ಲಕ್ನೋ(ಫೆ.23): ಪುಲ್ವಾಮಾ ದಾಳಿಗೆ ಪ್ರತ್ಯುತ್ತರ ಏನು ಎಂದು ಕೇಳಿದ ಪ್ರಶ್ನೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತುಂಬ ಭಾವನಾತ್ಮಕವಾಗಿ ಉತ್ತರ ನೀಡಿದ್ದಾರೆ.

ಯುವಾ ಕೆ ಮನ್ ಕಿ ಬಾತ್ ಕಾರ್ಯಕ್ರಮದ ಅಂಗವಾಗಿ ಲಕ್ನೋದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಯೋಗಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಯೋತ್ಪಾದನೆಯ ನಿರ್ಮೂಲನೆ ಶೀಘ್ರದಲ್ಲೇ ಆಗಲಿದೆ ಎಂದು ಭರವಸೆ ನೀಡಿದರು.

ಪುಲ್ವಾಮಾ ದಾಳಿಯ ಬಳಿಕ ಸರ್ಕಾರ ಕೈಗೊಂಡ ಕ್ರಮಗಳೇನು ಎಂದು ವಿದ್ಯಾರ್ಥಿಯೋರ್ವ ಯೋಗಿ ಅವರನ್ನು ಪ್ರಶ್ನಿಸಿದ. ಇದಕ್ಕೆ ಉತ್ತರ ನೀಡುವಾಗ ತುಂಬ ಭಾವನಾತ್ಮಕವಾದ ಸಿಎಂ ಯೋಗಿ, ಯೋಧರನ್ನು ನೆನೆದು ಕಣ್ಣೀರು ಸುರಿಸಿದರು.

ಪುಲ್ವಾಮಾ ಮಾಸ್ಟರ್ ಮೈಂಡ್‌ನನ್ನು ಈಗಾಗಲೇ ಹೊಸಕಿ ಹಾಕಲಾಗಿದ್ದು, ಉತ್ತರ ಪ್ರದೇಶದಲ್ಲೂ ಕಾರ್ಯಾಚರಣೆ ನಡೆಸಲಾಗಿದೆ ಎಂದು ಯೋಗಿ ಹೇಳಿದರು.

ದೀಪ ಉರಿಯುವಾಗ ಜೋರಾಗಿ ಉರಿಯುತ್ತದೆ. ಅದೇ ರೀತಿ ಭಯೋತ್ಪಾದನೆ ಕೂಡ ಶೀಘ್ರದಲ್ಲೇ ಅಂತ್ಯ ಕಾಣಲಿದ್ದು, ಪ್ರಧಾನಿ ಮೋದಿ ನೇತೃತ್ವದಲ್ಲಿ ಭಯೋತ್ಪಾದನೆಯ ಹುಟ್ಟಡಗಿಸಲಾಗುವುದು ಎಂದು ಯೋಗಿ ಭವಿಷ್ಯ ನುಡಿದರು.