ವಾಷಿಂಗ್ಟನ್‌[ಜೂ.23]: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು 23 ವರ್ಷಗಳ ಹಿಂದೆ ನನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ನ್ಯೂಯಾರ್ಕ್ ಮೂಲದ ಲೇಖಕಿಯೊಬ್ಬರು ಆರೋಪ ಮಾಡಿದ್ದಾರೆ. ಈ ಮೂಲಕ ಟ್ರಂಪ್‌ ವಿರುದ್ಧ ರೇಪ್‌ ಆರೋಪ ಹೊರಿಸಿದ 16 ಮಹಿಳೆಯರ ಪೈಕಿ ‘ಎಲ್ಲೆ’ ಮ್ಯಾಗಜೀನ್‌ನಲ್ಲಿ ಮಹಿಳಾ ಪರ ವಿಚಾರಗಳ ಲೇಖಕಿಯಾಗಿದ್ದ ಇ.ಜೀನ್‌ ಕ್ಯಾರೋಲ್‌ (75) ಅವರು ಸಹ ಒಬ್ಬರಾಗಿದ್ದಾರೆ. ಆದರೆ, ಈ ಆರೋಪವನ್ನು ನಿರಾಕರಿಸಿದ ಟ್ರಂಪ್‌ ಅವರು ಇದೊಂದು ಸುಳ್ಳು ಸುದ್ದಿ ಎಂದಿದ್ದಾರೆ.

ಲೇಖಕಿ ಇ. ಜೀನ್‌ ಕ್ಯಾರೋಲ್‌ ಅವರು ‘ವಾಟ್‌ ಡು ವಿ ನೀಡ್‌ ಫಾರ್‌?’ ಎಂಬ ಪುಸ್ತಕ ಬರೆದಿದ್ದು, ಇದರಲ್ಲಿ ಟ್ರಂಪ್‌ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಉಲ್ಲೇಖಿಸಿದ್ದಾರೆ. 1990ರ ದಶಕದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದ ಟ್ರಂಪ್‌ ಹಾಗೂ ನಾನು ಪರಸ್ಪರ ಸ್ನೇಹಿತರಾಗಿದ್ದೆವು. ಆದರೆ, ಅದೊಂದು ಬಾರಿ ಬರ್ಗ್‌ಡಾಫ್‌ರ್‍ ಗುಡ್‌ಮನ್‌ ಎಂಬ ಸ್ಟೋರ್‌ನ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಟ್ರಂಪ್‌ ಅವರು ಅತ್ಯಾಚಾರ ಎಸಗಿದ್ದರು. ನನ್ನ ಜೀವನದಲ್ಲಿ ಕೇವಲ ಟ್ರಂಪ್‌ ಅವರಷ್ಟೇ ಅಲ್ಲದೆ, ಇತರ ಪುರುಷರಿಂದಲೂ ದೌರ್ಜನ್ಯಕ್ಕೊಳಗಾಗಿದ್ದೇನೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಆದರೆ, ಲೇಖಕಿ ಕ್ಯಾರೋಲ್‌ ಎಂಬ ಮಹಿಳೆಯನ್ನು ನಾನು ಇದುವರೆಗೂ ಭೇಟಿಯೇ ಆಗಿಲ್ಲ. ಆಕೆ ತನ್ನ ನೂತನ ಪುಸ್ತಕದ ಜನಪ್ರಿಯತೆಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಟ್ರಂಪ್‌ ಹೇಳಿದ್ದಾರೆ.