ಹುಬ್ಬಳ್ಳಿ[ಜ.19]: ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಮತ್ತು ಅವರ ತಂಡಕ್ಕೆ ಹುಬ್ಬಳ್ಳಿಯಲ್ಲಿ ಶನಿವಾರ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಭೇಟಿ ಸಾಧ್ಯವಾಗದೆ ನಿರಾಶೆಯಾಯಿತು.

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಶನಿವಾರ ಸಂಜೆ ನಗರದಲ್ಲಿ ನಡೆದ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಇಲ್ಲಿನ ಡೆನಿಸನ್‌ ಹೋಟೆಲ್‌ನಲ್ಲಿ ತಂಗಿದ್ದ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನದ ಕುರಿತು ಚರ್ಚಿಸಲು ಬಂದಿದ್ದ ಶಾಸಕರಾದ ರಮೇಶ ಜಾರಕಿಹೊಳಿ, ಶ್ರೀಮಂತಗೌಡ ಪಾಟೀಲ್‌, ಮಹೇಶ ಕುಮಟಳ್ಳಿ ಅವರಿಗೆ ಶಾ ಭೇಟಿಗೆ ಅವಕಾಶ ಸಿಗದ ಕಾರಣ ಅಸಮಾಧಾನದಿಂದಲೇ ಹೋಟೆಲ್‌ನಿಂದ ಹೊರ ನಡೆದರು.

ಜಾರಕಿಹೊಳಿ ವಿರುದ್ಧ ಹೋರಾಟ ನಿಲ್ಲಲ್ಲ : ಪೂಜಾರಿ

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ, ಅಮಿತ್‌ ಶಾ ಭೇಟಿಯಾಗಲು ಹೋಟೆಲ್‌ಗೆ ಬಂದಿದ್ದೆವು. ಆದರೆ, ಅವಕಾಶ ನೀಡಿಲ್ಲ. ನಿಮಗೆ ಏನು ಬೇಕು ಅದನ್ನೇ ಬರೆದುಕೊಳ್ಳಿ ಎಂದು ಸಿಟ್ಟಿನಿಂದಲೇ ಹೇಳಿ ಕಾರು ಹತ್ತಿದರು. ಶ್ರೀಮಂತ ಪಾಟೀಲ್‌ ಮಾತನಾಡಿ, ನಾನೂ ಸಚಿವ ಸ್ಥಾನದ ಆಕ್ಷಾಂಕಿ. ಅವಕಾಶ ಕೊಡುವ ತನಕ ಕಾಯುತ್ತೇವೆ. ಸಚಿವ ಸ್ಥಾನ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದು ಕೊಡುವರೆಗೂ ಕಾಯುತ್ತೇವೆ ಎಂದು ತಿಳಿಸಿದರು.

ಇದೇವೇಳೆ ಅಮಿತ್‌ ಶಾ ಭೇಟಿಗೆ ಆಗಮಿಸಿದ್ದ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್‌ ಮಾತನಾಡಿ, ಅಮಿತ್‌ ಶಾ ನಮ್ಮ ಭಾಗಕ್ಕೆ ಮೊದಲು ಬಾರಿಗೆ ಆಗಮಿಸಿದ್ದರಿಂದ ಅವರನ್ನು ಸನ್ಮಾನಿಸಿ ಗೌರವ ಸಲ್ಲಿಸಿದ್ದೇನೆ. ಸಚಿವ ಸ್ಥಾನದ ಕುರಿತು ಚರ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಶಾಸಕ ಉಮೇಶ ಕತ್ತಿ ಮಾತನಾಡಿ, ಸಚಿವನಾದರೆ ರಾಜ್ಯಕ್ಕೆ, ಶಾಸಕನಾಗಿಯೇ ಉಳಿದರೆ ಕ್ಷೇತ್ರದ ಕೆಲಸ ಮಾಡುತ್ತೇನೆ. ಯಾರ ಬಳಿಯೂ ಸಚಿವ ಸ್ಥಾನಕ್ಕಾಗಿ ಬೇಡಿಕೆ ಸಲ್ಲಿಸಿಲ್ಲ. ಅಮಿತ್‌ ಶಾ ಬಳಿ ಈ ಕುರಿತು ಪ್ರಸ್ತಾಪವೇ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

'ಲಖನ್ ಕುಟುಂಬದ ವಿಚಾರದಲ್ಲಿ ನನ್ನ ಸಹೋದರ, ರಾಜಕೀಯವಾಗಿ ನನ್ನ ವಿರೋಧಿ'