ಬೆಂಗಳೂರು[ಫೆ.24]: ‘ಏರೋ ಇಂಡಿಯಾ ಶೋ’ದ ವಾಹನ ಪಾರ್ಕಿಂಗ್‌ ಸ್ಥಳದಲ್ಲಿ ಕಾರುಗಳ ಭಸ್ಮಕ್ಕೆ ನೀಲಿ ಸ್ಯಾಂಟ್ರೋ ಕಾರಿ​ನಲ್ಲಿ ಆಗ​ಮಿ​ಸಿದ್ದ ಇಬ್ಬರು ಯುವ​ಕರು ಕಾರ​ಣ​ರೇ?

ಈ ಅಗ್ನಿ ಅವ​ಘಡವನ್ನು ಪ್ರತ್ಯಕ್ಷ ವೀಕ್ಷಿ​ಸಿದ ಕಾವ್ಯಾ (ಹೆ​ಸರು ಬದ​ಲಿ​ಸ​ಲಾ​ಗಿ​ದೆ) ಅವರ ಪ್ರಕಾರ, ಬೆಂಕಿ ಅನಾ​ಹು​ತಕ್ಕೆ ಈ ಯುವ​ಕರು ಸಿಗ​ರೆಟ್‌ ಸೇದಿ ಅದರ ತುಂಡನ್ನು ನಿರ್ಲ​ಕ್ಷ್ಯ​ದಿಂದ ಒಣ​ಗಿದ ಹುಲ್ಲಿನ ಮೇಲೆ ಎಸೆ​ದಿದ್ದೇ ಕಾರಣ. ಇದನ್ನು ಕಾವ್ಯಾ ಅವರು ಪ್ರತ್ಯಕ್ಷ ಕಂಡಿ​ದ್ದಾ​ರೆ!

ಜಿ-5 ವಾಹನ ಪಾರ್ಕಿಂಗ್‌ ಸ್ಥಳ​ದಲ್ಲಿ ಬೆಂಕಿ ಮೊಟ್ಟಮೊದಲ ಬಾರಿಗೆ ಹೊತ್ತಿ​ಕೊಂಡಿ​ದ್ದನ್ನು ಕಣ್ಣಾರೆ ಕಂಡಿ​ದ್ದಾಗಿ ಕಾವ್ಯಾ ಹೇಳು​ತ್ತಾರೆ ಮತ್ತು ಇದಕ್ಕೆ ನೀಲಿ ಸ್ಯಾಂಟ್ರೋ ಹುಡು​ಗರೇ ಕಾರಣ ಎಂದು ಆರೋ​ಪಿ​ಸು​ತ್ತಾ​ರೆ. ಆದರೆ, ಕಾರೊಂದಲ್ಲಿ ಉಂಟಾದ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ ಈ ಅವ​ಘ​ಡಕ್ಕೆ ಕಾರಣ ಎನ್ನು​ತ್ತಾರೆ ಪೊಲೀ​ಸರು.

ತುಂಡು ಸಿಗರೇಟ್‌ಗೆ ಕಾರು ಭಸ್ಮ:

‘ನಾನು, ತಂದೆ, ಗಂಡ ಹಾಗೂ ಮಗನೊಂದಿಗೆ ಏರ್‌ ಶೋ ನೋಡುವುದಕ್ಕೆಂದು ಆಗಮಿಸಿದ್ದೆ. ಬೆಳಗ್ಗೆ 11.40 ರ ಸುಮಾರಿಗೆ ಕಾರು ಪಾರ್ಕಿಂಗ್‌ ಮಾಡುವುದಕ್ಕೆ ಬಂದೆ. ಇನ್ನೇನು ಕಾರು ಪಾರ್ಕಿಂಗ್‌ ಮಾಡಬೇಕಾಗಿತ್ತು. ಅಷ್ಟರಲ್ಲಿ ಪಕ್ಕದಲ್ಲಿ ನಿಲ್ಲಿಸಿದ ಸ್ಯಾಂಟ್ರೋ ಕಾರಿನಲ್ಲಿದ್ದ ಸುಮಾರು 25 ವರ್ಷದ ಹುಡುಗ ಸಿಗರೇಟ್‌ ಸೇದಿದ ತುಂಡನ್ನು ನೆಲಕ್ಕೆ ಎಸೆದ. ಕೂಡಲೇ ನೆಲದ ಮೇಲಿದ್ದ ಒಣಗಿದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿತು. ಸ್ಯಾಂಟ್ರೋ ಕಾರಿಗೂ ಇನ್ನೇನು ಬೆಂಕಿ ಹೊತ್ತಿಕೊಳ್ಳುತ್ತಿತ್ತು. ಅಷ್ಟರಲ್ಲಿ ಕಾರು ಹತ್ತಿಕೊಂಡು ಅಲ್ಲಿಂದ ಆ ಯುವಕರು ಹೊರಟು ಬಿಟ್ಟರು. ಕಾರಿನಲ್ಲಿ ಒಟ್ಟು ಇಬ್ಬರು ಯುವಕರು ಇದ್ದರು. ಬೆಂಕಿಯಿಂದ ತಪ್ಪಿಸಿಕೊಳ್ಳುವ ಭಯದಲ್ಲಿ ಕಾರಿನ ಸಂಖ್ಯೆ ಬರೆದುಕೊಳ್ಳುವುದನ್ನು ಮರೆತು ಬಿಟ್ಟೆ’ ಎಂದು ಕಾವ್ಯಾ ಹೇಳು​ತ್ತಾ​ರೆ

ಕ್ರೀಮ್‌ ಕಲರ್‌ ಟೀ ಶರ್ಟ್‌:

ಸ್ಯಾಂಟ್ರೋ ಕಾರಿನಲ್ಲಿ ಆಗಮಿಸಿದ್ದ ಸುಮಾರು 22 ರಿಂದ 25 ವರ್ಷ ವಯಸ್ಸಿನ ಇಬ್ಬರು ಯುವಕರಲ್ಲಿ ಒಬ್ಬ ಕಾರಿನ ಹೊರ ಭಾಗದಲ್ಲಿ ನಿಂತು ಸಿಗರೆಟ್‌ ಸೇವನೆ ಮಾಡುತ್ತಿದ್ದ. ಅವನು ಕ್ರಿಮ್‌ ಬಣ್ಣದ ಟೀ ಶರ್ಟ್‌, ಗ್ರೇ ಬಣ್ಣದ ಪ್ಯಾಂಟ್‌ ಧರಿಸಿದ್ದ. ಕಾರು ಚಾಲಾಯಿಸುತ್ತಿದ್ದ ಇನ್ನೊಬ್ಬ ಯುವಕ ಕಪ್ಪು ಬಣ್ಣದ ಟೀ ಶರ್ಟ್‌ ಧರಿಸಿದ್ದ. ಸಿಗರೆಟ್‌ ಸೇದುತ್ತಿದ್ದ ಯುವಕ ತೆಳ್ಳಗಿದ್ದ. ಇನ್ನೊಬ್ಬ ಯುವಕ ಕಾರಿನ ಒಳಗೆ ಕುಳಿತುಕೊಂಡಿದ್ದ. ಹಾಗಾಗಿ, ಅವನ್ನು ಹೇಗಿದ್ದ ಎಂಬುದನ್ನು ಗಮನಿಸುವುದಕ್ಕೆ ಸಾಧ್ಯವಾಗಲಿಲ್ಲ ಎಂದು ವಿವರಿಸುತ್ತಾರೆ.

ಪೊಲೀಸರು ಬೆನ್ನತ್ತಿದರೂ ಸಿಗಲಿಲ್ಲ:

ಬೆಂಕಿ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಪರಾರಿ ಆಗುವುದಕ್ಕೆ ಮುಂದಾದ ಆ ಇಬ್ಬರು ಯುವಕರನ್ನು ಹಿಡಿಯಲು ಪಾರ್ಕಿಂಗ್‌ ಸ್ಥಳದಲ್ಲಿದ್ದ ಪೊಲೀಸರು ಬೆನ್ನತ್ತಿದರು. ಆದರೆ, ಪೊಲೀಸರ ಕೈಗೆ ಸಿಗಲಿಲ್ಲ. ಹೀಗಾಗಿ ಪೊಲೀಸರು ಬೆಂಕಿ ಆರಿಸುವುದಕ್ಕೆ ಮುಂದಾದರು. ತಕ್ಷಣ ಪಾರ್ಕಿಂಗ್‌ ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಸಿಬ್ಬಂದಿ, ಉಳಿದ ಪೊಲೀಸರು, ಸಾರ್ವಜನಿಕರು, ಕಾರು ಚಾಲಕರು ಬೆಂಕಿ ನಂದಿಸಲು ಯತ್ನಿಸಿದರು. ತದನಂತರ ಅಗ್ನಿ ಶಾಮಕ ವಾಹನ ಬಂತು. ಪಾರ್ಕಿಂಗ್‌ ಸ್ಥಳದಲ್ಲಿ ಅಳವಡಿಕೆ ಮಾಡಲಾಗಿರುವ ಸಿಸಿಟಿವಿ ದೃಶ್ಯಗಳನ್ನು ಗಮನಿಸಿದರೆ ಘಟನೆಗೆ ಕಾರಣವಾದ ಯುವಕರು ಯಾರು ಎಂದು ಪತ್ತೆ ಮಾಡ​ಬ​ಹುದು ಎಂದು ಅವರು ಹೇಳು​ತ್ತಾರೆ. ಇದೇ ಮಾಹಿ​ತಿ​ಯನ್ನು ಪೊಲೀ​ಸ​ರಿಗೂ ನೀಡಿ​ರು​ವು​ದಾಗಿ ಅವರು ತಿಳಿಸುತ್ತಾರೆ.

ದಟ್ಟವಾಗಿ ಒಣಗಿದ ಹುಲ್ಲು ಹರಡಿಕೊಂಡಿದ್ದರಿಂದ ಬೆಂಕಿ ಜೋರಾಗಿ ಉರಿಯುವುದಕ್ಕೆ ಕಾರಣವಾಯಿತು. ತುಂಬಾ ಬಿಸಿಲು ಇದ್ದ ಕಾರಣ ಕಾರಿನಲ್ಲಿ ಯಾರೂ ಕುಳಿತು ಕೊಂಡಿರಲಿಲ್ಲ. ಹಾಗಾಗಿ, ಯಾವುದೇ ಜೀವ ಹಾನಿ ಆಗಲಿಲ್ಲ.

-ವಿಶ್ವನಾಥ ಮಲೇಬೆನ್ನೂರು