ಕಲೆ ಮತ್ತು ಸೃಜನಶೀಲತೆ ರಾಷ್ಟ್ರೀಯ ಗಡಿಯನ್ನು ಮೀರಿದೆ. ಕೆಲವು ದಿನಗಳ ಹಿಂದೆ ಇಂಡಿಯನ್‌ ಮೋಷನ್‌ ಪಿಕ್ಚ​ರ್‍ಸ್ ಪ್ರೊಡ್ಯೂಸ​ರ್‍ಸ್ ಅಸೋಸಿಯೇಶನ್‌ (ಐಎಂಪಿಪಿಎ), ಪಾಕಿಸ್ತಾನಿ ಕಲಾವಿದರು, ತಂತ್ರಜ್ಞರು ಮತ್ತು ಗಾಯಕರನ್ನು ಭಾರತೀಯ ಸಿನಿಮಾಗಳಲ್ಲಿ ನಟಿಸುವುದರಿಂದ ನಿಷೇಧಿಸಿದೆ. ಇದು ಖಂಡಿತ ತಾರತಮ್ಯ ಧೋರಣೆ. ಮುಖ್ಯವಾಗಿ ಐಎಂಪಿಪಿಎ­ಯಂಥ ಸಂಸ್ಥೆಗೆ, ತನ್ನ ಸದಸ್ಯರನ್ನು ನಿಷೇಧಿಸುವ ಹಕ್ಕಿದೆಯೇ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಾಗು­ತ್ತದೆ. ಒಂದು ಖಾಸಗಿ ಸಂಸ್ಥೆಯಾಗಿ ಐಎಂಪಿಪಿಎಗೆ ಯಾರನ್ನೇ ಆದರೂ ನಿಷೇಧಿಸುವ ಹಕ್ಕಿದೆ. ಆದರೆ ಯಾವುದೇ ಸಿನಿಮಾ ತಂಡ ಈ ನಿಷೇಧ ಅನೈತಿಕ ಎಂದು ಭಾವಿಸಿದಲ್ಲಿ ಮತ್ತು ಪಾಕಿಸ್ತಾನಿ ಸಿಬ್ಬಂದಿಯ ಸೇವೆ ಮುಂದುವರಿಸಲು ಬಯಸಿದಲ್ಲಿ ಐಎಂಪಿಪಿಎಗೆ ಅಂಥ ಸಿನಿಮಾ ತಂಡದ ಮೇಲೆ ಕ್ರಮ ಕೈಗೊಳ್ಳುವ ಕಾನೂನಾತ್ಮಕ ಅಧಿಕಾರವಿಲ್ಲ. ಹೀಗಾಗಿ ನಿಷೇಧ ಎನ್ನುವುದು ಇತರ ಕಾನೂನಿನಂತಲ್ಲದೆ, ಒಬ್ಬರು ನಂಬಿಕೆ ಇಟ್ಟಲ್ಲಿ ಮಾತ್ರ ವಿಶ್ವಾಸಾರ್ಹತೆ ಇರುತ್ತದೆ. ನಂಬದವರಿಗೆ ಅನ್ವಯಿಸುವುದಿಲ್ಲ. ಹೀಗಿರುವಾಗ, ಪಾಕಿಸ್ತಾನಿ ಕಲಾವಿದರನ್ನು ನಿಷೇಧಿಸುವುದಾದರೂ ಏಕೆ?
ಈ ನಿಷೇಧಕ್ಕೆ ಹಿನ್ನೆಲೆ, ಕಳೆದ ಸೆ.18ರಂದು ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾನೆಲೆ ಮೇಲೆ ನಡೆದ ಉಗ್ರರ ದಾಳಿಯಲ್ಲಿ 17 ಭಾರತೀಯ ಸೈನಿಕರು ಮೃತಪಟ್ಟಿರುವುದು. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಜಿಹಾದಿ ಸಂಘಟನೆಯಾಗಿರುವ ಜೈಶ್‌ ಎ ಮೊಹಮ್ಮದ್‌ ಉಗ್ರರು ಈ ದಾಳಿ ಮಾಡಿದ್ದಾರೆ. ಊಹಾಪೋಹಗಳ ಪ್ರಕಾರ, ಪಾಕಿಸ್ತಾನಿ ಗುಪ್ತಚರ ಇಲಾಖೆ ಐಎಸ್‌ಐ, 2000 ಇಸವಿಯ ಆದಿಯಲ್ಲಿ ಜೈಶ್‌ ಎ ಮೊಹಮ್ಮದ್‌ ಸಂಘಟನೆ ರಚನೆಗೆ ನೆರವಾಗಿದೆ. 2002ರಲ್ಲಿ ಪಾಕಿಸ್ತಾನ ಈ ಸಂಘಟನೆಯನ್ನು ನಿಷೇಧಿಸಿದೆ. ಪಾಕಿಸ್ತಾನ ಮತ್ತು ವಿಶ್ವಸಂಸ್ಥೆ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಸಮುದಾಯ ಜೈಶ್‌ ಎ ಮೊಹಮ್ಮದ್‌ ಸಂಘಟನೆಯನ್ನು ಭಯೋ­ತ್ಪಾದಕ ಸಂಘಟನೆ ಎಂದೇ ಪರಿಗಣಿಸಿದೆ.

ಭಯೋತ್ಪಾದನೆ ಎಂಬ ಶಬ್ದ ರಾಜಕೀಯವಾಗಿ ಮತ್ತು ಭಾವನಾತ್ಮಕವಾಗಿ ಬಹಳ ಸಂಕೀರ್ಣವಾಗಿರುವ ಕಾರಣ ಅದಕ್ಕೊಂದು ವಿಶ್ವಮಾನ್ಯ ವ್ಯಾಖ್ಯಾನ ಕೊಡು­ವುದು ಅಸಾಧ್ಯ. ವಿಕಿಪೀಡಿಯಾ ಹೇಳುವಂತೆ, ಭಯೋ­ತ್ಪಾದನೆಯ ವ್ಯಾಖ್ಯಾನ ಹೀಗಿದೆ: ‘ಭಯೋತ್ಪಾದನೆ ಎಂಬುದು ದೇಶದ್ರೋಹಿಗಳು ಅಥವಾ ಅಡಗುತಾಣ­ಗಳಿಂದ ತಮ್ಮ ಸಂಬಂಧಿತ ಸರ್ಕಾರಗಳ ಪರವಾಗಿ ರಾಜಕೀಯ, ಧಾರ್ಮಿಕ ಅಥವಾ ಆದರ್ಶಗಳ ಗುರಿಯನ್ನಿಟ್ಟುಕೊಂಡು ಜನಸಮುದಾಯ ಅಥವಾ ಸರ್ಕಾರವನ್ನು ಬೆದರಿಸಲು ವ್ಯವಸ್ಥಿತ ಅಥವಾ ಬೆದರಿ­ಸುವ ಹಿಂಸಾಕೃತ್ಯದಲ್ಲಿ ತೊಡಗುವುದು.' ಈ ಅಪರಾ­ಧವನ್ನು ಶಾಸನೋಕ್ತವಾಗಿ ಅಕ್ರಮ ಮತ್ತು ಅಂತರ್ಗತ­ವಾಗಿ ಅನೈತಿಕ ಎಂದು ತಿಳಿಯಲಾಗಿದೆ. ಹಾಗೆಯೇ ಉರಿ­ಯಲ್ಲಿ ನಡೆದ ದಾಳಿ ಭಯೋತ್ಪಾದಕ ಕೃತ್ಯ ಮತ್ತು ಅದನ್ನು ಖಂಡಿಸಲೇಬೇಕು. ಹಿಂಸೆಯನ್ನು ಯಾವುದೇ ರೀತಿಯಲ್ಲಿ ಅಭಿವ್ಯಕ್ತಿಗೊಳಿಸಿದರೂ ಅದನ್ನು ಖಂಡಿಸ­ಬೇಕು ಮತ್ತು ಈ ದಾಳಿಯೂ ಅದಕ್ಕೆ ಹೊರತಲ್ಲ.

ಸಿನಿಮಾ ನಿರ್ಮಾಪಕರು ಮತ್ತು ಐಎಂಪಿಪಿಎ ಸದಸ್ಯರಾದ ಅಶೋಕ್‌ ಪಂಡಿತ್‌ ಪ್ರಕಾರ, ‘‘ಉರಿಯಲ್ಲಿ ನಡೆದ ದಾಳಿಗೆ ಬಲಿಯಾದ ಸೈನಿಕರಿಗೆ ಐಎಂಪಿಪಿಎ ನಮನ ಸಲ್ಲಿಸಿದೆ. ಹೀಗಾಗಿ ರಾಷ್ಟ್ರದ ಕಡೆಗೆ ತನ್ನ ಕರ್ತ­ವ್ಯವಾಗಿ ಶಾಂತಿ ಸ್ಥಾಪನೆಯಾಗುವವರೆಗೂ ಪಾಕಿಸ್ತಾನಿ ಕಲಾವಿದರು ಮತ್ತು ತಂತ್ರಜ್ಞರನ್ನು ಭಾರತದಲ್ಲಿ ನಿಷೇಧಿ­ಸುವ ನಿರ್ಣಯ ಕೈಗೊಂಡಿದೆ. ಐಎಂಪಿಪಿಎ ಮಟ್ಟಿಗೆ ರಾಷ್ಟ್ರವೇ ಮೊದಲು.'' ಈ ಮಾತುಗಳು ಬಹಳ ದೃಢ­ವಾದುದೇ ಆಗಿದ್ದರೂ ತಾರ್ಕಿಕವಾಗಿ ದೋಷಪೂರ್ಣ. ಪಾಕ್‌ ಸರ್ಕಾರ ಪರೋಕ್ಷವಾಗಿ ನೆರವಾಗಿದೆ ಎನ್ನುವ ತಪ್ಪಿತಸ್ಥ ಭಾವನೆಗಾಗಿ, ಅದು ಸ್ವತಃ ನಿಷೇಧಿಸಿರುವ ಆ ದೇಶಕ್ಕೆ ಸಂಬಂಧಿಸದೆ ಇರುವ ಸಂಘಟನೆಯೊಂದರ ಸದಸ್ಯರ ಕೃತ್ಯಕ್ಕೆ ಪಾಕಿಸ್ತಾನದಲ್ಲಿ ಹುಟ್ಟಿದ ಎಲ್ಲರನ್ನೂ ತಪ್ಪಿತಸ್ಥರು ಎಂದು ಐಎಂಪಿಪಿಎ ಘೋಷಿಸಿದ ಹಾಗಿದೆ ಈ ನಿಷೇಧ. ಐಎಂಪಿಪಿಎ ಬಹಳ ಸಂವೇದನಾಶೀಲ ಎಂದು ತೋರಿಸಿಕೊಳ್ಳಬೇಕೆಂದಿದ್ದಲ್ಲಿ ಜೈಶ್‌ ಎ ಮೊಹ­ಮ್ಮದ್‌ ಅಥವಾ ಇತರ ಯಾವುದೇ ನಿಷೇಧಿತ ಮೂಲ ಭೂತವಾದಿ ಸಂಘಟನೆಗಳ ಜೊತೆಗೆ ನೇರ ಸಂಪರ್ಕ ಹೊಂದಿ­ರುವವರು ಜಗತ್ತಿನಲ್ಲಿ ಎಲ್ಲೇ ಇದ್ದರೂ ಅವರನ್ನು ನಿಷೇಧಿಸಲಿ. ಆದರೆ ಈಗಿನ ಐಎಂಪಿಪಿಎ ನಡೆ ನೋಡಿ­ದರೆ, ಪಾಕಿಸ್ತಾನದ ಪ್ರತೀ ಪ್ರಜೆಗಳೂ ಜನ್ಮತಃ ತನ್ನ ದೇಶವು ತೆಗೆದುಕೊಂಡ ಯಾವುದೇ ಕ್ರಮಕ್ಕೆ ಬಾಧ್ಯಸ್ಥನಾಗಿರುತ್ತಾನೆ-ಕಾನೂನಾತ್ಮಕವಾಗಿ ಅಲ್ಲದೆ ಇದ್ದರೂ! ಅಂದರೆ, ಭಾರತೀಯ ಕಲಾವಿದರು ಸಾಮಾಜಿಕ, ರಾಜ­ಕೀಯ ಪರಿವರ್ತನೆಯ ವಿಚಾರವಾಗಿ ಮೌನವಾಗಿ­ದ್ದರೆ, ನಿರ್ಭಯ ಅತ್ಯಾಚಾರ, ಗೋರಕ್ಷಕರ ದುರುಳತನ, ಗುಜ­ರಾತ್‌ ಹತ್ಯಾಕಾಂಡ, ಅಫ್ಸ್ಪಾ  ಮತ್ತು ನಮ್ಮ ದೇಶ­ದಲ್ಲಿ ನಡೆಯುವ ಎಲ್ಲ ರೀತಿಯ ಇತರ ಹಿಂಸೆ­ಗಳಿಗೂ ಈ ದೇಶದಲ್ಲಿ ಜನಿಸಿದ ತಪ್ಪಿಗಾಗಿ ಭಾಧ್ಯಸ್ಥ­ರಾಗುತ್ತಾರೆ. (ಇದನ್ನೇ ಅಮೆರಿಕದ ಪ್ರಜೆಗಳಿಗೆ ಮತ್ತು ಕಲಾವಿದರಿಗೂ ಅನ್ವಯಿಸಬಹುದು. ಸಿಐಎ ನಡೆಸುವ ಮಾನವ ಹಕ್ಕು ಉಲ್ಲಂಘನೆಗೆ, ತನಿಖೆ ಹೆಸರಲ್ಲಿ ನಡೆಯುವ ಹಿಂಸೆ, ಇಟಲಿ, ಇರಾನ್‌, ಗ್ವಾಟ ಮಾಲಾ, ಉ.ವಿಯೆಟ್ನಾಂ, ಚಿಲಿ ಮೊದಲಾದೆಡೆ ಸರ್ಕಾರ ಉರುಳಿಸಿರುವುದು ಮತ್ತು ಈವರೆಗಿನ ಅದರ ವಿದೇಶಿ ನೀತಿಗಳಿಗೆಲ್ಲ ಆ ದೇಶದ ಪ್ರಜೆಗಳು ಭಾಧ್ಯಸ್ಥರು.)

ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಬಹಳಷ್ಟುಕಲಾವಿದರನ್ನು ಭಾರತದಲ್ಲಿ ನಿಜ ಜೀವನದ ನಾಯಕ­ರನ್ನಾಗಿ ನೋಡಲಾಗುತ್ತಿದೆ. ಹೀಗಿರುವಾಗ ಯಾವುದೇ ಕಾನೂನನ್ನು ಮುರಿಯದೆ ಮತ್ತು ಯಾವುದೇ ಪ್ರಶ್ನಾರ್ಹ ಹೇಳಿಕೆ ನೀಡದೆ ಇರುವವರನ್ನು ಪ್ರಶ್ನಿಸುವ ನೈತಿಕ ಅಧಿಕಾರ ನಮಗಿದೆಯೇ?

ಒಂದು ವಿಚಾರವನ್ನು ನೇರವಾಗಿ ಒಪ್ಪಿಕೊಳ್ಳೋಣ: ಕಲಾವಿದರು ಯಾವ ದೇಶಕ್ಕೇ ಸೇರಿರಲಿ, ಭಾರತೀಯ, ಪಾಕಿಸ್ತಾನ, ಅಮೆರಿಕದವರೇ ಇರಲಿ, ದೇಶದ ಯಾವುದೇ ಪ್ರದೇಶದಲ್ಲೂ ಬೇಕಾದರೂ ಇರಲಿ, ಅವರು ಸಹಜವಾಗಿ ಆದರ್ಶ ವ್ಯಕ್ತಿತ್ವದವರಾಗಿರುವುದಿಲ್ಲ ಅಥವಾ ಶಾಂತಿಯ ರಾಯಭಾರಿಗಳೂ ಆಗಿರುವುದಿಲ್ಲ. ಬಹಳಷ್ಟುಸಂದರ್ಭದಲ್ಲಿ ಅವರು ಉದ್ಯಮ ಅಥವಾ ಉದ್ಯೋಗ ವೀಸಾ ಹೊಂದಿ ಹಣ ಗಳಿಕೆಗಾಗಿ ಮತ್ತು ತಮ್ಮ ವೃತ್ತಿಯ ಉದ್ದೇಶದಿಂದಲೇ ಬಂದಿರುತ್ತಾರೆ.

ಪೌರತ್ವದ ಸಂಕೀರ್ಣತೆಯನ್ನು ಮತ್ತು ರಾಷ್ಟ್ರದಿಂದ ರಾಷ್ಟ್ರಕ್ಕೆ ಕೊಂಡಿಯಾಗಿರುವಂತೆ ಕಲಾವಿದರ ಮೇಲೆ ಜವಾಬ್ದಾರಿ ಹೊರಿಸುವುದು ನ್ಯಾಯಯುತ ಅಲ್ಲ. ಹಾಗೆಯೇ ಪಾಕಿಸ್ತಾನ ಸರ್ಕಾರವು, ದೃಢ ರಾಜಕೀಯ ನಿಲುವುಗಳನ್ನು ತಳೆದಿರುವ ಭಾರತೀಯ ಕಲಾವಿದರಾದ ಜಾವೇದ್‌ ಅಖ್ತರ್‌ ಮತ್ತು ಅನುಪಮ್‌ ಖೇರ್‌ ಅವರಿಗೆ ವೀಸಾ ನೀಡಲು ನಿರಾಕರಿಸಿರುವುದು ಕೂಡ ಆ ದೇಶದ ಕಡೆಯಿಂದ ಆದ ಪ್ರಜಾಸತ್ತಾತ್ಮಕ ಹಕ್ಕುಗಳ ಉಲ್ಲಂಘನೆ ಮತ್ತು ಪೂರ್ವಗ್ರಹವನ್ನು ಸೂಚಿಸುತ್ತದೆ.

ನಿಜವಾದ ರಾಷ್ಟ್ರೀಯತೆಯ ವಿಚಾರಕ್ಕೆ ಬಂದಾಗ, ಭಾರತ ಮತ್ತು ಪಾಕಿಸ್ತಾನ ಹಾಗೂ ಅಮೆರಿಕದಲ್ಲೂ ಮಾನವ ಹಕ್ಕುಗಳನ್ನು ಮುಂದಿಟ್ಟುಕೊಂಡು ಇರುವವರಿ­ದ್ದಾರೆ. ಅವರು ತಮ್ಮ ಜೀವನವನ್ನು ಮತ್ತು ತಮ್ಮ ಪ್ರೀತಿ ಪಾತ್ರರ ಜೀವನವನ್ನು ಪಣಕ್ಕಿಟ್ಟು ತಮ್ಮದೇ ದೇಶದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಹೋರಾಡುತ್ತಾರೆ. ಪಾಕಿಸ್ತಾನಿ ಕಲಾವಿದ ಸಬೀನ್‌ ಮಹ್ಮೂದ್‌ ಜಾತ್ಯತೀತ ಮೌಲ್ಯಗಳ ಪರವಾಗಿ ಹೋರಾಡುವವರು ಮತ್ತು ತಮ್ಮದೇ ಸರ್ಕಾರವು ಬಲೂಚಿಸ್ತಾನದಲ್ಲಿ ನಡೆಸುವ ದೌರ್ಜನ್ಯ ಪ್ರಶ್ನಿಸಿದ ಫಲವಾಗಿ ತನ್ನ ಮನೆಯಲ್ಲೇ 2015ರಲ್ಲಿ ಕೊಲೆಯಾದರು. ಮಹ್ಮೂದ್‌ ಯಾವು­ದಕ್ಕಾಗಿ ಜೀವ ತ್ಯಾಗ ಮಾಡಿದ್ದಾ­ರೆಯೋ, ಆ ಜಾತ್ಯತೀತ ಮೌಲ್ಯವೇ ನಮ್ಮ ದೇಶದ ದೊಡ್ಡ ಆಸ್ತಿ. ಮಹ್ಮೂದ್‌ ಅವರ ಕೆಚ್ಚೆದೆ, ದೂರದೃಷ್ಟಿಮತ್ತು ಮಾನವೀಯತೆ­ಯನ್ನೇ ಪ್ರದರ್ಶಿಸಿ ಎಂದು, ಮೊದಲೇ ಬರೆದಿರುವ ಸಂಭಾ­ಷಣೆ ಓದುವ ಅಥವಾ ಬರೆದ ಸಾಹಿತ್ಯಕ್ಕೆ ವೇದಿಕೆ ಮೇಲೆ ದನಿಗೊಡುವ ಕಲಾವಿದರನ್ನು ಕೇಳುವುದು ಸಕಾರಣ ಮತ್ತು ತಾರ್ಕಿಕವಾಗದು. ಹಾಗೆಯೇ, ನಮ್ಮದೇ ನೆಲದಲ್ಲಿ ಬೆಳೆದ ಪ್ರತಿಭೆಗಳಿಂದಲೂ ಅಂಥ ಹೋರಾಟ ನಿರೀಕ್ಷಿಸಲು ಸಾಧ್ಯವಾಗದು. 

ಅಮೆರಿಕದ ನಾಗರಿಕ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಕ್ಲೇರೆನ್ಸ್‌ ಡಾರೋ ಪ್ರಕಾರ, ನಿಜವಾದ ರಾಷ್ಟ್ರಪ್ರೇಮಿ ಎಲ್ಲೇ ಇದ್ದರೂ ತನ್ನದೇ ನೆಲದಲ್ಲಿ ನಡೆಯುವ ಅನ್ಯಾಯವನ್ನು ದ್ವೇಷಿಸುತ್ತಾನೆ. ಹಾಗಾಗಿ ಗಡಿಯಾ­ಚೆಗಿನ ಕಲಾವಿದರನ್ನು ದೂಷಿಸುವ ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಉತ್ತಮ.

(ಲೇಖಕರು ಕನ್ನಡ ಚಿತ್ರರಂಗದ ನಾಯಕ ನಟ)

ಕೃಪೆ: ಕನ್ನಡಪ್ರಭ