ಲಂಡನ್‌: ಭಾರಿ ಬಿಗಿ ಭದ್ರತೆಯ ನಡುವೆಯೂ, ಬ್ರಿಟನ್‌ ಸಂಸತ್‌ ಭವನದ ಮೇಲೆ ಮಂಗಳವಾರ ಉಗ್ರನೊಬ್ಬ ದಾಳಿ ಯತ್ನ ನಡೆಸಿದ್ದಾನೆ. ಸಂಸತ್‌ ಭವನದ ಭದ್ರತಾ ತಡೆಗೋಡೆ ಮೇಲೆ ಕಾರೊಂದರಲ್ಲಿ ರಭಸವಾಗಿ ಅಪ್ಪಳಿಸಿ, ಆತಂಕದ ವಾತಾವರಣವನ್ನು ಆತ ಸೃಷ್ಟಿಸಿದ್ದಾನೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಕೇಂದ್ರ ಲಂಡನ್‌ನಲ್ಲಿ ನಡೆದ ಈ ದಾಳಿಯನ್ನು ಭಯೋತ್ಪಾದನಾ ದಾಳಿ ಎಂದು ಸ್ಕಾಟ್‌ಲ್ಯಾಂಡ್‌ ಯಾರ್ಡ್‌ನ ಭಯೋತ್ಪಾದನಾ ತಡೆ ಕಮಾಂಡ್‌ ಶಂಕಿಸಿದೆ. ಘಟನೆಗೆ ಸಂಬಂಧಿಸಿ 20ರ ಹರೆಯದ ಯುವಕನೊಬ್ಬ ಬಂಧಿತನಾಗಿದ್ದಾನೆ.

ಬಂಧಿತ ವಿಚಾರಣೆಗೆ ಸಹಕರಿಸುತ್ತಿಲ್ಲ, ಆತನ ಗುರುತು ಪತ್ತೆಗೆ ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಭಾರತೀಯ ಮೂಲದ ಯುಕೆ ಪೊಲೀಸ್‌ ಅಧಿಕಾರಿ ನೀಲ್‌ ಬಸು ಹೇಳಿದ್ದಾರೆ. ಮಂಗಳವಾರ ಮುಂಜಾನೆ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಆಗಮಿಸಿದ ಕಾರು, ಟ್ರಾಫಿಕ್‌ ಸಿಗ್ನಲ್‌ನಲ್ಲಿ ಕಾಯುತ್ತಿದ್ದ ಸೈಕಲ್‌ ಸವಾರರ ಗುಂಪಿನ ಮೇಲೆ ಹರಿಸಿ ಬಳಿಕ, ಭದ್ರತಾ ತಡೆಗೋಡೆಗೆ ಅಪ್ಪಳಿಸಿದೆ. ಬಂಧಿತನ ಬಳಿ ಯಾವುದೇ ಶಸ್ತ್ರಾಸ್ತ್ರಗಳಿದ್ದ ಬಗ್ಗೆ ವರದಿಯಾಗಿಲ್ಲ. ಘಟನೆಯನ್ನು ಖಂಡಿಸಿರುವ ಬ್ರಿಟಿಷ್‌ ಪ್ರಧಾನಿ ಥೆರೆಸಾ ಮೇ, ಪರಿಸ್ಥಿತಿಯನ್ನು ನಿಭಾಯಿಸಿದ ಭದ್ರತಾ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.