಜಿ ಸದಸ್ಯ ಬಿ.ಎನ್‌. ಮಹಾಲಿಂಗಪ್ಪ, ಪುಷ್ಪಾ ಶಿವಕುಮಾರ್‌, ಮಾಜಿ ಸಂಸದ ದಿ. ಚಂದ್ರಶೇಖರಪ್ಪರ ಪುತ್ರಿ ನಿರ್ಮಲಾ ಶಿವಕುಮಾರ್‌ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಲಂಬಾಣಿ, ಲಿಂಗಾಯತ ಮತ್ತು ಕುರುಬ ಮತಗಳು ಇಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದು, ಯಾವ ಪಕ್ಷ, ಯಾವ ಜಾತಿಯವರಿಗೆ ಟಿಕೆಟ್‌ ನೀಡುತ್ತಾರೆ ಎಂಬುದು ಇಲ್ಲಿನ ಚುನಾವಣಾ ಫಲಿತಾಂಶವನ್ನು ನಿರ್ಧರಿಸುತ್ತದೆ.

ಸೊರಬ: ಮತ್ತೆ ಸೋದರರ ಸವಾಲ್‌ಗೆ ವೇದಿಗೆ ಸಜ್ಜು

‘ಸೋಲಿಲ್ಲದ ಸರದಾರ’ ಎಂದೇ ಖ್ಯಾತರಾಗಿದ್ದ ಎಸ್‌.ಬಂಗಾರಪ್ಪ ಅವರ ರಾಜಕೀಯ ಕರ್ಮ ಕ್ಷೇತ್ರ ಸೊರಬ. ಬದಲಾದ ಕಾಲಘಟ್ಟದಲ್ಲಿ, ಯಡಿಯೂರಪ್ಪ ವರ್ಚಸ್ಸು ಜಿಲ್ಲೆಯಲ್ಲಿ ವೃದ್ಧಿಗೊಂಡಿದ್ದರೂ ಬಂಗಾರಪ್ಪ ಕುಟುಂಬದ ಅಧಿಪತ್ಯದಲ್ಲೇ ಕ್ಷೇತ್ರ ಮುಂದುವರಿದಿದೆ. ಕ್ಷೇತ್ರದಲ್ಲಿ ಸೋದರರ ಸವಾಲ್‌(ಬಂಗಾರಪ್ಪರ ಪುತ್ರರು) ನಡುವೆ ಒಮ್ಮೆ ಹರತಾಳು ಹಾಲಪ್ಪ ಗೆದ್ದಿದ್ದರು. ಈಡಿಗರು, ಲಿಂಗಾಯತರು, ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಈಡಿಗರೇ ನಿರ್ಣಾಯಕರು. ಈ ಸಮುದಾಯ ಬಂಗಾರಪ್ಪ ಜೊತೆ ಲಾಗಾಯ್ತಿನಿಂದಲೂ ಗುರುತಿಸಿಕೊಂಡು ಬಂದಿದೆ. ಆದರೆ ಬಂಗಾರಪ್ಪ ಪುತ್ರರಾದ ಕುಮಾರ್‌ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಬೇರೆ ಬೇರೆ ದೋಣಿಗಳಲ್ಲಿ ಕಾಲಿಟ್ಟಬಳಿಕ ಈಡಿಗ ಮತದಾರರೂ ಇಬ್ಭಾಗವಾಗಿದ್ದಾರೆ. 7 ಬಾರಿ ಬಂಗಾರಪ್ಪ, 4 ಬಾರಿ ಕುಮಾರ್‌ ಬಂಗಾರಪ್ಪ, ತಲಾ ಒಂದು ಬಾರಿ ಮಧು ಬಂಗಾರಪ್ಪ ಮತ್ತು ಹರತಾಳು ಹಾಲಪ್ಪ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಕುಮಾರ್‌ ಬಂಗಾರಪ್ಪ ಬಿಜೆಪಿಯಿಂದ ಗೆದ್ದಿದ್ದಾರೆ. ಇದೀಗ ಕಾಂಗ್ರೆಸ್‌ನಿಂದ ಮಧು ಬಂಗಾರಪ್ಪ ಸ್ಪರ್ಧಿಸುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯೂ ಸೋದರರ ಸವಾಲ್‌ ಖಚಿತವಾಗಿದೆ. ಇನ್ನು ಜೆಡಿಎಸ್‌ನಿಂದ ಬಾಸೂರು ಚಂದ್ರೇಗೌಡ ಸ್ಪರ್ಧಿಸುವ ನಿರೀಕ್ಷೆ ಇದೆ.

Latest Videos
Follow Us:
Download App:
  • android
  • ios