ಮೇರಠ್‌[ಮೇ.14]: ಗಂಡನನ್ನು ಕಳೆದುಕೊಂಡ 20 ವರ್ಷದ ಮಹಿಳೆಯನ್ನು ಆಕೆಯ ತಂದೆಯೇ 10000 ರು.ಗೆ ಮಾರಾಟ ಮಾಡಿದ, ಹೀಗೆ ಮಾರಲ್ಪಟ್ಟವಳ ಮೇಲೆ ಹಲವರು ಅತ್ಯಾಚಾರ ಮಾಡಿದ ಅಮಾನವೀಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಇಷ್ಟುಸಾಲದೆಂಬಂತೆ ಘಟನೆ ಕುರಿತು ದೂರು ನೀಡಲು ಹೋದರೆ ಪೊಲೀಸರೂ ಆಕೆಯನ್ನು ಹಿಂದಕ್ಕೆ ಕಳುಹಿಸಿದ್ದಾರೆ. ಇದರಿಂದ ನೊಂದ ಆಕೆಯ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.

ಪತಿ ಸಾವನ್ನಪ್ಪಿದ ಬಳಿಕ ಸಂತ್ರಸ್ತೆಯನ್ನು ಆಕೆಯ ತಂದೆ ಮನೆಗೆ ಕರೆತಂದಿದ್ದರು. ಆದರೆ, ಈ ವೇಳೆಗಾಗಲೇ ತಂದೆ ಹಲವರ ಬಳಿ ಕೈತುಂಬಾ ಸಾಲ ಮಾಡಿದ್ದ. ಈ ಹಿನ್ನೆಲೆಯಲ್ಲಿ ಆಕೆಯನ್ನು ಸ್ವತಃ ತಂದೆಯೇ 10000 ರು.ಗೆ ವ್ಯಕ್ತಿಯೊಬ್ಬರಿಗೆ ಮನೆ ಕೆಲಸ ಮಾಡಲೆಂದು ಮಾರಿದ್ದ. ಹೀಗೆ ಆಕೆಯನ್ನು ಖರೀದಿ ಮಾಡಿದ ವ್ಯಕ್ತಿ ಕೂಡಾ ಹಲವರ ಬಳಿ ಸಾಲ ಮಾಡಿಕೊಂಡಿದ್ದ. ಹೀಗಾಗಿ ಆತ ಮಹಿಳೆಯನ್ನು ಸಾಲ ಪಡೆದವರ ಮನೆಗೆ ಕೆಲಸಕ್ಕೆ ಕಳುಹಿಸಿದ್ದ. ಅಲ್ಲಿ ಮಹಿಳೆಯ ಮೇಲೆ ಹಲವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಇದರಿಂದ ನೊಂದ ಆಕೆ ದೂರು ನೀಡಲು ಹೋದರೂ, ದೂರು ದಾಖಲಿಸಿಕೊಳ್ಳಲು ಸ್ಥಳೀಯ ಪೊಲೀಸರು ನಿರಾಕರಿಸಿದ್ದರು. ಇದರಿಂದ ಬೇಸತ್ತ ಸಂತ್ರಸ್ತೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಳ್‌ ಅವರು, ‘ಸಂತ್ರಸ್ತೆಗೆ ಪರಿಹಾರ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸುವ ಮೂಲಕ ನ್ಯಾಯ ದೊರಕಿಸಿಕೊಡುವಂತೆ,’ ಪತ್ರ ಬರೆದಿದ್ದಾರೆ. ಕೊನೆಗೂ ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಉತ್ತರ ಪ್ರದೇಶದ ಹಪೂರ್‌ ಠಾಣಾ ಪೊಲೀಸರು 14 ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.