Asianet Suvarna News Asianet Suvarna News

ಇನ್ನು ವಾಹನಗಳಿಗೆ ಬಣ್ಣದ ಸ್ಟಿಕ್ಕರ್‌!

ಇನ್ನು ಮುಂದೆ ನಿಮ್ಮ ವಾಹನಗಳಿಗೆ ಬಣ್ಣದ ಸ್ಟಿಕರ್ ಗಳನ್ನು ಅಂಟಿಸಲಾಗುತ್ತದೆ.  ಇಂಧನ ಬಳಕೆ ಆಧಾರದ ಮೇಲೆ ಸ್ಟಿಕರ್ ಹಚ್ಚಲಾಗುತ್ತದೆ. 

Vehicles To Have Colour Coded Stickers Based On Fuel
Author
Bengaluru, First Published Aug 14, 2018, 11:56 AM IST

ನವದೆಹಲಿ: ಇಂಧನ ಬಳಕೆಯ ಆಧಾರದಲ್ಲಿ ವಾಹನಗಳನ್ನು ವರ್ಗೀಕರಿಸಿ, ಅವುಗಳಿಗೆ ಹಾಲೋಗ್ರಾಂ ಆಧರಿತ ಬಣ್ಣದ ಸ್ಟಿಕ್ಕರ್‌ ಅಳವಡಿಸುವ ಬಗ್ಗೆ ಕೇಂದ್ರ ಸರ್ಕಾರದ ಸಲಹೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ಸ್ವೀಕರಿಸಿದೆ. ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಸ್ತೆ ಸಾರಿಗೆ ಸಚಿವಾಲಯ ನ್ಯಾ. ಎಂ.ಬಿ. ಲೋಕೂರ್‌ ನ್ಯಾಯಪೀಠಕ್ಕೆ ಸಚಿವಾಲಯ ಈ ಕುರಿತ ಸಲಹೆಗಳನ್ನು ನೀಡಿತ್ತು. ಮಾಲಿನ್ಯಮಟ್ಟಮಿತಿ ಮೀರಿದಾಗ ನಿರ್ದಿಷ್ಟಬಣ್ಣದ ಸ್ಟಿಕ್ಕರ್‌ ಹೊಂದಿದ ವಾಹನಗಳಿಗೆ ನಿರ್ಬಂಧ ಹೇರಲು, ಬಣ್ಣ ಆಧಾರಿತ ಸ್ಟಿಕ್ಕರ್‌ ಯೋಜನೆ ಸಹಾಯಕವಾಗಲಿದೆ. ಅಂದರೆ ಸಮ-ಬೆಸ ಸಂಖ್ಯೆ ಆಧರಿತ ಯೋಜನೆ ಸಮಯದಲ್ಲಿ ನಿರ್ದಿಷ್ಟಇಂಧನ ಬಳಸುವ ವಾಹನಗಳಿಗೆ ಸಂಚಾರಕ್ಕೆ ನಿಷೇಧ ಹೇರಲು ನೆರವಾಗಲಿದೆ. ಇದು ಇತರೆ ಯೋಜನೆಗಿಂತ ಹೆಚ್ಚು ವೈಜ್ಞಾನಿಕವಾದುದು ಮತ್ತು ಉತ್ತಮವಾದುದು ಎಂದು ಸರ್ಕಾರ ತಿಳಿಸಿದೆ.

ಪ್ಯಾರಿಸ್‌ನಲ್ಲಿ ಬಳಕೆಯಲ್ಲಿರುವ ಈ ಮಾದರಿಯ ಪ್ರಕಾರ ಪೆಟ್ರೋಲ್‌, ಸಿಎನ್‌ಜಿ ಮತ್ತು ಡೀಸೆಲ್‌ ಇಂಧನ ಬಳಕೆಯ ಆಧಾರದಲ್ಲಿ ಬಣ್ಣದ ಸ್ಟಿಕ್ಕರ್‌ಗಳನ್ನು ವಾಹನಗಳಿಗೆ ಅಂಟಿಸಬೇಕಾಗಿದೆ. ಪೆಟ್ರೋಲ್‌ ಮತ್ತು ಸಿಎನ್‌ಜಿ ಬಳಸುವ ವಾಹನಗಳಿಗೆ ತಿಳಿ ನೀಲಿ ಸ್ಟಿಕ್ಕರ್‌ ಮತ್ತು ಡೀಸೆಲ್‌ ವಾಹನಗಳಿಗೆ ಕಿತ್ತಲೆ ಬಣ್ಣದ ಸ್ಟಿಕ್ಕರ್‌ಗಳನ್ನು ಬಳಸಲು ನಿರ್ದೇಶಿಸಲಾಗಿದೆ. ಅಲ್ಲದೆ, ಎಲೆಕ್ಟ್ರಿಕ್‌ ಮತ್ತು ಹೈಬ್ರಿಡ್‌ ಕಾರುಗಳಿಗೆ ಹಸಿರು ಬಣ್ಣದ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸಲು ನಿಯಮ ರೂಪಿಸುವಂತೆ ಕೋರ್ಟ್‌ ಸಲಹೆ ನೀಡಿದೆ.

ದೆಹಲಿ-ಎನ್‌ಸಿಆರ್‌ನಲ್ಲಿ ಓಡಾಡುವ ವಾಹನಗಳಿಗೆ ಸೆ.30ರೊಳಗೆ ಬಣ್ಣದ ಸ್ಟಿಕ್ಕರ್‌ಗಳನ್ನು ಅಂಟಿಸುವ ಕ್ರಮವನ್ನು ಜಾರಿಗೊಳಿಸುವಂತೆ ಕೋರ್ಟ್‌ ಸೂಚಿಸಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯ ಕುರಿತಂತೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯ ವೇಳೆ ಕೋರ್ಟ್‌ ಈ ನಿರ್ದೇಶನ ನೀಡಿದೆ.

Follow Us:
Download App:
  • android
  • ios