Asianet Suvarna News Asianet Suvarna News

ಮಾಜಿ ಸಚಿವ ಚಿದಂಬರಂ ಬಂಧನ : ಮಾಡಿದ್ದುಣ್ಣೋ ಮಹರಾಯ!

ಸಿಬಿಐಗೆ ‘ಪಂಜರದ ಗಿಳಿ’ ಎಂಬ ವಿಶೇಷಣ ಬಂದಿದ್ದು ಕಾಂಗ್ರೆಸ್‌ ಅವಧಿಯಲ್ಲಿ ಎಂಬುದನ್ನು ಮರೆಯಲು ಸಾಧ್ಯವೇ? ಖಂಡಿತ ಈಗಿನ ಪ್ರಕರಣದಲ್ಲಿ ಕಾನೂನಿಗೆ ಸಂಬಂಧಪಟ್ಟಪ್ರಶ್ನೆಗಳಿವೆ. ಹೀಗಾಗಿ ದೇಶದ ಪ್ರಮುಖ ತನಿಖಾ ಸಂಸ್ಥೆಗಳ ಕಾರ್ಯವೈಖರಿಗೆ ಅಗತ್ಯ ಸುಧಾರಣೆ ತರಲು ಹಾಗೂ ವಿಶ್ವಾಸಾರ್ಹತೆ ಮರುಸ್ಥಾಪಿಸಲು ಅವುಗಳಿಗೆ ಸ್ವಾಯತ್ತೆ ಒದಗಿಸುವತ್ತ ನಮ್ಮ ಗಮನ ಹರಿಯಬೇಕಿದೆ.

When Chidambaram was home minister Narendra Modi and Amit Shah faced probes
Author
Bengaluru, First Published Aug 26, 2019, 3:10 PM IST

ರಾಜಕಾರಣಿಗಳು ಅಧಿಕಾರದಲ್ಲಿದ್ದಾಗ ತಾವು ಅಮರ ಅಂದುಕೊಳ್ಳುತ್ತಾರೆ. ಶಾಶ್ವತವಾಗಿ ಅಧಿಕಾರ ಚಲಾಯಿಸುತ್ತೇವೆಂಬ ಭಾವನೆಯಲ್ಲೇ ನಿಯಮಗಳನ್ನು ರೂಪಿಸುತ್ತಾರೆ. ಅವರು ಮಾಡುವ ಕಾನೂನುಗಳು, ಅವರು ಸೃಷ್ಟಿಸುವ ಪೊಲೀಸ್‌ ರಾಜ್ಯಗಳು ಅವರು ಅಧಿಕಾರದಲ್ಲಿದ್ದಾಗ ಅವರಿಗೆ ವಿಧೇಯವಾಗಿರುತ್ತವೆ. ಆದರೆ, ಅಧಿಕಾರ ಕಳೆದುಕೊಂಡ ಮೇಲೆ ಮರಳಿ ಬಂದು ಅವರಿಗೇ ಕಚ್ಚುತ್ತವೆ.

ಅದೃಷ್ಟದ ಚಕ್ರ ನಿರಂತರವಾಗಿ ಸುತ್ತುತ್ತಿರುತ್ತದೆ, ಹಾಗೆ ಸುತ್ತುತ್ತಾ ಒಂದು ದಿನ ನಮ್ಮನ್ನು ಹಿಂದಿಕ್ಕಿ ಹೋಗಬಹುದು ಎಂಬುದನ್ನು ಅಧಿಕಾರದ ಮದದಲ್ಲಿ ಮರೆಯುವುದು ಸುಲಭ. ಇ.ಡಿ., ಸಿಬಿಐ, ಐಬಿ, ಸಿಬಿಡಿಟಿ ಮುಂತಾದ ಎಲ್ಲಾ ಭಯಂಕರ ಏಜೆನ್ಸಿಗಳು ಒಂದಲ್ಲಾ ಒಂದು ಸಮಯದಲ್ಲಿ ಚಿದಂಬರಂ ಅವರಿಗೆ ವರದಿ ಮಾಡಿಕೊಳ್ಳುತ್ತಿದ್ದವು. ಅವರು ಹಣಕಾಸು ಸಚಿವರಾಗಿದ್ದಾಗ ಅಥವಾ ಗೃಹ ಸಚಿವರಾಗಿದ್ದಾಗ ಈ ಸಂಸ್ಥೆಗಳ ಮೂಗುದಾರ ಹಿಡಿದಿದ್ದರು. ಆ ಕಾಲದಲ್ಲೇ ಇವು ಇಶ್ರತ್‌ ಜಹಾನ್‌ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಅಮಿತ್‌ ಶಾ ವಿರುದ್ಧ ಆರೋಪಪಟ್ಟಿದಾಖಲಿಸಿ, ಬಂಧಿಸಿ, ಕೆಲ ಕಾಲ ಜೈಲಿಗೆ ತಳ್ಳಿದ್ದವು.

ಚಿದಂಬರಂ ಹಗರಣ ರಹಸ್ಯ; ಇವರ ಇಡೀ ಕುಟುಂಬವೇ ಭ್ರಷ್ಟಾಚಾರದ ಕೆಸರಿನಲ್ಲಿ!

ಈ ಸಂಸ್ಥೆಗಳು ಈಗ ಚಿದಂಬರಂ ಅವರನ್ನೇ ಅಟ್ಟಾಡಿಸಿ, ಜಾಮೀನು ಸಿಗುವವರೆಗೆ ಕೆಲ ದಿನಗಳಾದರೂ ಸರಿ, ಜೈಲಿನಲ್ಲಿ ಕೂರಿಸಬೇಕೆಂದು ಪಣ ತೊಟ್ಟಿವೆ ಎಂಬುದು ಕಟು ಚೋದ್ಯ. ಬೇಟೆಗಾರನೇ ಈಗ ಬೇಟೆಯಾಗಿದ್ದಾನೆ. ‘ಸುದೀರ್ಘ ಅವಧಿಯವರೆಗೆ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ನಾವು ಈ ಸಂಸ್ಥೆಗಳನ್ನು ಆಡಳಿತ ಪಕ್ಷದ ಮುಷ್ಟಿಯಿಂದ ಸ್ವತಂತ್ರವಾಗಿರುವಂತೆ, ಸಂಪೂರ್ಣ ಸ್ವಾಯತ್ತವಾಗಿರುವಂತೆ ನೋಡಿಕೊಂಡು, ಉನ್ನತ ಮೇಲ್ವಿಚಾರಣಾ ಸಮಿತಿಯೊಂದಕ್ಕೆ ಉತ್ತರದಾಯಿಯಾಗಿರುವಂತೆ ಮಾಡಿದ್ದರೆ ಈ ಗತಿ ಬರುತ್ತಿರಲಿಲ್ಲ’ ಎಂದು ಚಿದಂಬರಂ ಹಾಗೂ ಕಾಂಗ್ರೆಸ್ಸಿನ ಆಡಳಿತಾರೂಢ ಕುಟುಂಬಕ್ಕೆ ಒಂದು ಕ್ಷಣವಾದರೂ ಅನ್ನಿಸಿರಲಿಕ್ಕೆ ಸಾಕು. ಇದು ಅವರನ್ನು ದೀರ್ಘಕಾಲ ಕಾಡಲಿದೆ.

ಕಾಂಗ್ರೆಸ್‌ ಮಾಡಿದ್ದು ಇದನ್ನೇ ಅಲ್ಲವೇ?

ರಾಜದೀಪ್‌ ಸರ್ದೇಸಾಯಿ ತಮ್ಮ ಪ್ರೈಮ್‌ ಟೈಮ್‌ ನ್ಯೂಸ್‌ನಲ್ಲಿ ಮೊನ್ನೆ ಬಿಜೆಪಿ ವಕ್ತಾರರ ಬಳಿ, ‘ಇದು ಅಪ್ಪಟ ದ್ವೇಷದ ರಾಜಕಾರಣ ಎಂದು ಜನರಿಗೆ ಅನ್ನಿಸುವುದಿಲ್ಲವೇ? ಚಿದಂಬರಂ ಗೃಹ ಸಚಿವರಾಗಿದ್ದಾಗ ಅಮಿತ್‌ ಶಾ ಅವರನ್ನು ಬಂಧಿಸಿ ಜೈಲಿಗೆ ಕಳಿಸುವುದಕ್ಕೆ ಕಾರಣವಾಗಿದ್ದರು. ಈಗ ಅದರ ಸೇಡನ್ನು ಅಮಿತ್‌ ಶಾ ತೀರಿಸಿಕೊಳ್ಳುತ್ತಿದ್ದಾರೆಯೇ?’ ಎಂದು ಕೇಳುತ್ತಿದ್ದರು. ಇದಕ್ಕೆ ಬಿಜೆಪಿ ವಕ್ತಾರರು, ‘ಇದಕ್ಕೂ ಅಮಿತ್‌ ಶಾ ಅವರಿಗೂ ಅಥವಾ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಸಿಬಿಐ ಸ್ವತಂತ್ರ ಸಂಸ್ಥೆ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ. ಕಾನೂನಿಗೆ ಯಾರೂ ಅತೀತರಲ್ಲ. ಹಾಗಾಗಿ...’ ಎಂದು ನಸುನಗುತ್ತಾ ಉತ್ತರಿಸಿದರು.

ಕಾಂಗ್ರೆಸ್‌ ನಾಯಕರು ಕೂಡ ಅಷ್ಟೇ ನಯವಾಗಿ ಇದರ ಬಗ್ಗೆ ಗಾಬರಿ ವ್ಯಕ್ತಪಡಿಸಿದರು. ಚಿದಂಬರಂ ಮೇಲೆ ದಬ್ಬಾಳಿಕೆ ನಡೆದಿದ್ದರಿಂದ ತಮಗೆ ಬಹಳ ನೋವಾಗಿದೆಯೆಂದು ಎಲ್ಲರಿಗೂ ಮನವರಿಕೆ ಮಾಡಿಕೊಡಲು ಅವರು ಯತ್ನಿಸಿದರು. ‘ಇದು ವಿರೋಧಪಕ್ಷದವರ ಬಾಯಿ ಮುಚ್ಚಿಸುವ ಯತ್ನ. ಪ್ರಜಾಪ್ರಭುತ್ವದ ಮೇಲೆ ನಡೆಸಿದ ಹಲ್ಲೆ. ಅಮಿತ್‌ ಶಾ ಸಿಬಿಐಯನ್ನು ತಮ್ಮ ಖಾಸಗಿ ತನಿಖಾ ಸಂಸ್ಥೆಯಂತೆ ಬಳಸುತ್ತಿದ್ದಾರೆ. ಸಂವಿಧಾನದತ್ತವಾಗಿ ಜನರಿಗೆ ದೊರೆತಿರುವ ಮೂಲಭೂತ ಹಕ್ಕುಗಳನ್ನು ಈ ಏಜೆನ್ಸಿಗಳು ತುಳಿಯುತ್ತಿವೆ’ ಎಂದು ಕೂಗಾಡಿದರು.

ಕಾನೂನು ಆದಾಗ ಗರಂ: ಆ.26ರ ವರೆಗೆ ಸಿಬಿಐ ಕಸ್ಟಡಿಗೆ ಚಿದಂಬರಂ!

ಸಿಬಿಐಗೆ ‘ಪಂಜರದ ಗಿಳಿ’ ಎಂಬ ವಿಶೇಷಣ ಬಂದಿದ್ದು ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲಿ ಎಂಬುದನ್ನು ಮರೆಯಲು ಸಾಧ್ಯವೇ? ಈ ಏಜೆನ್ಸಿಗಳು ಆಗಲೂ ಆಡಳಿತಾರೂಢ ಪಕ್ಷದ ಅಣತಿಗಾಗಿ ಕಾಯುತ್ತ, ರಾಜಕೀಯ ವಿರೋಧಿಗಳ ಮೇಲೆ ಮುಗಿಬೀಳಲು ಸಿದ್ಧವಾಗಿ ನಿಂತಿದ್ದವು.

ವಿರೋಧ ಪಕ್ಷದವರ ಮೇಲಿನ ಭ್ರಷ್ಟಾಚಾರ ಹಾಗೂ ಕ್ರಿಮಿನಲ್‌ ಪ್ರಕರಣಗಳನ್ನು ಬೇಕಂತಲೇ ದಶಕಗಳ ಕಾಲ ಮುಗಿಸದೆ, ಅವರ ತಲೆಯ ಮೇಲೆ ಒಂದು ಕತ್ತಿ ಸದಾ ತೂಗಾಡುತ್ತ ಇರುವಂತೆ ನೋಡಿಕೊಳ್ಳಲಾಗಿತ್ತು. ಸಂಕಷ್ಟದ ಸಮಯದಲ್ಲಿ ವಿರೋಧ ಪಕ್ಷಗಳ ನಾಯಕರಿಂದ ರಾಜಕೀಯ ಬೆಂಬಲ ಗಿಟ್ಟಿಸಲು ಪೊಲೀಸ್‌ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುವುದಕ್ಕೆ ಕಾಂಗ್ರೆಸ್‌ ಯಾವತ್ತೂ ಹಿಂದೆಮುಂದೆ ನೋಡಿರಲಿಲ್ಲ.

ತನಿಖಾ ಸಂಸ್ಥೆಗಳೆಂಬ ರಾಜಕೀಯ ಅಸ್ತ್ರ

ಮನಮೋಹನ ಸಿಂಗ್‌ ನೇತೃತ್ವದ ಯುಪಿಎ-2 ಸರ್ಕಾರದ ಅವಧಿಯಲ್ಲಿ ಅಣ್ಣಾ ಹಜಾರೆ ದೆಹಲಿಗೆ ಲಗ್ಗೆಯಿಟ್ಟು ಲೋಕಪಾಲರನ್ನು ನೇಮಿಸುವಂತೆ ಮತ್ತು ಸಿಬಿಐಯನ್ನು ಲೋಕಪಾಲದ ಅಧೀನದಲ್ಲಿ ತಂದು ಆಡಳಿತಾರೂಢ ಪಕ್ಷದ ನಿಲುಕಿಗೆ ಸಿಗದಂತೆ ಮಾಡುವಂತೆ ಪಟ್ಟು ಹಿಡಿದಿದ್ದರು. ಆಗ ಕೇಂದ್ರ ಸರ್ಕಾರ ಅಕ್ಷರಶಃ ಅಣ್ಣಾ ಮುಂದೆ ಮಂಡಿಯೂರಿತ್ತು. ಆ ಸಮಯದಲ್ಲಿ ಸರ್ಕಾರ ಏನು ಮಾಡಬೇಕಿತ್ತೋ ಅದನ್ನು ಮಾಡಲಿಲ್ಲ ಎಂದು ಕಾಂಗ್ರೆಸ್‌ ಕ್ಯಾಂಪ್‌ನಲ್ಲೇ ಬೇಸರ ಹಾಗೂ ದಿಗ್ಭ್ರಾಂತಿ ಉಂಟಾಗಿತ್ತು.

ಇದು ಒಂದು ವಿಚಾರವಾದರೆ, ಈಗ ಬಿಜೆಪಿ ಕಾರ್ಯಕರ್ತರಲ್ಲಿ ಚಿದಂಬರಂಗೆ ಉಂಟಾದ ಸ್ಥಿತಿಯ ಬಗ್ಗೆ ಯಾರಿಗೂ ಮರುಕವಿಲ್ಲ. ಬದಲಿಗೆ ಆಗ ಮಾಡಿದ್ದರ ಪ್ರತಿಫಲವನ್ನು ಚಿದು ಉಣ್ಣುತ್ತಿದ್ದಾರೆ, ಉಣ್ಣಲಿ ಬಿಡಿ ಎಂಬ ಭಾವನೆಯೇ ಇದೆ. ಇವೆರಡರ ನಡುವೆ ದೇಶವನ್ನು ಕಾಡುತ್ತಿರುವ ಮುಖ್ಯ ವಿಷಯದಿಂದ ನಾವು ಬದಿಗೆ ಸರಿಯುತ್ತಿದ್ದೇವೆ. ಇದು ಅಮಿತ್‌ ಶಾ ಅಥವಾ ಚಿದಂಬರಂ ಅವರಿಗೆ ಸೀಮಿತವಾದ ವಿಷಯವಲ್ಲ. ಇದಕ್ಕೆ ಇನ್ನೂ ಹೆಚ್ಚಿನ ಮಹತ್ವವಿದೆ. ಇದು ಕಾರ್ಯಾಂಗದ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಮತ್ತು ಸಿಬಿಐ, ಇ.ಡಿ., ರಾ, ಐಬಿ ಸೇರಿದಂತೆ ಕಾನೂನು ಮತ್ತು ನ್ಯಾಯ ಇಲಾಖೆ, ಅಟಾರ್ನಿ ಹಾಗೂ ಸಾಲಿಸಿಟರ್‌ ಜನರಲ್‌ಗಳ ಕಚೇರಿಗಳಂತಹ ಸಂಸ್ಥೆಗಳ ಸ್ವಾಯತ್ತೆ ಮತ್ತು ಪಾವಿತ್ರ್ಯಕ್ಕೆ ಸಂಬಂಧಿಸಿದ ವಿಚಾರ.

ಒತ್ತಡದಲ್ಲಿರುವ ಈ ಸಂಸ್ಥೆಗಳು ಯಾವಾಗಲೂ ನ್ಯಾಯ ಮತ್ತು ಕಾನೂನಿಗೇ ಸಂಪೂರ್ಣ ನಿಷ್ಠವಾಗಿರಲು ಸಾಧ್ಯವಿಲ್ಲ. ಈ ಸಂಸ್ಥೆಗಳ ನಿಷ್ಠೆ ಯಾವುದೋ ವ್ಯಕ್ತಿ ಅಥವಾ ಯಾವುದೋ ಪಕ್ಷದಿಂದ ಬಂದ ಸಚಿವ ಅಥವಾ ಯಾವುದೋ ಅಧಿಕಾರಿಗೆ ಮೀಸಲಾಗಿರಬಾರದು. ಬದಲಿಗೆ ಇವು ಸಂವಿಧಾನಕ್ಕೆ ನಿಷ್ಠವಾಗಿರಬೇಕು. ಇದರಲ್ಲಿ ಎರಡು ಮಾತೇ ಇಲ್ಲ. ಹಾಗೆಯೇ ರಾಜ್ಯಗಳ ಮಟ್ಟದಲ್ಲೂ ಇಂತಹ ಕೆಲವು ಪ್ರಮುಖ ಸಂಸ್ಥೆಗಳಿಗೆ ಸ್ವಾಯತ್ತೆ ನೀಡುವ ಅಗತ್ಯವಿದೆ. ಅದು ಅಣ್ಣಾ ಹಜಾರೆಯವರ ಇನ್ನೊಂದು ಬೇಡಿಕೆಯಾಗಿತ್ತು.

ಅವರು ಮುಗ್ಧ ಹಾಗೂ ಒರಟಾಗಿ ಕಾಣಿಸುತ್ತಿದ್ದರೂ ಅತ್ಯಂತ ಕುಶಾಗ್ರಮತಿಯಂತೆ ದೂರದೃಷ್ಟಿಯಿಂದ ವ್ಯವಹರಿಸುತ್ತಿದ್ದರು. ತಾವು ಪ್ರಧಾನಿ ಮನಮೋಹನ ಸಿಂಗ್‌ರ ರಾಜೀನಾಮೆಯನ್ನಾಗಲೀ ಅಥವಾ ಯುಪಿಎ ಸರ್ಕಾರವನ್ನು ಬದಲಿಸಬೇಕು ಎಂದಾಗಲೀ ಕೇಳುತ್ತಿಲ್ಲ ಎಂದು ಅವರು ಒತ್ತಿ ಹೇಳುತ್ತಿದ್ದರು.

ಈ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು. ಅದು ಆಗದೆ ಸರ್ಕಾರ ಬದಲಾವಣೆಯಾದರೆ ಅರ್ಥವಿಲ್ಲದ ಕಸರತ್ತಾಗುತ್ತದೆಯಷ್ಟೆಎಂದು ಅವರಿಗೆ ಗೊತ್ತಿತ್ತು. ಹೊಸತಾಗಿ ಬರುವ ಒಂದೊಂದು ಸರ್ಕಾರಗಳೂ ಹೆಚ್ಚೆಚ್ಚು ಭ್ರಷ್ಟಹಾಗೂ ಸರ್ವಾಧಿಕಾರಿಯಾಗಿರುತ್ತವೆ ಎಂಬುದನ್ನು ಅನುಭವವೇ ಅವರಿಗೆ ಕಲಿಸಿತ್ತು. ರಾಜಕೀಯ ಪಕ್ಷಗಳಿಗೆ ಇರುವ ಗುರಿ ಒಂದೇ- ತಮ್ಮ ಬಳಿ ಹೆಚ್ಚೆಚ್ಚು ಅಧಿಕಾರ ಗುಡ್ಡೆಹಾಕಿಟ್ಟುಕೊಳ್ಳುವುದು.

ನಿಜವಾಗಿಯೂ ಆಗಬೇಕಾದ್ದು ಏನು?

ಖಂಡಿತ ಈಗಿನ ಪ್ರಕರಣದಲ್ಲಿ ಕೆಲವರು ಹೇಳುತ್ತಿರುವಂತೆ ಕಾನೂನಿಗೆ ಸಂಬಂಧಪಟ್ಟಪ್ರಶ್ನೆಗಳಿವೆ. ಚಿದಂಬರಂ ಅವರನ್ನು ಬಂಧಿಸಿದ ರೀತಿಯ ಬಗ್ಗೆಯೂ ಪ್ರಶ್ನೆಗಳಿರಬಹುದು. ಟೀವಿ ಚಾನಲ್ಲೊಂದರಲ್ಲಿ ಸಿಬಿಐನ ಮಾಜಿ ನಿರ್ದೇಶಕರು ಹೇಳಿದಂತೆ, ‘ಸಿಬಿಐ ಇನ್ನಷ್ಟುಸೂಕ್ಷ್ಮವಾಗಿ ಹಾಗೂ ಎಚ್ಚರಿಕೆಯಿಂದ ವ್ಯವಹರಿಸಬಹುದಿತ್ತು.’ ಇಷ್ಟಕ್ಕೂ ಅವರು ಒಸಾಮಾ ಬಿನ್‌ ಲಾಡೆನ್‌ನನ್ನು ಹಿಡಿಯಲು ಹೋದಂತೆ ಗೋಡೆ ಹತ್ತಿ, ಬೇಲಿ ಹಾರಿ ಸರ್ಕಸ್‌ ಮಾಡುವ ಅಗತ್ಯವಿರಲಿಲ್ಲ. ಶತ್ರು ಅಥವಾ ಅಪಾಯವಿಲ್ಲದ ಸ್ಥಳದಲ್ಲಿ ತೋರಿದ ಅತ್ಯುತ್ಸಾಹ ನಿಜಕ್ಕೂ ಹಾಸ್ಯಾಸ್ಪದವಾಗಿತ್ತು.

ಅದನ್ನು ನೋಡಿದಾಗ ಟಾಮ್‌ ಸೇಯರ್‌ನ ಸಾಹಸಗಳು ನೆನಪಿಗೆ ಬಂದವು. ಖಂಡಿತ ಹಾಗೆ ಮಾಡುವ ಅಗತ್ಯವಿರಲಿಲ್ಲ. ಇದು ಮಧ್ಯಮ ವರ್ಗದ ಟೀವಿ ನ್ಯೂಸ್‌ ವೀಕ್ಷಕರ ಪ್ರತಿದಿನ ಸಂಜೆಯ ಮನರಂಜನೆಗೆ ಆಹಾರ ಒದಗಿಸಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಟೀವಿ ಆ್ಯಂಕರ್‌ಗಳು ನರನಾಡಿಗಳೆಲ್ಲ ಒಡೆದುಹೋಗುವಂತೆ ಕಿರುಚಾಡಲು ಅವಕಾಶ ನೀಡಿತು. ಅತ್ತ ಮಾಜಿ ಗೃಹ ಮಂತ್ರಿಗೆ ಹಾಗೂ ಅವರ ಕುಟುಂಬ, ಸ್ನೇಹಿತರು ಮತ್ತು ದೇಶದ ಪುರಾತನ ರಾಜಕೀಯ ಪಕ್ಷಕ್ಕೆ ಒಂದಷ್ಟುಮುಜುಗರವಾಯಿತು.

ಇನ್ನು, ಕೇಸರಿ ಪಕ್ಷದಲ್ಲಿರುವವರಿಗೆ ಹಾಗೂ ಆ ಪಕ್ಷದ ಬೆಂಬಲಿಗರಿಗೆ ಹಳೆಯ ಸೇಡು ತೀರಿಸಿಕೊಂಡಂತೆ ಅನ್ನಿಸಿರಬಹುದು. ಕಳೆದ ನಾಲ್ಕೈದು ದಿನಗಳಲ್ಲಿ ನಡೆದ ಘಟನೆಗಳಿಂದ ಹಾಗೂ ಅವು ನಡೆದ ರೀತಿಯಿಂದ ಏನಾದರೂ ದೀರ್ಘಾವಧಿ ಪರಿಣಾಮ ಉಂಟಾಗುವಂತಿದ್ದರೆ ಅದು ಇಷ್ಟೇ. ಹೀಗಾಗಿ ದೇಶದ ಪ್ರಮುಖ ತನಿಖಾ ಸಂಸ್ಥೆಗಳಿಗೆ ಅಗತ್ಯ ಸುಧಾರಣೆ ತರಲು ಹಾಗೂ ವಿಶ್ವಾಸಾರ್ಹತೆ ಮರುಸ್ಥಾಪಿಸಲು ಅವುಗಳಿಗೆ ಸ್ವಾಯತ್ತೆ ಒದಗಿಸುವತ್ತ ನಮ್ಮ ಗಮನ ಹರಿಯಬೇಕಿದೆ.

ಹೀಗಿರುವಾಗ ದಕ್ಷತೆ ಬರಲು ಸಾಧ್ಯವೆ?

ಒಂದು ವೇಳೆ ಚಿದಂಬರಂ ಪ್ರಕರಣದಲ್ಲಿ ಸಿಬಿಐ/ಇ.ಡಿ. ಸ್ವತಂತ್ರವಾಗಿಯೇ ವರ್ತಿಸಿದ್ದರೂ ಈ ಸಂಸ್ಥೆಗಳು ರಚನೆಯಾದ ರೀತಿ ಹಾಗೂ ಅಧಿಕಾರದಲ್ಲಿರುವ ಪಕ್ಷ ಇವುಗಳನ್ನು ನಿಯಂತ್ರಿಸುವ ವ್ಯವಸ್ಥೆಯಿಂದಾಗಿ ಸದಾಕಾಲ ಇವುಗಳ ವಿಶ್ವಾಸಾರ್ಹತೆಯ ಬಗ್ಗೆ ಒಂದು ರೀತಿಯ ಅನುಮಾನ ಹಾಗೂ ಇವುಗಳ ಉದ್ದೇಶದ ಬಗ್ಗೆ ಪ್ರಶ್ನೆಗಳು ಇದ್ದೇ ಇರುತ್ತವೆ.

ಯಾವುದೇ ತನಿಖಾ ಸಂಸ್ಥೆಗೆ ಇದು ಒಳ್ಳೆಯದಲ್ಲ. ಇದರಿಂದ ಈ ಸಂಸ್ಥೆಗಳ ಆತ್ಮವಿಶ್ವಾಸ ಹಾಗೂ ದಕ್ಷತೆಗೆ ಧಕ್ಕೆ ಬರುತ್ತದೆ. ಜನರಿಗೆ ಯಾರಲ್ಲಿ ನಂಬಿಕೆಯ ಕೊರತೆಯಿದೆಯೋ ಮತ್ತು ಯಾರನ್ನು ಅವರು ಗೌರವದಿಂದ ನೋಡುವುದಿಲ್ಲವೋ ಅಂತಹವರು ಸಂಪೂರ್ಣ ದಕ್ಷತೆಯಿಂದ ಹಾಗೂ ತಮ್ಮ ಗರಿಷ್ಠ ಸಾಮರ್ಥ್ಯದಿಂದ ಕರ್ತವ್ಯ ನಿಭಾಯಿಸಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಇದು ದೇಶದ ಹಿತದೃಷ್ಟಿಯಿಂದಲೂ ಒಳ್ಳೆಯದಲ್ಲ.

ಇದರಲ್ಲೊಂದು ನೀತಿಯಿರಬಹುದು. ಯಾರೋ ಹೇಳಿದಂತೆ, ‘ಕಾನೂನುಗಳನ್ನು ರೂಪಿಸುವ ರಾಜಕಾರಣಿಗಳು ಆಗಾಗ ಅವುಗಳ ಅಡಿಯಲ್ಲಿ ಬದುಕಲೂಬೇಕು.’ ಇದರಿಂದ ಅವರು ಹದ್ದುಬಸ್ತಿನಲ್ಲಿರುತ್ತಾರೆ. ಅದು ಸಮಾಜಕ್ಕೆ ಒಳ್ಳೆಯದು.

ಕ್ಯಾ. ಜಿ ಆರ್‌ ಗೋಪಿನಾಥ್‌

ಉದ್ಯಮಿ, ಲೇಖಕ

Follow Us:
Download App:
  • android
  • ios