Asianet Suvarna News Asianet Suvarna News

ರಾಜ್ಯಕ್ಕೆ 7 ಹೊಸ ರೈಲು ಮಾರ್ಗ : ಎಲ್ಲೆಲ್ಲಿ..?

ಪಿಯೂಷ್‌ ಗೋಯೆಲ್ ಮಂಡಿಸಿರುವ ಮಧ್ಯಂತರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ನೈಋುತ್ಯ ರೈಲ್ವೇಯಡಿ ಕಳೆದ ವರ್ಷಕ್ಕಿಂತ ಶೇ.20 ರಷ್ಟುಹೆಚ್ಚು ಅನುದಾನ ಲಭಿಸಿದ್ದು ನಾಲ್ಕು ಹೊಸ ರೈಲು ಮಾರ್ಗಗಳು ಮಂಜೂರಾಗಿವೆ. 

Union Budget 2019  7 new train route for Karnataka
Author
Bengaluru, First Published Feb 2, 2019, 11:44 AM IST

ನವದೆಹಲಿ :  ರೈಲ್ವೆ ಸಚಿವರೂ ಆದ ಹಂಗಾಮಿ ವಿತ್ತ ಸಚಿವ ಪಿಯೂಷ್‌ ಗೋಯೆಲ್ ಮಂಡಿಸಿರುವ ಮಧ್ಯಂತರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ನೈಋುತ್ಯ ರೈಲ್ವೇಯಡಿ ಕಳೆದ ವರ್ಷಕ್ಕಿಂತ ಶೇ.20 ರಷ್ಟುಹೆಚ್ಚು ಅನುದಾನ ಲಭಿಸಿದ್ದು ನಾಲ್ಕು ಹೊಸ ರೈಲು ಮಾರ್ಗಗಳು ಮಂಜೂರಾಗಿವೆ. 2018-19ರ ಸಾಲಿನಲ್ಲಿ ರಾಜ್ಯಕ್ಕೆ ಒಟ್ಟು 1695 ಕೋಟಿ ರೂ ಹಣ ನೀಡಿದ್ದರೆ 2019-20ರ ಸಾಲಿಗೆ 1828 ಕೋಟಿ ಮೀಸಲಿರಿಸಲಾಗಿದೆ. ಇದೇವೇಳೆ ಹೊಸ ಲೈನ್‌ಗಳಿಗೆಂದು ಹಿಂದಿನ ಬಜೆಟ್‌ನಲ್ಲಿ 190 ಕೋಟಿ ನೀಡಲಾಗಿದ್ದರೆ ಈ ಬಾರಿ 243 ಕೋಟಿ ಅಂದರೆ ಶೇ.28ರಷ್ಟುಹೆಚ್ಚಿನ ಅನುದಾನ ಘೋಷಿಸಲಾಗಿದೆ.

ಚಿಕ್ಕಬಳ್ಳಾಪುರ-ಗೌರಿಬಿದನೂರಿನ 44 ಕಿ.ಮೀ. ರೈಲು ಮಾರ್ಗಕ್ಕೆ 367 ಕೋಟಿ, 58 ಕಿ.ಮೀ. ಉದ್ದದ ಗದಗ-ಯಲವಗಿ ರೈಲು ಮಾರ್ಗಕ್ಕೆ 640 ಕೋಟಿ ಮತ್ತು ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ಮಧ್ಯೆ 89 ಕಿ.ಮೀ. ಉದ್ದದ ರೈಲು ಹಳಿ ನಿರ್ಮಾಣಕ್ಕೆ 956 ಕೋಟಿ ರು. ಮಂಜೂರು ಮಾಡಲು ರೈಲ್ವೇ ಸಚಿವಾಲಯ ಒಪ್ಪಿಕೊಂಡಿದೆ.

ಒಟ್ಟು .1963 ಕೋಟಿ ವೆಚ್ಚದ ಈ ಯೋಜನೆಗಳಿಗೆ ಈ ಸಾಲಿನ ಬಜೆಟ್‌ನಲ್ಲಿ ಮಾತ್ರ ಕೇವಲ ತಲಾ 10 ಲಕ್ಷಗಳನ್ನಷ್ಟೇ ಮೀಸಲಿಡಲಾಗಿದೆ. ಕಲ್ಯಾಣದುರ್ಗದ ಮೂಲಕ ಹಾದು ಹೋಗುವ 213 ಕಿ.ಮೀ. ಉದ್ದದ ರಾಯದುರ್ಗ-ತುಮಕೂರು ರೈಲ್ವೇ ಯೋಜನೆಗೆ 165 ಕೋಟಿ, 142 ಕಿಮೀ ಉದ್ದದ ಬಾಗಲಕೋಟೆ-ಕುಡಚಿ ಮಾರ್ಗಕ್ಕೆ 20 ಕೋಟಿ, 199.7 ಕಿಮೀ ಉದ್ದದ ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೇ ಮಾರ್ಗಕ್ಕೆ 100 ಕೋಟಿ, 252 ಕಿಮೀ ಉದ್ದದ ಗದಗ -ವಾಡಿ ಯೋಜನೆಗೆ 150 ಕೋಟಿ ತೆಗೆದಿರಿಸಲಾಗಿದೆ.

ಗೇಜ್‌ ಪರಿವರ್ತನೆ:

ಮೆಟ್ಟುಪಾಳ್ಯಂಗೂ ವಿಸ್ತಾರಗೊಳ್ಳಲಿರುವ 148 ಕೀ.ಮೀ. ಉದ್ದದ ಮೈಸೂರು-ಚಾಮರಾಜನಗರ ರೈಲು ಹಳಿಗಳ ಗೇಜ… ಪರಿವರ್ತನೆಗೆ ಬಜೆಟ್‌ನಲ್ಲಿ ಅನುಮೋದನೆ ಸಿಕ್ಕಿದೆ.

ವಿದ್ಯುದೀಕರಣ, ಡಬ್ಲಿಂಗ್‌:

ಯಶವಂತಪುರ-ಚನ್ನಸಂದ್ರ (21.7 ಕಿ.ಮೀ.), ಬೈಯ್ಯಪ್ಪನಹಳ್ಳಿ-ಹೊಸೂರು (48ಕಿ.ಮೀ.), ಬೆಂಗಳೂರು-ವೈಟ್‌ ಫೀಲ್ಡ…-ಬೆಂಗಳೂರು ಸಿಟಿ-ಕೃಷ್ಣರಾಜಪುರಂ (23.08 ಕಿ.ಮೀ.)ನ ಡಬ್ಲಿಂಗ್‌ ಕಾಮಗಾರಿ, ರಾಮನಗರ-ಮೈಸೂರು ಜೊತೆಗೆ ಕೆಂಗೇರಿ-ಮೈಸೂರಿನ ವಿದ್ಯುದೀಕರಣ, ಹೊಸದುರ್ಗ-ಚಿಕ್ಕಜಾಜೂರು (28.89 ಕಿಮೀ) ಗಳ ಅಂಶಿಕ ಡಬ್ಲಿಂಗ್‌ಗೂ ಸ್ಥಾನ ಸಿಕ್ಕಿದೆ. ಹುಬ್ಬಳ್ಳಿ- ಚಿಕ್ಕಜಾಜೂರಿನ 190 ಕಿ.ಮೀ. ಉದ್ದದ ಡಬ್ಲಿಂಗ್‌ಗೆ .102 ಕೋಟಿ, ಅರಸೀಕೆರೆ-ತುಮಕೂರು ಡಬ್ಲಿಂಗ್‌ಗೆ .103 ಕೋಟಿ ಹಣವನ್ನು ತೆಗೆದಿರಿಸಲಾಗಿದೆ.

ಹೊಸಪೇಟೆ-ಹುಬ್ಬಳ್ಳಿ-ಲೋಂಡಾ-ತಿನೈಘಾಟ್‌-ವಾಸ್ಕೋಡಾಗಾಮಾದ ರೈಲು ಹಳಿಗಳ ಡಬ್ಲಿಂಗ್‌ಗೆ 259 ಕೋಟಿ, ಹೊಟಗಿ-ಕೂಡಗಿ-ಗದಗಜ 284 ಕಿ.ಮೀ. ಉದ್ದದ ಡಬ್ಲಿಂಗ್‌ಗೆ .200 ಕೋಟಿ, ನೀಡಲಾಗುತ್ತಿದೆ. ಯಲಹಂಕ-ಪೆನುಕೊಂಡದ 120.53 ಕಿ.ಮೀ. ಉದ್ದದ ಡಬ್ಲಿಂಗ್‌ಗೆ 132 ಕೋಟಿ ಘೋಷಿಸಲಾಗಿದೆ. ಈ ಮೂಲಕ ಹೆಚ್ಚೂಕಡಿಮೆ .1000 ಕೋಟಿ ಹಣ ನೀಡಲಾಗುತ್ತಿದೆ.

ಯಶವಂತಪುರ-ಚಿಕ್ಕಬಾಣವಾರದ ವಿದ್ಯುತೀಕರಣ ಮತ್ತು ಬೈಪಾಸ್‌ಗೆ ಒಪ್ಪಿಗೆ ನೀಡಲಾಗಿದೆ. ಮೈಸೂರು ವಿಭಾಗದಲ್ಲಿ ಕಬ್ಬಿಣದ ಅದಿರು ಸಾಗಣೆಗೆ ಆಗುವ ರೈಲ್ವೇ ನಿಲ್ದಾಣಗಳ ಉನ್ನತೀಕರಣ, ಸವಣೂರು, ತೋಳಹುಣಸೆ, ಧಾರವಾಡ ಬಳಿಯ ನವಲೂರು ನಿಲ್ದಾಣಗಳ ಅಭಿವೃದ್ಧಿಯ ಪ್ರಸ್ತಾಪ ಮಾಡಲಾಗಿದೆ.

ಸಿಗ್ನಲಿಂಗ್‌:

ಬೆಂಗಳೂರು ಕಾಂಟೋನ್ಮೆಂಟ್‌-ವೈಟ್‌ ಫೀಲ್ಡ್ ಸ್ವಯಂಚಾಲಿತ ಸಿಗ್ನಲಿಂಗ್‌ಗೆ 5 ಕೋಟಿ, ಬೈಯಪ್ಪನಹಳ್ಳಿಯಲ್ಲಿ ಮೂರನೇ ಕೋಚಿಂಗ್‌ ಟರ್ಮಿನಲ್ ಗೆ .20 ಕೋಟಿ, ಅಂಬೆವಾಡಿಯಲ್ಲಿ ಸಿಗ್ನಲಿಂಗ್‌ ವ್ಯವಸ್ಥೆ ಸುಧಾರಣೆ, ಬಂಗಾರಪೇಟೆಯಲ್ಲಿ ಪ್ಲಾಟ್‌ ಫಾರಂ ನಂ.5 ಮತ್ತು 6ರ ವಿಸ್ತರಣೆ, ನಾಗನಹಳ್ಳಿಯಲ್ಲಿ ಸ್ಯಾಟಲೈಟ್‌ ಟರ್ಮಿನಲ್ ಸೇರಿ ಒಟ್ಟು 40 ಕೋಟಿಗಳ ಕಾಮಗಾರಿಗೆ ಬಜೆಟ್‌ನಲ್ಲಿ ಅನುಮೋದನೆ ನೀಡಲಾಗಿದೆ.

ಎಲಿವೇಟೆಡ್‌ ಕಾರಿಡಾರ್‌:

ಬೆಂಗಳೂರು ಸಬ್ ಅರ್ಬನ್‌ ಯೋಜನೆಗೆ 11,546 ಕೋಟಿ ಮಂಜೂರಾತಿ ಸಿಕ್ಕಿದ್ದರು ಕೂಡ ಈ ಬಾರಿ ಎಲಿವೇಟೆಡ್‌ ಕಾರಿಡಾರ್‌ ಮತ್ತು ಗ್ರೇಡ್‌ ಕಾರಿಡಾರ್‌ನ ಪ್ರಸ್ತಾಪವನ್ನು ಮಾಡಲಾಗಿದೆ. ಸದ್ಯ 10 ಕೋಟಿಗಳ ಕಾಮಗಾರಿ ನಡೆಯುತ್ತಿದ್ದು ರಾಜ್ಯ ಸರ್ಕಾರ ಮತ್ತು ವಿವಿಧ ಹೂಡಿಕೆಗಳ ನೆರವಿನಿಂದ 159 ಕೋಟಿಗಳ ಕಾಮಗಾರಿ ನಡೆಸಲು ಮಧ್ಯಂತರ ಬಜೆಟ್‌ನಲ್ಲಿ ಏರ್ಪಾಟುಗಳನ್ನು ಮಾಡಲಾಗಿದೆ. ಹಾಗೆಯೇ .23 ಕೋಟಿಗಳ ಪರಿಷ್ಕೃತ ವೆಚ್ಚವನ್ನು ಕೂಡ ಸೇರಿಸಲಾಗಿದೆ.

ರೋಲಿಂಗ್‌ ಸ್ಟಾಕ್‌ 2018-19ರ ಸಾಲಿನಲ್ಲಿ 15 ಕೋಟಿ ನೀಡಿದ್ದರೆ ಈ ವರ್ಷ ಅದು 38 ಕೋಟಿಗೆ ಏರಿದೆ. ಉತ್ಪಾದನಾ ಘಟಕಗಳು, ಕಾರ್ಯಾಗಾರಗಳಿಗೆ 47 ಕೋಟಿ, ಪ್ರಯಾಣಿಕರ ಸೌಲಭ್ಯಗಳಿಗೆ 2018-19ರ ಸಾಲಿನಲ್ಲಿ 69 ಕೋಟಿ ರೂ ನೀಡಿದ್ದರೆ ಈ ವರ್ಷ ಒಟ್ಟು 187 ಕೋಟಿಗಳನ್ನು ಘೋಷಿಸಲಾಗಿದೆ. ಇನ್ನಿತರ ಕೆಲಸಗಳಿಗೆಂದು 36 ಕೋಟಿ ಪ್ರಕಟಿಸಲಾಗಿದೆ.

ನಮ್ಮ ಮೆಟ್ರೋಗೆ 1012 ಕೋಟಿ ರು.

ಬೆಂಗಳೂರಿನ ಮೆಟ್ರೋ ಕಾಮಗಾರಿಗಳಿಗೆ ಈ ಬಾರಿಯ ಬಜೆಟ್‌ನಲ್ಲಿ 1012 ಕೋಟಿ ರು.ಗಳನ್ನು ನೀಡಲಾಗಿದೆ. ಎರಡನೇ ಹಂತದ ಮೆಟ್ರೋ ಕಾಮಗಾರಿಗಾಗಿ ಈ ಹಣವನನ್ನು ನೀಡುತ್ತಿರುವುದುದಾಗಿ ಕೇಂದ್ರ ಸರ್ಕಾರವು ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ತಿಳಿಸಿದೆ. ಉಳಿದಂತೆ ಕೇಂದ್ರ ಸರ್ಕಾರದ ಸಂಸ್ಥೆಗಳಾದ ಬೆಂಗಳೂರಿನ ನಿಮ್ಹಾನ್ಸ್‌ಗೆ 450 ಕೋಟಿ ರು, ಯುನಾನಿ ಮೆಡಿಕಲ್ ಸಂಸ್ಥೆಗೆ 40 ಕೋಟಿ ರು. ಮೈಸೂರಿನ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ಸಂಸ್ಥೆಗೆ 55 ಕೋಟಿ ರು.ಗಳನ್ನು ಘೋಷಿಸಲಾಗಿದೆ. ರಾಜ್ಯದ ಹೆದ್ದಾರಿಗಳ ಅಭಿವೃದ್ಧಿಗೆ 300 ಕೋಟಿ ರು., ನಗರ ಕುಡಿಯುವ ನೀರಿನ ಯೋಜನೆಗೆ 217 ಕೋಟಿ ರು.ಗಳನ್ನು ಕೇಂದ್ರ ಸರ್ಕಾರವು ತನ್ನ ಬಜೆಟ್‌ನಲ್ಲಿ ಪ್ರಕಟಿಸಿದೆ.

7 ಹೊಸ ಮಾರ್ಗ

ಗದಗ-ಯಲವಗಿ

ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು

ಚಿಕ್ಕಬಳ್ಳಾಪುರ-ಗೌರಿಬಿದನೂರು

ಚಿತ್ರದುರ್ಗ-ದಾವಣಗೆರೆ

ರಾಯದುರ್ಗ-ತುಮಕೂರು

ಬಾಗಲಕೋಟೆ- ಕುಡಚಿ

ಗದಗ-ವಾಡಿ

Follow Us:
Download App:
  • android
  • ios