ಬಾರ್ಸಿಲೋನಾ(ಫೆ.18): ಭಾರತದ ಅನುಭವಿ ಶಟ್ಲರ್‌ಗಳಾದ ಸೈನಾ ನೆಹ್ವಾಲ್‌ ಹಾಗೂ ಕಿದಂಬಿ ಶ್ರೀಕಾಂತ್‌, 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಸಲುವಾಗಿ ಮುಂಬರುವ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. 

ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್ ಬಿಜೆಪಿಗೆ ಸೇರ್ಪಡೆ!

ಮಂಗಳವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ಸ್ಪೇನ್‌ ಮಾಸ್ಟ​ರ್ಸ್ ಟೂರ್ನಿಯಲ್ಲಿ ಈ ಇಬ್ಬರು ಪಾಲ್ಗೊಳ್ಳಲಿದ್ದಾರೆ. 2019ರಲ್ಲಿ ಸೈನಾ ಹಾಗೂ ಕಿದಂಬಿ ಶ್ರೀಕಾಂತ್‌ ನೀರಸ ಪ್ರದರ್ಶನ ತೋರಿದರು. ಈ ವರ್ಷವೂ ಕಳಪೆ ಪ್ರದರ್ಶನ ಮುಂದುವರಿಸಿರುವ ಸೈನಾ ತಾವಾಡಿರುವ 3 ಟೂರ್ನಿಗಳ ಪೈಕಿ ಎರಡರಲ್ಲಿ ಮೊದಲ ಸುತ್ತಿನಲ್ಲೇ ಮುಗ್ಗರಿಸಿ ನಿರಾಸೆ ಅನುಭವಿಸಿದ್ದರು. ಇನ್ನು ಶ್ರೀಕಾಂತ್‌ ಆಡಿರುವ ಮೂರೂ ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲೇ ಸೋಲುಂಡಿದ್ದರು. 

ಒಲಿಂಪಿಕ್ಸ್‌ಗೆ ಕೊರೋನಾ ಭೀತಿ: ಸ್ಪಷ್ಟನೆ ನೀಡಿದ ಆಯೋಜಕರು

ವಿಶ್ವ ಬ್ಯಾಡ್ಮಿಂಟನ್‌ ಸಂಸ್ಥೆ ನಿಯಮದ ಪ್ರಕಾರ ಕಳೆದ ಒಂದು ವರ್ಷದಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಸಿಗಲಿದೆ. ಸೈನಾ ಹಾಗೂ ಶ್ರೀಕಾಂತ್ ಪ್ರಸ್ತುತ ಕ್ರಮವಾಗಿ 18 ಹಾಗೂ 15ನೇ ಸ್ಥಾನದಲ್ಲಿದ್ದಾರೆ.  ಏಪ್ರಿಲ್ ಅಂತ್ಯದ ವೇಳೆಗೆ ಅಗ್ರ 16ರ ಶ್ರೇಯಾಂಕದಲ್ಲಿರುವ ಆಟಗಾರರು ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆಗಿಟ್ಟಿಸಿಕೊಳ್ಲಲಿದ್ದಾರೆ. ಪ್ರತಿ ಸಿಂಗಲ್ಸ್‌ ವಿಭಾಗದಲ್ಲಿ ಒಂದು ದೇಶದ ಇಬ್ಬರು ಮಾತ್ರ ಸ್ಪರ್ಧಿಸಬಹುದಾಗಿದೆ.