ಲಕ್ನೋ : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ದೇಶದ ಎಲ್ಲೆಡೆ ರಾಜಕೀಯ ವಿದ್ಯಾಮಾನಗಳು ತೀವ್ರಗೊಂಡಿದೆ. ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ತವಕದಲ್ಲಿರುವ ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಸಂಸದೆಯೊಬ್ಬರು ರಾಜೀನಾಮೆ ನೀಡಿದ್ದು, ಪಕ್ಷಕ್ಕೆ ಹಿನ್ನಡೆಯಾಗಿದೆ. 

'ಹನುಮಂತ ಮನುವಾದಿಗಳ ಗುಲಾಮ'ನೆಂದು ಇತ್ತೀಚೆಗೆ ಹೇಳಿಕೆ ನೀಡಿ, ವಿವಾದಕ್ಕೊಳಗಾಗಿದ್ದ ಸಾವಿತ್ರಿಬಾಯಿ ಪುಲೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. 

'ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದು, ದಲಿತರು ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ವಿಚಾರದಲ್ಲಿ ಪಿತೂರಿ ನಡೆಸುತ್ತಿದೆ,' ಎಂದು ರಾಜೀನಾಮೆ ಬಳಿಕ ಸಾವಿತ್ರಿಬಾಯಿ ಪುಲೆ ಆರೋಪಿಸಿದ್ದಾರೆ.

ದಲಿತರು ಹಾಗೂ ಹಿಂದುಳಿದ ವರ್ಗದವರು ಹನುಮಂತನನ್ನು ಆರಾಧಿಸುತ್ತಾರೆ. ದಲಿತನಾಗಿರುವ ಈ ಹನುಮಂತ ಮನುವಾದಿಗಳ ಗುಲಾಮ ಎಂದಿದ್ದರು. ರಾಮನಿಗಾಗಿ ಎಲ್ಲವನ್ನೂ ಮಾಡಿದ ಈ ಹಮುಮಂತನನ್ನು ಮಂಗನಾಗಿಯೇ ಉಳಿಸಲಾಯ್ತು. ಇಂದಿಗೂ ದಲಿತರನ್ನು ಮನುಷ್ಯರೆಂದು ಪರಿಗಣಿಸಲಾಗುತ್ತಿಲ್ಲವೇಕೆ ಎಂದು ಪ್ರಶ್ನಿಸಿದ್ದರು. 

ಇದಕ್ಕೂ ಹಿಂದೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬದಲು ಬುದ್ಧನ ಪ್ರತಿಮೆಯನ್ನೇಕೆ ನಿರ್ಮಿಸಿಬಾರದೆಂದು ಕೇಳಿಯೂ ವಿವಾದಕ್ಕೆ ಒಳಗಾಗಿದ್ದರು.