ಉತ್ತರ ಪ್ರದೇಶ (ಡಿ.31):  ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಕುಂಭ ಮೇಳಕ್ಕೆ ದಿನಾಂಕ ನಿಗದಿಯಾಗಿದೆ. ಜನವರಿ 15 ರಿಂದ ಮಾರ್ಚ್ 4 ರ ವರೆಗೆ ನಡೆಯಲಿರುವ ಅರ್ಧ ಕುಂಭಮೇಳಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ. 2019 ಕ್ಕೆ ಚುನಾವಣೆ ಎದುರಾಗಿರುವುರಿಂದ ಹಿಂದು ಮತಗಳ ಓಲೈಕೆಗೆ ಕುಂಭ ಮೇಳವನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.

ಈ ಹಿನ್ನೆಲೆಯಲ್ಲಿ ಧಾರ್ಮಿಕ ವಾಗಿ ಪ್ರಾಮುಖ್ಯತೆ ಪಡೆದಿರುವ ಕುಂಭಮೇಳವನ್ನು ಎಲ್ಲೆಲ್ಲಿ ಆಚರಣೆ ಮಾಡಲಾಗುತ್ತದೆ?, ಅದರ ಪೌರಾಣಿಕ ಹಿನ್ನೆಲೆ ಏನು? 2019 ರ ಅರ್ಧಕುಂಭ ಮೇಳದ ವಿಶೇಷತೆ ಏನು? ಇತ್ಯಾದಿ ವಿವರ ಇಲ್ಲಿದೆ.

ನಾಲ್ಕು  ಸ್ಥಳಗಳಲ್ಲಿ ಮಾತ್ರ ಕುಂಭಮೇಳ ಆಚರಣೆ

ಕುಂಭ ಮೇಳ ಹಿಂದು ಧರ್ಮದ ಸಾಮೂಹಿಕ ತೀರ್ಥಯಾತ್ರೆ. ಭೌಗೋಳಿಕವಾಗಿ ಭಾರತದ 4 ಸ್ಥಳಗಳಲ್ಲಿ ಕುಂಭಮೇಳವನ್ನು ಆಚರಿಸಲಾಗುತ್ತದೆ. ಹಿಂದುಗಳು ಪವಿತ್ರವೆಂದು ಭಾವಿಸುವ ನದಿಗಳ ಸಂಗಮ ಸ್ಥಳದಲ್ಲಿ ಆಚರಿಸಲಾಗುತ್ತದೆ. ಅಂದರೆ ಉತ್ತರಾಖಂಡದ ಹರಿದ್ವಾರ, ಮಧ್ಯಪ್ರದೇಶದ ಉಜ್ಜಯಿನಿ, ಮಹಾರಾಷ್ಟ್ರದ ನಾಸಿಕ್, ಉತ್ತರ ಪ್ರದೇಶದ ಪ್ರಯಾಗ್ ರಾಜ್ (ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮ)ದಲ್ಲಿ ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ‌್ಯಕ್ರಮಗಳಲ್ಲಿ ಒಂದಾದ ಕುಂಭಮೇಳ ನಡೆಯುತ್ತದೆ.

ಪೌರಾಣಿಕ ಹಿನ್ನೆಲೆ ಏನು?

ಸಮುದ್ರ ಮಥನದಲ್ಲಿ ದೊರೆತ ಅಮೃತ ಕಲಶಕ್ಕಾಗಿ ದೇವತೆಗಳು ಮತ್ತು ರಾಕ್ಷಸರ ನಡುವೆ ೧೨ ದಿನ ಯುದ್ಧ ನಡೆಯುತ್ತದೆ. ಯುದ್ಧ ನಡೆದಿರುವಾಗಲೇ ಅಮೃತ ಕಲಶದ (ಕುಂಭ) ತೆಗೆದುಕೊಂಡು ಹೋಗುವಾಗ ಅಮೃತದ ನಾಲ್ಕು ಹನಿಗಳು ಅಲಹಾಬಾದ್, ಹರಿದ್ವಾರ, ಉಜ್ಜೆಯಿನಿ ಮತ್ತು ನಾಸಿಕ್‌ನಲ್ಲಿ ಬಿದ್ದಿವೆ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ.

ಈ ಹಿನ್ನೆಲೆಯಲ್ಲಿ ಹರಿದ್ವಾರ (ಗಂಗಾ ನದಿ), ನಾಸಿಕ್ (ಗೋದಾವರಿ ನದಿ), ಉಜ್ಜೆಯಿನಿ(ಕ್ಷಿಪ್ರಾ), ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಯಮುನಾ, ಸರಸ್ವತಿ ಮತ್ತು ಗಂಗಾ ನದಿಯ ಸಂಗಮ ಸ್ಥಳದಲ್ಲಿ ಕುಂಭ ಮೇಳ ನಡೆಯುತ್ತದೆ.

ಕುಂಭಮೇಳಕ್ಕಿದೆ 2000 ವರ್ಷಗಳ ಇತಿಹಾಸ

ಕುಂಭಮೇಳ ಸಂಪ್ರದಾಯಕ್ಕೆ 2000 ವರ್ಷಗಳ ಇತಿಹಾಸವಿದೆ ಎನ್ನಲಾಗುತ್ತದೆ. ಪೂರ್ಣ ಕುಂಭಮೇಳವನ್ನು 12 ವರ್ಷಕ್ಕೊಮ್ಮೆ ಆಚರಿಸುವ ಪದ್ಧತಿ ಇದೆ. ಹಾಗಾಗಿ ಈ ನಾಲ್ಕು ಪವಿತ್ರ ಕ್ಷೇತ್ರಗಳಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಆಚರಿಸಲಾಗುತ್ತಿದೆ. ಆ ಪದ್ಧತಿ ಪ್ರಕಾರ ಮುಂದಿನ ಪೂರ್ಣಕುಂಭಮೇಳ 2025 ಕ್ಕೆ  ನಡೆಯಲಿದೆ. 

ಅರ್ಧ ಕುಂಭ ಮೇಳ: 2007
 ಕುಂಭ ಮೇಳ: 2012
 ಅರ್ಧ ಕುಂಭ ಮೇಳ: 2019
 ಕುಂಭಮೇಳ: 2025

ದಾಖಲೆ ಮಾಡಿದ ಹಿಂದಿನ ಕುಂಭಮೇಳಗಳು

2013 ರಲ್ಲಿ ಅಲಹಾಬಾದ್ (ಪ್ರಯಾಗ ರಾಜ್) ಆಯೋಜಿಸಿದ್ದ ಕುಂಭ ಮೇಳಕ್ಕೆ 10 ಕೋಟಿಗೂ ಅಧಿಕ ಜನರು ಭೇಟಿ ನೀಡಿದ್ದರು. ಧಾರ್ಮಿಕ ಸಮಾರಂಭವೊಂದಕ್ಕೆ ಜಗತ್ತಿನಲ್ಲಿಯೇ ಭೇಟಿ ನೀಡಿದ ಅತಿ ಹೆಚ್ಚು ಜನಸಂಖ್ಯೆ ಅದಾಗಿತ್ತು. 2013 ರಲ್ಲಿ ನೆರೆದಿದ್ದ ಜನಸಂಖ್ಯೆಯು ಅಥೆನ್ಸ್‌ನ ಜನಸಂಖ್ಯೆಗಿಂತ ಹೆಚ್ಚಾಗಿತ್ತು. 2001 ರ ಕುಂಭಮೇಳದಲ್ಲಿ ಸುಮಾರು 7 ಕೋಟಿಗೂ ಅಧಿಕ ಜನ ಸೇರಿದ್ದರು.

ಸುಮಾರು 55 ದಿನ ನಡೆದ ಆಚರಣೆಯಲ್ಲಿ ಒಂದೇ ದಿನ ೪ ಕೋಟಿ ಜನರು ಭೇಟಿ ನೀಡಿದ್ದ ದಾಖಲೆಯೂ ಆಗಿತ್ತು. ಆ ವರ್ಷದ ಕುಂಭಮೇಳವು ಜಾಗತಿಕವಾಗಿಯೂ ಗಮನ ಸೆಳೆದಿತ್ತು. ಕಾರಣ ಕುಂಭಮೇಳದ ಕಿಕ್ಕಿರಿದ ಜನಸಂಖ್ಯೆಯನ್ನು ಬಾಹ್ಯಾಕಾಶದಿಂದ ತೆಗೆದ ಪೋಟೋ. ಸಾವೂ ಸಂಭವಿಸಿತ್ತು: 2013 ರ ಕುಂಭಮೆಳದಲ್ಲಿ ದುರಂತವೂ ಸಂಭವಿಸಿತ್ತು. ಅಲಹಾಬಾದ್ ರೈಲ್ವೆ ನಿಲ್ದಾಣದಲ್ಲಿ 36 ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು.

ಕುಂಭಮೇಳದಲ್ಲಿ ಏನೇನಿರುತ್ತೆ?

ಆರತಿ: ಕುಂಭ ಮೇಳದ ಪ್ರಮುಖ ಆಚರಣೆ ಆರತಿ. ನದಿಯ ತಟದಲ್ಲಿ ನಿಂತು ಲಕ್ಷಾಂತರ ಭಕ್ತರು ಮುಂಜಾನೆ ಮತ್ತು ಸಂಜೆ ಆರತಿ ಬೆಳಗುತ್ತಾರೆ.
 

ಸ್ನಾನ: ಪ್ರಯಾಗರಾಜ್‌ದಲ್ಲಿ ನಡೆಯುವ ಕುಂಭಮೇಳದಲ್ಲಿ ನಡೆಯುವ ಸ್ನಾನವನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಲಕ್ಷಾಂತರ ಜನರು ನದಿ ತಟದಲ್ಲಿ ಸ್ನಾನ ಮಾಡುತ್ತಾರೆ. ಇದರಿಂದ ಪಾಪಕರ್ಮಗಳು, ಕೆಟ್ಟ ಶಕ್ತಿಗಳು ತೊಳೆದು ಹೋಗುತ್ತದೆ ಎಂಬ ನಂಬಿಕೆ ಇದೆ.

ಕಲ್ಪವಾಸ್: ಪುರಾಣಗಳ ಪ್ರಕಾರ ಅಹಿಂಸೆ, ಶಾಂತಿಯನ್ನೇ ಮೂಲದ್ಯೇಯವಾಗಿಸಿಕೊಂಡಿರುವ ಸೂರ್ಯ ಉದಯವಾಗುವುದಕ್ಕೂ ಮೊದಲೇ ಎದ್ದು ದಿನಕ್ಕೆ ೩ ಬಾರಿ ಮೀಯುವ ಮಹರ್ಷಿಗಳೇ ಕಲ್ಪ ವಾಸಿಗಳು. ಕುಂಭ ಮೇಳದ ಸಂದರ್ಭದಲ್ಲಿ ಈ ಕಲ್ಪವಾಸಿಗಳು ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. 

ಈ ಬಾರಿ ಕುಂಭಮೇಳದ ಆಕರ್ಷಣೆಗಳೇನು? 

ಪೇಶ್ವೈ: ಸ್ಥಳೀಯ ಭಾಷೆಯಲ್ಲಿ ‘ಪ್ರವೇಶೈ’ ಎಂದು ಕರೆಯಲಾಗುತ್ತದೆ. ಕುಂಭ ಮೇಳದ ಆರಂಭದ ದಿನ ದೇಶ ವಿದೇಶಗಳಿಂದ ಆಗಮಿಸುವ ಭಕ್ತಾದಿಗಳನ್ನು ಬರಮಾಡಿಕೊಳ್ಳುವ ಮೆರವಣಿಗೆ. ಈ ದಿನ ಸಂತರು ಆನೆ, ಕುದುರೆಗಳ ಮೇಲೆ ಆಗಮಿಸುತ್ತಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳು: ಈ ಬಾರಿ ರಾಜ್ಯ ಸಂಸ್ಕೃತಿ ಇಲಾಖೆಯಡಿಯಲ್ಲಿ ದೇಶದ ವೈವಿಧ್ಯಮಯ ಸಂಸ್ಕೃತಿಗಳು, ಆಚಾರ ವಿಚಾರಗಳು ಅನಾವರಣಗೊಳ್ಳಲಿವೆ. ಜೊತೆಗೆ ಲೈಟ್ ಶೋ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಥಿಮಾಟಿಕ್ ಗೇಟ್‌ಗಳು ಈ ಬಾರಿಯ

ವಿಶೇಷತೆ.

ಜಲ ಮಾರ್ಗಗಳು: ಈ ಬಾರಿ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಕುಂಭ ಮೇಳಕ್ಕೆ ಭಕ್ತರು ಭೂ, ವಾಯು ಜಲ ಮಾರ್ಗಗಳ ಮೂಲಕವೂ ಬರಬಹುದಾಗಿದೆ. ಭಾರತ ಒಳನಾಡು ಜಲ ಸಾರಿಗೆ ಮಂಡಳಿಯು ಯಮುನಾ ನದಿ ಸಮೀ ಪದ ಸಂಗಮ್ ಘಾಟ್ ಬಳಿಗೆ ದೋಣಿ ಸೇವೆಯನ್ನು ಕಲ್ಪಿಸಿದೆ. ಈ ಮೂಲಕವಾಗಿ ಸುಜವಾನ್ ಘಾಟ್‌ನಿಂದ ರೈಲ್ ಬ್ರಿಡ್ಜ್‌ವರೆಗೆ , ಬೋಟ್ ಕ್ಲಬ್ ಘಾಟ್, ಸರಸ್ವತಿ ಘಾಟ್ ಮತ್ತು ಕಿಲಾಘಾಟ್ ಮೂಲಕವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.

20 ಸಾವಿರ ಪೊಲೀಸ್ ಸಿಬ್ಬಂದಿ  ಕಣ್ಗಾವಲು 

ಕುಂಭಮೇಳ ಭಾರತದಲ್ಲಿ ನಡೆಯುವ ಪ್ರಮುಖ ಧಾರ್ಮಿಕ ಆಚರಣೆ. ದೇಶ ವಿದೇಶಗಳಿಂದಲೂ ಲಕ್ಷಾಂತರ ಜನ ಆಗಮಿಸುತ್ತಾರೆ. ಹಾಗಾಗಿ ನೂಕುನುಗ್ಗಲು ಸಂಭವಿಸುತ್ತವೆ. ಈ ಬಾರಿ 10 ರಿಂದ 15 ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಇದೆ. ಹಾಗಾಗಿ ಉತ್ತರ ಪ್ರದೇಶ ಸರ್ಕಾರ ಈ ಭಾರೀ ಬಿಗಿ ಭದ್ರತೆ ಒದಗಿಸಲು ತೀರ್ಮಾನಿಸಿದೆ. ಅದಕ್ಕಾಗಿಯೇ 20,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

45 ಕಿ.ಮೀ ವ್ಯಾಪ್ತಿಯಲ್ಲಿ ನಡೆಯಲಿದೆ ಈ ಮೇಳ
 

ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ಕುಂಭಮಮೇಳಕ್ಕೆ ಪ್ರಯಾಗರಾಜ್ ಸಜ್ಜಾಗುತ್ತಿದ್ದು, ಈ ಬಾರಿ 45 ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ ಮೇಳದ ಧಾರ್ಮಿಕ ಚಟುವಟಿಕೆಗಳು ನಡೆಯಲಿವೆ. ಈ ಮೊದಲು 20 ಕಿ.ಮೀ
ವ್ಯಾಪ್ತಿಯಲ್ಲಿ ಕುಂಭಮೇಳ ನಡೆಯುತ್ತಿತ್ತು. 55 ದಿನಗಳ ಕಾಲ ಉತ್ತರ ಪ್ರದೇಶದ ಪ್ರಯಾಗ ರಾಜ್‌ನಲ್ಲಿ ನಡೆಯಲಿರುವ ಕುಂಭ ಮೇಳಕ್ಕೆ ಈಗಾಗಲೇ 3200 ಹೆಕ್ಟೇರ್ ಪ್ರದೇಶವನ್ನು ಸ್ಮಾರ್ಟ್ ಸಿಟಿಯಾಗಿ ಪರಿವರ್ತಿಸಲಾಗಿದೆ. ಮಹಾಕುಂಭ ಮೇಳಕ್ಕಾಗಿ 4200 ಕೋಟಿ ರು. ಮೀಸಲಿಡಲಾಗಿದೆ.

ಅಸಂಖ್ಯಾತ ಜನಸಂಖ್ಯೆ ಭಾಗವಹಿಸುವ ನಿರೀಕ್ಷೆ ಇರುವುದರಿಂದ ಉತ್ತರ ಪ್ರದೇಶ ಸರ್ಕಾರ ಈಗಾಗಲೇ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದೆ. ತಾತ್ಕಾಲಿಕ ಸೇತುವೆಗಳು, 600 ಮಾಸ್ ಕಿಚನ್ ಮತ್ತು 10,000 ಕ್ಕೂ ಹೆಚ್ಚು ಪೋರ್ಟಬಲ್
ಟಾಯ್ಲೆಟ್‌ಗಳನ್ನೂ ನಿರ್ಮಿಸಲಾಗಿದೆ.

ಈ ಬಾರಿ ಅಕ್ಷಯ ವಟ ಭೇಟಿಗೆ ಅವಕಾಶ

ಅರ್ಧಕುಂಭ ಮೇಳ ಸಂದರ್ಭದಲ್ಲಿ ಹಲವು ವರ್ಷಗಳಿಂದ ಭಕ್ತಾದಿಗಳಿಗೆ ಅಕ್ಷಯವಟದ ಬಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಆದರೆ ಈ ಬಾರಿ ಭಕ್ತಾದಿಗಳು ಅಕ್ಷಯ ವಟಕ್ಕೆ ಭೇಟಿ ನೀಟಿ ಪೂಜೆ ಸಲ್ಲಿಸಬಹುದು ಎನ್ನಲಾಗಿದೆ. ಈ ವೃಕ್ಷದ ಕೆಳಗೆ ರಾಮ, ಲಕ್ಷ್ಮಣ ಮತ್ತು ಸೀತೆ ವಿಶ್ರಮಿಸಿದ್ದರು ಎಂಬ ಪ್ರತೀತಿ ಇದೆ.

ಆನೆ ಮತ್ತು ಕುದುರೆ ಮೆರವಣಿಗೆ ನಿಷೇಧ

ಗಂಗಾ ಮತ್ತು ಯಮುನಾ ನದಿ ಸಂಗಮವಾಗುವ ಪ್ರದೇಶದಲ್ಲಿ ಪವಿತ್ರ ಸ್ನಾನ ಮಾಡುವುದಷ್ಟೆ ಅಲ್ಲದೆ, ನೂರಾರು ನಾಗಾ ಸಾಧುಗಳು ಕುದುರೆ ಮತ್ತು ಆನೆ ಮೆರವಣಿಗೆ ಸಾಗುವುದು ಸಹ ಕುಂಭಮೇಳ ಮತ್ತು ಅರ್ಧಕುಂಭಮೇಳದ ವಿಶೇಷವಾಗಿತ್ತು. ಆದರೆ ಈ ಬಾರಿ ಸುರಕ್ಷತಾ ದೃಷ್ಟಿಯಿಂದ ಶತಮಾನಗಳ ಹಳೆಯದಾದ ಸಾಂಪ್ರದಾಯಿಕ ಕುದುರೆ ಮತ್ತು ಆನೆ ಮೆರವಣಿಗೆ ಮೇಲೆ ಕುಂಭಮೇಳದ ಆಡಳಿತ ನಿಷೇಧ ಹೇರಿದೆ. ಕುಂಭಮೇಳದ ಆಡಳಿತದ ಈ ಕ್ರಮಕ್ಕೆ ನಾಗಾ ಸೇರಿದಂತೆ ಇತರ ಸಾಧುಗಳು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಅಲಹಾಬಾದ್ ಹೆಸರು ಬದಲಿಸಿದ ಆದಿತ್ಯನಾಥ್

ಇದೇ ವರ್ಷ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಲಹಾಬಾದ್ ಎಂದಿದ್ದ ನಗರದ ಹೆಸರನ್ನು ಪ್ರಯಾಗರಾಜ್ ಎಂದು ಬದಲಿಸಿದ್ದರು. ನಗರದಲ್ಲಿ ಒಟ್ಟು ಜನರ ಪೈಕಿ 8 ಲಕ್ಷ ಮುಸ್ಲಿಮರಿದ್ದಾರೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ಇರುವುದರಿಂದ ಉತ್ತರ ಪ್ರದೇಶ ನಿರ್ಣಾಯಕ ಕ್ಷೇತ್ರ. ಹಾಗಾಗಿ ಹಿಂದು ಮತಗಳಿಕೆಗೆ ಕುಂಭ ಮೇಳವನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.