ಪ್ಯಾರಿಸ್ ಒಲಿಂಪಿಕ್ಸ್ ಆಯೋಜಕರು ಮಹಿಳಾ ಬಾಕ್ಸಿಂಗ್‌ನಲ್ಲಿ ಅಲ್ಜೀರಿಯಾದ ಇಮಾನೆ ಖೆಲಿಫ್‌ಗೆ ಅವಕಾಶ ನೀಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಪ್ಯಾರಿಸ್: ಅಲ್ಜೀರಿಯಾದ ಇಮಾನೆ ಖೆಲಿಫ್‌ಗೆ ಮಹಿಳಾ ಬಾಕ್ಸಿಂಗ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಗುರುವಾರ ಮಹಿಳೆಯರ 66 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಇಟಲಿಯ ಏಂಜೆಲಾ ಕರಿನಿ ಕೇವಲ 46 ಸೆಕೆಂಡ್‌ಗಳಲ್ಲಿ ಪಂದ್ಯವನ್ನು ನಿಲ್ಲಿಸುವಂತೆ ಕೋರಿ, ಹೊರನಡೆದರು. ಇಮಾನೆಯ ಬಲವಾದ ಪಂಚ್‌ನಿಂದ ಏಂಜೆಲಾರ ಮೂಗು ಮುರಿಯಿತು ಎಂದು ಹೇಳಲಾಗುತ್ತಿದೆ.
ಏಂಜೆಲಾ ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋ, ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಮಂದಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ವಿರುದ್ಧ ಕಿಡಿಕಾಡಿದ್ದಾರೆ. ಇಮಾನೆ ದೇಹದಲ್ಲಿ ಪುರುಷರಲ್ಲಿ ಕಂಡುಬರುವ ಎಕ್ಸ್‌ವೈ ಕ್ರೋಮೋಸೋಮ್ಸ್ (ವರ್ಣತಂತುಗಳು) ಇವೆ.
ಲಿಂಗ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಇಮಾನೆಯನ್ನು ಜೈವಿಕವಾಗಿ ಪುರುಷ ಎನ್ನುವ ಕಾರಣಕ್ಕೆ ಕಳೆದ ವರ್ಷ ನವದೆಹಲಿಯಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಿರಲಿಲ್ಲ.
ಪದಕ ಫೇವರಿಟ್ ನಿಖಾತ್‌ಗೆ 2ನೇ ಸುತ್ತಿನಲ್ಲೇ ಆಘಾತ!
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ನೆಚ್ಚಿನ ಅಥೀಟ್ ಎಂದೇ ಕರೆಸಿಕೊಳ್ಳುತ್ತಿದ್ದ ಭಾರತದ ತಾರಾ ಬಾಕ್ಸರ್ ನಿಖಾತ್ ಜರೀನ್ 2ನೇ ಸುತ್ತಿನಲ್ಲೇ ಆಘಾತಕಾರಿ ಸೋಲನುಭವಿಸಿದ್ದಾರೆ. 2 ಬಾರಿ ವಿಶ್ವಚಾಂಪಿಯನ್ ನಿಖಾತ್ ಗುರುವಾರ ನಡೆದ ಮಹಿಳೆಯರ 50 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಚೀನಾದ ವು ಯು ವಿರುದ್ಧ 0-5 ಅಂತರಲ್ಲಿ ಪರಾಭವಗೊಂಡರು.
ಕ್ರೀಡಾಕೂಟದ ಮೊದಲ ಸುತ್ತಿನಲ್ಲಿ ಜರ್ಮನಿಯ ಮ್ಯಾಕ್ಸಿ ಕರೀನಾ ವಿರುದ್ಧ ಗೆದ್ದಿದ್ದ 28 ವರ್ಷದ ನಿಖಾತ್, ಏಷ್ಯನ್ ಗೇಮ್ಸ್ ಚಿನ್ನ ವಿಜೇತ ಚೀನಾ ಆಟಗಾರ್ತಿಯ ಬಲಿಷ್ಠ ಪಂಚ್‌ಗಳ ಮುಂದೆ ಮಂಡಿ ಯೂರಬೇಕಾಯಿತು. ಪ್ಯಾರಿಸ್ ಕ್ರೀಡಾಕೂಟದಲ್ಲಿ ಭಾರತದ 6 ಬಾಕ್ಸರ್‌ಗಳು ಸ್ಪರ್ಧಿಸಿದ್ದು, ಈಗಾಗಲೇ 4 ಮಂದಿ ಸೋತು ಹೊರಬಿದ್ದಿದ್ದಾರೆ.
ಸಿಫ್ತ್‌ಗೆ ಅರ್ಹತಾ ಸುತ್ತಲ್ಲೇ ಸೋಲು
ಈ ಬಾರಿ ಕ್ರೀಡಾಕೂಟದಲ್ಲಿ ಪದಕ ಭರವಸೆ ಮೂಡಿಸಿದ್ದ ಶೂಟರ್ ಸಿಫ್ತ್ ಕೌರ್ ಸಾಮ್ರಾ ಮಹಿಳೆಯರ 50 ಮೀ. ರೈಫಲ್ 3 ಪೊಸಿಷನ್‌ನ ಅರ್ಹತಾ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. 32 ಶೂಟರ್‌ಗಳ ನಡುವೆ ಗುರುವಾರ ನಡೆದ ಸ್ಪರ್ಧೆಯಲ್ಲಿ ಸಿಫ್ತ್ 575 ಅಂಕಗಳೊಂದಿಗೆ 31ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಕಳೆದ ಏಷ್ಯಾಡ್‌ನಲ್ಲಿ ಚಿನ್ನಗೆದ್ದಿದ್ದ ಸಿಫ್ತ್, ಪ್ಯಾರಿಸ್‌ನಲ್ಲಿ ನೀರಸ ಪ್ರದರ್ಶನ ತೋರಿದರು.ಈ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಮತ್ತೋರ್ವ ಶೂಟರ್ ಅಂಜುಮ್ ಮೌಲ್ 584 ಅಂಕಗಳೊಂದಿಗೆ 18ನೇ ಸ್ಥಾನ ಪಡೆದರು.
