Asianet Suvarna News Asianet Suvarna News

ಭದ್ರತಾ ಮಂಡಳಿ ಸೇರಲು ಭಾರತಕ್ಕೆ ಹಕ್ಕಿದೆ: ಯುನ್ ಮುಖ್ಯಸ್ಥ!

ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂತೋನಿಯೋ ಗುತೆರಸ್‌! ಭದ್ರತಾ ಮಂಡಳಿ ಸೇರಲು ಭಾರತಕ್ಕೆ ಅರ್ಹತೆ ಇದೆ ಎಂದ ಗುತೆರಸ್! ಜಾಗತಿಕ ಆರ್ಥಿಕ ದೈತ್ಯ ರಾಷ್ಟ್ರವಾಗುವತ್ತ ಭಾರತದ ಧೃಢ ಹೆಜ್ಜೆ! ಭಾರತದ್ದು ಜಗತ್ತು ಅನುಕರಿಸುವಂತ ಪ್ರಖರ ಪ್ರಕಾಪ್ರಭುತ್ವ

UN Chief says India has right to get UN security council membership
Author
Bengaluru, First Published Oct 5, 2018, 9:34 AM IST
  • Facebook
  • Twitter
  • Whatsapp

ನವದೆಹಲಿ(ಅ.5): ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂತೋನಿಯೋ ಗುತೆರಸ್‌ ಭಾರತಕ್ಕೆ ಬಂದು ಪ್ರಧಾನಿ ಮೋದಿ ಅವರಿಗೆ ಚಾಂಪಿಯನ್ಸ್‌ ಆಫ್‌ ದಿ ಅಥ್‌ರ್‍ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಈ ವೇಳೆ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಅವರು ವಿಶ್ವಸಂಸ್ಥೆಯಲ್ಲಿ ಬಾಕಿಯಿರುವ ಭಾರತದ ಬಹುತೇಕ ವಿಷಯಗಳ ಕುರಿತು ವಿಸ್ತೃತವಾಗಿ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ.

ಭಾರತಕ್ಕೆ ಭದ್ರತಾ ಮಂಡಳಿ ಸೇರುವ ಅರ್ಹತೆ ಇದೆ

ಭಾರತದಲ್ಲಿ 130 ಕೋಟಿ ಜನರಿದ್ದಾರೆ. ಜಗತ್ತಿನ 2ನೇ ಅತಿಹೆಚ್ಚು ಜನಸಂಖ್ಯೆಯ ರಾಷ್ಟ್ರ ನಿಮ್ಮದು. ನೀವು ಜಾಗತಿಕ ಆರ್ಥಿಕ ದೈತ್ಯ ರಾಷ್ಟ್ರವಾಗಿ ಬದಲಾಗುತ್ತಿದ್ದೀರಿ. ನಿಮ್ಮ ಶಾಂತಿಪಾಲನಾ ಪಡೆಗಳು ಜಗತ್ತಿನ ಅತಿ ಹೆಚ್ಚು ದೇಶಗಳಲ್ಲಿವೆ. ಜಗತ್ತಿನಾದ್ಯಂತ ಸಂಕಷ್ಟದಲ್ಲಿರುವವರನ್ನು ರಕ್ಷಿಸುವಲ್ಲಿ ನಿಮ್ಮ ಪಾತ್ರ ದೊಡ್ಡದು. ನಿಮ್ಮದು ಪ್ರಖರ ಪ್ರಜಾಪ್ರಭುತ್ವ. ಹವಾಮಾನ ಬದಲಾವಣೆಯಿಂದ ಹಿಡಿದು ಜಾಗತಿಕ ಮಹತ್ವದ ಎಲ್ಲ ವಿಷಯಗಳಲ್ಲಿ ನಿಮ್ಮ ಪಾತ್ರ ದೊಡ್ಡದಿದೆ.

ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ವಿಶ್ವಸಂಸ್ಥೆಯಲ್ಲೇ ನಿಂತು ವಿಶ್ವಸಂಸ್ಥೆ ನಿಷ್ಕ್ರಿಯವಾಗಿದೆ ಎಂದಿದ್ದಾರೆ. ವಿಶ್ವಸಂಸ್ಥೆಯನ್ನು ಸುಧಾರಿಸಲು ಏನು ಕ್ರಮ ಕೈಗೊಂಡಿದ್ದೀರಿ?

ನಿಷ್ಕ್ರಿಯವಾಗಿದೆ ಎನ್ನುವುದು ಸರಿಯಲ್ಲ. ಸಮಸ್ಯೆಗಳು ಜಾಗತಿಕವಾದುವು. ಹಾಗಾಗಿ ವಿಶ್ವಸಂಸ್ಥೆಯ ಕಾರ್ಯನಿರ್ವಹಣೆಗೆ ಎಲ್ಲ ಸದಸ್ಯ ರಾಷ್ಟ್ರಗಳ ಸಹಕಾರ ಬೇಕಾಗುತ್ತದೆ. ನಾವು ಎಲ್ಲ ದೇಶಗಳ ಅಹವಾಲು ಕೇಳುತ್ತೇವೆ, ಎಲ್ಲರ ಅಭಿಪ್ರಾಯ ಸಂಗ್ರಹಿಸುತ್ತೇವೆ, ನಂತರ ಪರಿಹಾರ ಹುಡುಕುತ್ತೇವೆ. ಆದರೆ ಕೆಲ ದೇಶಗಳ ನಡುವೆ ಸಹಕಾರಕ್ಕಿಂತ ಘರ್ಷಣೆಯೇ ಹೆಚ್ಚಿರುತ್ತದೆ. ಅಂತಹವು ವಿಶ್ವಸಂಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತವೆ. ನಿಜ, ವಿಶ್ವಸಂಸ್ಥೆಯಲ್ಲಿ ಸುಧಾರಣೆಗಳಾಗಬೇಕು. ನನ್ನ ಮಿತಿಯಲ್ಲಿ ಏನೇನು ಸುಧಾರಣೆ ಸಾಧ್ಯವೋ ಅವುಗಳನ್ನು ಮಾಡುತ್ತಿದ್ದೇನೆ. ಆಮೂಲಾಗ್ರ ಬದಲಾವಣೆಗೆ ಭದ್ರತಾ ಮಂಡಳಿ ಹಾಗೂ ಸದಸ್ಯ ರಾಷ್ಟ್ರಗಳಲ್ಲಿ ಒಮ್ಮತ ಮೂಡಬೇಕಾಗುತ್ತದೆ. ಜಗತ್ತಿನ ಜನರ ಒಳಿತಿಗಾಗಿ ಹಾಗೂ ಜಾಗತಿಕ ಶಾಂತಿಗಾಗಿ ಅಂತಹ ಬದಲಾವಣೆಗೂ ಪ್ರಯತ್ನಿಸುತ್ತೇವೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯನಾಗಲು ಭಾರತ ದಶಕದಿಂದ ಪ್ರಯತ್ನಿಸುತ್ತಿದೆ. ಇದಕ್ಕಿರುವ ಅಡ್ಡಿಯೇನು?

ವಿಶ್ವಸಂಸ್ಥೆಯಲ್ಲಿ ಸುಧಾರಣೆಯಾಗಬೇಕು ಅಂದರೆ ಭದ್ರತಾ ಮಂಡಳಿಯಲ್ಲಿ ಸುಧಾರಣೆಯಾಗದೆ ಸಾಧ್ಯವೇ ಇಲ್ಲ. ಈಗಿರುವ ಭದ್ರತಾ ಮಂಡಳಿಯು ಎರಡನೇ ವಿಶ್ವ ಮಹಾಯುದ್ಧದ ವೇಳೆಯ ಭೌಗೋಳಿಕ ರಾಜಕೀಯ ಸನ್ನಿವೇಶಕ್ಕೆ ತಕ್ಕಂತೆ ರಚನೆಯಾಗಿದೆ. ನಂತರದ ವರ್ಷಗಳಲ್ಲಿ ಜಗತ್ತು ಸಾಕಷ್ಟುಬದಲಾಗಿದೆ. ಹೀಗಾಗಿ ಈಗಿನ ಅಗತ್ಯಗಳಿಗೆ ತಕ್ಕಂತೆ ಅನೇಕ ಸಲ ಭದ್ರತಾ ಮಂಡಳಿ ಕೆಲಸ ಮಾಡುವುದಿಲ್ಲ. ಹೀಗಾಗಿ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳ ಸಂಖ್ಯೆ ಹೆಚ್ಚಲೇಬೇಕು. ಭಾರತ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಕೇಳುತ್ತಿರುವುದರಲ್ಲಿ ಯಾವ ತಪ್ಪೂ ಇಲ್ಲ. ನಿಮ್ಮಲ್ಲಿ 130 ಕೋಟಿ ಜನರಿದ್ದಾರೆ. ಜಗತ್ತಿನ 2ನೇ ಅತಿಹೆಚ್ಚು ಜನಸಂಖ್ಯೆಯ ರಾಷ್ಟ್ರ ಭಾರತ. ನೀವು ಜಾಗತಿಕ ಆರ್ಥಿಕ ದೈತ್ಯ ರಾಷ್ಟ್ರವಾಗಿ ಬದಲಾಗುತ್ತಿದ್ದೀರಿ. ನಿಮ್ಮ ಶಾಂತಿಪಾಲನಾ ಪಡೆಗಳು ಜಗತ್ತಿನ ಅತಿ ಹೆಚ್ಚು ದೇಶಗಳಲ್ಲಿವೆ. ಜಗತ್ತಿನಾದ್ಯಂತ ಶಾಂತಿ ಕಾಪಾಡುವಲ್ಲಿ ಹಾಗೂ ಜನರನ್ನು ರಕ್ಷಿಸುವಲ್ಲಿ ನಿಮ್ಮ ಪಾತ್ರ ದೊಡ್ಡದು. ನಿಮ್ಮದು ಪ್ರಖರ ಪ್ರಜಾಪ್ರಭುತ್ವ. ಹವಾಮಾನ ಬದಲಾವಣೆಯಿಂದ ಹಿಡಿದು ಜಾಗತಿಕ ಮಹತ್ವದ ಎಲ್ಲ ವಿಷಯಗಳಲ್ಲಿ ನಿಮ್ಮ ಪಾತ್ರ ದೊಡ್ಡದಿದೆ. ಹೀಗಾಗಿ ಭದ್ರತಾ ಮಂಡಳಿಗೆ ಸೇರುವ ಎಲ್ಲ ಅರ್ಹತೆ ನಿಮಗಿದೆ. ಆದರೆ, ಭದ್ರತಾ ಮಂಡಳಿಯಲ್ಲಿ ಯಾವುದೇ ಬದಲಾವಣೆಯಾಗಲು ಭದ್ರತಾ ಮಂಡಳಿಯ ಮೂರನೇ ಎರಡರಷ್ಟುದೇಶಗಳು ಒಪ್ಪಬೇಕು. ನೀವು ಭದ್ರತಾ ಮಂಡಳಿಯ 5 ದೇಶಗಳ ಬೆಂಬಲ ಗಿಟ್ಟಿಸಬೇಕು. ಅಲ್ಲೇ ಈ ಪ್ರಸ್ತಾವನೆ ತಡೆಹಿಡಿಯಲ್ಪಟ್ಟಿದೆ.

ಆ ತಡೆ ತೆರವಾಗಿ ಭಾರತಕ್ಕೆ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಸಿಗುತ್ತದೆ ಎಂದು ನಿಮಗನ್ನಿಸುತ್ತದೆಯೇ?

ಒಂದಲ್ಲಾ ಒಂದು ದಿನ ಅದು ಸಾಧ್ಯವಾಗುತ್ತದೆ. ದೇಶಗಳು ಮನಸ್ಸು ಬದಲಿಸಬಹುದು.

ಭಯೋತ್ಪಾದನೆ ನಿಗ್ರಹದಲ್ಲಿ ವಿಶ್ವಸಂಸ್ಥೆಯ ಪಾತ್ರ ಮಹತ್ವದ್ದು. ಆದರೆ, ಪಾಕಿಸ್ತಾನ ಭಯೋತ್ಪಾದನಾ ಕೇಂದ್ರವಾಗಿ ರೂಪುಗೊಂಡಿದೆ. ಅದಕ್ಕೆ ಕಡಿವಾಣ ಹಾಕಲು ವಿಶ್ವಸಂಸ್ಥೆ ಏನೂ ಮಾಡುತ್ತಿಲ್ಲ ಏಕೆ?

ನಾವು ಭಯೋತ್ಪಾದನಾ ನಿಗ್ರಹ ನೀತಿ ರೂಪಿಸಿದ್ದೇವೆ. ಅದು ಎಲ್ಲ ಸದಸ್ಯ ರಾಷ್ಟ್ರಗಳಿಗೂ ಅನ್ವಯಿಸುತ್ತದೆ. ಯಾವುದೇ ಒಂದು ನಿರ್ದಿಷ್ಟದೇಶದ ಮೇಲೆ ಅದನ್ನು ಪ್ರತ್ಯೇಕವಾಗಿ ಹೇರಲು ಸಾಧ್ಯವಿಲ್ಲ. ಪಾಕಿಸ್ತಾನ ಕೂಡ ಈ ನೀತಿಗೆ ಬದ್ಧವಾಗಿರಬೇಕು. ಪಾಕ್‌ ಸೇರಿದಂತೆ ಅನೇಕ ದೇಶಗಳ ಜೊತೆ ಈ ವಿಷಯದಲ್ಲಿ ನಾವು ನಿರಂತರವಾಗಿ ಮಾತುಕತೆ ನಡೆಸುತ್ತಿದ್ದೇವೆ.

ವಿಶ್ವಸಂಸ್ಥೆಯಲ್ಲಿ ಸಮಗ್ರ ಭಯೋತ್ಪಾದನಾ ನಿಗ್ರಹ ಒಪ್ಪಂದ ಇರಬೇಕೆಂದು ಭಾರತ 1996ರಿಂದ ಕೇಳುತ್ತ ಬಂದಿದೆ. ಆದರೂ ನೀವದನ್ನು ರೂಪಿಸಲು ವಿಫಲರಾಗಿದ್ದೀರಿ. ಏನು ಕಾರಣ?

ಭಯೋತ್ಪಾದನಾ ನಿಗ್ರಹ ಒಪ್ಪಂದ ಇಲ್ಲ ಎಂದಮಾತ್ರಕ್ಕೆ ಭಯೋತ್ಪಾದನೆಯನ್ನು ನಿಗ್ರಹಿಸಲು ವಿಶ್ವಸಂಸ್ಥೆಯಲ್ಲಿ ಕಾರ್ಯಕ್ರಮಗಳೇ ಇಲ್ಲ ಎಂದರ್ಥವಲ್ಲ. ಅಂತಹ ಕಾರ್ಯಕ್ರಮಗಳು ಸಾಕಷ್ಟಿವೆ. ಆದರೆ, ದೇಶ-ದೇಶಗಳನ್ನು ಈ ವಿಷಯದಲ್ಲಿ ಕಟ್ಟಿಹಾಕುವ ಒಪ್ಪಂದವಿದ್ದರೆ ಇನ್ನೂ ಪರಿಣಾಮಕಾರಿಯಾಗುತ್ತದೆ ಎಂಬ ಭಾರತದ ವಾದ ಸರಿಯಾಗಿದೆ. ಆದರೆ, ಇದಕ್ಕೆ ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳಲ್ಲಿ ಒಮ್ಮತವಿಲ್ಲ. ಇದೇ ದೊಡ್ಡ ಸಮಸ್ಯೆಯಾಗಿದೆ. ಏಕೆ ಒಮ್ಮತವಿಲ್ಲ ಅಂದರೆ ಭಯೋತ್ಪಾದನೆ ಅಂದರೇನು ಎಂಬ ಬಗ್ಗೆ ನಮ್ಮಲ್ಲಿ ಎಲ್ಲರೂ ಒಪ್ಪುವ ವ್ಯಾಖ್ಯಾನವೇ ಇಲ್ಲ. ಒಂದೊಂದು ದೇಶವೂ ಭಯೋತ್ಪಾದನೆಯನ್ನು ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ. ಹೀಗಾಗಿ ಒಮ್ಮತ ಸಾಧ್ಯವಾಗುತ್ತಿಲ್ಲ. ಆದರೆ, ನಾವು ಕೈಚೆಲ್ಲುವುದಿಲ್ಲ. ಎಲ್ಲ ರಾಷ್ಟ್ರಗಳ ಮನವೊಲಿಸಿ ಒಂದು ಒಪ್ಪಂದಕ್ಕೆ ಬರುತ್ತೇವೆ. ಏಕೆಂದರೆ ಭಯೋತ್ಪಾದನೆ ಎಲ್ಲ ದೇಶಗಳಿಗೂ ಅಪಾಯಕಾರಿ.

ಕಾಶ್ಮೀರದ ಮೇಲೆ ದಾಳಿ ನಡೆಸಿದ ಉಗ್ರನ ಅಂಚೆ ಚೀಟಿಯನ್ನು ಪಾಕಿಸ್ತಾನ ಮುದ್ರಿಸಿದೆ. ಅದರ ವಿರುದ್ಧ ಇತ್ತೀಚೆಗೆ ಕಾಶ್ಮೀರಿ ಪಂಡಿತರು ನಿಮಗೆ ಪತ್ರ ಬರೆದಿದ್ದರು. ಏನು ಕ್ರಮ ಕೈಗೊಂಡಿದ್ದೀರಿ?

ಹೀಗೆ ಕ್ರಮ ಕೈಗೊಳ್ಳಬೇಕೆಂದು ಕೋರಿ ಪ್ರತಿದಿನ ನನಗೆ ಎಷ್ಟು ಪತ್ರಗಳು ಬರುತ್ತವೆ ಎಂಬುದು ನಿಮಗೆ ಗೊತ್ತಿಲ್ಲ! ಇಂತಹ ಸಮಸ್ಯೆಗಳನ್ನು ಪರಿಹರಿಸಲು ಒಳ್ಳೆಯ ಮಾರ್ಗವೆಂದರೆ ಮಾತುಕತೆ. ಮಾತುಕತೆಯ ಮೂಲಕ ಯಾವುದೇ ಸಮಸ್ಯೆ ಬಗೆಹರಿಸಬಹುದು. ಇಂತಹ ವಿಷಯದಲ್ಲಿ ಎಲ್ಲಾ ಸಾರ್ವಭೌಮ ರಾಷ್ಟ್ರಗಳೂ ತಮ್ಮ ನಿರ್ಧಾರವೇ ಸರಿ ಎಂದು ವಾದಿಸುತ್ತವೆ. ನಾವು ಏನೂ ಮಾಡಲು ಸಾಧ್ಯವಿಲ್ಲ.

ಜಮ್ಮು ಕಾಶ್ಮೀರದಲ್ಲಿ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದೆ. ಇಲ್ಲಿ ಶಾಂತಿ ಸ್ಥಾಪಿಸಲು ನಿಮ್ಮಲ್ಲಿ ಯಾವುದಾದರೂ ಯೋಜನೆಗಳಿವೆಯೇ?

ಈ ಸಮಸ್ಯೆ ಬಗೆಹರಿಸುವ ವಿಷಯದಲ್ಲಿ ವಿಶ್ವಸಂಸ್ಥೆ ನೇರವಾಗಿ ಭಾಗಿಯಾಗಿಲ್ಲ. ಹೀಗಾಗಿ ಸಂಬಂಧಪಟ್ಟದೇಶ-ದೇಶಗಳ ನಡುವಿನ ಮಾತುಕತೆಯೇ ಇದಕ್ಕೆ ಪರಿಹಾರ.

ಮೊನ್ನೆ ನೀವು ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಿದಿರಿ. ಅಲ್ಲಿ ಕಾಶ್ಮೀರದ ಬಗ್ಗೆ ಚರ್ಚೆಯಾಯಿತೇ?

ಕಾಶ್ಮೀರದ ಬಗ್ಗೆ ಪ್ರಸ್ತಾಪವಾಯಿತು. ಆದರೆ, ನನ್ನ ಭೇಟಿಯ ಪ್ರಮುಖ ಉದ್ದೇಶಗಳಲ್ಲಿ ಕಾಶ್ಮೀರದ ಬಗ್ಗೆ ಮಾತುಕತೆ ನಡೆಸುವ ವಿಷಯ ಇರಲಿಲ್ಲ. ನಮ್ಮ ನಡುವೆ ನೈರ್ಮಲ್ಯ ಹಾಗೂ ಹವಾಮಾನ ಬದಲಾವಣೆ ಬಗ್ಗೆ ಮಾತುಕತೆ ನಡೆಯಿತು. ಅಂತಾರಾಷ್ಟ್ರೀಯ ಸೋಲಾರ್‌ ಒಪ್ಪಂದ ಏರ್ಪಡುವಲ್ಲಿ ಮೋದಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಾಗೆಯೇ ಹವಾಮಾನ ಬದಲಾವಣೆಯನ್ನು ತಡೆಯುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಆದ್ದರಿಂದ ಅವರಿಗೆ ನಾವು ಚಾಂಪಿಯನ್ಸ್‌ ಆಫ್‌ ದಿ ಅಥ್‌ರ್‍ ಪ್ರಶಸ್ತಿ ನೀಡಿದ್ದೇವೆ. ನನ್ನ ಭೇಟಿಯ ಪ್ರಮುಖ ಉದ್ದೇಶ ಇಷ್ಟೇ ಆಗಿತ್ತು.

ರೋಹಿಂಗ್ಯ ಮುಸ್ಲಿಮರನ್ನು ಭಾರತಕ್ಕೆ ಸೇರಿಸಿಕೊಳ್ಳುವುದಿಲ್ಲ, ಈಗಾಗಲೇ ಬಂದಿರುವವರನ್ನು ಹಂತಹಂತವಾಗಿ ಮ್ಯಾನ್ಮಾರ್‌ಗೆ ವಾಪಸ್‌ ಕಳಿಸಲಾಗುವುದು ಎಂಬ ನಿಲುವು ಭಾರತದ್ದು. ನೀವೇನು ಹೇಳುತ್ತೀರಿ?

ಭಾರತದಲ್ಲಿ ಹತ್ತಾರು ಸಾವಿರ ರೋಹಿಂಗ್ಯ ಮುಸ್ಲಿಮರು ಬಂದು ಆಶ್ರಯ ಪಡೆದಿದ್ದಾರೆ. ಈ ಬಗ್ಗೆ ಮ್ಯಾನ್ಮಾರ್‌ ಹಾಗೂ ಬಾಂಗ್ಲಾದೇಶದ ಜೊತೆ ಭಾರತ ಮಾತುಕತೆ ನಡೆಸಬೇಕು. ಅದಕ್ಕಿಂತ ಮೊದಲು ರೋಹಿಂಗ್ಯ ವಲಸಿಗರನ್ನು ಮುಕ್ತವಾಗಿ ಸ್ವೀಕರಿಸಿ ಅವರಿಗೆ ಆಶ್ರಯ ನೀಡಬೇಕು ಎಂದು ಭಾರತಕ್ಕೆ ನಾವು ಮನವಿ ಮಾಡುತ್ತೇವೆ. ಅವರನ್ನು ಆತುರದಲ್ಲಿ ವಾಪಸ್‌ ಕಳಿಸಬಾರದು. ಏಕೆಂದರೆ ಮ್ಯಾನ್ಮಾರ್‌ನಲ್ಲಿ ಅವರ ಜೀವಕ್ಕೆ ಅಪಾಯವಿದೆ.

ಜಾಗತಿಕ ವ್ಯವಹಾರಗಳಲ್ಲಿ ಭಾರತ ಒಳ್ಳೆಯ ಸಂಧಾನಕಾರನಾಗಬಹುದು ಎಂದು ನೀವು ಹೇಳಿದ್ದಿರಿ. ಯಾವ ವಿಷಯಗಳಲ್ಲಿ ಭಾರತ ಈ ಕೆಲಸ ಮಾಡಬಹುದು?

ಭಾರತಕ್ಕೆ ಬಹಳ ದೇಶಗಳ ಜೊತೆ ಒಳ್ಳೆಯ ಸಂಬಂಧವಿದೆ. ಸದ್ಯ ಆಂತರಿಕ ಘರ್ಷಣೆ ಹಾಗೂ ಅಂತಾರಾಷ್ಟ್ರೀಯ ಘರ್ಷಣೆಯಲ್ಲಿ ತೊಡಗಿರುವ ಹಲವು ದೇಶಗಳ ಜೊತೆಗೆ ಭಾರತದ ರಾಜತಾಂತ್ರಿಕ ಸಂಬಂಧ ಚೆನ್ನಾಗಿದೆ. ಭಾರತ ಹೇಳಿದರೆ ಈ ದೇಶಗಳು ಸಾರಾಸಗಟಾಗಿ ತಿರಸ್ಕರಿಸುವುದಿಲ್ಲ. ಹೀಗಾಗಿ ಭಾರತ ಒಳ್ಳೆಯ ಜಾಗತಿಕ ಸಂಧಾನಕಾರನಾಗಬಹುದು.

ಕೊನೆಗೊಂದು ಖಾಸಗಿ ಪ್ರಶ್ನೆ. ನಿಮ್ಮ ಪತ್ನಿ ಭಾರತೀಯ ಮೂಲದವರು. ಭಾರತಕ್ಕೆ ನಿಮ್ಮ ಹೃದಯದಲ್ಲಿ ಯಾವ ಸ್ಥಾನವಿದೆ?

ಹೌದು, ಆಕೆಯ ಪೂರ್ವಜರು ಗೋವಾದಲ್ಲಿದ್ದರು. ಪೋರ್ಚುಗೀಸರ ವಸಾಹತು ಅಂತ್ಯವಾದ ಮೇಲೆ ಅವರು ಭಾರತದಿಂದ ಹೊರಹೋದರು. ಆದರೂ ನನಗೆ ಭಾರತದ ಜೊತೆ ಭಾವನಾತ್ಮಕ ಸಂಬಂಧವಿದೆ. ಈ ದೇಶಕ್ಕೆ 5 ಬಾರಿ ನಾನು ರಜೆ ಕಳೆಯಲು ಬಂದಿದ್ದೇನೆ. ಇಲ್ಲಿಯ ಊಟ, ತಿನಿಸುಗಳು ನನಗೆ ಬಹಳ ಇಷ್ಟ. ಭಾರತ ಒಂದು ಅದ್ಭುತ ದೇಶ.

Follow Us:
Download App:
  • android
  • ios