ವಾಷಿಂಗ್ಟನ್(ಡಿ.22): ರಾಷ್ಟ್ರವನ್ನು ಮುನ್ನಡೆಸಬೇಕಾದ ಸರ್ಕಾರವೊಂದು ದಿಢೀರನೆ ಕರ್ತವ್ಯ ನಿಲ್ಲಿಸಿ ಬಿಟ್ಟರೆ ದೇಶದ ಗತಿ ಏನಾಗಬಹುದು?. ಮೂರನೇ ಜಗತ್ತಿನ ರಾಷ್ಟ್ರಗಳಲ್ಲಿ ಅಲ್ಲೋಲಕಲ್ಲೋಲ ಉಂಟಾಗಬಹುದು. ಆದರೆ ವಿಶ್ವದ ಸೂಪರ್ ಪವರ್ ಅಮೆರಿಕಕ್ಕೆ ಏನೂ ಆಗಲ್ಲ.

ಹೌದು, ಕ್ರಿಸಮಸ್ ಹಬ್ಬದ ಪ್ರಯುಕ್ತ ಅಮರಿಕ ಸರ್ಕಾರ ಕರ್ತವ್ಯ ಸ್ಥಗಿತಗೊಳಿಸಿದ್ದು, ಸೆನೆಟ್ ಮತ್ತು ಕಾಂಗ್ರೆಸ್‌ಗೆ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೇ ಸರ್ಕಾರದ ಎಲ್ಲಾ ಪ್ರಮುಖ ಇಲಾಖೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಈ ಮಧ್ಯೆ ಕ್ರಿಸಮಸ್ ಹಬ್ಬಕ್ಕೂ ಮೊದಲು ಅಮೆರಿಕ ಸರ್ಕಾರದ ಸುಮಾರು 8 ಲಕ್ಷ ನೌಕರರ ವೇತನ ಹೆಚ್ಚಳದ ತೀರ್ಮಾನ ಕೈಗೊಳ್ಳಲಾಗುವುದು ಎಂದು ನಿರೀಕ್ಷೆ ಇತ್ತು. ಅಮೆರಿಕದ ಕಾಂಗ್ರೆಸ್ ಈ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದೇ ರಜೆ ಘೋಷಣೆ ಮಾಡಿದೆ.

ಅದರಂತೆ ಮೆಕ್ಸಿಕೋ ಗಡಿಗುಂಟ ಗೋಡೆ ನಿರ್ಮಾಣ ಕಾರ್ಯಕ್ಕೆ ಅನುಮತಿ ನೀಡುವ ಕುರಿತೂ ನಿರ್ಧಾರ ಹೊರ ಬೀಳಲಿದೆ ಎಂದು ನೀರಿಕ್ಷೆ ಕೂಡ ಹುಸಿಯಾಗಿದ್ದು, ಇದಕ್ಕೆ ಟ್ರಂಪ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಳನುಸುಳುವಿಕೆ ತಡೆಯಲು ಮೆಕ್ಸಿಕೋ ಗಡಿಗುಂಟ ಗೋಡೆ ನಿರ್ಮಾಣಕ್ಕೆ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನಿಶ್ಚಯಿಸಿದ್ದಾರೆ. ಆದರೆ ಇದಕ್ಕೆ ತಗಲುವ ಸುಂಆರು ೫ ಬಿಲಿಯನ್ ಯುಎಸ್ ಡಾಲರ್ ಹಣವನ್ನು ಕಾಂಗ್ರೆಸ್ ಬಿಡುಗಡೆ ಮಾಡುವ ನಿರೀಕ್ಷೆ ಸದ್ಯಕ್ಕೆ ಹುಸಿಯಾಗಿದೆ.

ಇದೇ ವೇಳೆ ಮಿಲಿಟರಿ, ಆರೋಗ್ಯ, ನಾಗರಿಕ ಸೇವೆಗಳಿಗೆ ರಜೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದ್ದು, ಈ ಮೂರು ಇಲಾಖೆಗಳನ್ನು ಹೊರತುಪಡಿಸಿ ಇನ್ನುಳಿದ ಇಲಾಖೆಗಳ ಕಾರ್ಯಗಳು ಸ್ಥಗಿತಗೊಳ್ಳಲಿವೆ ಎಂದು ವೈಟ್‌ಹೌಸ್ ತಿಳಿಸಿದೆ.