ಬೆಂಗಳೂರು :  ಮಹದೇವಪುರ ಸಮೀಪದ ಉದಯನಗರದಲ್ಲಿ ಮಹಿಳಾ ವಕೀಲರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳೀಯ ಬಿಬಿಎಂಪಿ ಸದಸ್ಯರ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ.

ವಿವೇಕಾನಂದ ಸ್ಟ್ರೀಟ್‌ ನಿವಾಸಿ ಧರಣಿ (27) ಮೃತರು. ಮನೆಯಲ್ಲಿ ರಾತ್ರಿ 11.30 ಸುಮಾರಿಗೆ ಧರಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಲ ಹೊತ್ತಿನ ಬಳಿಕ ಕೊಠಡಿಗೆ ಮೃತರ ತಾಯಿ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆ ಸಂಬಂಧ ಎ.ನಾರಾಯಣಪುರ ವಾರ್ಡ್‌ನ ಬಿಬಿಎಂಪಿ ಸದಸ್ಯ ಸುರೇಶ್‌ ಸೇರಿದಂತೆ ಏಳು ಮಂದಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ (304) ಆರೋಪದಡಿ ಮಹದೇವಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ತನಿಖೆಯನ್ನು ವೈಟ್‌ಫೀಲ್ಡ್‌ ಉಪ ವಿಭಾಗದ ಎಸಿಪಿ ಅವರಿಗೆ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಧರಣಿ ಅವರು, ಉದಯನಗರದಲ್ಲಿ ತನ್ನ ತಾಯಿ ದೇವಿ ಜತೆ ನೆಲೆಸಿದ್ದರು. ಹಲವು ದಿನಗಳಿಂದ ನೀರು, ಕಸ ಹಾಗೂ ದಾರಿ ಹೀಗೆ ಸಣ್ಣಪುಟ್ಟವಿಚಾರಗಳಿಗೆ ನೆರೆಹೊರೆಯವರ ಜತೆ ತಾಯಿ ಮಗಳು ಮನಸ್ತಾಪ ಮಾಡಿಕೊಂಡಿದ್ದರು. ಇದೇ ವಿವಾದ ಸಂಬಂಧ ಎರಡು ತಿಂಗಳ ಹಿಂದೆ ಮಹದೇವಪುರ ಠಾಣೆಗೆ ಅಕ್ಕಪಕ್ಕದ ನಿವಾಸಿಗಳ ವಿರುದ್ಧ ಧರಣಿ ದೂರು ಕೊಟ್ಟಿದ್ದರು. ಈ ಪ್ರಕರಣದ ತನಿಖೆ ಸರಿಯಾಗಿ ನಡೆಸುತ್ತಿಲ್ಲ ಎಂದು ಪೊಲೀಸರ ಮೇಲೂ ಧರಣಿ ಆರೋಪ ಹೊರೆಸಿದ್ದರು ಎಂದು ತಿಳಿದು ಬಂದಿದೆ.

ಉದಯನಗರದ ಸ್ಥಳೀಯರ ಗಲಾಟೆ ವಿಚಾರದಲ್ಲಿ ಮಧ್ಯಪ್ರವೇಶಿಸಿದ ಬಿಬಿಎಂಪಿ ಸದಸ್ಯ ಸುರೇಶ್‌ ಅವರು, ಧರಣಿ ಕುಟುಂಬ ಮತ್ತು ನೆರೆಹೊರೆಯವರ ನಡುವೆ ರಾಜಿ ಸಂಧಾನಕ್ಕೆ ಯತ್ನಿಸಿದ್ದರು. ಆದರೆ ವಿವಾದದಲ್ಲಿ ಏಕಪಕ್ಷೀಯವಾಗಿ ಕಾರ್ಪೋರೇಟರ್‌ ನಡೆದುಕೊಳ್ಳುತ್ತಿದ್ದಾರೆ ಎಂದು ಮೃತ ವಕೀಲರಾದ ಧರಣಿ ಕುಟುಂಬ ಅಸಮಾಧಾನ ವ್ಯಕ್ತಪಡಿಸಿತ್ತು. ಮತ್ತೆ ಇದೇ ವಿಷಯವಾಗಿ ಸೋಮವಾರ ನೆರೆಹೊರೆಯವರ ಜತೆ ಧರಣಿ ಜಗಳ ಮಾಡಿದ್ದರು. ಬಳಿಕ ರಾತ್ರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ನಿವೇಶನ ಗಲಾಟೆ :  ಉದಯನಗರದಲ್ಲಿ 10/20 ಅಳತೆಯ ನಿವೇಶನದಲ್ಲಿ ಮನೆ ಕಟ್ಟಿಕೊಂಡು ತಾಯಿ ಜತೆ ಧರಣಿ ನೆಲೆಸಿದ್ದರು. ಸ್ಥಳೀಯರು, ಓಡಾಡಲು ದಾರಿಗೆ ಐದು ಅಡಿ ಜಾಗ ಬಿಡುವಂತೆ ತಾಯಿ-ಮಗಳಿಗೆ ಒತ್ತಾಯಿಸಿದ್ದರು. ಇತ್ತ ಸಂಧಾನಕ್ಕೆ ಬಂದ ಕಾರ್ಪೋರೇಟರ್‌ ಸಹ ಜಾಗ ಕೊಡುವಂತೆ ಹೇಳಿದ್ದು ಧರಣಿ ಕುಟುಂಬಕ್ಕೆ ಮತ್ತಷ್ಟುಕೋಪ ತಂದಿತ್ತು ಎಂದು ತಿಳಿದು ಬಂದಿದೆ. ಶಿರಡಿಗೆ ತೆರಳಿರುವ ಕಾರ್ಪೋರೆಟರ್‌ ಸುರೇಶ್‌ ಅವರನ್ನು ಸಂಪರ್ಕಿಸಿ ಪ್ರಕರಣದ ಕುರಿತು ಮಾಹಿತಿ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.