Asianet Suvarna News Asianet Suvarna News

ಸಿಂಗಪುರದಲ್ಲಿ ಕನ್ನಡ ಸಂಘ ದೀಪೋತ್ಸವ, ಪ್ರತಿಭೆಗಳ ಅನಾವರಣ

ಸಿಂಗಪುರದಲ್ಲಿ ಕನ್ನಡ ಸಂಘ ದೀಪೋತ್ಸವ, ಪ್ರತಿಭೆಗಳ ಅನಾವರಣ/ ವಿದ್ಯುತ್ ದೀಪಾಲಂಕೃತ ಭವ್ಯ ರಂಗಸಜ್ಜಿಕೆ/ ಮಕ್ಕಳಿಂದ ಪ್ರತಿಭಾ ಪ್ರದರ್ಶನ/ ಸಾಧಕರಿಗೆ ಸನ್ಮಾನ/ ಕನ್ನಡ ಕಲಿ-ನಲಿ

singapore-kannada-sangha-deepotsava-2019 celebration
Author
Bengaluru, First Published Nov 26, 2019, 2:05 PM IST

ಸಿಂಗಪುರ(ನ. 26)  ಸಿಂಗಪುರದ GIIS ನಲ್ಲಿನ ಸಭಾಂಗಣದ ಬಣ್ಣ, ಆಕಾರ, ರೂಪವೇ ಬದಲಾಗಿ ಹೋಗಿತ್ತು, ಕಾರ್ಲೆ ಟೌನ್ ಸೆಂಟರ್ ಪ್ರಾಯೋಜಿಸಿದ ಆಕಾರ್ಯಕ್ರಮದಲ್ಲಿ ಝಗಮಗಿಸುವ ದೀಪಗಳು ಎಲ್ಲೆಡೆ ಮೆರುಗುತ್ತಿದ್ದವು, ವೇದಿಕೆಯ ಸ್ವರೂಪವೇ ಬದಲಾಗಿ ಸುಂದರವಾಗಿ ಅಲಂಕೃತಗೊಂಡು ಯಾವುದೋ ಸಂಭ್ರಮಕ್ಕೆ ಅಣಿಯಾಗುವ ಚೆಲುವೆಯ ಸೌಂದರ್ಯ ಮೈದೋರಿದಂತಿತ್ತು.

ಅದಕ್ಕೆ ಪೂರಕವೆಂಬಂತೆ ತನ್ನ ಅಸ್ತಿತ್ವವನ್ನು ಸಾರಿ ಎಲ್ಲೆಡೆ ಆವರಿಸುವ ವಿಭಿನ್ನ ಬಣ್ಣ ಬಣ್ಣದ ಉಡುಗೆ-ತೊಡುಗೆಗಳ ರಂಗಿನ ಜೊತೆಗೆ ತಾವು ಸೇರಿಕೊಂಡು ಸೆಳೆಯುವ ಆತುರದ ಬಳೆ- ಗೆಜ್ಜೆಗಳ ನಾದ, ತಾವೇನು ಕಡಿಮೆ ಎಂಬಂತೆ ಪೈಪೋಟಿಗಿಳಿದ ಸಂಗೀತದಂತಹ ಮಾನಿನಿಯರ ಮಾತುಗಳ ಸುಮಧುರ ರಾಗ, ನಿಧಾನವಾಗಿ ಗಾಳಿಯೊಂದಿಗೆ ಬೆರೆತು ತನ್ನತನವನ್ನು ಮೆಲ್ಲನೆ ಹರಡುತ್ತಿರುವ  ಧೂಮ ಸೃಷ್ಟಿಸಿ  ತೇಲುತ್ತಿರುವ ಮೇಘಗಳ ಪ್ರತಿರೂಪ, ಇವೆಲ್ಲದರ ನಡುವೆ ತೂರಿ, ಎಲ್ಲರ ಮನದಿಂಗಿತವನ್ನು ತಿಳಿಯ ಬಯಸುವ ಹಾಗೂ ಈ ಮಾಯಾಲೋಕದ ಪ್ರಸ್ತುತೆಯ ಕಾರಣವನ್ನು ಉಲ್ಲೇಖಿಸಲು ಬಂದೆನೆಂದು ತಿಳಿಯಾಗಿ, ಇಂಪಾಗಿ ಉಲಿಯುತ್ತಿದ್ದ " ಕನ್ನಡ ತಾಯಿಯ ಮಕ್ಕಳು ನಾವೆಲ್ಲಾ ಒಂದೇ... ಎಂದು ಸಂತಸದಿಂದ ಕರೆಮಾಡಿ " ಕನ್ನಡ ಗಂಗೆಯಲಿ ಮೀಯುವ ನಾವೀಗ" ಎಂದು ಎಲ್ಲರನ್ನೂ ಈ ಅದ್ಧೂರಿಯ ಕನ್ನಡ ತೇರಿನ ಸಡಗರಕ್ಕೆ, ಜಾತ್ರೆಯ ಸಂಭ್ರಮಕ್ಕೆ ಸ್ವಾಗತಿಸಿ ಅಣಿಮಾಡಿದಂತಿತ್ತು.

singapore-kannada-sangha-deepotsava-2019 celebration

ಕನ್ನಡಮ್ಮನಿಗೆ ನಮನ

ಅಲಂಕೃತಗೊಂಡು ಸಜ್ಜಾಗುತ್ತಿರುವ ಕನ್ನಡಮ್ಮನ ಭಾಷೆಯನ್ನು ಮೆರೆದು ನಿಲ್ಲಲು ಭಾಷೆಕೊಟ್ಟಂತಹ ಕಾರ್ಯಕರ್ತರು ವಿಮಾನದ ಕ್ಯಾಪ್ಟನ್‌ಗಳಂತೆ ಸೂಟು-ಬೂಟುಗಳನ್ನು ಧರಿಸಿ, ಹೆಡ್-ಪೋನುಗಳ ಸಂವಹನೆಯಲ್ಲಿ ತೊಡಗಿ, ತೇರನ್ನೆಳಿಯುವ ಶುಭ ಮಹೂರ್ತಕ್ಕೆ ಸಿದ್ಧತೆಗಳನ್ನು ನಡೆಸುತ್ತಾ, ನಮ್ಮನ್ನೆಲ್ಲಾ ಆ ಕರುನಾಡೆಂಬ ವೈಭವದ ಪುರಿಗೆ, ಜೀವನದಿಯ ಜೀವ ನಾಡಿಗೆ ಕರೆದೊಯ್ಯುವ ಧೂತರಂತೆ ಕಾಣುತ್ತಿದ್ದರು. ಪರದೆಯ ಮೇಲೆ "ದೀಪೋತ್ಸವ" ಎನ್ನುವ ಪದಗಳು ಹೊಳೆಯುತ್ತಿದ್ದರೆ, ಅಕ್ಕ-ಪಕ್ಕದಲ್ಲಿ ಅಷ್ಟೇ ಪ್ರಖರವಾಗಿ "ಕನ್ನಡ ಸಂಘ (ಸಿಂಗಪುರ)ದ ಲಾಂಚನಗಳು ಎರಡು ಬದಿಯ ಪರದೆಯ ಮೇಲೆ ಬೆಳಗಿ, ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಸಮ್ಮಿಲನದ ಸಡಗರವನ್ನು ಪ್ರತಿಬಿಂಬಿಸುತ್ತಿದ್ದಂತೆ ತೋರುತಿತ್ತು.

ದೂರದ ಅಮೆರಿಕದಲ್ಲಿ ಮೊಳಗಿದ ಕನ್ನಡ ಡಿಂಡಿಮ

ದೀಪೋತ್ಸವಕ್ಕೆ ಚಾಲನೆ
ಭಾಷೆ ಸಹಜವಾಗಿ ಚಿಂತನಾಶೀಲ ಹಾಗೂ ಚಲನಾಶೀಲವಾದುದು, ಮಾನವನಿಗೆ ಮಾತ್ರ ಸಾಧಿಸಲ್ಪಡಬಹುದಾದ ಒಂದು ಸಂಕೀರ್ಣ ಸಂವಹನ ಮಾಧ್ಯಮ. ಭಾಷೆ ಎಂಬುದು ಮಾನವನ ಅನುಪಮ ಗುಣಗಳಲ್ಲಿ ಒಂದು ಎಂದೇಳಿದರೆ ಅತಿಶಯೋಕ್ತಿಯಲ್ಲ. ಭಾಷೆ ಎಂಬುದು ಮಾನವ ಸಂಸ್ಕೃತಿಯ ಪ್ರತಿಬಿಂಬ, ಭಾಷೆ ನಿರ್ದಿಷ್ಟ ನಿಯಮಗಳನ್ನು ಒಳಗೊಂಡ ಕ್ರಿಯೆಯನ್ನಷ್ಟೆ ಅಲ್ಲದೆ ಭಾಷೆ ಪ್ರಾದೇಶಿಕ ಹಾಗೂ ಸಂಸ್ಕೃತಿಗಳನ್ನು ಪ್ರತಿಬಿಂಭಿಸುವ ಕಾರ್ಯವನ್ನು ಮಾಡುತ್ತದೆ. ಇದಕ್ಕೆ ಜ್ವಲಂತ ಉದಾಹರಣೆ ಎಂದರೆ ನಮ್ಮ ಕನ್ನಡ ಕಲಿಯ ಮಕ್ಕಳು, ಈ ಬಾರಿ, ನಲಿ-ಕಲಿ ತರಗತಿಯ ಮಕ್ಕಳು, ಕನ್ನಡದಲ್ಲಿ ನಲಿದಾಡುತ್ತಾ ಕಲಿತ ಅನೇಕ ಕನ್ನಡ ಪರ ಚಟುವಟಿಕೆಗಳಲ್ಲಿ ಒಂದಾದ  ಹಾಡನ್ನೂ ಸಹ ಕಲಿತು, ದೀಪೋತ್ಸವಕ್ಕೆ ಪ್ರಾರ್ಥನ ಗೀತೆಯನ್ನಾಗಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ಕವನ, ಉಪಾಸನಾ ಮೋಹನ್ ಅವರು ಸಂಗೀತ ನಿರ್ದೇಶಿಸಿ, ಡಾ.ಭಾಗ್ಯಮೂರ್ತಿ ಅವರು ಸಿಂಗಪುರದಲ್ಲಿ ಕನ್ನಡ-ಕಲಿ ಮಕ್ಕಳಿಗೆ ಹೇಳಿ ಕೊಟ್ಟಂತಹ ಹಾಡನ್ನು ಹಾಡಲು ಎಲ್ಲರೂ ಉತ್ಸುಕತೆಯಿಂದ ವೇದಿಕೆ ಮೇಲೆ ಕಾಯುತ್ತಿದ್ದರು.

singapore-kannada-sangha-deepotsava-2019 celebration

 

ಮೆಲ್ಲನೆ ಮಬ್ಬು ಬೆಳಕಿನ ಅಂಗಣ ಬೆಳಕಿನಲೋಕಕ್ಕೆ ತೆರೆದು ಕೊಳ್ಳುತ್ತಾ ಇದ್ದರೆ, ಸಾಂಸ್ಕೃತಿಕ ಉಡುಗೆ-ತೊಡುಗೆಗಳ ಬಣ್ಣಗಳ ಜೊತೆಯಲ್ಲಿ ಕನ್ನಡದ ಚಿಣ್ಣರ ನಗುಮೊಗಗಳು ಅನಾವರಣಗೊಳ್ಳುತ್ತಿದ್ದವು.  ಥಟ್ಟನೆ, ಅದ್ಯಾವುದೋ ಗಂಧರ್ವಲೋಕದಿಂದ ಅಶರೀರವಾಣಿ "ನಮಸ್ಕಾರ ಕನ್ನಡಿಗರೇ, ದೀಪೋತ್ಸವಕ್ಕೆ ಸ್ವಾಗತ"  ಎಂಬ ರೇಡಿಯೋ ನಿರೂಪಕಿ ಐಶ್ವರ್ಯ ಅವರ ವಾಣಿ ಮೊಳಗುತ್ತಿದ್ದಂತೆ ತೇರು ಉತ್ಸವಕ್ಕೆ ಸಿದ್ಧವಾಯಿತು. ಇನ್ನು ಕನ್ನಡಮ್ಮನ ಉತ್ಸವಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ, ಪ್ರಾರ್ಥನೆ "ಕನ್ನಡ ಎನುವುದು ಜೀವನದಿ, ಗಿರಿವನ ಸಂಪದ ಎರಡು ಬದಿ" ಎಂದು ಶುಶ್ರಾವ್ಯವಾಗಿ ಮಕ್ಕಳೆಲ್ಲರೂ ಹಾಡಿ ಮುಗಿಸಿದಾಗ, ಪ್ರೇಕ್ಷರಷ್ಟೇ ಅಲ್ಲ, ರಥದಲ್ಲಿರುವ ಕನ್ನಡಮ್ಮನೂ ಸಹ ಹೆಮ್ಮೆಯಿಂದ ಬೀಗುತ್ತಾ ಚಪ್ಪಾಳೆ ತಟ್ಟುತ್ತಿದ್ದಳು.
 

ಸಿಂಗಾರ್ ಸ್ಟಾರ್ಸ್

ಮಕ್ಕಳೆಲ್ಲಾ ಸುಂದರ ತರಂಗಿಣಿಯಂತೆ ಸರಿದು ಇಳಿಯುತ್ತಿದ್ದಂತೆ, ವೇದಿಕೆ ಮತ್ತೊಂದು ಘಟ್ಟಕ್ಕೆ ಜೋಡಿಸಲು ಜ್ಯೋತ್ಸ್ನ ರಾಮಕೃಷ್ಣ ನಿರೂಪಕಿಯಾಗಿ ಬಂದು ಸ್ಥಳೀಯ ಪ್ರತಿಭೆಗಳ ಪ್ರದರ್ಶನ "ಸಿಂಗಾರ ಸ್ಟಾರ್"ಗಳನ್ನು ಮಿನುಗಲು ಅಣಿಮಾಡಿಕೊಟ್ಟರು. ಸಭಾಂಗಣದಲ್ಲಿ ಮುಂದೆ ತೀರ್ಪುಗಾರರಾದ ಗಿರೀಶ್ ಜಮದಗ್ನಿ, ಸುಮನ ಹೆಬ್ಬಾರ್ ಹಾಗೂ ರಮ್ಯಾ ಎಸ್.ವೈ ಅವರು ಕುತೂಹಲದಿಂದ ಕಂಪ್ಯೂಟರ್‌ಗಳನ್ನು ತೆಗೆದಿಟ್ಟುಕೊಂಡು ಸ್ಥಳೀಯ  ಪ್ರತಿಭೆಗಳ ಗುಣಮಟ್ಟವನ್ನು ಪರಾಮರ್ಶಿಸಲು ಸಜ್ಜಾಗಿ ಕುಳಿತ್ತಿದ್ದರು.

 

singapore-kannada-sangha-deepotsava-2019 celebration

ಮೇಲೆ ಕುಳಿತು ಎಲ್ಲವನ್ನೂ ಗಮನಿಸುತ್ತಿದ್ದ ಕನ್ನಡಮ್ಮನ ಕುತೂಹಲ ಕಣ್ಣುಗಳ ಹೊಳಪು ವೇದಿಕೆಯ ರಂಗನ್ನು ಇಮ್ಮಡಿಗೊಳಿಸಿತ್ತು. ಒಬ್ಬರಾದ ಮೇಲೆ ಒಬ್ಬರು ಬಂದು ಹಾಡು, ನೃತ್ಯ, ಹಾಸ್ಯ, ಏಕಪಾತ್ರಾಭಿನಯಗಳನ್ನು ಪ್ರದರ್ಶಿಸುತ್ತಿದ್ದರೆ ಇಡೀ ಸಭಾಂಗಣ ಬೆರಗಾಗಿ ನೋಡುತಿತ್ತು. ಇಂತಹ ಅಪ್ರತಿಮ ಪ್ರತಿಭೆಗಳ ಅನಾವರಣದ ಸೌಂದರ್ಯವನ್ನು, ಚಪ್ಪಾಳೆ, ಸಿಳ್ಳುಗಳಲ್ಲಿ ಪ್ರೋತ್ಸಾಹ ಹಾಗು ಮೆಚ್ಚುಗೆಯನ್ನು ಸೂಚಿಸುತ್ತಿದ್ದರೆ, ಆನಂದದಿಂದ ಕಿವಿಗಳನ್ನು ಮುಚ್ಚಿಕೊಂಡಿದ್ದ ಕನ್ನಡಮ್ಮನ ಕೈ ಬೆರಳನ್ನು ಈಗ ಮೂಗಿನ ಮೇಲಿಟ್ಟುಕೊಂಡು ತೀರ್ಪುಗಾರರನ್ನೇ ನೋಡುತ್ತಿದ್ದಳು, ಅದು ಹೇಗೆ ಇವರು ಇಂತಹ ಅತ್ಯುತ್ಕೃಷ್ಟ ಕಲೆಯ ಪ್ರತಿಭೆಗಳನ್ನು ಅಳೆಯುತ್ತಾರೋ ಎನ್ನುವ ಗೊಂದಲದಲ್ಲಿ. ಒಟ್ಟಿನಲ್ಲಿ ಸಂಘದ ಮೊದಲ ಪ್ರಯತ್ನದ ಪ್ರಯೋಗ "ಸಿಂಗಾರ ಸ್ಟಾರ್" ಅದ್ಭುತ ಯಶಸ್ಸನ್ನು ತಂದಿದ್ದಲ್ಲದೆ ಅದರ ಹಿಂದಿನ ಶ್ರಮಕ್ಕೆ ಸಾರ್ಥಕತೆಯನ್ನು ತಂದಿತ್ತು ಎನ್ನುವುದರಲ್ಲಿ ಸಂಶಯವಿಲ್ಲ.

ಸಿಂಗಾರ ಪುರಸ್ಕಾರ

ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಸಿಂಗಾರ ಪುರಸ್ಕಾರಗಳನ್ನು ನೀಡುವುದು ವಾಡಿಕೆ, ಶೈಕ್ಷಣಿಕ, ಕ್ರೀಡೆ ಹಾಗೂ ಪಠ್ಯೇತರ ಕ್ಷೇತ್ರಗಳಲ್ಲಿನ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಂಘಕ್ಕೆ ಹೆಮ್ಮೆಯ ವಿಷಯ. ಕಾರ್ಯಕ್ರಮದ ಮುಂದಿನ ಹಂತದ ನಿರೂಪಣೆಯನ್ನು ಮಾಲಾ ಶಿವಕುಮಾರ್ ಅವರು ಸುಸೂತ್ರ, ನಿರರ್ಗಳ, ಸುಲಲಿತವಾಗಿ ಅಚ್ಚ ಕನ್ನಡದಲ್ಲಿ ನಡೆಸಿಕೊಡುತ್ತಿದ್ದರೆ ಸಭಾಂಗಣದ ತುತ್ತ ತುದಿಯಲ್ಲಿದ್ದ ಕನ್ನಡಮ್ಮ ಸಂತಸದಿಂದ ಆಲಿಸುತ್ತಾ, ಮಕ್ಕಳ ಸಾಧನೆಯನ್ನು ಬೆರಗಾಗಿ ನೋಡುತ್ತಾ ಚಪ್ಪಾಳೆ ತಟ್ಟಿದಂತಿತ್ತು.

ಲಂಡನ್: ದಿವ್ಯಾ ರಂಗೇನಹಳ್ಳಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಲೀಡರ್‌ ಶಿಪ್ ಪ್ರಶಸ್ತಿ

ಸಾಧನಗೆ ಸಂದ ಗೌರವ

ಶೈಕ್ಷಣಿಕ ಕ್ಷೇತ್ರದ ವಿವಿಧ ಹಂತಗಳಲ್ಲಿನ ಸಾಧನೆಗೆ, ಪ್ರಣವ್ ತುಮ್ಮಿನಕಟ್ಟಿ, ಮನು ಮಗಳ್, ವಿಶಾಖ್ ರಾಮಕೃಷ್ಣ, ಧೃತಿ ಭಟ್ಟ, ಅದಿತಿ ಅಗರ್‌ವಾಲ್, ಶರಣ್ಯಾ ಜಮದಗ್ನಿ, ಪ್ರದೀಪ್ ರಘುನಾಥ್, ನೇಹಲ್ ಗೌಡರ್, ಪ್ರಮಥ್ ಕೃಷ್ಣ, ಕ್ರೀಡಾ ವಿಭಾಗದಲ್ಲಿ ಅನುಷ್ಕಾ ಕಿಗ್ಗ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿನ ಸಾಧನೆಗೆ ಶ್ರೀಲೇಖಾ ಚಂದ್ರಶೇಖರ, ಪಾಂಡುರಂಗ ಬಳಗನೂರು, ಅನುಷ್ಕಾ ಕಿಗ್ಗ ಮತ್ತು ತನ್ವಿ ಕಿಗ್ಗ ಅವರಿಗೆ ಪುರಸ್ಕರಿಸಲಾಯಿತು.

singapore-kannada-sangha-deepotsava-2019 celebration

ಕನ್ನಡ ಸಂಘ (ಸಿಂಗಪುರ)ದ ಅಧ್ಯಕ್ಷೆಯಾದ ರಶ್ಮಿ ಉದಯಕುಮಾರ್ ಹಾಗೂ ಮಾಜಿ ಅಧ್ಯಕ್ಷರಾದ ಪ್ರಭುದೇವ ಮತ್ತು ವಿಶಾಲಾಕ್ಷಿ ವೈದ್ಯ ಅವರು ಸಿಂಗಾರ ಪುರಸ್ಕಾರ ಹಾಗು ಎ.ನ್.ರಾವ್ ಪುರಸ್ಕಾರಗಳನ್ನೂ ನೀಡಿದರೆ, ಮತ್ತಿತರ ಪುರಸ್ಕಾರಗಳನ್ನುಆಯಾ ಪುರಸ್ಕಾರಗಳ ಪ್ರಾಯೋಜಿತರಾದ ಸಿ.ವಿ. ಜಗದೀಶ್, ಮೈತ್ರೇಯಿ ಜಗದೀಶ್, ಅನೂಪ್ ನಾಗರಾಜನ್, ಪ್ರಜ್ವಲ ಸತ್ಯಪ್ರಕಾಶ್, ನರೇಂದ್ರ ಮತ್ತು ಡಾ.ಎಂ.ಎಸ್. ಶ್ರೀಲಕ್ಷ್ಮೀ ಅವರ ಸಮ್ಮುಖದಲ್ಲಿ ನೀಡಿ ಪ್ರೋತ್ಸಾಹಿಸಲಾಯಿತು.

ಪ್ರಶಸ್ತಿ ವಿತರಣೆಗಳ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷೆ ರಶ್ಮಿ ಉದಯಕುಮಾರ್ ಅವರು ಹಬ್ಬದ ಕಳೆಯ ಅಂಗಣ, ಪ್ರೋತ್ಸಾಹದ ಪುರಸ್ಕಾರಗಳು, ಸಿಂಗನ್ನಡಿಗರೆಲ್ಲರೂ ನಾಡ ಹಬ್ಬಕ್ಕೆಂದು ಒಂದೆಡೆ ಸೇರಿದ್ದನ್ನು ಉಲ್ಲೇಖಿಸಿ ಪರಿಸರ ಕಾಳಜಿಯಲ್ಲಿ ಪಟಾಕಿಯ ಸದ್ದು ಇಲ್ಲದಿದ್ದರೂ ಇಂದಿನ ಕಾರ್ಯಕ್ರಮ ಪಟಾಕಿಗಳಿಗಿಂತಲೂ ಹೆಚ್ಚು ಬೆಳಕಿನ ಸದ್ದನ್ನು ತರುವುದರಲ್ಲಿ ಸಂದೇಹವಿಲ್ಲವೆಂದರು. ಸಂಘದ ಧ್ಯೇಯ ಹಾಗೂ ಉದ್ದೇಶದ ಬಗ್ಗೆ ಹೇಳುತ್ತಾ ಪ್ರತಿಭೆಗಳಿಗೆ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ "ಸಿಂಗಾರ ಸ್ಟಾರ್" ಒಂದು ಹೊಸ ಪ್ರಯೋಗವೆಂದು ತಿಳಿಸಿದರು. ನೆರೆದ ಪ್ರೇಕ್ಷರರಲ್ಲಿ ಹೀಗೆಯೇ ದೊಡ್ಡ ಮಟ್ಟದಲ್ಲಿ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಭಾಗವಹಿಸಿ ಸಂಘದ ಬಲ ವರ್ಧನೆ ಮಾಡಬೇಕೆಂದು ಕೋರಿ ಕುವೆಂಪು ಅವರ "ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು" ಎಂಬ ವಾಕ್ಯವನ್ನು ಪುನರುಚ್ಚರಿಸಿದರು.

ಕನ್ನಡಕ್ಕೊಬ್ಬನೇ ಕೈಲಾಸಂ

"ಕನ್ನಡಕೊಬ್ಬನೇ ಕೈಲಾಸಂ" ಎನ್ನುವುದು ನಾಣ್ಣುಡಿಯಲ್ಲ, ನಿಜಾಂಶ! "ಕನ್ನಡ ಕವಿ ತಿಲಕಂ ಗುಂಡಂ” “ಕವಿ ಮಂಡಲಾಗ್ರೇಸರ ಚಂಡ, ಪ್ರಚಂಡ ಗುಂಡೂ” ‘ಕನ್ನಡ ಪ್ರಹಸನ ಪ್ರಪಿತಾಮಹ ಕೈಲಾಸಂ” ಎಂದು ಸ್ವಯಂ ಘೋಷಿಸಿಕೊಂಡ ಕೈಲಾಸಂ ನಾಟಕಗಳ ಡೈಲಾಗುಗಳನ್ನು ಪ್ರಸ್ತುತ ಪಡಿಸುತ್ತಾ "ಕೈಲಾಸಂಸಾರ"ವನ್ನು ಸುಂದರ್ ಹಾಗೂ ವೀಣಾ ಸುಂದರ್ ಅವರು ತಮ್ಮ ಅದ್ಭುತವಾದ ರಂಗ ಪ್ರಯೋಗದ ಸಾಮಾರ್ಥ್ಯದಿಂದ ಇಡೀ ಸಭಾಂಗಣವನ್ನು ಹಿಡಿದಿಟ್ಟುಕೊಂಡು  ಟಿ.ಪಿ.ಕೈಲಾಸಂನ ದಂತಕಥೆಯಂತಹ ಜೀವನವನ್ನು ಅವರ ವಿವಿಧ ನಾಟಕಗಳ ಪ್ರಸಂಗಗಳನ್ನು ನವರಸಗಳ ಅಭಿನಯದ ಮೂಲಕ ಪ್ರೇಕ್ಷಕರನ್ನು ಒಂದು ಗಂಟೆಗೂ ಮಿಗಿಲಾಗಿ ವಿಭಿನ್ನಲೋಕಕ್ಕೆ ಕರೆದೊಯ್ದು,  ನಕ್ಕು-ನಗಿಸಿ  ಜೀವನದ ಹಲವು ಸೂಕ್ಷ್ಮಗಳನ್ನು ಕೈಲಾಸಂ ನಾಟಕಗಳ ಅದ್ಭುತವಾದ ಅಭಿನಯದ ಮೂಲಕ ತೋರಿಸಿಕೊಟ್ಟಿದ್ದು ಕನ್ನಡ ರಾಜ್ಯೋತ್ಸವದ ರಥಕ್ಕೆ ಕಲಶವಿಟ್ಟಂತಿತ್ತು.ಕನ್ನಡಮ್ಮ ನಿಜಕ್ಕೂ ಸಂತಸದಲ್ಲಿ ಮುಳುಗಿ ಭಾವುಕಳಾಗಿ ಸಭಿಕರ ಕರಾಡತನವನ್ನು ನೋಡುತ್ತಾ ಕುಳಿತಂತೆ ಭಾಸವಾಗುತಿತ್ತು.

singapore-kannada-sangha-deepotsava-2019 celebration

ಹಿರಿಯ ಸಿಂಗನ್ನಡಿಗರ ಅತ್ತುತ್ಯಮ ಸಾಧನೆಯನ್ನು ಗುರುತಿಸಿ ನೀಡುವ "ಸಿಂಗಾರ ಸಾಧನಾ ಪುರಸ್ಕಾರ"ವನ್ನು ಈ ವರ್ಷ ಹೆಮ್ಮೆಯ ಸಿಂಗನ್ನಡಿಗರಾದ ಡಾ. ದಿನೇಶ್ ಕೋಕಲ್ ಅವರಿಗೆ ಕನ್ನಡ ಸಂಘ (ಸಿಂಗಪುರ)ದ ಅಧ್ಯಕ್ಷೆ ರಶ್ಮಿ ಉದಯಕುಮಾರ್ ಅವರು  ನೀಡಿ ಗೌರವಿಸಿದರು. ಇಲ್ಲಿನ ಪ್ರತಿಷ್ಠಿತ ವಿಶ್ವ ವಿದ್ಯಾಲಯ ಎನ್.ಯು.ಎಸ್ ನಲ್ಲಿ ಪಿಹೆಚ್‌ಡಿ ಮಾಡಿ, ಆರೋಗ್ಯ ಶಾಸ್ತ್ರದಲ್ಲಿನ ಪರಿಣಿತಿ ಹಾಗೂ ಆರೋಗ್ಯ ಮತ್ತು  ವೈದ್ಯಕೀಯ ಕ್ಷೇತ್ರಗಳಲ್ಲಿ ಅನೇಕ ಪ್ರಮುಖ ಹುದ್ದೆಗಳಲ್ಲಿ ಸಾಧನೆಯನ್ನು ಮಾಡಿದಂತಹ ಡಾ.ದಿನೇಶ್ ಕೋಕಲ್ ಅವರು ತಮ್ಮ ಎರಡು ಮಾತುಗಳಲ್ಲಿ ಸಾಧನೆಗಳ ಮಹಾಪೂರಗಳನ್ನು ಬದಿಗಿಟ್ಟು ತಮ್ಮ ಕನ್ನಡ ತನದ ಹೃದಯವಂತಿಕೆಯನ್ನು ಮೆರೆದೆದ್ದು ನಿಜಕ್ಕೂ ಶ್ಲಾಘನೀಯ.

ಇದೇ ಸಂದರ್ಭದಲ್ಲಿ ಸಂಘವು ಏರ್ಪಡಿಸಿದ್ದ ಸಾಹಿತ್ಯ ಸ್ಪರ್ಧೆಗಳ ವಿಜೇತರಿಗೆ ತೀರ್ಪುಗಾರರಾಗಿದ್ದ ವೆಂಕಟ್ ಹಾಗೂ ಎಮ್.ಜಿ.ರಮೇಶ್ ಅವರೊಡನೆ  ಸಂಘದ ಅಧ್ಯಕ್ಷೆ ರಶ್ಮಿ ಹಾಗೂ ಕಾರ್ಯಕರ್ತೆ ಭಾಗ್ಯಾ ಅವರ ಸಮ್ಮುಖದಲ್ಲಿ ನಯನ ಭಟ್, ನಾಗೇಶ್ ಮೈಸೂರು, ಪ್ರಭು ಕುಡ್ಲಾಪುರ (ಕವನ ವಿಭಾಗ), ನಯನ ಭಟ್, ಸುಬ್ರಮಣ್ಯ ಭಟ್ (ಕತೆ ವಿಭಾಗ),  ಶ್ರೇಯಸ್.ಕೆ, ಸವ್ಯ ಶಿವಕುಮಾರ್, ಅದ್ವಿತೀಯ ಕೃಷ್ಣ, ಬೃಂದಾ ವಿಜಾಪುರ, ತನುಷಾ ಹರೀಶ್ ( ಮಕ್ಕಳ ಪ್ರಬಂಧ ಸ್ಪರ್ಧೆ) ಅವರಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಇದೇ ಸಂದರ್ಭದಲ್ಲಿ ಸಿಂಗಾರ ಸ್ಟಾರ್ ಸ್ಪರ್ಧೆಗಳಲ್ಲಿ ವಿಜೇತರಾದ ಅನಘಾ ಮುತಾಲಿಕ್ ದೇಸಾಯಿ, ವೇದ ಭಟ್, ವಿಶಾಖ್ ರಾಮಕೃಷ್ಣ, ಅರುಣಾ ಗಿರೀಶ್ ಬಳಗನೂರು ಹಾಗೂ ಹರಿ ಜಗನ್ನಾಥ್  ಅವರಿಗೆ ಎಲ್ಲ ತೀರ್ಪುಗಾರರ ಸಮ್ಮುಖದಲ್ಲಿ ನೆನಪಿನ ಕಾಣಿಕೆಗಳನ್ನು ನೀಡಲಾಯಿತು.

ಡಾ. ಅನೀಶ್ ವಯಲಿನ್
ಕಾರ್ಯಕ್ರಮದ ಕೊನೆಯ ಹಂತದ ಅದ್ಧೂರಿಯ ಕಾರ್ಯಕ್ರಮ ನಡೆದಾಡುವ ವಯಲಿನಿಸ್ಟ್ ಎಂದೇ ಪ್ರಖ್ಯಾತರಾದ ಡಾ.ಅನೀಶ್ ವಿದ್ಯಾಶಂಕರ್ ಅವರ "ಭಾವಪರವಶ"ವನ್ನು ವೀಕ್ಷಿಸಲು, ಲಾಲಿಸಲು ಕಾಯುತ್ತಿದ್ದ ಕ್ಷಣ ಕೊನೆಗೂ ಬಂದೇ ಬಿಟ್ಟಿತು. ವೇದಿಕೆಯು ತನ್ನ ಮೈಮೇಲೆ ರಂಗು-ರಂಗಿನ ಮೋಡಗಳನ್ನು ಆವರಿಸಿಕೊಂಡು ಸಜ್ಜಾಗಿಬಿಟ್ಟಿತು, ತೇರಿನ ಬಿರಿಸು, ಪ್ರೇಕ್ಷಕರ ಪ್ರಶಂಸೆಗಳ ನಡುವೆ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದರು ಡಾ.ಅನೀಶ್,  ತಮ್ಮ ವಯಲಿನ್ ನಾದದ ಗುಂಗಲ್ಲಿ, ಮೋಡಗಳ ಮೇಲೆ ತೇಲುತ್ತಾ ಸಭಾಂಗಣವನ್ನೇ ತಮ್ಮ ಮಾಂತ್ರಿಕ ವಯಲಿನ್ ಸಂಗೀತದ ಲೋಕಕ್ಕೆ ಸ್ವಾಗತಿಸಿ, ಶಾಸ್ತ್ರೀಯ ಹಾಗೂ ಪಾಶ್ಚತ್ಯ ಪ್ರಸಿದ್ದ ಹಾಡುಗಳ ಶೃತಿಗಳನ್ನು ಅಮೋಘವಾದ ಮಿಶ್ರಣದ ತುಣುಕುಗಳನ್ನು ನುಡಿಸಿ, ಪ್ರೇಕ್ಷಕರನ್ನು ರಂಜಿಸುತ್ತಿದ್ದರು.

singapore-kannada-sangha-deepotsava-2019 celebration

ರಥದಲ್ಲಿ ಕುಳಿತಿದ್ದ ಕನ್ನಡಮ್ಮನಿಗೆ ಕೆಲವು ಆಂಗ್ಲ ಪದಗಳ ಆರ್ಭಟ, ಕೂಗಾಟ ಅರ್ಥವಾಗಲಿಲ್ಲ ಎನಿಸುತ್ತದೆ, ಆದರೂ ಕನ್ನಡ ಕಂದಮ್ಮಗಳ ಆನಂದಮಯ ಕ್ಷಣಗಳನ್ನು ನೋಡಿ ನಲಿಯುತ್ತ ಮೂಕ ಪ್ರೇಕ್ಷಕಳಾಗಿ ನೋಡುತ್ತಿದ್ದಳು. ಎಲ್ಲರೂ "ತಾಳಕ್ಕೆ ನಾವೆಲ್ಲಾ ಹಾಡುತಿರೆ.. ಮೇಳಕ್ಕೆ ನೀವೆಲ್ಲಾ ತೂಗುತಿರೇ"  ಎನ್ನುವಂತೆ ತಮ್ಮ ಫೋನುಗಳ ಕ್ಯಾಮರ ಕಣ್ಣುಗಳನ್ನು ತೆರೆದು ಎಲ್ಲವನ್ನೂ ಅದರೊಳಗೆ ಸೆಳೆದಿಟ್ಟುಕೊಳ್ಳುತ್ತಿದ್ದರು ಮತ್ತೆ ಮತ್ತೆ ನೋಡಿ ಸವಿಯಲು.

ಇಂತಹ ಅದ್ಭುತವಾದ ರಂಗು-ರಂಗಿನ ಸಂಜೆಯ ಕಾರ್ಯಕ್ರಮ, ಆಕರ್ಷಕವಾದಂತಹ ಲಕ್ಕಿ ಡ್ರಾ ಬಹುಮಾನಗಳನ್ನು ನೀಡಿ,  ನಡೆಸಲು  ಅನುವು ಮಾಡಿಕೊಟ್ಟಂತಹ ಪ್ರಾಯೋಜಕರಾದ ಕಾರ್ಲೆ ಟೌನ್ ಸೆಂಟರ್, ಐಸಿಐಸಿಐ ಬ್ಯಾಂಕ್, ಸಿಂಗ್‌ಎಕ್ಸ್ ಅವರ ಬೆಂಬಲ, ಪ್ರೋತ್ಸಾಹ ನಿಜಕ್ಕೂ ಪ್ರಶಂಸನೀಯ. ಕಾರ್ಯಕ್ರಮದ ಕೊನೆಯಲ್ಲಿ ಎಂದಿನಂತೆ ಊಟದ ಸಮಯದಲ್ಲಿನ ಮುಂದುವರಿದ ಮಾತು, ಹರಟೆ ನಿರಂತರ ಸಾಗಿತ್ತು.

ಸಂಘದ ಎಲ್ಲಾ ಕಾರ್ಯಕರ್ತರ ಹಾಗು ಸ್ವಯಂ-ಸೇವಕರ  ಶ್ರಮ, ಶ್ರದ್ಧೆ, ಯಾವುದೇ ತಾಂತ್ರಿಕ ದೋಷಗಳಿಲ್ಲದೆ ನಿರಂತರವಾಗಿ ೫ ಗಂಟೆಗಳ ಕಾಲ ರಂಜಿಸಿದ ಕಾರ್ಯಕ್ರಮದ ಯಶಸ್ಸು ಪರದೆಯ ಹಿಂದಿನ ಪರೋಕ್ಷ ನಿಸ್ವಾರ್ಥ ಮನಸ್ಸುಗಳ ಅಭಿಲಾಷೆಯ ಫಲ. ಒಟ್ಟಿನಲ್ಲಿ  "ದೀಪೋತ್ಸವ - 2019"  ಕನ್ನಡ ರಥದ ಮಕುಟದೊಳು ಒಂದು ಸುಂದರ ಮಣಿಯಾಗಿ ಕುಳಿತು, ದೀಪದಂತೆ ಮೆರೆದಿದ್ದಂತೂ ಸ್ಪಷ್ಟವಾಗಿ ಕಾಣುತಿತ್ತು.

ವರದಿ : ವೆಂಕಟ್
ಫೋಟೋ : ಬೈಟು ಸ್ಟುಡಿಯೊ

 

 

Follow Us:
Download App:
  • android
  • ios