ಮುಂಬೈ (ಜ. 21): ಇದ್ದಕ್ಕಿದ್ದಂತೇ ಒಂದು ದ್ವೀಪ ನಿರ್ಮಾಣವಾಗೋದು ಸಣ್ಣ ವಿಷಯವಲ್ಲ. ಸದ್ಯ ಇಂಥದ್ದೇ ವಿಷಯವೊಂದು ಸದ್ದು ಮಾಡುತ್ತಿದೆ. ರಾತ್ರೋರಾತ್ರಿ ಮುಂಬೈ ಕಡಲ ತೀರದಲ್ಲಿ ತೇಲುವ ದ್ವೀಪವೊಂದು ಸೃಷ್ಟಿಯಾಗಿದೆ ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸುದ್ದಿ ತಿಳಿದು ಅಚ್ಚರಿಗೊಂಡ ಜನರು ಈ ವಿಡಿಯೋವನ್ನು ಶೇರ್‌ ಮಾಡುತ್ತಿದ್ದಾರೆ.

ಈ ವಿಡಿಯೋದಲ್ಲಿ ವಿಶಾಲವಾದ ಸಮುದ್ರದ ಮಧ್ಯ ಸಣ್ಣದ್ವೀಪದ ಜಾಗ ಕಾಣಿಸುತ್ತಿದೆ. ಆದರೆ ನಿಜಕ್ಕೂ ಮುಂಬೈನಲ್ಲಿ ತೇಲುವ ದ್ವೀಪ ಸೃಷ್ಟಿಯಾಗಿದೆಯೇ ಎಂದು ಇಂಡಿಯಾ ಟುಡೇ ಪರಿಶೀಲನೆಗೆ ಮುಂದಾದಾಗ ಇದೊಂದು ಸುಳ್ಳುಸುದ್ದಿ, ಕರಾವಳಿ ತೀರದ ಮೀನುಗಾರರು ತಮಾಷೆಗಾಗಿ ಈ ವಿಡಿಯೋ ಮಾಡಿ ಯುಟ್ಯೂಬ್‌ನಲ್ಲಿ ಹರಿಬಿಟ್ಟಿದ್ದರು ಎಂಬ ವಾಸ್ತವಾಂಶ ಬಯಲಾಗಿದೆ.

ಒಂದು ನಿಮಿಷ 14 ಸೆಕೆಂಡ್‌ಗಳಿರುವ ಈ ವಿಡಿಯೋವನ್ನು ಡಿಸೆಂಬರ್‌ 27ರಂದು ಅಪ್‌ಲೋಡ್‌ ಮಾಡಲಾಗಿದ್ದು, ‘ಮುಂಬೈ ಕಡಲಲ್ಲಿತೇಲುವ ದ್ವೀಪ’ ಎಂಬ ಅಡಿಟಿಪ್ಪಣಿ ಬರೆಯಲಾಗಿದೆ. ಕರಾವಳಿಯ ಮೀನುಗಾರರ ಗುಂಪೊಂದು ಸಮುದ್ರ¨ ನಿಸರ್ಗ ಸೌಂದರ್ಯವನ್ನು ವಿಡಿಯೋ ಮಾಡಿದ್ದು, ಕೆಲವರು ಬಂಡೆ ಎಷ್ಟುದೊಡ್ಡದಿದೆ ಎಂದು ಹಿಂದಿಯಲ್ಲಿ ಕಿರುಚುತ್ತಾರೆ.

ಆ ಧ್ವನಿಯನ್ನು ತಿರುಚಿ ಮುಂಬೈ ಕಡಲಲ್ಲಿ ದ್ವೀಪವೊಂದು ಸೃಷ್ಟಿಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿದೆ. ಅದನ್ನೇ ನಂಬಿ ಕೆಲವರು ಶೇರ್‌ ಮಾಡುತ್ತಿದ್ದಾರೆ. ಅಲ್ಲದೆ ಈ ವಿಡಿಯೋ ಹಿಡಿದು ಮುಂಬೈ ಕಡಲತೀರದ ಮೀನುಗಾರರನ್ನು ಸಂಪರ್ಕಿಸಿದಾಗ, ‘ಆ ವಿಡಿಯೋದಲ್ಲಿ ಏನೂ ವಿಶೇಷತೆ ಇಲ್ಲ. ತಾತ ಮುತ್ತಾತರ ಕಾಲದಿಂದಲೂ ಆ ಬಂಡೆ ದೂರದಿಂದ ಕಾಣಿಸುತ್ತಿದೆ. ಕೆಲ ಯುವಕರು ಸೇರಿ ಈ ವಿಡಿಯೋವನ್ನು ಎಡಿಟ್‌ ಮಾಡಿದ್ದಾರಷ್ಟೆ’ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

-ವೈರಲ್ ಚೆಕ್ 

- ಸಾಂದರ್ಭಿಕ ಚಿತ್ರ