ಕೋಲ್ಕತಾ(ಜು.14): ಪಶ್ಚಿಮ ಬಂಗಾಳ ಶಾಸಕರೊಬ್ಬರ ಮೃತದೇಹ ಮಾರುಕಟ್ಟೆಯ ನಡುಬೀದಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಿಂದ 1 ಕಿ.ಮೀ ದೂರದಲ್ಲಿರುವ ಅಂಗಡಿಯೊಂದರ ಮುಂಭಾಗದಲ್ಲಿ ಸೋಮವಾರ ಬೆಳಗ್ಗೆ ಈ ಭೀಕರ ಘಟನೆ ನಡೆದಿದೆ. ನೇಣುಬಿಗಿದ ಸ್ಥಿತಿಯಲ್ಲಿರುವವರನ್ನು ದಿನಾಪುರ ಜಿಲ್ಲೆಯ ಹೆಮ್ತಾಬಾದ್‌ ಕ್ಷೇತ್ರದ ಶಾಸಕ ದೇಬೇಂದ್ರನಾಥ್‌ ರಾಯ್‌ ಎಂದು ಗುರುತಿಸಲಾಗಿದೆ. ರಾಯ್‌ ಅವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಬಿಜೆಪಿ ದೂರಿದೆ.

ಇದೇ ವೇಳೆ ದೇಬೇಂದ್ರ ಅವರ ಅಂಗಿ ಕಿಸೆಯಲ್ಲಿ ಆತ್ಮಹತ್ಯೆ ಪತ್ರವೊಂದು ಲಭ್ಯವಾಗಿದೆ. ಈ ಪತ್ರದಲ್ಲಿ ತಮ್ಮ ಸಾವಿಗೆ ಇಬ್ಬರು ವ್ಯಕ್ತಿಗಳು ಕಾರಣ ಎಂಬ ಸಂಗತಿಯನ್ನು ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ತನಿಖೆ ಪೂರ್ಣವಾಗುವವರೆಗೂ ವದಂತಿಗಳಿಗೆ ಕಿವಿಗೊಡಬಾರದು ಎಂದು ಪೊಲೀಸರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ, ರಾತ್ರಿ 1 ಗಂಟೆಗೆ ಕೆಲ ವ್ಯಕ್ತಿಗಳು ದೇಬೇಂದ್ರ ಅವರನ್ನು ಮನೆಯಿಂದ ಕರೆದೊಯ್ದಿದ್ದು, ಅವರೇ ಕೊಂದಿರಬಹುದು. ಈ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಬಿಜೆಪಿ ಶಾಸಕನ ಸಾವು ಶಾಕಿಂಗ್: ಸೂಕ್ತ ತನಿಖೆ ಆಗ್ಬೇಕು ಎಂದ ಸಿದ್ದರಾಮಯ್ಯ...!

ಮಮತಾ ವಿರುದ್ಧ ನಡ್ಡಾ ಕಿಡಿ:

ಪಶ್ಚಿಮ ಬಂಗಾಳ ಬಿಜೆಪಿ ಶಾಸಕ ದೇಬೇಂದ್ರ ರಾಯ್‌ ಅವರ ಅನುಮಾನಾಸ್ಪದ ಸಾವು ಅತ್ಯಂತ ಆಘಾತಕಾರಿ ಮತ್ತು ಶೋಚನೀಯ. ಇದು ಮಮತಾ ಸರ್ಕಾರ ಗೂಂಡಾ ಆಡಳಿತ ಮತ್ತು ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿರುವುದರ ಸಂಕೇತ. ಜನರು ಇಂತಹ ಸರ್ಕಾರವನ್ನು ಯಾವತ್ತೂ ಕ್ಷಮಿಸುವುದಿಲ್ಲ. ನಾವು ಈ ಘಟನೆಯನ್ನು ಬಲವಾಗಿ ಖಂಡಿಸುತ್ತೇವೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಕಿಡಿಕಾರಿದ್ದಾರೆ.