ನವದೆಹಲಿ(ಡಿ.07): ಪಂಚ ರಾಜ್ಯಗಳ ಚುನಾವಣೆಗಳು ಇಂದಿಗೆ ಮುಕ್ತಾಯ ಕಂಡಿದ್ದು, ದೇಶದ ಚಿತ್ತ ಇದೀಗ ಡಿ.11ರತ್ತ ನೆಟ್ಟಿದೆ.

ಇಂದು ತೆಲಂಗಣ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಗಳಿಗೆ ಮತದಾನ ಮುಕ್ತಾಯವಾಗಿದ್ದು, ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ.

ಇಂದು ಬೆಳಗ್ಗೆಯಿಂದಲೇ ಪ್ರಾರಂಭವಾದ ಮತದಾನ ಪ್ರಕ್ರಿಯೆಯಲ್ಲಿ ಎರಡೂ ರಾಜ್ಯಗಳ ಮತದಾರ ಅತ್ಯಂತ ಚಟುವಟಿಕೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು.

119 ವಿಧಾನಸಭಾ ಕ್ಷೇತ್ರಗಳ ತೆಲಂಗಾಣ ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಮುಗಿದಿದ್ದು, ಇತ್ತ ರಾಜಸ್ಥಾನದಲ್ಲಿ 200 ವಿಧಾನಸಭಾ ಕ್ಷೇತ್ರಗಳ ಪೈಕಿ 199 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನವಾಗಿದೆ. ಅಲ್ವರ್ ಜಿಲ್ಲೆಯ ರಾಮಘರ್ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಬಿಎಸ್ ಪಿ ಅಭ್ಯರ್ಥಿಯ ಅಕಾಲಿಕ ಮರಣದಿಂದಾಗಿ ಮುಂದೂಡಲಾಗಿದೆ.

ಇನ್ನು ತೆಲಂಗಾಣದಲ್ಲಿ ಒಟ್ಟು 2.8 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರೆ, ರಾಜಸ್ಥಾನದಲ್ಲಿ 4.75 ಕೋಟಿ ಮತದಾರರು ಮತದಾನ ಮಾಡಿದ್ದಾರೆ.

ಇನ್ನು ತೆಲಂಗಾಣ ಮತ್ತು ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೇ, ಚುನಾವಣೋತ್ತರ ಸಮೀಕ್ಷೆಗಳು ಹೊರ ಬಿದ್ದಿದ್ದು, ವಿವಿಧ ಸಮೀಕ್ಷೆಗಳು ವಿವಿಧ ರೀತಿಯ ಅಂಕಿ ಅಂಶಗಳನ್ನು ಬಹಿರಂಗಪಡಿಸಿವೆ.

ಅದರಂತೆ ಇನ್ನು ಕೆಲವೇ ಕ್ಷಣಗಳಲ್ಲಿ ನಿಮ್ಮ ಸುವರ್ಣನ್ಯೂಸ್.ಕಾಂನಲ್ಲಿ ಪಂಚ ರಾಜ್ಯ ಚುನಾವಣೆಗಳ ಚುನಾವಣೋತ್ತರ ಸಮೀಕ್ಷೆಗಳ ವಿವರಗಳನ್ನು ನಿರೀಕ್ಷಿಸಿ.