ಭೋಪಾಲ್[ಅ.09]: 

ವಿವಾಹಿತ ಮಹಿಳೆಯೊಬ್ಬಳನ್ನು, ಆಕೆಯ ಮಾಜಿ ಗಂಡನ ಇಬ್ಬರು ಸಂಬಂಧಿಕರು ರೇಪ್ ಮಾಡಿದ್ದಲ್ಲದೇ, ಒತ್ತಾಯಪೂರ್ವಕವಾಗಿ ವಿಷವುಣಿಸುವ ಮೂಲಕ ಕ್ರೌರ್ಯ ಮೆರೆದಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿದೆ. 

ಪಶ್ಚಿಮ ಭೋಪಾಲ್ ನಿಂದ ಸುಮಾರು 293ಕಿ. ಮೀ ದೂರದಲ್ಲಿರುವ ರತ್ಲಾಮ್ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಈ ಘಟನೆ ಸಂಭವಿಸಿದೆ. ಈ ಕುರಿತಾಗಿ ಮಾಹಿತಿ ನೀಡಿರುವ ಪೊಲೀಸರು 'ಮಂಗಳವಾರ ಬೆಳಗ್ಗೆ ತಾಲ್ ಪೊಲೀಸ್ ಠಾಣೆ ಬಳಿಯ ರಸ್ತೆಯಲ್ಲಿ ಮಹಿಳೆ ತನ್ನ ಮೂರು ವರ್ಷದ ಪುಟ್ಟ ಮಗುವಿನೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ' ಎಂದಿದ್ದಾರೆ.

ಐವರ ವಿರುದ್ಧ ಕೇಸ್ ದಾಖಲಾಗಿದ್ದು, ಮಹಿಳೆಯ ಮಾಜಿ ಗಂಡ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ.

ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ನೀಡಿರುವ ತಾಲ್ ಪೊಲೀಸ್ ಠಾಣೆ ಅಧಿಕಾರಿ ಸಂಗೀತ ಸೋಲಂಕಿ 'ಕೆಲ ತಿಂಗಳ ಹಿಂದಷ್ಟೇ ತನ್ನ ಮೊದಲ ಗಂಡ, ಎರಡನೇ ಗಂಡನ ಮೇಲೆ ಹಲ್ಲೆ ನಡೆಸಿರುವುದಾಗಿ ಮಹಿಳೆ ತಿಳಿಸಿದ್ದಾಳೆ. ಈ ಪ್ರಕರಣಕ್ಕೆ ಆಕೆಯೇ ಪ್ರಮುಖ ಸಾಕ್ಷಿ. ಕೇಸ್ ಹಿಂಪಡೆಯುವಂತೆ ಮಹಿಳೆಯ ಮೊದಲನೇ ಗಂಡ ಆಕೆಯ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾನೆ. ಆದರೆ ಮಹಿಳೆ ಮಾತ್ರ ಯಾವುದಕ್ಕೂ ಹೆದರದೇ ಗಟ್ಟಿಯಾಗಿ ನಿಂತಿದ್ದಾಳೆ' ಎಂದಿದ್ದಾರೆ.