ಡೆಹ್ರಾಡೂನ್‌  (ಫೆ. 20): ಪುಲ್ವಾಮಾ ಘಟನೆಯ ರೂವಾರಿಗಳನ್ನು ಸದೆಬಡಿಯುವ ಸೇನಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಮೇಜರ್‌ ವಿಭೂತಿ ಶಂಕರ್‌ ಧೌಂಡಿಯಾಲ್‌ ಅವರ ಅಂತ್ಯಕ್ರಿಯೆ ದುಃಖತಪ್ತ ವಾತಾವರಣದಲ್ಲಿ ಮಂಗಳವಾರ ಹರಿದ್ವಾರದ ಗಂಗಾನದಿ ತಟದಲ್ಲಿ ನೆರವೇರಿತು.

8 ತಿಂಗಳ ಹಿಂದಷ್ಟೇ ಧೌಂಡಿಯಾಲ್‌ ವಿವಾಹವಾಗಿದ್ದರು. ಈ ವೇಳೆ, ಪತ್ನಿ ನಿಖಿತಾ ಅವರು ಧೌಂಡಿಯಾಲ್‌ ಅವರಿಗೆ ಅಂತಿಮ ನಮನ ಸಲ್ಲಿಸಿ, ‘ಐ ಲವ್‌ ಯೂ’ ಎಂದು ಹೇಳಿ ಮುತ್ತಿಕ್ಕಿದರು. ಇದು ಜನರ ಕಣ್ಣಾಲಿಗಳಲ್ಲಿ ನೀರಾಡುವಂತೆ ಮಾಡಿತು. ಇನ್ನು ಅವರ ತಾಯಿ ಸರೋಜಾ ಅವರ ಆಕ್ರಂದನ ಹೃದಯ ಕಿತ್ತು ಬರುವಂತಿತ್ತು.

ಈ ನಡುವೆ ಗಣ್ಯರು ಸಾವಿರಾರು ಜನರು ಮೇಜರ್ ಧೌಂಡಿಯಾಲ್‌ ನಿವಾಸಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆದ ಸಂದರ್ಭದಲ್ಲಿ ಜನರು ಶಹೀದ್‌ ಧೌಂಡಿಯಾಲ್‌ ಅಮರ ರಹೇ, ವಂದೇ ಮಾತರಂ ಎಂಬ ಘೋಷಣೆಯನ್ನು ಮುಗಿಲು ಮುಟ್ಟುವಂತೆ ಕೂಗಿದರು.

ಇದೇ ವೇಳೆ ವೀರಮರಣ ಅಪ್ಪಿದ ಇತರ ನಾಲ್ವರು ಯೋಧರ ಅಂತ್ಯಕ್ರಿಯೆ ಕೂಡ ಅವರವರ ಊರುಗಳಲ್ಲಿ ನೆರವೇರಿತು.