ವಾಷಿಂಗ್ಟನ್(ಫೆ.03): ‘ಯುದ್ಧ ಗೆದ್ದು ಬೀಗಬೇಡ, ನೆಲ ಕಬಳಿಸಿ ಹಿಗ್ಗಬೇಡ ತಾಕತ್ತಿದ್ದರೆ ನನ್ನ ಎದುರಿಸು’... ಇಂತದ್ದೊಂದು ಸವಾಲನ್ನು ಪ್ರಕೃತಿ ಅಮೆರಿಕನ್ನರಿಗೆ ಒಡ್ಡಿದೆ.

ಸಕಲ ಸೌಲಭ್ಯಗಳನ್ನು ಹೊಂದಿರುವ, ವಿಶ್ವದ ಬಲಾಢ್ಯ ರಾಷ್ಟ್ರ ಎಂಬ ಹಣೆಪಟ್ಟಿ ಹೊತ್ತಿರುವ ಅಮೆರಿಕ ಭೀಕರ ಯುದ್ಧವೊಂದರಲ್ಲಿ ಸಿಕ್ಕಿ ಹಾಕಿಕೊಂಡಿದೆ.

ಅರೆ! ಇದರಲ್ಲೇನು ಹೊಸತು?, ಅಫ್ಘಾನಿಸ್ತಾನ್, ಇರಾಕ್, ಯೆಮೆನ್, ಸಿರಿಯಾ...ಕತೆ ನಮಗೆಲ್ಲಾ ಗೊತ್ತು ಅಂತೀರಾ?. ಇದು ಮನುಷ್ಯ VS ಮನುಷ್ಯನ ನಡುವಿನ ಯುದ್ಧವಲ್ಲ, ಪ್ರಕೃತಿ ಮತ್ತು ಮಾನವನ ನಡುವಿನ ಯುದ್ಧ.

ಹೌದು, ಅಮೆರಿಕದಲ್ಲಿ ಹಿಂದೆಂದೂ ಕಾಣದ ಭೀಕರ ಚಳಿ ಲಗ್ಗೆ ಇಟ್ಟಿದ್ದು, ಇಡೀ ಅಮೆರಿಕ ಹಿಮದಲ್ಲಿ ಮುಳುಗಿದೆ. ಪ್ರಮುಖವಾಗಿ ಉತ್ತರ ಅಮೆರಿಕದ ಇಲಿನಿಯೋಸ್, ಮಿಸಿಸಿಪ್ಪಿ, ಇಂಡಿಯಾನಾ, ನಾರ್ಥ್ ಡಕೋಟಾ ಮುಂತಾದ ರಾಜ್ಯಗಳಲ್ಲಿ ಭೀಕರ ಚಳಿಗಾಳಿ ಬೀಸುತ್ತಿದ್ದು, ತಾಪಮಾನ -34 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿದೆ.

ಅಮೆರಿಕದ ಕೆಲವು ಭಾಗಗಳಲ್ಲಿ ಅಂಟಾರ್ಟಿಕಾಗಿಂತ ಹೆಚ್ಚಿನ ತಂಪಾದ ತಾಪಮಾನ ದಾಖಲಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಂಜು ನಗರಗಳನ್ನು ಆಪೋಷಣ ತೆಗೆದುಕೊಂಡಿದ್ದು, ಭೀಕರ ಚಳಿಗೆ ಇದುವರೆಗೆ 13 ಜನ ಸಾವನ್ನಪ್ಪಿದ್ದಾರೆ.

ಇನ್ನು ಭೀಕರ ಚಳಿಯನ್ನು ಎದುರಿಸಲು ಸ್ಥಳೀಯ ಆಡಳಿತ ಸಜ್ಜಾಗಿದ್ದು, ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ಜನರಿಗೆ ಮನೆಯಿಂದ ಹೊರ ಬರದಂತೆ ಮನವಿ ಮಾಡಲಾಗಿದೆ. ಅಲ್ಲದೇ ಹೆಚ್ಚು ಮಾತನಾಡದಂತೆ ಕೂಡ ಸಲಹೆ ನೀಡಲಾಗಿದೆ.

ಕೇವಲ ಅಮೆರಿಕ ಮಾತ್ರವಲ್ಲದೇ. ಕೆನಡಾ, ಉತ್ತರ ಜರ್ಮನಿ, ರಷ್ಯಾ ದೇಶಗಳೂ ಕೂಡ ಭೀಕರ ಚಳಿಗೆ ತತ್ತರಿಸಿವೆ.

ಮಂಜುಗಡ್ಡೆಯಾದ ನಯಾಗರಾ: ವೈರಲ್ ಆಯ್ತು ಫಾಲ್ಸ್ ಬ್ಯೂಟಿ!