ನವದೆಹಲಿ(ಡಿ.28): 6 ಬಾರಿ ವಿಶ್ವಚಾಂಪಿಯನ್ ಬಾಕ್ಸರ್ ಭಾರತದ ಮೇರಿ ಕೋಮ್ ಇದೀಗ ಸುದ್ದಿಯಲ್ಲಿದ್ದಾರೆ. ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ನಿಖಾತ್ ಜರೀನ್ ವಿರುದ್ಧ 9-1 ಅಂತರದಲ್ಲಿ ಗೆಲುವು ಸಾಧಿಸಿದರು. ಗೆಲುವಿನ ಬಳಿಕ ಮೇರಿ ಕೋಮ್ ನಿಖಾತ್‌ಗೆ ಶೇಕ್ ಹ್ಯಾಂಡ್ ಮಾಡಲು ನಿರಾಕರಿಸಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಅಭಿನವ ಬಿಂದ್ರಾ ವಿರುದ್ಧ ಕಿಡಿಕಾರಿದ ಮೇರಿ ಕೋಮ್.

ರೆಫ್ರಿ ಮೇರಿ ಕೋಮ್ ಕೈ ಹಿಡಿದು ಎತ್ತಿ ಗೆಲುವು ಘೋಷಿಸಿದರು. ಸಂಭ್ರಮದಲ್ಲಿದ್ದ ಮೇರಿ ಕೋಮ್, ಎದುರಾಳಿ ಜರೀನ್‌ಗೆ ಹಸ್ತಲಾಘವ ಮಾಡದೇ ತೆರಳಿದರು. ಸಾಮಾಜಿಕ ಜಾಲತಾಣದಲ್ಲಿ ಮೇರಿ ಕೋಮ್ ವರ್ತನೆಗೆ ಪರ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಮೇರಿ ಕೋಮ್ ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಝರೀನ್ ಎದುರಾಳಿಯನ್ನು ಗೌರವಿಸುವುದಿಲ್ಲ. ಅಂತಹ ವ್ಯಕ್ತಿಗಳನ್ನು ನಾನೂ ಗೌರವಿಸುವುದಿಲ್ಲ ಎಂದು ಮೇರಿ ಕೋಮ್ ಹೇಳಿದ್ದಾರೆ.

 

ಇದನ್ನೂ ಓದಿ: ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಕಂಚು ಗೆದ್ದ ಮೇರಿ ಕೋಮ್

ಮೇರಿ ಕೋಮ್ ವರ್ತನೆಯಿಂದ ನೋವಾಗಿದೆ. ನಾನು ಸೋತಿದ್ದೇನೆ. ಆದರೆ ಹೋರಾಟ ತೃಪ್ತಿ ನೀಡಿದೆ. ಹಿರಿಯ ಬಾಕ್ಸರ್ ಮೇರಿ ಕೋಮ್ ನನ್ನ ಪ್ರಯತ್ನಕ್ಕೆ ಪ್ರೋತ್ಸಾಹ ವ್ಯಕ್ತಪಡಿಸುತ್ತಾರೆ ಎಂದುಕೊಂಡಿದ್ದೆ. ಆದರೆ ಹಸ್ತಲಾಘವ ಮಾಡಲು ನಿರಾಕರಿಸಿರುವುದು ಬೇಸರ ತಂದಿದೆ ಎಂದು ನಿಖಾತ್ ಜರೀನ್ ಹೇಳಿದ್ದಾರೆ.

ಮೇರಿ ಕೋಮ್ ವರ್ತನೆಗೆ ಹಲವರು ಕಿಡಿ ಕಾರಿದ್ದಾರೆ. ಎದುರಾಳಿ ಯಾರೇ ಆದರೂ, ಫಲಿತಾಂಶ ಏನೇ ಆದರೂ ಕ್ರೀಡಾ ಸ್ಪೂರ್ತಿ ಮರೆಯಬಾರದು ಎಂದು ಕಿವಿ ಮಾತು ಹೇಳಿದ್ದಾರೆ.