ಬೆಂಗಳೂರು :  ‘ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಹಾಗೂ ಹಾಸನ ಜಿಲ್ಲೆ ಗೊರೂರಿನ ಹೇಮಾವತಿ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿರುವುದರಿಂದ ಜುಲೈ 15ರ ಭಾನುವಾರದ ಒಳಗಾಗಿ ಎರಡೂ ಜಲಾಶಯ ಭರ್ತಿಯಾಗಲಿವೆ. ಹೀಗಾಗಿ ಜಲಾಶಯಗಳಿಂದ ಯಾವುದೇ ಕ್ಷಣದಲ್ಲಿ ಹೆಚ್ಚುವರಿ ನೀರು ಹೊರಬಿಡಬಹುದಾದ್ದರಿಂದ ಕಾವೇರಿ ದಂಡೆಯ ಜನರು ಕಟ್ಟೆಚ್ಚರ ವಹಿಸಬೇಕು’ ಎಂದು ಕಂದಾಯ ಇಲಾಖೆ ಎಚ್ಚರಿಕೆಯ ಸಂದೇಶ ಹೊರಡಿಸಿದೆ.

‘ಕಾವೇರಿ ಕೊಳ್ಳದ ಬಹುತೇಕ ಎಲ್ಲಾ ಜಲಾಶಯ ಸಂಪೂರ್ಣ ಭರ್ತಿಯಾಗಿ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿಯಾಗಬಹುದು. ಹೀಗಾಗಿ ಮೈಸೂರು, ಮಂಡ್ಯ, ಹಾಸನ ಹಾಗೂ ರಾಮನಗರ ಜಿಲ್ಲಾಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಕಟ್ಟೆಚ್ಚರ ವಹಿಸುವಂತೆ ಸಂದೇಶ ನೀಡಬೇಕು’ ಎಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ವಿಭಾಗ ಸೂಚನೆ ನೀಡಿದೆ.

ನದಿ ಪಾತ್ರದಲ್ಲಿ ಸಿಬ್ಬಂದಿ ನೇಮಿಸಿ:  ನದಿ ಪಾತ್ರದಲ್ಲಿರುವ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗಳು ಹಾಗೂ ಸ್ಥಳೀಯರು ನದಿಗೆ ಇಳಿಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಂಬಂಧಪಟ್ಟಸ್ಥಳಗಳಲ್ಲಿ ಸಿಬ್ಬಂದಿಯನ್ನು ನೇಮಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಎಲ್ಲಾ ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಹಾಗೂ ಸಹಾಯಕ ಆಯುಕ್ತರಿಗೆ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಗಂಗಾರಾಂ ಬಡೇರಿಯಾ ಸೂಚನೆ ನೀಡಿದ್ದಾರೆ.

‘ಹೇಮಾವತಿ ಹಾಗೂ ಕೆಆರ್‌ಎಸ್‌ ಜಲಾಶಯಗಳು ಶನಿವಾರ ಅಥವಾ ಭಾನುವಾರದೊಳಗಾಗಿ ಸಂಪೂರ್ಣ ಭರ್ತಿಯಾಗಲಿವೆ, ಜಲಾಶಯಗಳಿಂದ ಯಾವುದೇ ಕ್ಷಣದಲ್ಲಿ ಹೆಚ್ಚುವರಿ ನೀರನ್ನು ಹೊರಗೆ ಬಿಡಬಹುದು. ಈಗಾಗಲೇ ಜಲಾಶಯಗಳಿಂದ ಸಾಕಷ್ಟುಪ್ರಮಾಣದ ನೀರು ಹೊರಗೆ ಬಿಡಲಾಗುತ್ತಿದೆ. ಶನಿವಾರ ನದಿಗಳಿಗೆ ಜಲಾಶಯಗಳ ಹೆಚ್ಚುವರಿ ನೀರು ಹೊರಬಿಡುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಬಹುದು. ಹೀಗಾಗಿ ನದಿ ಪಾತ್ರದಲ್ಲಿ ಯಾರೂ ಸಂಚರಿಸಬಾರದು’ ಎಂದು ನಿರ್ದೇಶನ ನೀಡಲಾಗಿದೆ.