ವಾಷಿಂಗ್ಟನ್(ಆ.01): ಹತ ಭಯೋತ್ಪಾದಕ, ಅಲ್ ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಲಾಡೆನ್ ಮೃತಪಟ್ಟಿರುವುದಾಗಿ ಅಮೆರಿಕದ NBC ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಳೆದರಡು ವರ್ಷಗಳಿಂದ ಹಮ್ಜಾ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಅಮೆರಿಕ ಸೇನೆ, ಗುಪ್ತ ಸ್ಥಳವೊಂದರಲ್ಲಿ ಹಮ್ಜಾನನ್ನು ಹತ್ಯೆ ಮಾಡಿದೆ ಎಂದು NBC ಹೇಳಿದೆ. ಅಲ್ಲದೇ ಕುರಿತು ಈ ಅಮೆರಿಕದ ಗುಪ್ತಚರ ಅಧಿಕಾರಿಗಳು ತನಗೆ ಮಾಹಿತಿ ನೀಡಿರುವುದಾಗಿಯೂ NBC ಸ್ಪಷ್ಟಪಡಿಸಿದೆ.

ಹಮ್ಜಾ ಮೇಲೆ ತೀವ್ರ ನಿಗಾ ಇರಿಸಿದ್ದ ಅಮೆರಿಕದ ಗುಪ್ತಚರ ಸಂಸ್ಥೆಗಳು, ಆತನ ಇರುವಿಕೆಯನ್ನು ಪತ್ತೆ ಹಚ್ಚಿ ಆತನನ್ನು ಕೊಲ್ಲುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಲಾಗಿದೆ. ಆದರೆ ಹಮ್ಜಾ ಸಾವಿನ ಕುರಿತು ಅಮೆರಿಕ ಸರ್ಕಾರ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಹಮ್ಜಾ ಸಾವಿನ ಕುರಿತು ಕೇಳಿದ ಪ್ರಶ್ನಗೆ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡಿರುವ ಅಮರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಈ ಕುರಿತು ತಾವು ಯಾವುದೇ ಪ್ರೆತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಹಮ್ಜಾ ಸಾರ್ವಜನಿಕವಾಗಿ ಕೊನೆಯ ಬಾರಿ 2018 ರಲ್ಲಿ ಕಾಣಿಸಿಕೊಂಡಿದ್ದು, ಅಲ್ ಖೈದಾಗೆ ಹಮ್ಜಾನನ್ನು ಮುಖ್ಯಸ್ಥನನ್ನಾಗಿ ನೇಮಿಸುವ ವಿಚಾರದಲ್ಲಿ ಸಂಘಟನೆಯಲ್ಲೇ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದೀಗ ಹಮ್ಜಾ ಸಾವನ್ನಪ್ಪಿದ್ದಾನೆ ಎಂಬ ವರದಿ, ಸಂಘಟನೆಗೆ ದೊಡ್ಡ ಹೊಡೆತ ಎಂದು ವಿಶ್ಲೇಷಿಸಲಾಗುತ್ತಿದೆ.