ಗುಜರಾತ್ (ನ. 10):  ಅಹಮದಾಬಾದ್ ನಗರದ ನದಿ ತೀರದ ಫೋಟೋ ಎಂಬ ಒಕ್ಕಣೆಯೊಂದಿಗೆ ರಾತ್ರಿ ಹೊತ್ತು ದೀಪಗಳಿಂದ ಕಂಗೊಳಿಸುತ್ತಿರುವ ನದಿತೀರದ ರಸ್ತೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನು ಅಹಮದಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಮೇಯರ್ ಬಿಜಾಲ್ ಪಟೇಲ್ ಟ್ವೀಟ್ ಮಾಡಿ, ‘ಇದು ಸಿಂಗಾಪುರ, ಮಲೇಷಿಯಾ ಅಲ್ಲ. ಇದು ನಮ್ಮ ಅಹಮದಾಬಾದ್ ನಗರ, ಸಬರಮತಿ
ನದಿತೀರ ಎಂದು ಬರೆದಿದ್ದರು. ಅನಂತರ ಹಲವರು ಇದನ್ನು ರೀಟ್ವೀಟ್ ಮತ್ತು ಲೈಕ್ ಮಾಡಿದ್ದರು.

ಆದರೆ ಹೀಗೆ ದೀಪಗಳ ಬೆಳಕಿನಲ್ಲಿ ಕಂಗೊಳಿಸುತ್ತಿರುವ ಪ್ರದೇಶ ನಿಜಕ್ಕೂ ಗುಜರಾತ್ ರಾಜ್ಯದ ಅಹಮದಾಬಾದ್ ನಗರದ ಸಬರಮತಿ ನದಿತೀರವೇ ಎಂದು ಪರಿಶೀಲಿಸಿದಾಗ, ಇದು ನಮ್ಮ ದೇಶದ ಫೋಟೋವೇ ಅಲ್ಲ ಎಂಬುದು ಪತ್ತೆಯಾಗಿದೆ.

ಆಲ್ಟ್‌ನ್ಯೂಸ್ ಈ ಫೋಟೋದ ಜಾಡು ಹಿಡಿದು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿದ್ದು, ಆಗ ಇದೇ ರೀತಿ ಫೋಟೋ ಟ್ರಾವೆಲ್ ವೆಬ್‌ಸೈಟ್ ‘ಟ್ರಿಪ್ ಅಡ್ವೈಸರ್’ನಲ್ಲಿ ಪತ್ತೆಯಾಗಿದೆ. ಅದರೊಂದಿಗೆ ಆ ಫೋಟೋ ದಕ್ಷಿಣ ಕೊರಿಯಾದ ಹ್ಯಾನ್ ನದಿ ತೀರದ ಪ್ರದೇಶ ಎಂದು ಬರೆಯಲಾಗಿತ್ತು. ಜೊತೆಗೆ ಈ ಫೋಟೋದ ಲೊಕೇಶನ್ ಅನ್ನು ಗೂಗಲ್ ಮ್ಯಾಪ್‌ನಲ್ಲಿ ಪರಿಶೀಲಿಸಿದಾಗಲೂ ಅದು ದಕ್ಷಿಣ ಕೊರಿಯಾ ಫೋಟೋವೇ ಎಂಬುದು ಸ್ಪಷ್ಟವಾಗಿದೆ.

ಹೀಗೆ ಈ ಪೋಟೋಗಳು ಸಿಯೋಲ್, ದಕ್ಷಿಣ ಕೊರಿಯಾದ ಫೋಟೋ ಎಂದು ತಿಳಿಯುತ್ತಿದ್ದಂತೇ ಈ ಫೋಟೋಗಳು ಅಹಮದಾಬಾದ್ ನಗರದ್ದು ಎಂದು ಟ್ವೀಟ್ ಮಾಡಿದ್ದ ಮೇಯರ್ ಅವರಿಗೆ ಭಾರಿ ಮುಖಭಂಗವಾಗಿದೆ.

-ವೈರಲ್ ಚೆಕ್