ಶಹಜಾನ್ಪುರ್(ಡಿ.10): ಉತ್ತರ ಪ್ರದೇಶ ವಿಧಾನ ಪರಿಷತ್‌ನ ಮಾಜಿ ಸದಸ್ಯರೊಬ್ಬರ ವಯೋವೃದ್ಧ ಪತ್ನಿ ಹಸಿವೆಯಿಂದ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. 

ಮಾಜಿ ಎಂಎಲ್‌ಸಿ ರಾಮ್ ಖೇರ್ ಸಿಂಗ್ ಪತ್ನಿ ಲೀಲಾವತಿ (75) ಹಸಿವಿನಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಶಹಜಾನ್ಪುರದ ರೈಲ್ವೆ ಕಾಲೋನಿಯಲ್ಲಿರುವ ಸರ್ಕಾರಿ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ. 

ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ತಾಯಿ ಲೀಲಾವತಿಗೆ, ಪುತ್ರ ಸಲೀಲ್ ಚೌಧರಿ ಸ್ವಲ್ಪ ಆಹಾರವನ್ನು ತೆಗೆದಿಟ್ಟು ಹೊಗುವುದು ನಿತ್ಯದ ಕಾಯಕವಾಗಿತ್ತು. ಅಲ್ಲದೇ ಹೊರ ಹೋಗುವಾಗ ಮನೆಗೆ ಸಲೀಲ್ ಚೌಧರಿ ಬೀಗ ಕೂಡ ಹಾಕುತ್ತಿದ್ದರು.

ಆದರೆ ಸಲೀಲ್ ಮನೆಗೆ ವಾಪಸ್ಸು ಬರವುದು ತಡವಾದ ಕಾರಣ ಲೀಲಾವತಿ ಹಾಸಿಗೆಯಲ್ಲೇ ಹಸಿವಿನಿಂದ ಪ್ರಾಣ ಬಿಟ್ಟಿದ್ದಾರೆ. ಆಕೆ ಮಾತನಾಡದ ಮತ್ತು ನಡೆಯಲಾಗದ ಅಸಹಾಯಕ ಸ್ಥಿತಿಯಲ್ಲಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಮನೆ ಒಳಗಿಂದ ಬರುತ್ತಿದ್ದ ದುರ್ವಾಸನೆ ತಾಳಲಾರದೇ ನೆರೆಹೊರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ಒಡೆದು ನೋಡಿದಾಗ ಹಾಸಿಗೆಯ ಮೇಲೆ ಕೊಳೆತ ಸ್ಥಿತಿಯಲ್ಲಿದ್ದ ದೇಹವನ್ನು ಕಂಡಿದ್ದಾರೆ. 

ಮೃತಳ ಪುತ್ರ ಸಲೀಲ್ ಪತ್ನಿ ದೂರವಾದಾಗಿನಿಂದ ಕುಡಿತದ ದಾಸನಾಗಿದ್ದ ಎನ್ನಲಾಗಿದ್ದು, ಖಿನ್ನತೆಯಿಂದ ಬಳಲುತ್ತಿದ್ದ ಆತ ತಾಯಿಯನ್ನು ಹೀಗೆ ಎರಡು ಮೂರು ದಿನಗಳ ಕಾಲ ಒಂಟಿಯಾಗಿ ಬಿಟ್ಟು ಹೋಗುತ್ತಿದ್ದ ಎಂದು ನೆರೆಹೊರೆಯವರು ಆಪಾದಿಸಿದದ್ದಾರೆ.

ರೈಲ್ವೆ ಟಿಕೆಟ್ ಕಲೆಕ್ಟರ್ ಆಗಿರುವ ಸಲೀಲ್ ಕಳೆದ ಎರಡು ತಿಂಗಳಿಂದ ಕೆಲಸಕ್ಕೂ ಹೋಗಿಲ್ಲ ಎಂದು ತಿಳಿದುಬಂದಿದೆ. ಆತನಿಗೆ ತಾಯಿ ತೀರಿ ಹೋಗಿರುವ ಬಗ್ಗೆ ವಾಟ್ಸಪ್ ಸಂದೇಶ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.