ನವದೆಹಲಿ (ಅ. 30): ಅಯೋಧ್ಯೆ ವಿಚಾರಣೆ ಮುಂದೂಡಿಕೆಯಾಗುತ್ತಲೇ, ಸರ್ಕಾರವು ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಬಿಜೆಪಿ, ಸಂಘ ಪರಿವಾರದ ಮುಖಂಡರು ಆಗ್ರಹಿಸಿದ್ದಾರೆ.

ಆದರೆ ಬಿಜೆಪಿಯ ಈ ಆಗ್ರಹಕ್ಕೆ ಕಾಂಗ್ರೆಸ್ ಹಾಗೂ ಇತರ ಹಲವು ಬಿಜೆಪಿಯೇತರ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ‘ವಿವಾದದ ವಿಚಾರಣೆಯ ದಿನಾಂಕವನ್ನು ಸೂಕ್ತ ಪೀಠವು ಜನವರಿಯಲ್ಲಿ ನಿರ್ಧರಿಸಲಿದೆ. ನಮಗೆ ಹಲವು ಇತರ
ಆದ್ಯತೆಗಳಿವೆ’ ಎಂದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಪೀಠ ಹೇಳುತ್ತಿದ್ದಂತೆಯೇ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು ಸುಗ್ರೀವಾಜ್ಞೆ ಹೊರಡಿಸುವ ಕುರಿತು ಆಗ್ರಹ ಆರಂಭಿಸಿದ್ದಾರೆ. 

ಇದರಿಂದಾಗಿ 2019 ರ ಚುನಾವಣೆಯಲ್ಲಿ ಈ ವಿವಾದವು ದೊಡ್ಡ ಚುನಾವಣಾ ವಿಷಯವಾಗಿ ಮಾರ್ಪಾಡಾಗುವ ಸಾಧ್ಯತೆ ಇದೆ. ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವ ಹಿಂದೂ ಪರಿಷತ್, ರಾಮಮಂದಿರ ನಿರ್ಮಾಣಕ್ಕಾಗಿ ನಾವು ಶಾಶ್ವತವಾಗಿ ನ್ಯಾಯಾಲಯ ಆದೇಶಕ್ಕಾಗಿಯೇ ಕಾದು ಕೂರಲಾಗದು. ಸರ್ಕಾರ ಸೂಕ್ತ ಕಾನೂನಿನ ಮೂಲಕ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದೆ.

ಇನ್ನು ಸುದ್ದಿಗಾರರ ಜತೆ ಮಾತನಾಡಿದ ರಾಮಜನ್ಮಭೂಮಿ ಹೋರಾಟಗಾರ ಹಾಗೂ ಬಿಜೆಪಿ ಮುಖಂಡ ವಿನಯ್ ಕಟಿಯಾರ್, ‘ಕಾಂಗ್ರೆಸ್ ಒತ್ತಡದ ಹಿನ್ನೆಲೆಯಲ್ಲಿ ವಿವಾದದ ಇತ್ಯರ್ಥ ವಿಳಂಬವಾಗುತ್ತಿದೆ. ಕಪಿಲ್ ಸಿಬಲ್, ಪ್ರಶಾಂತ್ ಭೂಷಣ್ ಅಂಥವರು ವಿಳಂಬಕ್ಕೆ ಕಾರಣ ರಾಗಿದ್ದಾರೆ. ಎಲ್ಲಿಯವರೆಗೆ ರಾಮಭಕ್ತರು ಕಾಯಬೇಕು?’ ಎಂದು ಪ್ರಶ್ನಿಸಿದರು.

ಉತ್ತಪ್ರದೇಶದ ಹಿರಿಯ ಬಿಜೆಪಿ ಮುಖಂಡ ಸಂಜೀವ್ ಕುಮಾರ್ ಬಾಲ್ಯಾನ್ ಕೂಡ ಕೋರ್ಟ್ ತೀರ್ಮಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ‘ಕೋರ್ಟ್‌ನ ಆದ್ಯತೆಗಳ ಬಗ್ಗೆ ನನಗೆ ಅಚ್ಚರಿಯಾಗಿದೆ. ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ನನ್ನ ನಿಲುವು. ಸರ್ಕಾರವು ತನ್ನ ಮುಂದಿನ ಆಯ್ಕೆಗಳನ್ನು ಪರಿಶೀಲಿಸಬೇಕು’ ಎಂದು ಆಗ್ರಹಿಸಿದರು.

ಶಿವಸೇನೆ ಮುಖಂಡ ಸಂಜಯ್ ರಾವುತ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ, ‘ಇದು ನಂಬಿಕೆಯ ವಿಚಾರ. ನ್ಯಾಯಾಲಯಗಳು ಇದನ್ನು ನಿರ್ಧರಿಸಲು ಆಗದು. ಸರ್ಕಾರ ಅಧ್ಯಾದೇಶ ಹೊರಡಿಸಬೇಕು’ ಎಂದು ಆಗ್ರಹಿಸಿದರು.

‘ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ರಾಮಮಂದಿರ ಕಾನೂನನ್ನು ರೂಪಿಸಬೇಕು. ಅಲ್ಲದೆ, ಜ.  31, ಫೆ.1 ರಂದು ಪ್ರಯಾಗ್‌ರಾಜ್‌ನಲ್ಲಿ ಧರ್ಮ ಸಂಸತ್ತು ನಡೆಯಲಿದ್ದು, ಅಲ್ಲಿ ಮುಂದಿನ ನಡೆಗಳ ಬಗ್ಗೆ ನಿರ್ಧರಿಸಲಾಗುತ್ತದೆ’ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ.

ಕಾಂಗ್ರೆಸ್ ನಕಾರ:

ಈ ನಡುವೆ, ಬಿಜೆಪಿ ಆರೋಪ ನಿರಾಕರಿಸಿದ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ, ‘೫ ವರ್ಷಕ್ಕೊಮ್ಮೆ ಚುನಾವಣೆ ಬಂತೆಂದರೆ ಬಿಜೆಪಿ ಇದೇ ರಾಗ-ಇದೇ ಹಾಡು ಹಾಡಲು ಆರಂಭಿಸುತ್ತದೆ. ಇದೊಂದು ಬಿಜೆಪಿಯ ಹಳೇ ಚಾಳಿ. ಸುಪ್ರೀಂ ಕೋರ್ಟ್ ಮುಂದೆ ವಿಚಾರ ಇರುವ ಕಾರಣ ಕೋರ್ಟೇ ಅದನ್ನು ನಿರ್ಧರಿಸಬೇಕು. ಆತುರಾತುರವಾಗಿ ಯಾವುದೇ ನಿರ್ಣಯ ಕೈಗೊಳ್ಳಬಾರದು’ ಎಂದರು

‘ಸುಗ್ರೀವಾಜ್ಞೆ ಹೊರಡಿಸಬೇಕು ಎಂಬ ಬಿಜೆಪಿಗರ ಆಗ್ರಹಕ್ಕೆ ಪ್ರಧಾನಿಯೇ ಉತ್ತರಿಸಬೇಕು. ಆದರೆ ಪ್ರಧಾನಿ ಯಾವುದಕ್ಕೂ ಉತ್ತರಿಸದೇ ಮೌನವಾಗಿರುತ್ತಾರೆ ಎಂಬುದು ಎಲ್ಲರಿಗೆ ಗೊತ್ತೇ ಇದೆ’ ಎಂದು ಚಿದು ಚಟಾಕಿ ಹಾರಿಸಿದರು.
ಕಾಂಗ್ರೆಸ್ ಮುಖಂಡ ಆನಂದ ಶರ್ಮಾ ಅವರು, ‘ಎಲ್ಲರೂ ಸುಪ್ರೀಂ ಕೋರ್ಟ್ ಆದೇಶಕ್ಕೆ ಕಾಯಬೇಕು. ಕಾಂಗ್ರೆಸ್ ಪಕ್ಷ ಕೋರ್ಟ್ ಆದೇಶವನ್ನು ಸ್ವೀಕರಿಸಲಿದೆ’ ಎಂದು ಹೇಳಿದರು.

ಒವೈಸಿ ಸವಾಲು:

ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಮುಖಂಡ ಅಸಾದುದ್ದೀನ್ ಒವೈಸಿ ಅವರು ಬಿಜೆಪಿ ಆಗ್ರಹದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿ, ‘ಧೈರ್ಯವಿದ್ದರೆ ಕೇಂದ್ರ ಸರ್ಕಾರ ಆದೇಶ ಹೊರಡಿಸಲಿ. ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಬೇಕು. ಸರ್ಕಾರ ಅಧ್ಯಾದೇಶ ಹೊರಡಿಸಿದರೆ ಅದು ಸಂವಿಧಾನಬಾಹಿರವಾಗಲಿದೆ. ಈ ದೇಶ ಸೌದಿ ಅರೇಬಿಯಾ, ವ್ಯಾಟಿಕನ್ ರೀತಿ ನಡೆಯುವ ದೇಶವಲ್ಲ’ ಎಂದು ಕಿಡಿಕಾರಿದರು.