ಉತ್ತರಪ್ರದೇಶ[ಆ.03]: ಜೂಜು ಮತ್ತು ಕುಡಿತಕ್ಕೆ ದಾಸರಾದವರು ಏನು ಬೇಕಾದರೂ ಮಾಡುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಜೂಜಾಟದಲ್ಲಿ ಹಣವನ್ನೆಲ್ಲಾ ಸೋತ ಪತಿಯೋರ್ವ ಪತ್ನಿಯನ್ನೇ ಒತ್ತೆ ಇಟ್ಟು ಸೋತಿದ್ದಾನೆ. ಇದರಿಂದ ಇಬ್ಬರು ಸ್ನೇಹಿತರು ಮಹಿಳೆ ಮೇಲೆ ಎರಡು ಬಾರಿ ಸಾಮೂಹಿಕ ಅತ್ಯಾಚಾರ ನಡೆಸಿದ ದಾರುಣ ಘಟನೆ ಉತ್ತರಪ್ರದೇಶದ ಜೌನ್ಪುರದಲ್ಲಿ ನಡೆದಿದೆ.

ಜಫರಾಬಾದ್‌ ಪ್ರದೇಶದ ನಿವಾಸಿಯಾಗಿರುವ ಸಂತ್ರಸ್ತೆ ಮನೆಗೆ ಪತಿಯ ಸ್ನೇಹಿತರು ಕುಡಿದು ಬಂದು ಜೂಜಾಡುತ್ತಿದ್ದರು. ಈ ವೇಳೆ ಹಣವನ್ನೆಲ್ಲಾ ಸೋತ ಪತಿ ಕೊನೆಗೆ ಹೆಂಡತಿಯನ್ನೇ ಅಡವಿಟ್ಟು ಸೋತಿದ್ದಾನೆ. ಪತಿಯ ಸ್ನೇಹಿತರಿಬ್ಬರು ಮಹಿಳೆ ಮೇಲೆ ಗ್ಯಾಂಗ್‌ರೇಪ್‌ ನಡೆಸಿದ್ದಾರೆ. ಘಟನೆ ಬಳಿಕ ಸಂತ್ರಸ್ತೆ ಸಂಬಂಧಿಕರೊಬ್ಬರ ಮನೆಗೆ ದೂರು ನೀಡಲು ಹೋದಾಗ ಹಿಂಬಾಲಿಸಿದ ಪತಿ ಕ್ಷಮೆ ಕೋರಿ ವಾಪಸ್‌ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಮಹಿಳೆ ಮೇಲೆ ಎರಡನೇ ಬಾರಿ ಅತ್ಯಾಚಾರ ನಡೆಸಲಾಗಿದೆ.

ಸಾಮೂಹಿಕ ಅತ್ಯಾಚಾರ ಕುರಿತು ಝಫರಾಬಾದ್‌ ಪೊಲೀಸ್‌ ಠಾಣೆಗೆ ದೂರು ನೀಡಲು ಹೋದಾಗ ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದಾರೆ. ಇದರಿಂದ ಮನನೊಂದ ಮಹಿಳೆ ಕೋರ್ಟ್‌ ಮೊರೆ ಹೋಗಿದ್ದಾಳೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಪೊಲೀಸರ ನಡೆಗೆ ಕಿಡಿಕಾರಿದ್ದು, ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆದೇಶಿಸಿದೆ.