ಲಕ್ನೋ(ಜ.10): ನೀವು ಅಬ್ಬಬ್ಬಾ ಅಂದ್ರೆ ಎಷ್ಟು ಹೊತ್ತು ಮಾತನಾಡಬಹುದು?. 1 ಗಂಟೆ, 2 ಗಂಟೆ, 3 ಗಂಟೆ?. ಈ ವ್ಯಕ್ತಿಗೆ ಈ ಗಂಟೆಗಳೆಲ್ಲಾ ಲೆಕ್ಕವೇ ಇಲ್ಲ. ಕಾರಣ ಈತ ಎದ್ದು ನಿಂತು ಭಾಷಣ ಮಾಡಲು ಶುರುವಿಟ್ಟರೆ ಬರೋಬ್ಬರಿ 100 ಗಂಟೆ ಭಾಷಣ ಮಾಡುತ್ತಾನೆ.

ಹೌದು, ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಸತತ 100 ಗಂಟೆಗಳ ಕಾಲ ಭಾಷಣ ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾರೆ. 

ಉತ್ತರ ಪ್ರದೇಶ ಲಖ್ಮಿಪುರ್  ನಿವಾಸಿಯಾಗಿರುವ ಯತೀಶ್ ಚಂದ್ರ ಶುಕ್ಲಾ, ಜ. 5ರಿಂದ ಜ.9ರವರೆಗೆ ಸತತ ನಾಲ್ಕು ದಿನಗಳವರೆಗೆ (ನೂರು ಗಂಟೆ) ಭಾಷಣ ಮಾಡಿದ್ದಾರೆ.

ಮಾಜಿ ಅತಿಥಿ ಉಪನ್ಯಾಸಕರಾಗಿದ್ದ ಶುಕ್ಲಾ ಸದ್ಯ ನೇಪಾಳದ ಅನಂತ್ ರಾಮ್ ಅವರ ದಾಖಲೆಯನ್ನು ಅಳಿಸಿ ಹಾಕಿ ನೂತನ ದಾಖಲೆ ನಿರ್ಮಿಸಿದ್ದಾರೆ. ಅನಂತ್ ರಾಮ್ ಈ ಹಿಂದೆ 90 ಗಂಟೆಗಳ ಕಾಲ ಭಾಷಣ ಮಾಡುವ ಮೂಲಕ ವಿಶ್ವ ದಾಖಲೆ ಪುಸ್ತಕ ಸೇರಿದ್ದರು. ಶುಕ್ಲಾ ತಮ್ಮ ಭಾಷಣದ ನಡುವೆ ಕೇವಲ 32 ಬಾರಿ ವಿರಾಮ ತೆಗೆದುಕೊಂಡಿದ್ದರೆನ್ನುವುದು ಗಮನಾರ್ಹ.

ಫೋಟೋ ಕೃಪೆ: ಅಮರ್ ಉಜಾಲಾ