Asianet Suvarna News Asianet Suvarna News

ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಿದ ಜಮೀರ್ : ಸಚಿವ ಸ್ಥಾನಕ್ಕೆ ಬರುತ್ತಾ ಕುತ್ತು..?

ಸಚವ ಜಮೀರ್ ಅಹಮದ್ ಅವರ ಹೇಳಿಕೆಯೊಂದು ಕುಮಾರಸ್ವಾಮಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಲ್ಲದೇ ಅವರ ಸಚಿವ ಸ್ಥಾನಕ್ಕೂ ಕುತ್ತು ತರುವ ಸಾಧ್ಯತೆ ಇದೆ.  ಜಮೀರ್ ಅಹಮದ್ ಹೇಳಿಕೆ ವಿರುದ್ಧ ಇದೀಗ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ.

Wakf property row  Minister Zameer Ahmed  agrees for CBI probe Then change
Author
Bengaluru, First Published Jul 18, 2018, 7:27 AM IST

ಬೆಂಗಳೂರು :  ರಾಜ್ಯದಲ್ಲಿ ಕೋಟ್ಯಂತರ ರು. ಬೆಲೆಬಾಳುವ ವಕ್ಫ್ ಆಸ್ತಿ ಕಬಳಿಕೆ ಕುರಿತಂತೆ ಅನ್ವರ್ ಮಾಣಿಪ್ಪಾಡಿ ನೀಡಿದ ವರದಿಯಲ್ಲಿ ಉಲ್ಲೇಖಿಸಿರುವ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನಡೆಸಲು ಸಿದ್ಧ ಎಂದು ವಿಧಾನ ಪರಿಷತ್ ನಲ್ಲಿ ಹೇಳಿಕೆ ನೀಡಿರುವ ಸಚಿವ ಜಮೀರ್ ಅಹ್ಮದ್ ಅವರು ತಾವಷ್ಟೇ ಅಲ್ಲದೆ ಎಚ್.ಡಿ.ಕೆ. ಸರ್ಕಾರವನ್ನೂ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಅನ್ವರ್ ಮಾಣಿಪ್ಪಾಡಿ ಅವರ ವರದಿಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತಿರಸ್ಕರಿಸಿರುವಾಗ ಈಗ ಜಮೀರ್ ಅಹಮದ್ ಅಕ್ರಮಗಳ ಬಗ್ಗೆ ತನಿಖೆ ಮಾಡಲು ಸಿಬಿಐಗೆ ಒಪ್ಪಿಸುವುದಾಗಿ ಸದನದಲ್ಲೇ ಹೇಳಿ ನಂತರ ಇಲ್ಲ ಎನ್ನುತ್ತಿರುವುದು ಮುಂಬರುವ ದಿನಗಳಲ್ಲಿ ಜಮೀರ್ ಅಹಮದ್‌ರ ಸಚಿವ ಸ್ಥಾನಕ್ಕೆ ಕುತ್ತು ತರುವ ಸಂಭವದ ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇರುವುದರಿಂದ ಪಕ್ಷದ ಹಿರಿಯ ನಾಯಕರು ಜಮೀರ್ ಅಹಮದ್ ಬಗ್ಗೆ ತೀವ್ರ ಆಕ್ರೋಶಗೊಂಡಿದ್ದಾರೆ.

"

ಇತ್ತೀಚೆಗೆ ನಡೆದ ಬಜೆಟ್ ಅಧಿವೇಶನದ ವೇಳೆ ವಿಧಾನ ಪರಿಷತ್‌ನಲ್ಲಿ ಅನ್ವರ್ ಮಾಣಿಪ್ಪಾಡಿ ವರದಿ ಬಗ್ಗೆ ಚರ್ಚೆ ನಡೆದಾಗ ಮಾತಿನ ಭರದಲ್ಲಿ ಸಚಿವ ಜಮೀರ್ ಅಹಮದ್ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನೀಡಲಾಗುವುದು ಎಂದು ಹೇಳಿದ್ದರು. ಆದರೆ ಸದನದಲ್ಲಿದ್ದ ಕಾಂಗ್ರೆಸ್ ಪಕ್ಷದ ಅಬ್ದುಲ್ ಜಬ್ಬಾರ್ ಮತ್ತು ಸಚಿವ ಯು.ಟಿ. ಖಾದರ್ ಈ ವಿಷಯ ಹೈಕೋರ್ಟ್‌ನಲ್ಲಿ ಇರುವುದರಿಂದ ತನಿಖೆಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ತದನಂತರ ಜಮೀರ್ ಅಹಮದ್ ತಾವು ಸಿಬಿಐ ತನಿಖೆಗೆ ಕೊಡುವ ಬಗ್ಗೆ ಪರಿಶೀಲಿಸುತ್ತೇನೆ ಎಂದು ಹೇಳಿದ್ದೇನೆಯೇ ಹೊರತು ಕೊಡುವುದಾಗಿ ಹೇಳಿಲ್ಲ ಎಂದು ಸಮಜಾಯಿಷಿ ನೀಡಿ ದ್ದರು. ಆದರೆ ಬಿಜೆಪಿ ಸದಸ್ಯರು ಇದನ್ನು ಒಪ್ಪಲಿಲ್ಲ. ಕೊನೆಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ನಡಾವಳಿಗಳನ್ನು ಪರಿಶೀಲಿಸಿ ತಿಳಿಸುವುದಾಗಿ ಹೇಳಿದ್ದರು.

ಹಕ್ಕುಚ್ಯುತಿ ಸಂಭವ: ಸಚಿವ ಜಮೀರ್ ಅಹಮದ್ ಸದನದಲ್ಲಿ ಆಡಿದ ಮಾತುಗಳ ಬಗ್ಗೆ ಬಿಜೆಪಿಯವರು ದಾಖಲೆ ಪರಿಶೀಲಿಸಿದಾಗ ಸಚಿವರು ಸಿಬಿಐಗೆ ಕೊಡುವುದಾಗಿ ಹೇಳಿರುವುದು ದೃಢವಾಗಿದ್ದು, ದಾಖಲೆ ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮುಂಬರುವ ಅಧಿವೇಶನದ ಸಂದರ್ಭದಲ್ಲಿ ಇದೇ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿಯವರು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದ್ದಾರೆ. 

ಒಂದು ವೇಳೆ ಸಚಿವರು ನಿರಾಕರಿಸಿದರೆ ಹಕ್ಕುಚ್ಯುತಿ ಆರೋಪ ಎದುರಿಸಬೇಕಾಗುತ್ತದೆ, ಅಷ್ಟೇ ಅಲ್ಲ ಸಚಿವ ಸ್ಥಾನಕ್ಕೂ ಸಂಚಕಾರ ಬರುವ ಸಾಧ್ಯತೆ ಇದೆ. ಇದರ ಜೊತೆಗೆ ವಿಷಯ ವಿಕೋಪಕ್ಕೆ ಹೋಗಿ ಸಿಬಿಐ ತನಿಖೆಗೆ ಕೊಡಲು ನಿರ್ಧರಿಸಿದರೆ ಕಾಂಗ್ರೆಸ್‌ನ ನಾಯಕರು ತೊಂದರೆ ಎದುರಿಸಬೇಕಾಗುತ್ತದೆ.

ಈಗಾಗಲೇ ಇ.ಡಿ., ಸಿಬಿಐಗಳ ಮೂಲಕ ಪ್ರತಿಪಕ್ಷಗಳ ನಾಯಕರನ್ನು ಹಣಿಯುತ್ತಿರುವ ಕೇಂದ್ರ ಸರ್ಕಾರದ ಆಡಳಿತಾರೂಢ ಬಿಜೆಪಿಗೆ ಮತ್ತೊಂದು  ಅಸ್ತ್ರ ಸಿಕ್ಕಂತಾ ಗುತ್ತದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಲೋಕಸಭೆ ಸೇರಿದಂತೆ ಅನೇಕ ಚುನಾವಣೆಗಳು ಎದುರಾಗುತ್ತಿರುವ ಸಂದರ್ಭದಲ್ಲಿ ಇಂತಹ ಅಸ್ತ್ರ ಇಟ್ಟುಕೊಂಡು ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರನ್ನು ರಾಜಕೀಯವಾಗಿ ಹಣಿಯುವ ಸಾಧ್ಯತೆ ಇರುತ್ತದೆ. ಸಿದ್ದರಾಮಯ್ಯಗೆ ದೂರು: ಬರುವ ದಿನಗಳಲ್ಲಿ ಈ ವಿಷಯ ವಿಕೋಪಕ್ಕೆ ಹೋದರೆ ಅದಕ್ಕೆ ಸಚಿವ ಜಮೀರ್ ಅಹಮದ್ ಅವರನ್ನೇ ಹೊಣೆಗಾರರನ್ನಾಗಿ ಮಾಡಬೇಕು, ಅವರದ್ದೇ ತಲೆದಂಡ ಆಗಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ಸಿನ ಹಲವು ಮುಖಂಡರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. 

ಈ ನಿಟ್ಟಿನಲ್ಲಿ ಸಚಿವ ಜಮೀರ್ ಅಹಮದ್ ಅವರಿಗೆ ಸೂಕ್ತ ರೀತಿಯಲ್ಲಿ ತಿಳಿಸುವಂತೆ ಕಾಂಗ್ರೆಸ್‌ನ ಅನೇಕ ಮುಖಂಡರು ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.

Follow Us:
Download App:
  • android
  • ios