ಬೆಂಗಳೂರು(ನ.05): ಶಬರಿಮಲೆ ಅಯ್ಯಪ್ಪ ಸ್ವಾಮಿಯ ಭಕ್ತನ ಮೇಲೆ ಪೊಲೀಸರು ದರ್ಪ ತೋರಿಸುತ್ತಿರುವಂತೆ ಭಾಸವಾಗುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆ ಫೋಟೋದಲ್ಲಿ ಅಯ್ಯಪ್ಪ ಸ್ವಾಮಿಯ ಪ್ರತಿಮೆಯನ್ನು ಹಿಡಿದಿರುವ ವ್ಯಕ್ತಿಯ ಎದೆಯ ಮೇಲೆ ಪೊಲೀಸ್‌ ಅಧಿಕಾರಿಯೊಬ್ಬರು ಬೂಟಿನ ಕಾಲಿಟ್ಟಿರು ದೃಶ್ಯವಿದೆ. 

ಈ ಫೋಟೋವನ್ನು ದೆಹಲಿ ಎಂಎಲ್‌ಎ ಕಪಿಲ್‌ ಮಿಶ್ರಾ ಟ್ವೀಟ್‌ ಮಾಡಿ, ‘ನೋಡಿ.. ಅಯ್ಯಪ್ಪನ ಭಕ್ತನ ಕಣ್ಣಲ್ಲಿ ಪೊಲೀಸರ ದರ್ಪ, ದಬ್ಬಾಳಿಕೆ ಬಗ್ಗೆ ಒಂದಿಂಚೂ ಭಯ ಇಲ್ಲ, ಅದು ಅಯ್ಯಪ್ಪಸ್ವಾಮಿಯ ಭಕ್ತಿಗಿರುವ ಪವರ್‌’ ಎಂದು ಒಕ್ಕಣೆಯನ್ನು ಬರೆದಿದ್ದರು. ಅವರ ಆ ಟ್ವೀಟ್‌ 2,700 ಲೈಕ್‌ ಪಡೆದಿದ್ದು, 1,400 ಬಾರಿ ರೀಟ್ವೀಟ್‌ ಆಗಿದೆ.

ಅನಂತರದಲ್ಲಿ ಈ ಫೋಟೋ ವೈರಲ್‌ ಆಗಿದೆ. ಕೆಲವರು ‘ಅಯ್ಯಪ್ಪ ಸ್ವಾಮಿ ಭಕ್ತರ ಮೇಲೆ ಕೇರಳ ಪೊಲೀಸರ ದೌರ್ಜನ್ಯ ನೋಡಿ’ ಎಂದು ಒಕ್ಕಣೆ ಬರೆದು ಶೇರ್‌ ಮಾಡಿದ್ದಾರೆ. ಆದರೆ ನಿಜಕ್ಕೂ ಕೇರಳ ಪೊಲೀಸರು ಅಯ್ಯಪ್ಪ ಸ್ವಾಮಿ ಭಕ್ತರ ಮೇಲೆ ಈ ರೀತಿ ದರ್ಪ ತೋರಿದ್ದರೇ ಎಂದು ಪರಿಶೀಲಿಸಿದಾಗ, ಇದು ಸುಳ್ಳು ಸುದ್ದಿ ಎಂಬುದು ಪತ್ತೆಯಾಗಿದೆ. ವಾಸ್ತವವಾಗಿ ರಾಜೇಶ್‌ ಕುರುಪ್‌ ಎಂಬುವವರ ಫೋಟೋಶೂಟ್‌ ಚಿತ್ರ ಅದು. ಇದೇ ರೀತಿಯ ಇನ್ನೊಂದು ಫೋಟೋದಲ್ಲಿ ಫೋಟೋಗ್ರಾಫರ್‌ ಸ್ಟಾಪ್‌ ಇದ್ದು ಅದರಲ್ಲಿ, ಮಧುಕೃಷ್ಣ ಎಂದು ಬರೆಯಲಾಗಿದೆ. 

ಆಲ್ಟ್‌ ನ್ಯೂಸ್‌ ರಾಜೇಶ್‌ ಕುರುಪ್‌ ಅವರನ್ನೇ ಸಂಪರ್ಕಿಸಿದ್ದು, ರಾಜೇಶ್‌ ಅವರು ಇದೊಂದು ಫೋಟೋಶೂಟ್‌ ಚಿತ್ರ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಫೋಟೋಗ್ರಾಫರ್‌, ಮಧುಕೃಷ್ಣ ಅವರು ಕೂಡ ಸ್ಪಷ್ಟೀಕರಣ ನೀಡಿದ್ದು, ‘ಈ ಫೋಟೋವನ್ನು ಅಕ್ಟೋಬರ್‌ 6ರಂದು ತೆಗೆಯಲಾಗಿತ್ತು. ಆದರೆ ಶಬರಿಮಲೆ ದೇವಸ್ಥಾನ ತೆರೆದಿದ್ದು ಅಕ್ಟೋಬರ್‌ 17ಕ್ಕೆ’ ಎಂದಿದ್ದಾರೆ. ಹಾಗಾಗಿ ಇದು ಶಬರಿಮಲೆ ಫೋಟೋ ಅಲ್ಲ ಎಂಬುದು ಸ್ಪಷ್ಟ.