ನವದೆಹಲಿ (ಡಿ. 19): ಪಂಚ ರಾಜ್ಯಗಳ ಚುನಾವಣೆಗೂ ಮುನ್ನ ಹಲವು ಸುಳ್ಳುಸುದ್ದಿಗಳು ಹರಿದಾಡಿದ್ದು, ಫಲಿತಾಂಶದ ಬಳಿಕವೂ ಚುನಾವಣಾ ಆಧಾರಿತ ಸುಳ್ಳುಸುದ್ದಿಗಳು ಸದ್ದು ಮಾಡುತ್ತಲೇ ಇವೆ.

ಸದ್ಯ ‘ಚುನಾವಣೆ ಬಳಿಕ ರಾಹುಲ್ ಗಾಂಧಿ ಇಸ್ಲಾಂಗೆ ಮತ್ತೆ ವಾಪಸ್ ಬಂದಿದ್ದಾರೆ’ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾಹುಲ್ ಗಾಂಧಿ ಇಸ್ಲಾಂ ಧರ್ಮದ ಬಿಳಿ ಟೋಪಿ ಧರಿಸಿ ಮಸೀದಿಗೆ ತೆರಳುತ್ತಿರುವ ವಿಡಿಯೋದೊಂದಿಗೆ, ‘ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಚುನಾವಣೆ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಮುಖಂಡರೊಂದಿಗೆ ಮಸೀದಿಗೆ ಭೇಟಿ ನೀಡಿದರು’ ಎಂದು ಒಕ್ಕಣೆ ಬರೆದು ಪೋಸ್ಟ್ ಮಾಡಲಾಗಿದೆ.

ಈ ವಿಡಿಯೋವನ್ನು ನರೇಂದ್ರ ಮೋದಿ-ಮೋದಿ ನಮೋ ಇತ್ಯಾದಿ ಫೇಸ್‌ಬುಕ್ ಪೇಜ್‌ಗಳು ಸೇರಿದಂತೆ ಹಲವಾರು ಜನರು ಶೇರ್ ಮಾಡಿದ್ದಾರೆ. ಆದರೆ ನಿಜಕ್ಕೂ ಚುನಾವಣಾ ಫಲಿತಾಂಶದ ಬಳಿಕ ರಾಹುಲ್ ಮಸೀದಿಗೆ ತೆರಳಿದ್ದರೇ ಎಂದು ಪರಿಶೀಲಿಸಿದಾಗ ಇದು ನಕಲಿ ವಿಡಿಯೋ ಎಂಬುದು ಪತ್ತೆಯಾಗಿದೆ.

ವಾಸ್ತವವಾಗಿ 2016 ರಲ್ಲಿ ರಾಹುಲ್ ಗಾಂಧಿ ಅಂಬೇಡ್ಕರ್ ನಗರಕ್ಕೆ ಭೇಟಿ ನೀಡಿ ಕಿಚೌಚಾ ದರ್ಗಾಕ್ಕೆ ಭೇಟಿ\ ನೀಡಿದ್ದ ಸಂದರ್ಭದ ವಿಡಿಯೋ ಇದು. ಆಗ ಹಲವಾರು ಸುದ್ದಿ ಮಾಧ್ಯಮಗಳೂ ಇದನ್ನು ವರದಿ ಮಾಡಿದ್ದವು. ಅದರಲ್ಲಿ ‘ರಾಹುಲ್  ಗಾಂಧಿ ಉತ್ತರ ಪ್ರದೇಶದ ಹನುಮಾನ್ ಗಾರ್ಹಿ ದೇವಾಲಯ ಮತ್ತು ಅಯೋಧ್ಯೆಗೆ ಭೇಟಿ ನೀಡಿದ ಬಳಿಕ ಅಂಬೇಡ್ಕರ್ ನಗರದಲ್ಲಿರುವ ಕಿಚೌಚಾ ಶರೀಫ್ ದರ್ಗಾಕ್ಕೆ ಭೇಟಿ ನೀಡಿದರು’ ಎಂದಿದೆ. 

ಇದೇ ವಿಡಿಯೋವನ್ನು ಬಳಸಿಕೊಂಡು ಬೇರೊಂದು ನಿರೂಪಣೆ ನೀಡಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳುಸುದ್ದಿ ಹರಡಲಾಗುತ್ತಿದೆ. 

- ವೈರಲ್ ಚೆಕ್